ಧಾರವಾಡ: ಧಾರವಾಡ ಅಂಜುಮನ್ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಮನೆಗೆ ನುಗ್ಗಿ ಕಿಡಿಗೇಡಿಗಳು ಹಲ್ಲೆಗೆ ಯತ್ನಿಸಿದ್ದಾರೆ. 10ಕ್ಕೂ ಹೆಚ್ಚು ಅಪರಿಚಿತ ಯುವಕರು ಹಲ್ಲೆಗೆ (assault case) ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಅಪರಿಚಿತ ಗ್ಯಾಂಗ್ ಮೊದಲು ಅಂಜುಮನ್ ಸಂಸ್ಥೆಯ ಕಚೇರಿಗೆ ತೆರಳಿ ಹಲ್ಲೆಗೆ ಮುಂದಾಗಿದ್ದಾರೆ. ಆದರೆ ಅಲ್ಲಿ ಇಸ್ಮಾಯಿಲ್ ಇಲ್ಲದ ಕಾರಣ ಮನೆಗೆ ನುಗ್ಗಿದ್ದಾರೆ. ಚಾಕು ಹಿಡಿದುಕೊಂಡು ಮನೆಗೆ ನುಗ್ಗಿದ ಯುವಕರು, ಇಸ್ಮಾಯಿಲ್ ತಮಟಗಾರ್ ಮನೆಯಲ್ಲಿ ಇಲ್ಲದ ಕಾರಣ ಅವರ ಮನೆಯವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ.
ಇಸ್ಮಾಯಿಲ್ ಕೊಲ್ಲಲು ಬಂದಿದ್ದೇವೆ ಎಂದು ಕಿರುಚಾಡುತ್ತಿದ್ದರಂತೆ. ಲಂಗೋಟಿ ಜಮಾದಾರ್ ಗಲ್ಲಿ, ಅಂಜುಮನ್ ಹಾಸ್ಟೆಲ್ ಬಳಿ ಹಲ್ಲೆಗೆ ಸ್ಕೆಚ್ ಹಾಕಿದ್ದರು ಎನ್ನಲಾಗಿದೆ. ಸದ್ಯ ಇಸ್ಮಾಯಿಲ್ ಇಲ್ಲದ ಕಾರಣಕ್ಕೆ ಮನೆಯವರೊಂದಿಗೆ ಜಗಳ ತೆಗೆದಿದ್ದಾರೆ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಶಹರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪೊಲೀಸ್ ಕಮಿಷನರ್ ಭೇಟಿ
ಅಂಜುಮನ್ ಅಧ್ಯಕ್ಷ ಇಸ್ಮಾಯಿಲ್ ತಮಾಟಗಾರ ಅವರಿಗೆ ಜೀವ ಬೆದರಿಕೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸ್ ಕಮಿಷನರ್ ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರದ ಜಮಾದಾರ ಗಲ್ಲಿ ದರೂರ ಓಣಿಗೆ ಭೇಟಿ ನೀಡಿ ಘಟನಾ ಸ್ಥಳದಲ್ಲಿ ಸಿಸಿ ಟಿವಿ ಪರಿಶೀಲನೆ ಮಾಡಿ ಮಾಹಿತಿ ಪಡೆದುಕೊಂಡರು. ಇದೇ ವೇಳೆ ಇಸ್ಮಾಯಿಲ್ ಸಹೋದರ ಜಮಾಲ್ ತಮಾಟಗಾರ ರಿಂದ ಮಾಹಿತಿ ಪಡೆದರು.
ಮುಸ್ಲಿಂ ಹುಡುಗರಿಂದಲೇ ಮುಸ್ಲಿಂ ನಾಯಕರನ್ನು ಹೊಡೆಸುವ ಪ್ಲ್ಯಾನ್ ಇದು
ಮುಸ್ಲಿಂ ಹುಡುಗರಿಂದಲೇ ಮುಸ್ಲಿಂ ನಾಯಕರನ್ನು ಹೊಡೆಸುವ ಪ್ಲ್ಯಾನ್ ಇದು ಎಂದು ಧಾರವಾಡದಲ್ಲಿ ಅಂಜುಮನ್ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಮಾಧ್ಯಮಗಳಿಗೆ ತಿಳಿಸಿದರು. ನನಗೆ ಜೀವ ಬೆದರಿಕೆ ಹಾಕಿದ್ದಾರೆ. 18-20 ವರ್ಷದ ಹುಡುಗರು ನನ್ನ ಹೊಡೆಯಲು ಪ್ಲ್ಯಾನ್ ಮಾಡಿದ್ದಾರೆ. ಮಣಕಿಲ್ಲಾ, ರಸೂಲಪುರ ಗಲ್ಲಿಯಲ್ಲಿ ಚಾಕು ಹಿಡಿದುಕೊಂಡು ನಿನ್ನೆ ಶನಿವಾರ ಓಡಾಡಿದ್ದಾರೆ. ಪೊಲೀಸರು ಮತ್ತು ಪೊಲೀಸ್ ಆಯುಕ್ತರ ಮೇಲೆ ನಂಬಿಕೆ ಇದೆ.
