ಬಂಟ್ವಾಳ: ನನ್ನ ಅಧಿಕಾರಾವಧಿಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಾದ (bantwal assembly constituency) ಅಭಿವೃದ್ಧಿ ಕಾರ್ಯಗಳೇ ನನ್ನ ಗೆಲುವಿನ ಮೆಟ್ಟಿಲು. ನನ್ನ ಅವಧಿಯಲ್ಲಾಗಿದ್ದ ಅಭಿವೃದ್ಧಿ ಕಾರ್ಯಗಳು ಹಾಗೂ ಕಳೆದ ಐದು ವರ್ಷದಲ್ಲಿ ಆಗಿರುವ ಕಾರ್ಯಗಳ ಬಗ್ಗೆ ಜನ ತುಲನೆ ಮಾಡಿದ್ದಾರೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ (Karnataka Election) ಜನರು ಕಾಂಗ್ರೆಸ್ ಅನ್ನು ಗೆಲ್ಲಿಸಲಿದ್ದಾರೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಅಭ್ಯರ್ಥಿ ಬಿ. ರಮಾನಾಥ ರೈ ಹೇಳಿದರು.
ಬರಿಮಾರ್ ಗ್ರಾಮದಲ್ಲಿ ಭಾನುವಾರ ಮನೆಮನೆ ಭೇಟಿ ಮಾಡಿ ಮತಯಾಚನೆ ಮಾಡಿದ ಸಂದರ್ಭದಲ್ಲಿ ಸಾರ್ವಜನಿಕರನ್ನುದ್ದೇಶಿ ಮಾತನಾಡಿದ ಅವರು, ಬಂಟ್ವಾಳ ತಾಲೂಕಿನಾದ್ಯಂತ ಬಹುತೇಕ ಪ್ರಗತಿ ಕಾರ್ಯಗಳು ನನ್ನ ಆಡಳಿತ ಅವಧಿಯಲ್ಲೇ ನಡೆದಿವೆ. ಬಿ.ಸಿ. ರೋಡ್‌ನಲ್ಲಿರುವ ತಾಲೂಕು ಆಡಳಿತ ಕಚೇರಿಯಾದ ಮಿನಿವಿಧಾನಸೌಧ, ಬಿ.ಸಿ. ರೋಡ್‌ನಲ್ಲಿರುವ ಜಿಲ್ಲೆಯಲ್ಲೇ ಅತ್ಯಂತ ಸುಸಜ್ಜಿತ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ, ಪ್ರವಾಸಿ ಬಂಗ್ಲೆ, ಅಂಬೇಡ್ಕರ್ ಭವನ ಮುಂತಾದ ಹಲವು ಆಡಳಿತಾತ್ಮಕ ಕಚೇರಿಗಳು ತಮ್ಮ ಅವಧಿಯಲ್ಲಿ ನಿರ್ಮಿಸಲಾಗಿದೆ. ಬಹುತೇಕ ಎಲ್ಲ ಗ್ರಾಮಗಳಲ್ಲಿ ಸುಸಜ್ಜಿತ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ, ವಸತಿ ನಿವೇಶನ ಹಂಚಿಕೆ, ಮನೆ ನಿರ್ಮಾಣ, ಗುಣಮಟ್ಟದ ಶಿಕ್ಷಣ ವ್ಯವಸ್ಥೆ, ಆರೋಗ್ಯ ಕೇಂದ್ರಗಳನ್ನೂ ದೊಡ್ಡ ಮೊತ್ತದ ಅನುದಾನಗಳನ್ನು ತಂದು ಅಭಿವೃದ್ಧಿ ಪಡಿಸಿದ್ದೇನೆ ಎಂದು ಅವರು ಈ ವೇಳೆ ಸ್ಮರಿಸಿದರು.
ಆದರೆ, ಕಳೆದ ಐದು ವರ್ಷಗಳಿಂದ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಜನ ತಮ್ಮನ್ನು ಗೆಲ್ಲಿಸುವುದಿಲ್ಲ ಎಂದು ಅರಿತಿರುವ ಬಿಜೆಪಿ ಕಳೆದ ಬಾರಿಗಿಂತಲೂ ಹೆಚ್ಚು ಅಪಪ್ರಚಾರದಲ್ಲಿ ನಿರತವಾಗಿದೆ. ಆದರೆ, ಯಾವುದೇ ಅಪಪ್ರಚಾರಕ್ಕೆ ಕಿವಿಗೊಡದೆ ಜನ ಈ ಬಾರಿ ಕಾಂಗ್ರೆಸ್ ಅನ್ನು ಭಾರಿ ಅಂತರದಿಂದ ಗೆಲ್ಲಿಸಲಿದ್ದಾರೆ ಎಂದು ರೈ ಭರವಸೆ ವ್ಯಕ್ತಪಡಿಸಿದರು.
ಇದನ್ನೂ ಓದಿ: Karnataka Election : ಬಿಟ್ಟು ಹೋದವರಿಂದ ಟೀಮ್‌ಗೆ ಸಮಸ್ಯೆ ಇಲ್ಲ, ಈ ಸಲ ಕಪ್ ನಮ್ದೇ ಎಂದ ಪ್ರಲ್ಹಾದ್ ಜೋಶಿ!
ಸಿದ್ದಕಟ್ಟೆ ಚರ್ಚ್‍ನಲ್ಲಿ ಪ್ರಾರ್ಥನೆ
ಚುನಾವಣಾ ಪ್ರಚಾರದ ನಡುವೆ ರಮಾನಾಥ ರೈ ಅವರು ಸಿದ್ದಕಟ್ಟೆಯ ಸಂತ ಪ್ಯಾಟ್ರಿಕ್ ಚರ್ಚ್‍ಗೆ ಭಾನುವಾರ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಚುನಾವಣೆಯಲ್ಲಿ ತಮ್ಮ ಗೆಲುವಿಗೆ ಪ್ರಾರ್ಥಿಸಿದರು.