Site icon Vistara News

ಸಕಾರಾತ್ಮಕತೆ ಬೆಳೆಸುವುದು ವಿಸ್ತಾರ ಓಂಕಾರ ಯುಟ್ಯೂಬ್‌ ಚಾನೆಲ್‌ ಉದ್ದೇಶ: ಹರಿಪ್ರಕಾಶ್‌ ಕೋಣೆಮನೆ

hariprakash konemane

ಬೆಂಗಳೂರು: ಜಾಗತಿಕವಾಗಿ ಭಾರತಕ್ಕೆ ಗೌರವ ತಂದುಕೊಟ್ಟ ಇಲ್ಲಿನ ಜ್ಞಾನಪರಂಪರೆಗೆ ಹೊಸತನ್ನು ಸೇರಿಸುವುದು, ಸದ್ಭಾವನೆ- ಸಕಾರಾತ್ಮಕತೆಯನ್ನು ಬೆಳೆಸುವುದು ವಿಸ್ತಾರದ ʻಓಂಕಾರʼ ಯೂಟ್ಯೂಬ್‌ ಚಾನೆಲ್‌ನ ಉದ್ದೇಶ ಎಂದು ವಿಸ್ತಾರ ನ್ಯೂಸ್‌ ಸಿಇಒ ಹಾಗೂ ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ ತಿಳಿಸಿದರು.

ʼವಿಸ್ತಾರ ಓಂಕಾರʼ ಯೂಟ್ಯೂಬ್‌ ಚಾನೆಲ್‌ ಲೋಕಾರ್ಪಣೆ ಸಂದರ್ಭದಲ್ಲಿ ಅವರು ವಾಹಿನಿಯ ಒಟ್ಟಾರೆ ಧ್ಯೇಯೋದ್ದೇಶಗಳ ಕುರಿತು ಬೆಳಕು ಚೆಲ್ಲಿದರು.

ವಿಸ್ತಾರ ನ್ಯೂಸ್‌ ಚಾನೆಲ್‌ ನಿರ್ದಿಷ್ಟ ಆಲೋಚನೆ, ಗುರಿಯನ್ನು ಹೊಂದಿದ್ದು, ನಮ್ಮ ನಡೆ ನುಡಿ ಸ್ಪಷ್ಟವಾಗಿದೆ. ನಮ್ಮ ಆಸಕ್ತಿಗಳು ಸೀಮಿತವಾಗಿಲ್ಲ, ನಾವು ಬೇರೆ ಯಾವುದರ ಅನುಕರಣೆಯೂ ಅಲ್ಲ. ನಮ್ಮ ನೋಡುಗರು, ಓದುಗರ, ಕೇಳುಗರು ಯಾರೆಂಬ ಸ್ಪಷ್ಟ ಕಲ್ಪನೆ ನಮಗಿದೆ. ನಮ್ಮ ಚಟುವಟಿಕೆಗಳ ಮೂಲದಲ್ಲಿರುವ ಅಗೋಚರ ಶಕ್ತಿಯನ್ನು ಗುರುತಿಸುವುದು, ಗೌರವಿಸುವುದು; ಆಸ್ತಿಕತೆ, ಸದ್ಭಾವನೆ, ಸಕಾರಾತ್ಮಕತೆ, ಸಜ್ಜನಿಕೆಯನ್ನು ಬೆಳೆಸುವುದು, ಭಾರತೀಯ ಮೌಲ್ಯಗಳನ್ನು ವರ್ಧಿಸುವುದು ನಮ್ಮ ಗುರಿ ಎಂದರು.

ಚತುರ್ವಿಧ ಪುರುಷಾರ್ಥಗಳು ಭಾರತೀಯ ಪರಂಪರೆಯ ತಳಪಾಯವಾಗಿವೆ. ಇಲ್ಲಿ ಯಾವುದೂ ನಿಷಿದ್ಧವಲ್ಲ. ʻಆನೋಭದ್ರಾ ಕೃತವೋ ಯಂತು ವಿಶ್ವತಃʼ ಎಂಬ ಆರ್ಷವಾಕ್ಯದಂತೆ ಎಲ್ಲದರಲ್ಲೂ ನಾವು ಒಳಿತನ್ನು ಕಾಣುತ್ತೇವೆ. ಚತುರ್ವಿಧ ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ ಮೋಕ್ಷಗಳಂತೆ ನಾವು ಮೊದಲು ಮನಿ, ನಂತರ ಆರೋಗ್ಯ, ಬಳಿಕ ಸಂಸ್ಕೃತಿಯ ಪ್ರಸರಣಕ್ಕಾಗಿ ಆಧ್ಯಾತ್ಮಿಕ ವಾಹಿನಿಗಳನ್ನು ಅರ್ಪಿಸುತ್ತಿದ್ದೇವೆ ಎಂದರು.