ಧಾರವಾಡ ವಿದ್ಯಾಕಾಶಿ ಇಲ್ಲಿ ಶಾಂತಿ ಕಾಪಾಡುವುದು ಎಲ್ಲರ ಕರ್ತವ್ಯ, ಹೀಗಾಗಿ ಪೊಲೀಸರು ಸೂಕ್ತವಾಗಿ ತನಿಖೆ ಮಾಡಬೇಕು.
ಹಲ್ಲೆ ಮಾಡಲು ಬಂದ ಯುವಕರಿಗೂ ನನಗೂ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ಆದರೆ ಇಂತಹ ಹುಡುಗರಿಗೆ ಪ್ರಚೋದನೆ ಕೊಟ್ಟವರು ಯಾರು? ನಾನು ಅವರೆಲ್ಲರ ಕುಟುಂಬಗಳಿಗೆ ಕಷ್ಟ ಇದ್ದಾಗ ಸಹಾಯ ಮಾಡಿದ್ದೇನೆ. ಆ ಹುಡುಗರ ತಪ್ಪಿಲ್ಲದೇ ಇರಬಹುದು, ಆದರೆ ಹಿಂದೆ ಇರೋರು ಯಾರು ಎಂದು ಪತ್ತೆ ಮಾಡಬೇಕು. ಯಾರ್ಯಾರು ಈ ಪ್ಲ್ಯಾನ್ ಮಾಡಿದ್ದಾರೆ ಎಂಬುದು ನನಗೆ ಗೊತ್ತಿದೆ. ಕಾಲ್ ರೆಕಾರ್ಡ್ಸ್, ವಿಡಿಯೋ ಎಲ್ಲ ಇವೆ, ಅದನ್ನೆಲ್ಲ ಪೊಲೀಸರಿಗೆ ಒಪ್ಪಿಸುವೆ ಎಂದರು.
ಒಂದು ವರ್ಷದ ಹಿಂದೆ ನನ್ನ ಮುಗಿಸಲು ಪ್ಲ್ಯಾನ್ ನಡೆದಿದೆ. ಮುಸಲ್ಮಾನ ಹುಡುಗರೇ ನನ್ನನ್ನು ಹೊಡೆಯುವಂತೆ ಪ್ಲ್ಯಾನ್ ಮಾಡಿದ್ದರು. ಈ ಹಿಂದೆ ಮುಸ್ಲಿಂ ಹುಡುಗರನ್ನು 8-10 ಜನರನ್ನು ಕ್ಯಾಚ್ ಮಾಡಿದ್ದರು. ಅದೇ ಹುಡುಗರು ನಮ್ಮ ಮನೆಗೆ ಬಂದು ಹೇಳಿದ್ದಾರೆ. ಈಗ ನಾವು ಹೊಡೆಯದೇ ಇರಬಹುದು, ಮುಂದೆ ಯಾರಾದರೂ ಹೊಡೆಯಬಹುದು ಎಂದು ಎಚ್ಚರಿಕೆ ಕೊಟ್ಟಿದ್ದರು.
