ಧಾರವಾಡ: ಫೊರೆನ್ಸಿಕ್ ಜಗತ್ತು ಅತ್ಯಂತ ಶೀಘ್ರವಾಗಿ ಮುನ್ನಡೆ ಸಾಧಿಸಿದ್ದು, ಇದಕ್ಕೆ ಭಾರತದಲ್ಲಿ ಮುನ್ನುಡಿ ಬರೆದ ಬಿಜೆಪಿ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಗೃಹಸಚಿವ ಎಲ್.ಕೆ. ಆಡ್ವಾಣಿ ಅವರನ್ನು ಎಲ್ಲರೂ ಸ್ಮರಿಸಬೇಕಾಗುತ್ತದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ತಿಳಿಸಿದರು. ಧಾರವಾಡದಲ್ಲಿ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯದ ಕ್ಯಾಂಪಸ್ ಉದ್ಘಾಟನೆ ನಂತರ ಮಾತನಾಡಿದರು.
ಪಕ್ಷದ ಅಧ್ಯಕ್ಷನಾಗಿದ್ದಾಗ ಕರ್ನಾಟಕದಲ್ಲಿ ಬಹಳಷ್ಟು ಪ್ರವಾಸ ಮಾಡಿದ್ದೇನೆ ಎಂದ ಅಮಿತ್ ಶಾ, ಕರ್ನಾಟಕವಷ್ಟೆ ಅಲ್ಲ, ದೇಶದ ಎಲ್ಲ ಜಿಲ್ಲೆಗಳೂ ಸಾಂಸ್ಕೃತಿಕವಾಗಿ ಸಮೃದ್ಧವಾಗಿವೆ. ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕ ಬಹುದೊಡ್ಡ ಕೊಡುಗೆ ನೀಡಿದೆ ಎಂದರು.
ಕ್ಯಾಂಪಸ್ ಸ್ಥಾಪನೆಯಲ್ಲಿ ಪ್ರಲ್ಹಾದ ಜೋಶಿ ಅವರ ಶ್ರಮವನ್ನು ಹಾಡಿ ಹೊಗಳಿದ ಅಮಿತ್ ಶಾ, ಇದೀಗ ಸ್ಥಾಪನೆ ಆಗುತ್ತಿರುವ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯವನ್ನು ಧಾರವಾಡದಲ್ಲಿಯೇ ಸ್ಥಾಪಿಸಲು ಪ್ರಲ್ಹಾದ ಜೋಶಿ ಅವರು ನನ್ನ ಹಿಂದೆ ಬಿದ್ದಿದ್ದರು.
ನಾನು ಸ್ವಲ್ಪ ಆಲೋಚನೆ ಮಾಡುತ್ತಿದ್ದೆ. ಕ್ಯಾಂಪಸ್‌ಗೆ ಭೂಮಿಯೇ ಇಲ್ಲವಲ್ಲ ಎಂದು ಕೇಳಿದೆ. ಅವರು ಒಂದೇ ದಿನದಲ್ಲಿ ಭೂಮಿಯನ್ನು ಮಂಜೂರು ಮಾಡಿಸಿಕೊಂಡು ಬಂದರು. ಇದನ್ನು ಮಂಜೂರು ಮಾಡುವ ಬದಲಿಗೆ ನನಗೆ ಯಾವುದೇ ಮಾರ್ಗ ಇರಲಿಲ್ಲ ಎಂದು ಶ್ಲಾಘಿಸಿದರು.
ಭಾರತದಲ್ಲಿ ಫೊರೆನ್ಸಿಕ್ ವಿಭಾಗಗಳನ್ನು ಸ್ಥಾಪಿಸುವ ಶ್ರೇಯ ಮಾಜಿ ಉಪಪ್ರಧಾನಿ ಎಲ್.ಕೆ. ಆಡ್ವಾಣಿ ಅವರಿಗೆ ಸಲ್ಲುತ್ತದೆ. ಅವರ ಅವಧಿಯಲ್ಲಿಯೇ ಫೊರೆನ್ಸಿಕ್ ವಿಜ್ಞಾನಕ್ಕಾಗಿ ಒಂದು ನಿರ್ದೇಶನಾಲಯವನ್ನು ಸ್ಥಾಪಿಸಿದವರು ಆಡ್ವಾಣಿಯವರು. ಇದೇ ಅವಧಿಯಲ್ಲಿ ಗುಜರಾತ್‌ನಲ್ಲಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಗುಜರಾತ್‌ನಲ್ಲಿ ಫೊರೆನ್ಸಿಕ್ ಕ್ಷೇತ್ರದಲ್ಲಿ ದಾಪುಗಾಲು ಇಡಲಾಯಿತು. ಈ ಸಮಯದಲ್ಲಿ ಗುಜರಾತ್ ಗೃಹಸಚಿವನಾಗಿದ್ದರಿಂದ ಕಾರ್ಯವನ್ನು ಮುಂದುವರಿಸುವ ಅವಕಾಶ ದೊರಕಿತು.
