Site icon Vistara News

Murder Case : ಕೊಟ್ಟ ಸಾಲ ವಾಪಸ್‌ ಕೇಳಿದ್ದಕ್ಕೆ ಕೊಂದೇ‌ ಬಿಟ್ಟ; ಶಿಕ್ಷಕಿ ಗಿರಿಜಾ ಸಾವಿಗೆ ಬಿಗ್‌ ಟ್ವಿಸ್ಟ್‌!

Dharwad Teacher Murder

ಧಾರವಾಡ : ಧಾರವಾಡದ ಓಂ ನಗರ ನಿವಾಸಿಯಾಗಿರುವ ನಿವೃತ್ತ ಶಿಕ್ಷಕಿ (Retired Teacher) ಗಿರಿಜಾ ನಡೂರಮಠ (63) ಅವರ ನಿಗೂಢ ಸಾವಿನ ಪ್ರಕರಣಕ್ಕೆ (Murder Case) ಈಗ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ. ಡಿಸೆಂಬರ್‌ 12ರಂದು ಅವರ ಶವ ಕೊಳೆತ ಸ್ಥಿತಿಯಲ್ಲಿ (Dead body found) ಪತ್ತೆಯಾಗಿತ್ತು. ಹೆಚ್ಚಿನವರು ಇದೊಂದು ಸಹಜ ಸಾವು ಎಂದೇ ಭಾವಿಸಿದ್ದರು. ಆದರೆ, ಪೊಲೀಸರ ಚಾಣಾಕ್ಷ ನಡೆ ಇದು ಸಹಜ ಸಾವಲ್ಲ, ಕೊಲೆ ಎನ್ನುವುದು ಪ್ರೂವ್‌ ಆಗಿದೆ. ಶಿಕ್ಷಕಿಯ ಜತೆ ಒಡನಾಟ ಹೊಂದಿದ್ದ ವ್ಯಕ್ತಿಯೇ ಈ ಕೊಲೆ ಮಾಡಿದ್ದು ಎನ್ನುವುದು ಈಗ ಬಯಲಾಗಿದೆ.

ಗಿರಿಜಾ ನಡೂರಮಠ (63) ಕೊಲೆಯಾದ ನಿವೃತ್ತ ಶಿಕ್ಷಕಿ. ಅವರು ಓಂ ನಗರದ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಮೂರು ವರ್ಷಗಳ ಹಿಂದೆ ನಿವೃತ್ತರಾದ ಅವರು ಅಕ್ಕಪಕ್ಕದವರ ಜತೆಗೂ ಹೆಚ್ಚು ಒಡನಾಟ ಹೊಂದಿರಲಿಲ್ಲ. ಡಿಸೆಂಬರ್‌ 12ರಂದು ಅಕ್ಕಪಕ್ಕದವರು ಏನೋ ವಾಸನೆ ಬರುತ್ತಿದೆ ಎಂದು ಹುಡುಕಾಟ ಶುರು ಮಾಡಿದಾಗ ಆ ಮನೆಯಲ್ಲಿ ಕೊಳೆತ ಶವ ಪತ್ತೆಯಾಗಿದೆ.

ಆರಂಭದಲ್ಲಿ ಇದೊಂದು ಸಹಜ ಸಾವಾಗಿರಬಹುದು. ಯಾರಿಗೂ ಗೊತ್ತಾಗದೆ ಇರುವುದರಿಂದ ಶವ ಕೊಳೆತಿದೆ ಎನ್ನುವುದು ನಂಬಿಕೆಯಾಗಿತ್ತು. ಆದರೆ, ಯಾವಾಗ ಶವದ ಮರಣೋತ್ತರ ಪರೀಕ್ಷೆ ನಡೆಯಿತೋ ಆಗ ಇದು ಸಹಜ ಸಾವಲ್ಲ ಎನ್ನುವುದು ಗೊತ್ತಾಯಿತು. ಯಾಕೆಂದರೆ ಶವ ಅಷ್ಟೊಂದು ಕೊಳೆತಿದ್ದರೂ ಕುತ್ತಿಗೆಯ ಸುತ್ತ ಬಿಗಿದ ರೀತಿಯ ಮಾರ್ಕ್‌ ಒಂದು ಕಾಣಿಸಿತ್ತು. ಇದನ್ನು ಆಧಿರಿಸಿ ನೋಡಿದಾಗ ಉಸಿರುಗಟ್ಟಿಸಿ ಕೊಲೆ ಮಾಡಿದ್ದು ಗೊತ್ತಾಯಿತು. ಕೂಡಲೇ ಪೊಲೀಸರಿಗೆ ವಿಷಯ ತಿಳಿಸಲಾಯಿತು. ಅವರು ತನಿಖೆ ಶುರುವಿಟ್ಟುಕೊಂಡರು.