ಓಂಕಾರವು ಜಗತ್ತಿನ ಆದಿಯಾಗಿದೆ. ಅದು ಅಗೋಚರ ಅಜ್ಞಾತ ಶಕ್ತಿಯೊಂದರ ಇರುವಿಕೆಯನ್ನು ನಮ್ಮ ಅರಿವಿಗೆ ತರುತ್ತದೆ. ನಮ್ಮಲ್ಲಿ ಸಾವಿರಾರು ದೇವತೆಗಳೂ, ಜಗತ್ತಿನಲ್ಲಿ ನೂರಾರು ಧರ್ಮಗಳೂ ಇವೆ. ಎಲ್ಲವೂ ನಮ್ಮ ಚಟುವಟಿಕೆಗೆ ಕಾರಣವಾದ ಅಗೋಚರ ಶಕ್ತಿಯನ್ನು ಮಾನ್ಯ ಮಾಡಿವೆ. ಮನುಷ್ಯರಾದ ನಾವು ಎಲ್ಲವನ್ನೂ ಸೃಷ್ಟಿ ಮಾಡಲು ಸಮರ್ಥರಾಗಿದ್ದರೂ ಮನುಷ್ಯರನ್ನು ಸೃಷ್ಟಿ ಮಾಡಲು ಸಾಧ್ಯವಾಗಿಲ್ಲ. ಅದು ಭಗವಂತನಿಂದ ಮಾತ್ರ ಸಾಧ್ಯ. ಹೀಗಾಗಿ ಧರ್ಮ, ಸಂಪ್ರದಾಯ, ಆಧ್ಯಾತ್ಮಿಕತೆಯನ್ನು ನಾವು ಗೌರವಿಸುತ್ತೇವೆ. ಎಲ್ಲೆಡೆ ಒಳಿತನ್ನು ಕಾಣುವವರು ಧರ್ಮವನ್ನು ಗೌರವಿಸುತ್ತಾರೆ. ಇದಕ್ಕಾಗಿಯೇ ಓಂಕಾರ ಚಾನೆಲ್‌ನ ಸೃಷ್ಟಿಯಾಗಿದೆ. ಜನಜೀವನವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ವಿಸ್ತಾರ ನ್ಯೂಸ್‌ ನಡೆಸುತ್ತಿರುವ ಈ ಸರಣಿ ಮುಂದುವರಿಯಲಿದೆ ಎಂದರು.

ಸ್ವಾಮಿ ವಿವೇಕಾನಂದರ ಧೀರ ಪರಂಪರೆಯನ್ನು ಮುಂದುವರಿಸುತ್ತಿರುವವರು ತುಮಕೂರು ರಾಮಕೃಷ್ಣ- ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತಿಯವರು. ಆಲೋಚನೆ, ವಿದ್ವತ್ತುಗಳಲ್ಲಿ ಮೇರು ಪರ್ವತವಾದ ಅವರು ನಡವಳಿಕೆಯಲ್ಲಿ ಸರಳತೆಯನ್ನೂ ತೋರುತ್ತಾರೆ. ಆಧುನಿಕತೆ- ಸಂಸ್ಕೃತಿಗಳನ್ನು ಸಂತುಲಿತವಾಗಿ ಕಂಡು ಜ್ಞಾನವನ್ನು ಜನತೆಗೆ ತಿಳಿಸುವ, ಮುಂದಿನ ತಲೆಮಾರಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಅಂಥವರಿಂದ ಓಂಕಾರ ಚಾನೆಲ್‌ ಲೋಕಾರ್ಪಣೆಯಾಗುವುದು ಧನ್ಯತೆ ತಂದಿದೆ ಎಂದರು.

ಸ್ವಾಮಿ ವೀರೇಶಾನಂದ ಸರಸ್ವತಿ ಅವರು ಚಾನೆಲ್‌ ಲೋಕಾರ್ಪಣೆ ಮಾಡಿದರು. ವಿಸ್ತಾರ ಮೀಡಿಯಾದ ಚೇರ್ಮನ್‌ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಚ್‌.ವಿ ಧರ್ಮೇಶ್‌, ವಿಸ್ತಾರ ನ್ಯೂಸ್‌ನ ಎಕ್ಸಿಕ್ಯೂಟಿವ್‌ ಎಡಿಟರ್‌ ಶರತ್‌ ಎಂ.ಎಸ್ ಜತೆಗಿದ್ದರು.

ಇದನ್ನೂ ಓದಿ | ಆಧ್ಯಾತ್ಮಿಕ ಉನ್ನತಿಗಾಗಿ ವಿಸ್ತಾರ ʼಓಂಕಾರʼ ಯುಟ್ಯೂಬ್‌ ಚಾನೆಲ್‌ ಆರಂಭ, ಏನಿದರ ಆಶಯ?

Exit mobile version