ವಿಧಿವಿಜ್ಞಾನಕ್ಕಾಗಿ ಮೂಲಸೌಕರ್ಯವನ್ನು ನೀಡುವುದು ಆಗುತ್ತದೆ. ಆದರೆ ಅದಕ್ಕೆ ತಕ್ಕಂತೆ ಮಾನವ ಸಂಪನ್ಮೂಲ ಸಿಗದಿದ್ದರೆ ಇಷ್ಟೂ ಕಾರ್ಯ ಸಫಲವಾಗುವುದಿಲ್ಲ ಎಂಬ ಕಾರಣಕ್ಕೆ ವಿಶ್ವವಿದ್ಯಾಲಯದಲ್ಲಿ ವಿಷಯವನ್ನು ಪರಿಚಯಿಸಲಾಯಿತು. ಮೊದಲನೆ ಬ್ಯಾಚ್‌ಗೆ ನೌಕರಿ ಸಿಕ್ಕಿದ್ದನ್ನು ಕಂಡು ಬಹಳಷ್ಟು ಜನರಿಗೆ ಆಸಕ್ತಿ ಮೂಡಿತು. ಇದೀಗ ದೇಶದಲ್ಲಿ ಫೊರೆನ್ಸಿಕ್ ಕ್ಷೇತ್ರಕ್ಕೆ ಅತಿ ಹೆಚ್ಚು ಒತ್ತು ನೀಡಲಾಗುತ್ತಿದೆ. ಐದು ವರ್ಷದ ನಂತರ ಈ ಕ್ಷೇತ್ರದಲ್ಲಿ ಅತಿ ಹೆಚ್ಚು ತಜ್ಞರು ಭಾರತದಲ್ಲಿ ಇರಲಿದ್ದಾರೆ ಎಂದರು.
ಇದನ್ನೂ ಓದಿ : ವಿಸ್ತಾರ ಅಂಕಣ : ಅಭಿವೃದ್ಧಿಗೆ ನಮ್ಮದೇ ಮಾದರಿಯತ್ತ ನೋಡಲು ಮಡಿವಂತಿಕೆ ಏಕೆ?
ಅಪರಾಧ ಕ್ಷೇತ್ರ ಸಾಕಷ್ಟು ವೇಗವಾಗಿ ಬದಲಾಗುತ್ತಿದೆ. ಪೊಲೀಸರಿಗಿಂತಲೂ ಅಪರಾಧಿಗಳು ಮುಂದಿರುತ್ತಿದ್ದರು. ಅಪರಾಧಿಗಳಿಗಿಂತಲೂ ಪೊಲೀಸರು ಮುಂದೆ ಇರದಿದ್ದರೆ ಅಪರಾಧಗಳನ್ನು ತಡೆಯಲು ಸಾಧ್ಯವಿಲ್ಲ. ಸರಿಯಾದ ರೀತಿಯಲ್ಲಿ ಶಿಕ್ಷೆ ಆಗದಿದ್ದರೆ ಅಪರಾಧವನ್ನು ತಡೆಯಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸಾಕ್ಷ್ಯಗಳ ಅಗತ್ಯವಿರುತ್ತದೆ. ಅದಕ್ಕಾಗಿ, 6 ವರ್ಷಕ್ಕಿಂತ ಹೆಚ್ಚಿ ಜೈಲು ಶಿಕ್ಷೆಯ ಅಪರಾಧಗಳಿಗೆ ಫೊರೆನ್ಸಿಕ್ ಸಾಕ್ಷಿ ಬೇಕಾಗುತ್ತದೆ ಎಂದು ಅಮಿತ್ ಶಾ ಹೇಳಿದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಕೆಲವೊಂದು ಸಂದರ್ಭದಲ್ಲಿ ಪೊಲೀಸ್ ಭಾಷೆ ಬಳಸಿ ಎಂದು ಹೇಳುತ್ತಿದ್ದರು. ಆದರೆ ಆಧುನಿಕ ಜಗತ್ತಿನಲ್ಲಿ ಪೊಲೀಸ್ ಭಾಷೆ ಬಳಸುವುದು ಒಳ್ಳೆಯದಲ್ಲ. ಇದಕ್ಕಾಗಿ ಫೊರೆನ್ಸಿಕ್ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿಯನ್ನು ಕೇಂದ್ರ ಸರ್ಕಾರ ತೋರುತ್ತಿದೆ. ಇದೇ ಕಾರಣಕ್ಕೆ ಫೊರೆನ್ಸಿಕ್ ಯುನಿವರ್ಸಿಟಿಯ ಕ್ಯಾಂಪಸ್ ತೆರೆಯಲಾಗುತ್ತಿರುವುದು ಬಹುದೊಡ್ಡ ಕೊಡುಗೆ ಎಂದರು.