ನಶೆಯಲ್ಲಿರುವ ಹುಡುಗರಿಂದ ಹೊಡೆಸಿ, ಬಳಿಕ ಆ ಹುಡುಗರನ್ನು ಎನ್‌ಕೌಂಟರ್ ಮಾಡಿಸಬೇಕು ಎಂದು ಪ್ಲ್ಯಾನ್ ನಡೆದಿದೆ. ಹೀಗಾಗಿ ನನಗೇನಾದರೂ ಆದರೆ ಇಂಥವರೇ ಕಾರಣ ಎಂದು ವರ್ಷದ ಹಿಂದೆಯೇ ನಾನು ಮನೆಯಲ್ಲಿ ಹೇಳಿಟ್ಟಿದ್ದೇನೆ. ಸಂಶಯ ಇದ್ದವರ ಬಗ್ಗೆ ಪೊಲೀಸ್ ಆಯುಕ್ತರಿಗೆ ಮಾಹಿತಿ ಕೊಟ್ಟಿದ್ದೇನೆ. ಇದರಲ್ಲಿ ರಾಜಕೀಯವಾಗಿ ಮುಗಿಸುವ ಷಡ್ಯಂತ್ರ ಇದೆ. ಅಂಜುಮನ್ ಎಲೆಕ್ಷನ್, ಎಂಎಲ್ಎ ಎಲೆಕ್ಷನ್, ಪಾಲಿಕೆ ಎಲೆಕ್ಷನ್ ಯಾವುದೋ ಒಂದು ರಾಜಕೀಯವೇ ಇದೆ. ಈ ಸಂಬಂಧ ನಾನು ಆಯುಕ್ತರಿಗೆ ದೂರು ಕೊಡಲಿದ್ದೇನೆ ಎಂದರು.
ಇದನ್ನೂ ಓದಿ: Bear Attack : ರೈತನ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿ ಕೊಂದು ಹಾಕಿದ ಕರಡಿ
ಕಾರು ಚಾಲಕನ ಮುಖಕ್ಕೆ ಉಗಿದು, ಗೂಂಡಾಗಿರಿ ಮಾಡಿದ ಆಟೋ ಡೈವರ್
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಆಟೋ ಚಾಲಕನೊಬ್ಬ ಗೂಂಡಾಗಿರಿ (Assault Case) ತೋರಿಸಿದ್ದಾನೆ. ಕಾರು ಚಾಲಕನ ಮುಖಕ್ಕೆ ಉಗಿದು ಬಳಿಕ ಕಾರಿನ ಮಿರರ್ ಹೊಡೆದು ಹಾಕಿದ್ದಾನೆ. ಬೆಂಗಳೂರಿನ ಮಾರತಹಳ್ಳಿಯ ಯಮಲೂರು ಸಿಗ್ನಲ್ ಬಳಿ ಆಗಸ್ಟ್ 5ರಂದು ಈ ಘಟನೆ ನಡೆದಿದೆ.
ಕ್ಷುಲ್ಲಕ ವಿಚಾರಕ್ಕೆ ಕಾರು ಚಾಲಕ ಹಾಗೂ ಆಟೋ ಚಾಲಕನ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಕಾರು ಚಾಲಕ ವಿಡಿಯೊ ರೆಕಾರ್ಡ್ ಮಾಡುತ್ತಿರುವುದನ್ನು ನೋಡಿದ ಆತ ಆಟೋದಿಂದ ಇಳಿದು ಬಂದವನೇ ಅವಾಚ್ಯ ಶಬ್ಧಗಳಿಂದ ನಿಂದಿಸಲು ಶುರು ಮಾಡಿದ್ದಾನೆ. ಬಳಿಕ ಕಾರು ಚಾಲಕ ಮುಖಕ್ಕೆ ಉಗಿದು, ಕಾರಿಗೆ ಹೊಡೆದು, ಮಿರರ್ ಕಿತ್ತು ಹಾಕಿದ್ದಾನೆ.
ಕಾರು ಚಾಲಕ ಅಲೆಕ್ಸ್ ಬೋಬಿ ವೆಂಪಲ ಎಂಬಾತ ಈ ಸಂಬಂಧ ದೂರು ನೀಡಿದ್ದರು. ಆಟೋ ಚಾಲಕನ ಅನುಚಿತ ವರ್ತನೆ ಬಗ್ಗೆ ಎಚ್ಎಲ್‌ಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಕಾರು ಚಾಲಕ ದೂರಿನ ಮೇಲೆ ಆಟೋ ಚಾಲಕನ ಪತ್ತೆ ಮಾಡಿ ಪೊಲೀಸರು ಬಂಧಿಸಿದ್ದಾರೆ. ಚಾಲಕನ ವಿರುದ್ಧ ಬಿ.ಎನ್.ಎಸ್ ಸೆಕ್ಷನ್ 126(2), 324(4), 351(2), 352 ಅಡಿ ಎಫ್.ಐ.ಆರ್ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