ಧಾರವಾಡ: ಪೇಡಾಗಳಿಗೆ ಹೆಸರುವಾಸಿಯಾಗಿರುವ ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ (Dharwad Lok Sabha Constituency) ಸತತ ನಾಲ್ಕು ಚುನಾವಣೆಗಳಲ್ಲಿ ಗೆಲುವು ಸಾಧಿಸಿ, ಐದನೇ ಬಾರಿಗೆ ಗೆದ್ದು ದಾಖಲೆ ಸೃಷ್ಟಿಸಲು ಹಂಬಲಿಸುತ್ತಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಅವರಿಗೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ವಿನೋದ್ ಅಸೂಟಿ (Vinod Asooti) ಅವರು ಸವಾಲೊಡ್ಡಿದ್ದಾರೆ. ಹಾಗಾಗಿ, ಈ ಬಾರಿ ಧಾರವಾಡ ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ಕದನ ಏರ್ಪಟ್ಟಿದ್ದು, ವಿಜಯದ ಮಾಲೆ ಯಾರ ಕೊರಳಿಗೆ ಎಂಬ ಕುತೂಹಲ ಹೆಚ್ಚಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಲೆ, ಧಾರವಾಡ ಕ್ಷೇತ್ರದಲ್ಲಿ ಪ್ರಬಲ ಸಮುದಾಯಗಳ ಬೆಂಬಲ, ಕೇಂದ್ರ ಸಚಿವರಾಗಿ ಕ್ಷೇತ್ರಕ್ಕೆ ತಂದಿರುವ ಅಭಿವೃದ್ಧಿ ಯೋಜನೆಗಳು, ವಂದೇ ಭಾರತ್ ರೈಲು ಸೇರಿ ಹಲವು ಮೂಲ ಸೌಕರ್ಯಗಳು ಪ್ರಲ್ಹಾದ್ ಜೋಶಿ ಅವರಿಗೆ ವರದಾನವಾಗುವ ಲಕ್ಷಣಗಳಿವೆ. ಕಳೆದ ನಾಲ್ಕು ಬಾರಿ ಗೆದ್ದು, ಕ್ಷೇತ್ರದ ಜನರ ಬೆಂಬಲ, ವಿಶ್ವಾಸ ಗಳಿಸಿರುವ ಪ್ರಲ್ಹಾದ್ ಜೋಶಿ ಅವರು ಸತತ ಐದನೇ ಬಾರಿಗೆ ಜಯಿಸುವ ವಿಶ್ವಾಸದಲ್ಲಿದ್ದಾರೆ.
ಗದಗ ಜಿಲ್ಲೆ ಶಿರಹಟ್ಟಿಯ ಭಾವೈಕ್ಯ ಪೀಠದ ದಿಂಗಾಲೇಶ್ವರ ಸ್ವಾಮೀಜಿ ಅವರ ವಿರೋಧದಿಂದಾಗಿ ಪ್ರಲ್ಹಾದ್ ಜೋಶಿ ಅವರಿಗೆ ತುಸು ಹಿನ್ನಡೆಯುಂಟಾಗಿತ್ತು. ಪಕ್ಷೇತರರಾಗಿ ದಿಂಗಾಲೇಶ್ವರ ಸ್ವಾಮೀಜಿ ಅವರು ಕಣಕ್ಕೂ ಇಳಿದಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಅವರು ಚುನಾವಣೆಯಿಂದ ಹಿಂದೆ ಸರಿದರೂ ಅವರ ಬೆಂಬಲವು ಕಾಂಗ್ರೆಸ್ ಅಭ್ಯರ್ಥಿಗಿದೆ. ಇದು ಜೋಶಿ ಅವರಿಗೆ ಹಿನ್ನಡೆ ತಂದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.
ಖಾತೆ ತೆರೆಯುವರೇ ವಿನೋದ್?
2018ರಲ್ಲಿ ನವಲಗುಂದ ವಿಧಾನಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದ ವಿನೋದ್ ಅಸೂಟಿಯವರು ಮೊದಲ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಈ ಬಾರಿ ಕಾಂಗ್ರೆಸ್ ಲಿಂಗಾಯತರ ಬದಲು ಕುರುಬ ಸಮುದಾಯದ ವಿನೋದ್ ಅಸೂಟಿ ಅವರಿಗೆ ಟಿಕೆಟ್ ನೀಡಿದೆ. ಇದು ಕ್ಷೇತ್ರದಲ್ಲಿ ಹಿಂದುಳಿದವರ ಮತ ಸೆಳೆಯಲು ಕಾರಣವಾಗಲಿದೆ ಎಂಬುದು ಪಕ್ಷದ ರಣತಂತ್ರವಾಗಿದೆ. ಗ್ಯಾರಂಟಿ ಯೋಜನೆಗಳಂತೂ ಸಕಾರಾತ್ಮಕ ಪ್ರಭಾವವನ್ನೇ ಬೀರಿವೆ.
2019, 2014ರ ಫಲಿತಾಂಶ ಏನಾಗಿತ್ತು?
2019ರ ಲೋಕಸಭೆ ಚುನಾವಣೆಯಲ್ಲಿ ಪ್ರಲ್ಹಾದ್ ಜೋಶಿ ಅವರು ಕಾಂಗ್ರೆಸ್‌ನ ವಿನಯ್ ಕುಲಕರ್ಣಿ ಅವರ ವಿರುದ್ಧ 2.05 ಲಕ್ಷ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದರು. 2014ರ ಸಾರ್ವತ್ರಿಕ ಚುನಾವಣೆಯಲ್ಲೂ ಪ್ರಲ್ಹಾದ್ ಜೋಶಿ ಅವರೇ ಜಯಿಸಿದ್ದರು. ಇವರು ವಿನಯ್ ಕುಲಕರ್ಣಿ ಅವರ ವಿರುದ್ಧ 1 ಲಕ್ಷಕ್ಕೂ ಅಧಿಕ ಮತಗಳ ಅಂತರಗಿಂದ ಜಯಭೇರಿ ಬಾರಿಸುವ ಮೂಲಕ ಕ್ಷೇತ್ರದಲ್ಲಿ ಬಿಜೆಪಿ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿದ್ದರು. ನರೇಂದ್ರ ಮೋದಿ ಅವರ ಅಲೆಯೂ ಪ್ರಲ್ಹಾದ್ ಜೋಶಿ ಅವರಿಗೆ ವರದಾನವಾಗಿತ್ತು.
ಇದನ್ನೂ ಓದಿ: Haveri Lok Sabha Constituency: ಹಾವೇರಿಯಲ್ಲಿ ಅನುಭವಿ vs ಉತ್ಸಾಹಿ; ಯಾರಿಗೆ ಜಯದ ಮಾಲೆ?