Site icon Vistara News

Lok Sabha Election 2024: ಸಿಎಂ ಸಿದ್ದರಾಮಯ್ಯ- ಶೆಟ್ಟರ್‌ ರಹಸ್ಯ ಮಾತುಕತೆ; ಲೋಕಸಭೆಗೆ ಮಾಜಿ ಸಿಎಂ?

CM Siddaramaiah meets Jagadish Shettar

ಹುಬ್ಬಳ್ಳಿ: ಮುಂಬರುವ ಲೋಕಸಭಾ ಚುನಾವಣೆಗೆ (Lok Sabha Election 2024) ಧಾರವಾಡ ಕ್ಷೇತ್ರದಿಂದ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ (Former CM Jagadish Shettar) ಸ್ಪರ್ಧೆ ಮಾಡಲಿದ್ದಾರೆಯೇ? ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಜಗದೀಶ್‌ ಶೆಟ್ಟರ್‌ ಭೇಟಿ, ಮಾತುಕತೆ ಇಂಥದ್ದೊಂದು ಚರ್ಚೆಯನ್ನು ಹುಟ್ಟುಹಾಕಿದೆ. ಮಾಜಿ‌ ಸಿಎಂ ಜಗದೀಶ್ ಶೆಟ್ಟರ್ ಅವರ 68ನೇ ಜನ್ಮ ದಿನ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರು ಶೆಟ್ಟರ್‌ ಜತೆ ಕೆಲಕಾಲ ರಹಸ್ಯವಾಗಿ ಮಾತನಾಡಿದ್ದಾರೆ. ಆ ಬಳಿಕ ಮಾತನಾಡಿದ ಜಗದೀಶ್‌ ಶೆಟ್ಟರ್‌, ಲೋಕಸಭೆಗೆ ಸ್ಪರ್ಧೆ ಮಾಡುವಂತೆ ನನಗೆ ಇದುವರೆಗೂ ಪಕ್ಷ ಏನನ್ನೂ ಹೇಳಿಲ್ಲ. ಪಕ್ಷ ಬಯಸಿದರೆ ಸ್ಪರ್ಧಿಸಲು ಸಿದ್ಧನಿದ್ದೇನೆ ಎಂದು ಹೇಳಿದರು. ಅಲ್ಲದೆ, ಅವರ ಸಹೋದರ ಬಿಜೆಪಿ ಎಂಎಲ್‌ಸಿ ಪ್ರದೀಪ್‌ ಶೆಟ್ಟರ್‌ (BJP MLC Pradeep Shettar) ಸಹ ಸ್ಪರ್ಧೆಗೆ ಸಿದ್ಧ ಎಂದು ಹೇಳಿದ್ದಾರೆ. ಈ ಮೂಲಕ ಹೊಸ ಚರ್ಚೆಯನ್ನು ಹುಟ್ಟುಹಾಕಿದರು.

ಜಗದೀಶ್‌ ಶೆಟ್ಟರ್ ಹುಟ್ಟುಹಬ್ಬದ ನಿಮಿತ್ತ ಅವರ ನಿವಾಸಕ್ಕೆ ಇದೇ ಮೊದಲ ಬಾರಿ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ. ಇನ್ನು ಈ ಭೇಟಿಯಿಂದ ಅನೇಕ ರಾಜಕೀಯ ಪಟ್ಟುಗಳಿವೆ ಎಂದೂ ಹೇಳಲಾಗುತ್ತಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶೆಟ್ಟರ್‌ ಅವರನ್ನು ವಾಪಸ್‌ ಬಿಜೆಪಿಗೆ ಕರೆ ತರುವ ಬಗ್ಗೆ ಬಿಜೆಪಿ ಪ್ರಯತ್ನ ಮಾಡುತ್ತಿದೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ, ಉಭಯ ಪಕ್ಷಗಳ ನಾಯಕರು ಇದನ್ನು ನಿರಾಕರಿಸುತ್ತಲೇ ಬಂದಿದ್ದಾರೆ. ಈಗ ಶೆಟ್ಟರ್‌ ಅವರಿಗೆ ಕಾಂಗ್ರೆಸ್‌ ಪ್ರಾಧಾನ್ಯತೆ ಕೊಡುತ್ತಿದೆ. ಅವರ ಹಿಂದೆ ಪಕ್ಷ ನಿಂತಿದೆ ಎಂಬ ಸಂದೇಶವನ್ನು ಸಾರುವ ಉದ್ದೇಶವೇ ಈ ಭೇಟಿ ಎಂದು ಹೇಳಲಾಗುತ್ತಿದೆ.

