ಹುಬ್ಬಳ್ಳಿ: ಕಾಂಗ್ರೆಸ್ (Congress) ತನ್ನ ಪ್ರಣಾಳಿಕೆಯಲ್ಲಿ ಬಡವರಿಗೆ 1 ಲಕ್ಷ ರು. ಘೋಷಿಸಿದ್ದು ಹೊಸದೊಂದು ಬೋಗಸ್ ಗ್ಯಾರೆಂಟಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Lok Sabha Election 2024) ಆರೋಪಿಸಿದರು.
ಕಲಘಟಗಿ ವಿಧಾನಸಭಾ ಕ್ಷೇತ್ರದ ಬೆಲವಂತರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಹೀಗೆ ಬಡವರನ್ನು ವಂಚಿಸಲು ಮತ್ತು ಆಗ ಹೋಗದ ಗ್ಯಾರೆಂಟಿ ಘೋಷಿಸುವ ಇವರಿಗೆ ಏನಾದರೂ ಜವಾಬ್ದಾರಿ ಇದೆಯೇ? ಎಂದು ಕಿಡಿ ಕಾರಿದರು.
ಕಾಂಗ್ರೆಸ್ ಪಕ್ಷದ ಪ್ರಕಾರ 6.5 ಕೋಟಿ ಬಡವರಿದ್ದಾರೆ. ತಲಾ 1 ಲಕ್ಷವೆಂದರೆ, 65 ಲಕ್ಷ ಕೋಟಿ ಬೇಕಾಗುತ್ತದೆ. ಆದರೆ, ವಾಸ್ತವದಲ್ಲಿ ದೇಶದ ಬಜೆಟ್ ಗಾತ್ರವೇ ಅಷ್ಟಿರುವುದಿಲ್ಲ ಎಂದು ಹೇಳಿದರು.
ಭಾರತದ ಬಜೆಟ್ ಈಗ 35- 36 ಲಕ್ಷ ಕೋಟಿ ಇದೆ. ಹಾಗಿರುವಾಗ 65 ಲಕ್ಷ ಕೋಟಿ ಬಡವರಿಗೆ ಹೇಗೆ ಹಂಚುತ್ತಾರೆ? ನೀವೂ ಸ್ವಲ್ಪ ಪ್ರಬುದ್ಧರಾಗಿ ಯೋಚಿಸಿ ನೋಡಿ ಇದು ಬೋಗಸ್ ಗ್ಯಾರೆಂಟಿ ಎಂಬುದು ಖಚಿತವಾಗುತ್ತದೆ ಎಂದು ತಿಳಿಸಿದರು.
ಸರ್ಕಾರ ರಚಿಸದೆ ಹೇಗೆ ಕೊಡ್ತಾರೆ?
ಸರ್ಕಾರ ರಚನೆಗೆ 273 ಸಂಸದರ ಬಲ ಬೇಕು. ಆದರೆ, ಕಾಂಗ್ರೆಸ್ ಸ್ಪರ್ಧಿಸಿದ್ದೇ 230 ಕ್ಷೇತ್ರಗಳಿಗೆ. ಅದರಲ್ಲಿ ಗೆಲ್ಲುವುದೆಷ್ಟೋ.. ಸೋಲುವುದೆಷ್ಟೋ? ಸರ್ಕಾರ ರಚನೆಯೇ ಅಸಾಧ್ಯವಾಗಿದೆ. ಇನ್ನು 1 ಲಕ್ಷ ರು. ಗ್ಯಾರೆಂಟಿ ಹೇಗೆ ಕೊಡ್ತಾರೆ? ಯೋಚಿಸಿ. ಜನರ ದಾರಿ ತಪ್ಪಿಸೋ ಕೆಲಸ ಮಾಡುತ್ತಿದ್ದಾರೆ ಅಷ್ಟೇ ಎಂದು ಸಚಿವ ಜೋಶಿ ಆರೋಪಿಸಿದರು.
ಸೀಟಿಗಾಗಿ ಭಿಕ್ಷೆ ಬೇಡಿದ್ರು
ಇಂದು ಒಂದು ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ತನ್ನ ಸೀಟುಗಳಿಗಾಗಿ ಮೈತ್ರಿ ಪಕ್ಷಗಳಲ್ಲಿ ಭಿಕ್ಷೆ ಬೇಡುವಂತಹ ಪರಿಸ್ಥಿತಿ ಬಂದಿದೆ ಎಂದು ಲೇವಡಿ ಮಾಡಿದರು.
ರಾಜ್ಯದಲ್ಲಿ ತುಷ್ಟೀಕರಣ ರಾಜಕಾರಣಕ್ಕಾಗಿ ಕಾಂಗ್ರೆಸ್ ಸರ್ಕಾರ ಬೇಡವಾದದ್ದನ್ನೆಲ್ಲ ಮಾಡುತ್ತಿದೆ. ಒಬಿಸಿ ಮೀಸಲಾತಿ ಮುಸ್ಲಿಂ ಪಾಲು ಮಾಡುತ್ತಿದೆ ಎಂದು ಹರಿಹಾಯ್ದರು.
ಸ್ವಚ್ಛ ಭಾರತ್ ಯೋಜನೆಯಡಿ ಧಾರವಾಡ ಕ್ಷೇತ್ರದಲ್ಲಿ 1.5 ಲಕ್ಷ ಶೌಚಗೃಹಗಳನ್ನು ನಿರ್ಮಿಸಲಾಗಿದೆ. ಈ ಮೂಲಕ ಬಯಲು ಶೌಚಕ್ಕೆ ಮುಕ್ತಿ ನೀಡಿದ್ದಾರೆ. ಇಂಥ ಯೋಜನೆಗಳಿಂದ ಜನಕ್ಕೆ ಗೌರವದ ಜೀವನ ಕಲ್ಪಿಸಿದ್ದಾರೆ ಪ್ರಧಾನಿ ಮೋದಿ ಅವರು ಎಂದು ಬಣ್ಣಿಸಿದರು.
ಸಭೆಗೂ ಮುನ್ನ ಸೂಳಿಕಟ್ಟಿಯ ಗ್ರಾಮದೇವತೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಪ್ರಚಾರ ಕೈಗೊಂಡರು.
ಇದನ್ನೂ ಓದಿ: Viral Video: ಕಾಲಿನ ಗಾಯವನ್ನು ಲೆಕ್ಕಿಸದೆ ರೋಲರ್ ಓಡಿಸಿ ಪಿಚ್ ಸಿದ್ಧಪಡಿಸಿದ ಮೊಹಮ್ಮದ್ ಶಮಿ
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ, ಮುಖಂಡರಾದ ಐಸಿ ಗೋಕುಲ, ಸದಾನಂದ ಚಿಂತಾಮಣಿ, ಮಲ್ಲಯ್ಯ ಸ್ವಾಮಿ ಗೋಡಿಮನೆ, ಸಿ.ಎಫ್.ಪಾಟೀಲ್ ಸೇರಿದಂತೆ ಮುಖಂಡರು, ಕಾರ್ಯಕರ್ತರು ಹಾಗೂ ಇತರರು ಉಪಸ್ಥಿತರಿದ್ದರು.