Site icon Vistara News

Black Magic : ಕರ್ನಾಟಕ ವಿವಿ ಪ್ರಾಧ್ಯಾಪಕಿ ಚೇಂಬರ್‌ನಲ್ಲಿ ವಾಮಾಚಾರ ; ಮಾಟದ ಗೊಂಬೆ, ಲಿಂಬೆ ಪತ್ತೆ!

Black Magic in Karnataka University

ಧಾರವಾಡ: ‌ ವಿದ್ಯಾರ್ಥಿಗಳನ್ನು ವೈಚಾರಿಕವಾಗಿ ಸಿದ್ಧಗೊಳಿಸಬೇಕಾದ ಯುನಿವರ್ಸಿಟಿಗಳಲ್ಲೇ ಮಾಟ ಮಂತ್ರ ನಡೆಯುತ್ತಿದೆ ಎಂದರೆ ನಂಬುತ್ತೀರಾ? ಧಾರವಾಡದ ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲಯದ (Karnataka University) ಇತಿಹಾಸ ಮತ್ತು ಶಾಸನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ (Assistant Professor) ಅವರ ಚೇಂಬರ್‌ನಲ್ಲಿ ವಾಮಾಚಾರ (Black Magic) ಮಾಡಿರುವುದಾಗಿ ಹೇಳಲಾಗಿದ್ದು, ಅದಕ್ಕೆ ಸಂಬಂಧಿಸಿದ ಕುರುಹುಗಳು ಪತ್ತೆಯಾಗಿವೆ. ಈ ಪ್ರಕರಣದಲ್ಲಿ ವೈಯಕ್ತಿಕ ಜಗಳದ ಸುಳಿವುಗಳು ಕೂಡಾ ಕಂಡುಬಂದಿವೆ.

ಪ್ರಾಚೀನ ಇತಿಹಾಸ ಮತ್ತು ಶಾಸನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿಯಾಗಿರುವ ಡಾ.ರಮಾ ಗುಂಡೂರಾವ್‌ ಅವರ ಚೇಂಬರ್‌ನಲ್ಲಿ ವಾಮಾಚಾರ ಮಾಡಿದ್ದು ಪತ್ತೆಯಾಗಿದೆ. ರಮಾ ಅವರು ಕೆಲವು ದಿನದ ಹಿಂದೆ ರಜೆಯಲ್ಲಿ ತೆರಳಿದ್ದರು. ಶುಕ್ರವಾರ ಅವರು ಮರಳಿ ಬಂದು ತಮ್ಮ ಕೊಠಡಿಯ ಬಾಗಿಲು ತೆಗೆದಾಗ ವಾಮಾಚಾರ ಮಾಡಿರುವುದು ಬೆಳಕಿಗೆ ಬಂದಿದೆ. ಕೊಠಡಿಯ ಕೀ ಅವರ ಬಳಿಯೇ ಇದ್ದು ಈ ವಸ್ತುಗಳನ್ನು ಕಿಟಕಿಯ ಮೂಲಕ ಒಳಗೆ ಎಸೆಯಲಾಗಿದೆ.

Black Magic in Karnataka University

ಅಲ್ಲಿರುವ ಮೇಜಿನ ಮೇಲೆ ಕಪ್ಪು ಬಣ್ಣದ ಮಾಟದ ಗೊಂಬೆ, 3 ಲಿಂಬೆ ಹಣ್ಣು ಎಸೆಯಲಾಗಿದೆ. ಜತೆಗೆ ಅರಿಷಿಣ-ಕುಂಕುಮ ಹಾಕಲಾಗಿದೆ. ಕಿಟಕಿ ಮೂಲಕ ಈ ವಸ್ತುಗಳನ್ನು ಎಸೆಯಲಾಗಿದೆ. ಎರಡು ದಿನಗಳ ಹಿಂದೆ ವಾಮಾಚಾರ ಮಾಡಿರುವ ಅನುಮಾನ ಅಲ್ಲಿರುವ ವಸ್ತುಗಳನ್ನು ನೋಡಿದಾಗ ಬರುತ್ತದೆ.

ಇದನ್ನೂ ಓದಿ: Black Magic : ಅಮಾವಾಸ್ಯೆಯಂದು ಮಾಟ ಮಂತ್ರ; ತಲೆಬುರಡೆ, ನಿಂಬೆ ಕಂಡು ಬೆಚ್ಚಿ ಬಿದ್ದ ಗ್ರಾಮಸ್ಥರು!

ಯಾರು ಮಾಡಿರಬಹುದು?

ಬಾಗಿಲು ತೆರೆಯುತ್ತಿದ್ದಂತೆಯೇ ಒಳಗಡೆ ವಾಮಾಚಾರ ಸಂಬಂಧಿತ ವಸ್ತುಗಳನ್ನು ನೋಡಿದ ಡಾ. ರಮಾ ಅವರು ಬೆಚ್ಚಿ ಬಿದ್ದು ಹೊರಗೋಡಿ ಬಂದಿದ್ದಾರೆ. ಮತ್ತು ಕುಲಪತಿಗಳಿಗೆ ದೂರು ನೀಡಿದ್ದಾರೆ.

ಈ ಘಟನೆಯಲ್ಲಿ ವಿಭಾಗದ ಪ್ರಾಧ್ಯಾಪಕರೊಬ್ಬರ ಮೇಲೆ ಸಂಶಯ ವ್ಯಕ್ತಪಡಿಸಲಾಗುತ್ತಿದೆ. ರಮಾ ಅವರ ಅಳಿಯ ಇದೇ ವಿಭಾಗದಲ್ಲಿ ಉಪನ್ಯಾಸಕರಾಗಿದ್ದಾರೆ. ಈ ಚೇಂಬರನ್ನು ಅವರಿಗೆ ಬಿಟ್ಟುಕೊಡಬೇಕು ಎಂಬ ವಿಚಾರದಲ್ಲಿ ರಮ್ಯಾ ಮತ್ತು ಆ ಉಪನ್ಯಾಸಕರ ನಡುವೆ ಜಗಳ ನಡೆದಿತ್ತು. ನಾಲ್ಕು ತಿಂಗಳ ಹಿಂದೆ ಉಪನ್ಯಾಸಕರು ಮತ್ತು ಅವರ ಮಾವ ಬಂದು ವಿದ್ಯಾರ್ಥಿಗಳ ಎದುರೇ ರಮಾ ಅವರ ಜತೆ ಜಗಳವಾಡಿದ್ದರು. ಇದೀಗ ಇನ್ನೊಂದು ರೀತಿಯಲ್ಲಿ ಜಗಳ ಮುಂದುವರಿದಿರಬಹುದು ಎಂದು ಅಲ್ಲಿನ ಸಿಬ್ಬಂದಿ ಸಂಶಯ ವ್ಯಕ್ತಪಡಿಸಿದ್ದಾರೆ.

Exit mobile version