ಶಿಕ್ಷಕಿ ಗಿರಿಜಾ ಅವರಿಗೆ ಅಮರಗೋಳ ಗ್ರಾಮದ ಮಂಜುನಾಥ್ ದಂಡಿನ ಎಂಬಾತನ ಪರಿಚಯವಿತ್ತು. ಅದನ್ನೇ ಮುಂದಿಟ್ಟುಕೊಂಡು ಆತ ಗಿರಿಜಾ ಅವರ ಬಳಿ ಸಾಲ ಪಡೆದಿದ್ದ. ನಂಬಿಕೆಯಿಂದ ಕೊಟ್ಟ ಹಣವನ್ನು ಆತ ಎಷ್ಟು ವರ್ಷವಾದರೂ ವಾಪಸ್‌ ಕೊಟ್ಟಿರಲಿಲ್ಲ. ಇದರಿಂದ ಗಿರಿಜಾ ಅವರು ಆಗಾಗ ವಾಪಸ್‌ ಕೇಳಲು ಆರಂಭಿಸಿದ್ದರು. ಆದರೆ, ಹಣವನ್ನು ವಾಪಸ್‌ ಕೊಡಲು ಮನಸು ಮಾಡದ ಆತ ಬೇರೊಂದು ರೀತಿಯಲ್ಲಿ ಯೋಚನೆ ಮಾಡಿದ.

ಒಂಟಿಯಾಗಿರುವ ಗಿರಿಜಾ ಅವರನ್ನು ಮುಗಿಸಿಬಿಟ್ಟರೆ ‌ಮತ್ತೆ ಹಣ ಕೇಳುವವರೇ ಇರುವುದಿಲ್ಲ ಎಂದು ಭಾವಿಸಿದ. ಹೀಗಾಗಿ ಅವರನ್ನು ಕೊಂದೇ ಬಿಡುವ ತೀರ್ಮಾನಕ್ಕೆ ಬಂದ. ಡಿಸೆಂಬರ್‌ ಎರಡನೇ ವಾರದಲ್ಲಿ ಒಂದು ದಿನ ಆತ ಒಬ್ಬಂಟಿಯಾಗಿ ವಾಸಿಸುವ ಗಿರಿಜಾ ಅವರ ಮನೆಗೆ ಹೋಗಿದ್ದ. ಅಲ್ಲಿ ಅವರ ಜತೆಗೆ ಚೆನ್ನಾಗಿಯೇ ಮಾತನಾಡಿ ಅಂತಿಮವಾಗಿ ಕೊಂದೇ ಬಿಟ್ಟಿದ್ದ.

ಇದನ್ನೂ ಓದಿ: Murder Case: ಅಳಿಯನ ಕೊಂದು ಅಪಘಾತ ಎಂದು ಕಥೆ ಕಟ್ಟಿದ ʼಮನಿಹಾಳʼ ಮಾವ!

ಡಿಸೆಂಬರ್‌ 12ರಂದು ಕೊಳೆತ ಶವ ಪತ್ತೆಯಾಗುವ ಹೊತ್ತಿಗೆ ಅಲ್ಲಿ ಯಾವುದೇ ಕ್ಲೂಗಳು ಸಿಗಲಿಲ್ಲ. ಹಾಗಾಗಿ ಮೊದ ಮೊದಲು ಇದು ಸಹಜ ಸಾವು ಅಂತಲೇ ಪರಿಗಣಿಸಿದ್ದರು ಪೊಲೀಸರು. ಕೊನೆಗೆ ಬಳಿಕ ಕುತ್ತಿಗೆ ಮೇಲಿನ ಗಾಯ ಕಂಡು ತನಿಖೆ ಆರಂಭಿಸಿದ್ದ ವಿದ್ಯಾಗಿರಿ ಪೊಲೀಸರಿಗೆ ಇದೊಂದು ಕೊಲೆ ಎನ್ನುವುದು ಸ್ಪಷ್ಟವಾಯಿತು.

ಸದ್ಯ ಕೊಲೆಗಾರ ಮಂಜುನಾಥ್ ದಂಡಿನನನ್ನು ವಶಕ್ಕೆ ಪಡೆದಿರುವ ವಿದ್ಯಾಗಿರಿ ಪೊಲೀಸರು ಜೈಲಿಗೆ ಅಟ್ಟಿದ್ದಾರೆ.

Exit mobile version