Site icon Vistara News

Resort politics: ಕಮಲಕ್ಕೇ ಈಗ ಆಪರೇಶನ್‌ ಹಸ್ತದ ಭೀತಿ! ಪಾಲಿಕೆ ಸದಸ್ಯರು ರೆಸಾರ್ಟ್‌ಗೆ ಎಸ್ಕೇಪ್

hubli dharwad town operation hastha

ಹುಬ್ಬಳ್ಳಿ: ಇದೀಗ ಬಿಜೆಪಿಗೂ ಆಪರೇಶನ್‌ ಹಸ್ತದ ಭೀತಿ ಎದುರಾಗಿದೆ. ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಮೇಯರ್ ಆಯ್ಕೆ ನಡೆಯಲಿದ್ದು, ಇದಕ್ಕೂ ರೆಸಾರ್ಟ್ ರಾಜಕೀಯ (Resort politics) ಕಾಲಿಟ್ಟಿದೆ. ಆಪರೇಶನ್ ಹಸ್ತದ ಭೀತಿಯಿಂದ ಪಾಲಿಕೆ ಸದಸ್ಯರು ರೆಸಾರ್ಟ್‌ಗೆ ತೆರಳಿದ್ದಾರೆ.

ಇದೇ 20ರಂದು ಮೇಯರ್, ಉಪಮೇಯರ್ ಚುನಾವಣೆ ನಡೆಯಲಿದೆ. ಪಾಲಿಕೆ ಅಧಿಕಾರ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯರನ್ನು ಕೈ ನಾಯಕರು ಹೈಜಾಕ್ ಮಾಡುವ ಭೀತಿಯಲ್ಲಿ ಉನ್ನತ ನಾಯಕರ ಸೂಚನೆಯಂತೆ ಪಾಲಿಕೆ ಬಿಜೆಪಿ ಸದಸ್ಯರು ದಾಂಡೇಲಿ ರೆಸಾರ್ಟ್‌ಗೆ ತೆರಳಿದ್ದಾರೆ.

ಜಿಲ್ಲೆಯ ಕೈ ನಾಯಕರಿಗೆ ಹುಬ್ಬಳ್ಳಿ ಧಾರವಾಡ ಪಾಲಿಕೆ ಗದ್ದುಗೆ ಹಿಡಿಯಲು ಹೈಕಮಾಂಡ್‌ನಿಂದ ಟಾಸ್ಕ್ ದೊರೆತಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಚಿವ ಸಂತೋಷ್ ಲಾಡ್, ಕೈ ಶಾಸಕ ಪ್ರಸಾದ್ ಅಬ್ಬಯ್ಯ, ವಿನಯ ಕುಲಕರ್ಣಿ ಸೇರಿ ಪ್ರಮುಖ ನಾಯಕರಿಗೆ ಟಾಸ್ಕ್ ನೀಡಲಾಗಿದೆ ಎನ್ನಲಾಗಿದೆ. ಈಗಾಗಲೇ ಬಿಜೆಪಿಯ ಕೆಲವು ಸದಸ್ಯರು ಕೈ ನಾಯಕರ ಸಂಪರ್ಕದಲ್ಲಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಪಾಲಿಕೆ ಗದ್ದುಗೆ ಉಳಿಸಿಕೊಳ್ಳಲು ಬಿಜೆಪಿ ರೆಸಾರ್ಟ್ ರಾಜಕೀಯಕ್ಕೆ ಶರಣಾಗಿದೆ.

ಬಿಜೆಪಿಯ ಸುಮಾರು 39 ಪಾಲಿಕೆ ಸದಸ್ಯರು ದಾಂಡೇಲಿಯ ಖಾಸಗಿ ರೆಸಾರ್ಟ್‌ಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರ ಸೂಚನೆಯಂತೆ ರೆಸಾರ್ಟ್‌ಗೆ ತೆರಳಿದ್ದಾರೆ ಎನ್ನಲಾಗಿದ್ದು, ಕಾಂಗ್ರೆಸ್‌ ಸಂಪರ್ಕದಿಂದ ಅವರನ್ನು ದೂರ ಇರಿಸಲು ಬಿಜೆಪಿ ಹೈಕಮಾಂಡ್‌ ಹರಸಾಹಸಪಡುತ್ತಿದೆ.

ಇದನ್ನೂ ಓದಿ: Pralhad Joshi: ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆ ಮೊದಲ ಹಂತ ಡಿಸೆಂಬರ್ ಒಳಗೆ ಪೂರ್ಣ: ಪ್ರಲ್ಹಾದ್ ಜೋಶಿ

Exit mobile version