ಬೆಂಗಳೂರು: ಮಂಗಳೂರು ನಗರದ ಪ್ರಸಿದ್ಧ ಶ್ರೀ ಮಂಗಳಾದೇವಿ ದೇವಸ್ಥಾನದ (Shri Mangaladevi Temple Mangalore) ನವರಾತ್ರಿ ಜಾತ್ರೋತ್ಸವ (Navaratri Jatrotsava) ಸಂದರ್ಭದಲ್ಲಿ ಹಿಂದೂ-ಮುಸ್ಲಿಂ ವೈಷಮ್ಯ (Dharma Dangal) ಸೃಷ್ಟಿಸಲು ಯತ್ನಿಸಿದ ಆರೋಪದಲ್ಲಿ ವಿಶ್ವ ಹಿಂದು ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ (Sharan Pumpwell) ವಿರುದ್ಧ ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ಗೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ (Karnataka High court Stays FIR) ನೀಡಿದೆ.
ಹಿಂದು ಗ್ರಾಹಕರು ಭಗವಾಧ್ವಜ ಕಟ್ಟಿರುವ ಹಿಂದುಗಳ ಮಳಿಗೆಗಳಲ್ಲಿ ಮಾತ್ರವೇ ವ್ಯಾಪಾರ ಮಾಡಬೇಕು ಎಂದು ಪ್ರಕಟಣೆ ಹೊರಡಿಸಲಾಗಿತ್ತು. ಹೀಗಾಗಿ ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಚಟುವಟಿಕೆಯಲ್ಲಿ ತೊಡಗಿರುವ ಆರೋಪದ ಮೇಲೆ ಮಂಗಳೂರು ನಗರ ದಕ್ಷಿಣ ಠಾಣೆ ಪೊಲಿಸರು ಶರಣ್ ಪಂಪ್‌ವೆಲ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಕರ್ನಾಟಕ ಹೈಕೋರ್ಟ್‌ನ ರಜಾಕಾಲೀನ ಪೀಠವು ಈ ಎಫ್ಐಆರ್‌ಗೆ ಮಧ್ಯಂತರ ತಡೆ ನೀಡಿದೆ.
ಶ್ರೀ ಮಂಗಳಾದೇವಿ ದೇವಸ್ಥಾನದ ವಾರ್ಷಿಕ ನವರಾತ್ರಿ ಉತ್ಸವ ನಡೆಯುತ್ತಿದ್ದು, ಈ ವೇಳೆ ಸ್ಥಾಪಿಸಲಾಗುವ ಜಾತ್ರೆ ಅಂಗಡಿಗಳನ್ನು ಕೇವಲ ಹಿಂದುಗಳಿಗೆ ಮಾತ್ರ ಮೀಸಲಾಗಿಡಬೇಕು ಎಂಬ ಕೂಗು ಕೇಳಿಬಂದಿತ್ತು. ಮತ್ತು ಮೊದಲ ಹಂತದ ಅಂಗಡಿಗಳ ಏಲಂನಲ್ಲಿ ಕೇವಲ ಹಿಂದುಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು.
ಇದನ್ನು ಕೆಲವರು ಪ್ರಶ್ನೆ ಮಾಡಿದ ಹಿನ್ನೆಲೆಯಲ್ಲಿ ಎಲ್ಲರಿಗೂ ಅವಕಾಶ ಸಿಗುವಂತೆ ಮುಕ್ತ ಏಲಂ ಮಾಡಲಾಗಿತ್ತು. ಆಗ ಕೆಲವು ಮುಸ್ಲಿಮರಿಗೂ ಅವಕಾಶ ಸಿಕ್ಕಿತ್ತು. ಈ ನಡುವೆ, ಜಾತ್ರೆಗೆ ಬರುವ ಹಿಂದುಗಳು ಹಿಂದೂಗಳಿಗೆ ಸೇರಿದ ಅಂಗಡಿಗಳಲ್ಲಿ ಮಾತ್ರ ವ್ಯಾಪಾರ ಮಾಡಬೇಕು ಎನ್ನುವ ವಾದ ಕೇಳಿಬಂತು. ಅದನ್ನು ಗುರುತಿಸಲು ಅನುಕೂಲವಾಗುವಂತೆ ಶರಣ್ ಪಂಪ್‌ವೆಲ್ ನೇತೃತ್ವದಲ್ಲಿ ಅಕ್ಟೋಬರ್ 16ರಂದು ಹಿಂದುಗಳ ಅಂಗಡಿಗಳಿಗೆ ಭಗವಾಧ್ವಜ ಕಟ್ಟಲಾಗಿತ್ತು. ಈ ಕ್ರಮ ಮತ್ತು ಶರಣ್ ಪಂಪ್‌ವೆಲ್ ಅವರ ಹೇಳಿಕೆಗಳು ಕೋಮು ಮತ್ತು ಧಾರ್ಮಿಕ ವೈಷಮ್ಯವನ್ನು ಕೆರಳಿಸುತ್ತಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಶರಣ್ ಪಂಪ್‌ವೆಲ್ ಹಾಗೂ ಇತರರ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಿಎಸ್‌ಐ ಮನೋಹರ್ ಅವರು ಪ್ರಕರಣ ದಾಖಲಿಸಿಕೊಂಡಿದ್ದರು.
ಈ ನಡುವೆ ಶರಣ್ ಪಂಪ್‌ವೆಲ್ ತಮ್ಮ ವಿರುದ್ಧದ ಎಫ್‌ಐಆರ್ ರದ್ದುಪಡಿಸಬೇಕು ಎಂದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಟಿ ಜಿ ಶಿವಶಂಕರೇಗೌಡ ಅವರ ನೇತೃತ್ವದ ಏಕಸದಸ್ಯ ಪೀಠವು ಎಫ್‌ಐಆರ್‌ಗೆ ತಡೆಯಾಜ್ಞೆ ನೀಡಿತು. ಮಂಗಳೂರು ದಕ್ಷಿಣ ಪೊಲೀಸ್ ಠಾಣಾಧಿಕಾರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿದೆ.
ಅರ್ಜಿದಾರರ ಪರ ವಕೀಲರ ವಾದವೇನು?
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎಂ ಅರುಣ್ ಶ್ಯಾಮ್ ಅವರು, ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡುವ ಉದ್ದೇಶದಿಂದ ಪ್ರಕಟಣೆ ಹೊರಡಿಸಲಾಗಿದೆ ಎಂಬ ದೂರಿನಲ್ಲಿ ಹುರುಳಿಲ್ಲ. ಈ ಸಂಬಂಧ ಪೊಲೀಸರು ಸ್ವಯಂಪ್ರೇರಿತವಾಗಿ ದಾಖಲು ಮಾಡಿಕೊಂಡಿರುವ ಪ್ರಕರಣ ರಾಜಕೀಯ ಪ್ರೇರಿತವಾಗಿದೆ ಮತ್ತು ದುರುದ್ದೇಶದಿಂದ ಕೂಡಿದೆ. ಆದ್ದರಿಂದ, ಎಫ್‌ಐಆರ್ ರದ್ದುಗೊಳಿಸಬೇಕು ಎಂದು ಕೋರಿದರು.