Site icon Vistara News

Dharwad Election Result 2024: ಪ್ರಲ್ಹಾದ್‌ ಜೋಶಿಗೆ ‘ಧಾರವಾಡ ಪೇಡಾ’; ಅಸೂಟಿಗೆ ಸೋಲು

Dharwad Election Result 2024

Dharwad Election Result 2024: Pralhad Joshi Wins Against Vinod Asooti

ಧಾರವಾಡ: ಪೇಡಾಗಳಿಗೆ ಹೆಸರುವಾಸಿಯಾಗಿರುವ ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ (Dharwad Election Result 2024) ಸತತ ನಾಲ್ಕು ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಅವರು ಐದನೇ ಬಾರಿಗೆ ಗೆಲುವು ಸಾಧಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಕಾಂಗ್ರೆಸ್‌ನ ವಿನೋದ್‌ ಅಸೂಟಿ (Vinod Asooti) ಅವರು ಅವರ ವಿರುದ್ಧ ಪ್ರಲ್ಹಾದ್‌ ಜೋಶಿ ಅವರು ವಿಜಯದ ನಗೆ ಬೀರಿದ್ದಾರೆ.

ಗೆಲುವಿನ ಅಂತರ ಎಷ್ಟು?

ಪ್ರಲ್ಹಾದ್‌ ಜೋಶಿ (ಬಿಜೆಪಿ): 7,13,649

ವಿನೋದ್‌ ಅಸೂಟಿ (ಕಾಂಗ್ರೆಸ್): 6,17,616‌

ಜೋಶಿ ಗೆಲುವಿನ ಅಂತರ: 96,033

ಪ್ರಧಾನಿ ನರೇಂದ್ರ ಮೋದಿ ಅವರ ಅಲೆ, ಧಾರವಾಡ ಕ್ಷೇತ್ರದಲ್ಲಿ ಪ್ರಬಲ ಸಮುದಾಯಗಳ ಬೆಂಬಲ, ಕೇಂದ್ರ ಸಚಿವರಾಗಿ ಕ್ಷೇತ್ರಕ್ಕೆ ತಂದಿರುವ ಅಭಿವೃದ್ಧಿ ಯೋಜನೆಗಳು, ವಂದೇ ಭಾರತ್‌ ರೈಲು ಸೇರಿ ಹಲವು ಮೂಲ ಸೌಕರ್ಯಗಳು ಪ್ರಲ್ಹಾದ್‌ ಜೋಶಿ ಅವರಿಗೆ ವರದಾನವಾಗುವ ಲಕ್ಷಣಗಳಿದ್ದವು. ಕಳೆದ ನಾಲ್ಕು ಬಾರಿ ಗೆದ್ದು, ಕ್ಷೇತ್ರದ ಜನರ ಬೆಂಬಲ, ವಿಶ್ವಾಸ ಗಳಿಸಿರುವ ಪ್ರಲ್ಹಾದ್‌ ಜೋಶಿ ಅವರು ಸತತ ಐದನೇ ಬಾರಿಗೆ ಜಯಿಸುವ ವಿಶ್ವಾಸದಲ್ಲಿದ್ದರು. ಅದರಂತೆ, ಕ್ಷೇತ್ರದ ಜನ ಜೋಶಿ ಅವರನ್ನೇ ಗೆಲ್ಲಿಸಿದ್ದಾರೆ.