ಇನ್ನು ಲೋಕಸಭಾ ಚುನಾವಣೆಯಲ್ಲಿ ಲಿಂಗಾಯತರ ಮತಗಳನ್ನು ಸೆಳೆಯಲು ಕಾಂಗ್ರೆಸ್‌ಗೆ ಶೆಟ್ಟರ್ ಟ್ರಂಪ್ ಕಾರ್ಡ್ ಆಗಿದ್ದಾರೆ. ಸದ್ಯ ಎದ್ದಿರುವ ಜಾತಿಗಣತಿ ವಿವಾದ ಕಾಂಗ್ರೆಸ್‌ಗೆ ಮುಳುವಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಶೆಟ್ಟರ್‌ ಜತೆ ನಾವಿದ್ದೇವೆ ಎಂಬ ಸಂದೇಶವನ್ನು ರವಾನೆ ಮಾಡಿ ಲಿಂಗಾಯತ ನಾಯಕರನ್ನು ಭದ್ರಗೊಳಿಕೊಳ್ಳುವ ಪ್ಲ್ಯಾನ್‌ನಲ್ಲಿ ಕಾಂಗ್ರೆಸ್‌ ಇದೆ ಎನ್ನಲಾಗಿದೆ. ಒಂದು ವೇಳೆ ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಶೆಟ್ಟರ್‌ ಆಯ್ಕೆಯಾಗಿಲ್ಲವಾದರೂ, ಯಾರನ್ನು ಮಾಡಬಹುದು ಎಂಬ ವಿಷಯದಲ್ಲಿ ಅವರಿಗೆ ಆದ್ಯತೆ ಹಾಗೂ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ ಎನ್ನಲಾಗಿದೆ.

ಲೋಕಸಭೆ ಟಿಕೆಟ್‌ ಆಕಾಂಕ್ಷಿ ನಾನಲ್ಲ, ಸೂಚಿಸಿದರೆ ಸ್ಪರ್ಧೆ ಮಾಡುವೆ: ಜಗದೀಶ್‌ ಶೆಟ್ಟರ್

ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಿಎಂ ಸಿದ್ದರಾಮಯ್ಯ ಅವರು ಹುಟ್ಟುಹಬ್ಬದ ಶುಭ ಕೋರಿದ್ದಾರೆ. ರಾಜಕೀಯ ಚರ್ಚೆ ಏನು ಆಗಿಲ್ಲ. ಸಹಜವಾಗಿಯೇ ಪ್ರದೀಪ್ ಶೆಟ್ಟರ್ ಕೂಡ ಮನೆಗೆ ಬಂದಿದ್ದರು. ಸಿದ್ದರಾಮಯ್ಯನವರು ನಮ್ಮ ರಾಜಕೀಯ ಜೀವನದ ಒಡನಾಟವನ್ನು ಈ ವೇಳೆ ನೆನಪಿಸಿಕೊಂಡರು. ನಾನು ಲೋಕಸಭೆ ಟಿಕೆಟ್ ಆಕಾಂಕ್ಷಿಯಲ್ಲ. ಪಕ್ಷವೂ ನನ್ನನ್ನು ಸ್ಪರ್ಧಿಸುವಂತೆ ಹೇಳಿಲ್ಲ. ಮುಂದೆ ಹೇಳಿದರೆ ನೋಡೋಣ. ಲೋಕಸಭಾ ಚುನಾವಣೆಗೆ ಟಿಕೆಟ್‌ ಆಕಾಂಕ್ಷಿಗಳ ಬಗ್ಗೆ ಚರ್ಚೆಯು ಜನವರಿ ನಂತರ ಶುರುವಾಗುತ್ತದೆ. ಪಕ್ಷ ಬಯಸಿದರೆ ಸ್ಪರ್ಧಿಸಲು ಸಿದ್ಧ ಎಂದು ಹೇಳಿದರು.

ನಮ್ಮ ಜಾತಿಯವರಿಗೇ ಟಿಕೆಟ್‌ ಕೊಡಬೇಕು: ಪ್ರದೀಪ್‌ ಶೆಟ್ಟರ್!

ಈ ವೇಳೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಎಂಎಲ್‌ಸಿ ಪ್ರದೀಪ್ ಶೆಟ್ಟರ್, ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯ ಪ್ರಬಲವಾಗಿದೆ. ನಮ್ಮ‌ ಜಾತಿಯವರಿಗೆ ಟಿಕೆಟ್ ಕೊಡಬೇಕು. ಬಿಜೆಪಿಯಲ್ಲಿ ಟಿಕೆಟ್ ಕೊಟ್ಟರೆ ಸ್ಪರ್ಧೆಗೆ ಸಿದ್ಧ. ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಜಗದೀಶ್‌ ಶೆಟ್ಟರ್ ಇನ್ನೂ ಹತ್ತು ವರ್ಷ ಸೆಂಟ್ರಲ್ ಕ್ಷೇತ್ರದ ಶಾಸಕರಾಗಿರುತ್ತಾರೆ ಎಂದು ಮಹೇಶ್ ಟೆಂಗಿನಕಾಯಿ ಹೇಳಿದ್ದರು. ಈಗ ಏನಾಯ್ತು? ರಾಜಕೀಯದಲ್ಲಿ ಹಾಗೆ ಆಗೋದು ಎಂದು ಹೇಳಿದರು.

Exit mobile version