ಹುಬ್ಬಳ್ಳಿ: ನಗರ್ತ ಪೇಟೆಯ ಮೊಬೈಲ್ ಅಂಗಡಿಯೊಂದರಲ್ಲಿ ಈಚೆಗೆ ಹನುಮಾನ್ ಚಾಲೀಸಾ (Hanuman Chalisa) ಹಾಕಿದ್ದಕ್ಕೆ ಹಲ್ಲೆ ನಡೆಸಲಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗ ಹಲ್ಲೆಗೊಳಗಾದ ವ್ಯಕ್ತಿಯ ಮೇಲೆಯೇ ದೂರು ದಾಖಲಾಗಿರುವುದನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad joshi) ಕಟುವಾಗಿ ಖಂಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರು ಕರ್ನಾಟಕವನ್ನು ಪಾಕಿಸ್ತಾನಕ್ಕಿಂತಲೂ ಕಡೆ ಮಾಡುತ್ತಿದ್ದಾರೆ ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ.
ಹುಬ್ಬಳ್ಳಿಯಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಲ್ಹಾದ್ ಜೋಶಿ, ರಾಜ್ಯ ಕಾಂಗ್ರೆಸ್ ಸರ್ಕಾರ ಹನುಮಾನ್ ಚಾಲೀಸಾ ಆಡಿಯೊ ಹಾಕಿದ್ದವರ ಮೇಲೆ ಎಫ್‌ಐಆರ್ ಹಾಕಿರುವುದು ಎಷ್ಟು ಸರಿ? ಇವರೇನು ಕರ್ನಾಟಕವನ್ನು ಆಳುತ್ತಿದ್ದಾರೋ? ಅಥವಾ ಮೂಲಭೂತವಾದಿ ಇಸ್ಲಾಮಿಕ್ ರಾಷ್ಟ್ರವನ್ನು ಆಳುತ್ತಿದ್ದಾರೋ? ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಹನುಮಾನ್ ಚಾಲೀಸಾವನ್ನು ಹಾಕಿದ ಕಾರಣಕ್ಕೆ ಹಲ್ಲೆಗೊಳಗಾದ ಅಂಗಡಿಯಾತನ ಮೇಲೆ ಹಾಕಲಾಗಿರುವ ಎಫ್‌ಐಆರ್ ಅನ್ನು ರಾಜ್ಯ ಸರ್ಕಾರ ಕೂಡಲೇ ಕೈ ಬಿಡಬೇಕು ಎಂದು ಸಚಿವ ಪ್ರಲ್ಹಾದ್ ಜೋಶಿ ಆಗ್ರಹಿಸಿದರು.
ಹನುಮಾನ್ ಚಾಲೀಸಾ ಪಠಣ ಪ್ರಕರಣದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆಯನ್ನು ಅತ್ಯುಗ್ರವಾಗಿ ಖಂಡಿಸುತ್ತೇನೆ ಎಂದ ಸಚಿವರು, ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದಾಗಲೂ ಹೀಗೇ ಹಿಂದೂ ವಿರೋಧಿ ನಡೆ ತೋರಿದೆ ಎಂದು ಪ್ರಲ್ಹಾದ್ ಜೋಶಿ ಹರಿಹಾಯ್ದರು.
ಕಮ್ಯುನಿಟಿ ರಾಜಕಾರಣ
ಕಾಂಗ್ರೆಸ್ ಪಕ್ಷ ಕಮ್ಯುನಿಟಿ ರಾಜಕಾರಣ ಮಾಡುತ್ತಿದೆ. ವೋಟ್ ಬ್ಯಾಂಕ್‌ಗಾಗಿ ತುಷ್ಟೀಕರಣದಲ್ಲಿ ತೊಡಗಿದೆ. ಬೆಳ್ಳಂಬೆಳಗ್ಗೆ ನಮಾಜ್ ಮಾಡಬಹುದೇ? ಬೆಳಕು ಹರಿಯುವ ಮೊದಲೇ 6 ಗಂಟೆಗೂ ಮುನ್ನ ಆ ಕೋಮಿನವರು ನಮಾಜ್ ಮಾಡಬಹುದು. ಆದರೆ, ಹಿಂದೂಗಳು ಹನುಮಾನ್ ಚಾಲೀಸ್ ಹಾಕುವುದು ತಪ್ಪೇ? ಎಂದು ಜೋಶಿ ಪ್ರಶ್ನಿಸಿದರು.