Dharwad Lok Sabha Constituency

ಗದಗ ಜಿಲ್ಲೆ ಶಿರಹಟ್ಟಿಯ ಭಾವೈಕ್ಯ ಪೀಠದ ದಿಂಗಾಲೇಶ್ವರ ಸ್ವಾಮೀಜಿ ಅವರ ವಿರೋಧದಿಂದಾಗಿ ಪ್ರಲ್ಹಾದ್‌ ಜೋಶಿ ಅವರಿಗೆ ತುಸು ಹಿನ್ನಡೆಯುಂಟಾಗಿತ್ತು. ಪಕ್ಷೇತರರಾಗಿ ದಿಂಗಾಲೇಶ್ವರ ಸ್ವಾಮೀಜಿ ಅವರು ಕಣಕ್ಕೂ ಇಳಿದಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಅವರು ಚುನಾವಣೆಯಿಂದ ಹಿಂದೆ ಸರಿದರೂ ಅವರ ಬೆಂಬಲವು ಕಾಂಗ್ರೆಸ್‌ ಅಭ್ಯರ್ಥಿಗಿತ್ತು. ಇದು ಜೋಶಿ ಅವರಿಗೆ ಹಿನ್ನಡೆ ತಂದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿತ್ತು. ಆದರೆ, ಎಲ್ಲ ಲೆಕ್ಕಾಚಾರವೂ ತಲೆಕೆಳಗಾಗಿದೆ.

2018ರಲ್ಲಿ ನವಲಗುಂದ ವಿಧಾನಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದ ವಿನೋದ್ ಅಸೂಟಿಯವರು ಮೊದಲ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಈ ಬಾರಿ ಕಾಂಗ್ರೆಸ್‌ ಲಿಂಗಾಯತರ ಬದಲು ಕುರುಬ ಸಮುದಾಯದ ವಿನೋದ್ ಅಸೂಟಿ ಅವರಿಗೆ ಟಿಕೆಟ್‌ ನೀಡಿತ್ತು. ಇದು ಕ್ಷೇತ್ರದಲ್ಲಿ ಹಿಂದುಳಿದವರ ಮತ ಸೆಳೆಯಲು ಕಾರಣವಾಗಲಿದೆ ಎಂಬುದು ಪಕ್ಷದ ರಣತಂತ್ರವಾಗಿತ್ತು. ಗ್ಯಾರಂಟಿ ಯೋಜನೆಗಳಂತೂ ಸಕಾರಾತ್ಮಕ ಪ್ರಭಾವವನ್ನೇ ಬೀರಿದ್ದವು. ಇದರ ಮಧ್ಯೆಯೂ ಕ್ಷೇತ್ರದಲ್ಲಿ ಮೋದಿ ಅಲೆ ಕೆಲಸ ಮಾಡಿದೆ ಎನ್ನಲಾಗಿದೆ.

2019, 2014ರ ಫಲಿತಾಂಶ ಏನಾಗಿತ್ತು?

2019ರ ಲೋಕಸಭೆ ಚುನಾವಣೆಯಲ್ಲಿ ಪ್ರಲ್ಹಾದ್‌ ಜೋಶಿ ಅವರು ಕಾಂಗ್ರೆಸ್‌ನ ವಿನಯ್‌ ಕುಲಕರ್ಣಿ ಅವರ ವಿರುದ್ಧ 2.05 ಲಕ್ಷ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದರು. 2014ರ ಸಾರ್ವತ್ರಿಕ ಚುನಾವಣೆಯಲ್ಲೂ ಪ್ರಲ್ಹಾದ್‌ ಜೋಶಿ ಅವರೇ ಜಯಿಸಿದ್ದರು. ಇವರು ವಿನಯ್‌ ಕುಲಕರ್ಣಿ ಅವರ ವಿರುದ್ಧ 1 ಲಕ್ಷಕ್ಕೂ ಅಧಿಕ ಮತಗಳ ಅಂತರಗಿಂದ ಜಯಭೇರಿ ಬಾರಿಸುವ ಮೂಲಕ ಕ್ಷೇತ್ರದಲ್ಲಿ ಬಿಜೆಪಿ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿದ್ದರು. ನರೇಂದ್ರ ಮೋದಿ ಅವರ ಅಲೆಯೂ ಪ್ರಲ್ಹಾದ್‌ ಜೋಶಿ ಅವರಿಗೆ ವರದಾನವಾಗಿತ್ತು.

ಇದನ್ನೂ ಓದಿ: Shivamogga Election Result 2024: ಶಿವಮೊಗ್ಗದಲ್ಲಿ ಬಿಜೆಪಿಯ ಬಿ.ವೈ.ರಾಘವೇಂದ್ರಗೆ ವಿಜಯಮಾಲೆ

Exit mobile version