ಧಾರವಾಡ: ಖಾಸಗಿ ಕಂಪನಿಗಳ ನೌಕರರ ನಿವೃತ್ತಿಯ ವಯಸ್ಸಿನ ಕುರಿತು ಕರ್ನಾಟಕ ಹೈಕೋರ್ಟ್ ಧಾರವಾಡ ಪೀಠ ಮಹತ್ವದ ಆದೇಶ ನೀಡಿದೆ. ಖಾಸಗಿ ನೌಕರರ ನಿವೃತ್ತಿ ವಯಸ್ಸನ್ನು 58 ವರ್ಷದಿಂದ 60 ವರ್ಷಕ್ಕೆ ಏರಿಸಬೇಕು ಎಂಬ ಸರ್ಕಾರದ ಆದೇಶವನ್ನು ನ್ಯಾಯಪೀಠ ಎತ್ತಿ ಹಿಡಿದಿದೆ. ಈ ಮೂಲಕ ಖಾಸಗಿ ನೌಕರರ ನಿವೃತ್ತಿಯ ವಯೋಮಿತಿ ಹೆಚ್ಚಳಕ್ಕೆ ಅಸ್ತು ಎಂದಿದೆ.
ಕರ್ನಾಟಕ ಕೈಗಾರಿಕಾ ಉದ್ಯೋಗ ಸ್ಥಾಯಿ ಆದೇಶಗಳ ತಿದ್ದುಪಡಿ ನಿಯಮಗಳ ಮಾದರಿ ಅನ್ವಯ, ನೌಕರರ ನಿವೃತ್ತಿ ವಯಸ್ಸು ಏರಿಸಿ ಸರ್ಕಾರ 2017ರಲ್ಲಿ ಆದೇಶಿಸಿತ್ತು. ರಾಜ್ಯ ಸರ್ಕಾರದ ಈ ಆದೇಶವನ್ನು ಹರಿಹರದ ಗ್ರಾಸಿಂ ಇಂಡಸ್ಟ್ರೀಸ್ ಕಂಪನಿಯು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿತ್ತು.
ಕಂಪನಿ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠವು 2021 ಸೆಪ್ಟೆಂಬರ್ 17ರಂದು ವಜಾಗೊಳಿಸಿತ್ತು. ಈ ವಜಾ ಆದೇಶವನ್ನು ಪ್ರಶ್ನಿಸಿ ಕಂಪನಿಯು ವಿಭಾಗೀಯ ಪೀಠದ ಮೊರೆ ಹೋಗಿತ್ತು. ಈ ಸಂಬಂಧದ ಸುದೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠವು ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿದೆ.
ಇದರ ಜತೆಗೆ, 2018ರ ಮಾರ್ಚ್ 17 ಅಥವಾ ನಂತರದಲ್ಲಿ 59 ವರ್ಷ ಪೂರೈಸಿ ನಿವೃತ್ತರಾದವರಿಗೆ ನಿವೃತ್ತಿ ದಿನಾಂಕ ಮತ್ತು ಅವರು 60 ವರ್ಷ ತಲುಪಿದ ದಿನಾಂಕದ ನಡುವಿನ ಅವಧಿಗೆ ಶೇ.50ರಷ್ಟು ವೇತನವನ್ನು ಮರುಪಾವತಿ ಮಾಡಬೇಕು ಎಂದು ಮೇಲ್ಮನವಿದಾರರಿಗೆ ಸೂಚಿಸಿದೆ.
ಇದನ್ನೂ ಓದಿ | ಕೋಟ್ಯಧಿಪತಿ ಗಾರ್ಡನರ್ ಶಿವಲಿಂಗಯ್ಯ ನಿವೃತ್ತಿಗೆ ಒಂದು ದಿನ ಮೊದಲು ಸಸ್ಪೆಂಡ್