ಜನ ಅರ್ಥ ಮಾಡಿಕೊಳ್ಳಲಿ
ಕಾಂಗ್ರೆಸ್ ಪಕ್ಷವು ತುಷ್ಟೀಕರಣದ ಪರಾಕಾಷ್ಟೆ ತಲುಪಿದೆ. ರಾಜ್ಯದ ಜನ ಇದನ್ನು ಅರ್ಥ ಮಾಡಿಕೊಳ್ಳಬೇಕು. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರೇ ಯಾವ ರಾಜ್ಯದಲ್ಲಿ ಇದ್ದೀರಿ? ಕೂಡಲೇ ಹನುಮಾನ್ ಚಾಲೀಸಾ ಆಡಿಯೊ ಹಾಕಿದ್ದ ಅಂಗಡಿಯಾತನ ಮೇಲೆ ಹಾಕಿರುವ ಎಫ್‌ಐಆರ್ ಅನ್ನು ಕೈ ಬಿಟ್ಟು, ಆತನನ್ನು ಪ್ರಕರಣದಿಂದ ಮುಕ್ತಗೊಳಿಸಿ ಎಂದು ಸಚಿವ ಪ್ರಲ್ಹಾದ್ ಜೋಶಿ ಆಗ್ರಹಿಸಿದರು.
ಏನಿದು ಘಟನೆ?
ಮಾರ್ಚ್ 17ರ ಭಾನುವಾರ ಸಾಯಂಕಾಲ 6.15ರ ಸುಮಾರಿಗೆ ನಗರ್ತ ಪೇಟೆಯ ಜುಮ್ಮಾ ಮಸೀದಿ ರಸ್ತೆಯಲ್ಲಿರುವ ಸಿದ್ಧಣ್ಣ ಗಲ್ಲಿಯಲ್ಲಿ ಕಾರ್ಯಾಚರಿಸುತ್ತಿರುವ ಕೃಷ್ಣ ಟೆಲಿಕಾಂ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮುಖೇಶ್ ಅವರು ಹನುಮಾನ್ ಚಾಲೀಸಾದ ಆಡಿಯೊವನ್ನು ಹಾಕಿದ್ದರು.
ಆಗ ಅಲ್ಲಿಗೆ ಆಗಮಿಸಿದ ಸುಲೇಮಾನ್, ಷಹನವಾಜ್, ರೋಹಿತ್, ಡ್ಯಾನಿಷ್, ತರುಣ್ ಅಲಿಯಾಸ್ ದಡಿಯಾ ಮತ್ತು ಇನ್ನೊಬ್ಬ ವ್ಯಕ್ತಿ ಹಿಂದು ದೇವರ ಭಜನೆಯನ್ನು ಬಂದ್ ಮಾಡಲು ಹೇಳಿದ್ದಾರೆ. ಅಂಗಡಿಯಲ್ಲಿದ್ದ ಮುಖೇಶ್, ನನ್ನ ಅಂಗಡಿ ನನ್ನ ಇಷ್ಟ ಎಂದು ವಿರೋಧ ಮಾಡಿದ್ದಾರೆ. ಈಗ ಆಜಾನ್ ಟೈಮ್, ದೇವರ ಭಜನೆ ಹಾಕುವಂತಿಲ್ಲ ಎಂದು ಎಚ್ಚರಿಕೆ ನೀಡಿದರು. ಆದರೆ, ಮುಖೇಶ್ ಅವರ ಮಾತು ಕೇಳಿಲ್ಲ. ನಾನು ನಮ್ಮ ದೇವರ ಹಾಡು ಹಾಕಿದರೆ ನಿಮಗೇನು ತೊಂದರೆ ಎಂದು ಕೇಳಿದ್ದಾರೆ.
ಇದನ್ನೂ ಓದಿ: Lok Sabha Election 2024: ಏಪ್ರಿಲ್ 14ರಂದು ಕರ್ನಾಟಕಕ್ಕೆ ಮೋದಿ; ಬೆಂಗಳೂರಲ್ಲಿ ರೋಡ್ ಶೋ
ಇದರಿಂದ ಸಿಟ್ಟಿಗೆದ್ದ ಯುವಕರ ಗುಂಪು ಮುಖೇಶ್ ಮೇಲೆ ದಾಳಿ ಮಾಡಿದ್ದರು. ಮುಖೇಶ್ ಸಹ ಆವೇಶದಿಂದ ಪ್ರತಿದಾಳಿ ಮಾಡಿದ್ದರು. ಆದರೆ, ಆರೋಪಿಗಳು ನಾಲ್ಕೈದು ಮಂದಿ ಇದ್ದಿದ್ದರಿಂದ ಮುಖೇಶ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು. ಈ ಎಲ್ಲ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ದೂರು ದಾಖಲಿಸಿಕೊಂಡಿರುವ ಪೊಲೀಸರು ಸುಲೇಮಾನ್, ಷಹನವಾಜ್, ರೋಹಿತ್, ಡ್ಯಾನಿಷ್, ತರುಣ್ ಅಲಿಯಾಸ್ ದಡಿಯಾ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಬಂಧಿಸಿದ್ದರು.
ಪ್ರತಿ ದೂರು ನೀಡಿದ್ದ ಸುಲೇಮಾನ್ ತಾಯಿ
ಬಂಧಿತರ ಪೈಕಿ ಸುಲೇಮಾನ್ ಎಂಬಾತನ ತಾಯಿ ದೂರು ನೀಡಿದ್ದರು. ಬಳಿಕ ನ್ಯಾಯಾಲಯದ ಅನುಮತಿ ಮೇರೆಗೆ ಎನ್‌ಸಿಆರ್ ಅನ್ನು ಎಫ್‌ಐಆರ್ ಆಗಿ ಬದಲಾಗಿತ್ತು. ಅದರಲ್ಲಿ ಸುಲೇಮಾನ್ ತಾಯಿ ಹಲವು ಆರೋಪಗಳನ್ನು ಮಾಡಿದ್ದಾರೆ. ಆ ಪ್ರಕಾರ ಮೊಬೈಲ್ ಅಂಗಡಿಯ ಪಕ್ಕದಲ್ಲಿಯೇ ಮಸೀದಿ ಇದೆ. ರಂಜಾನ್ ಇರುವುದರಿಂದ ಮೂರು ಸಾವಿರಕ್ಕೂ ಹೆಚ್ಚಿ ಮುಸಲ್ಮಾನರು ನಮಾಜ್ ಮಾಡುತ್ತಾರೆ. ಇದನ್ನು ನನ್ನ ಮಗ ಸುಲೇಮಾನ್ ಹಾಗೂ ಆತನ ಸ್ನೇಹಿತರು ಕೇಳಲು ಹೋದಾಗ ಮುಖೇಶ್ ಹಲ್ಲೆ ನಡೆಸಿದ್ದಾನೆ. ಹೀಗಾಗಿ ಮುಖೇಶ್ ವಿರುದ್ಧ ಕ್ರಮ ಕೈಗೊಳ್ಳಲು ದೂರಿನಲ್ಲಿ ಉಲ್ಲೇಖಿಸಿದ್ದಾರೆ.