Site icon Vistara News

Love Jihad: ಲವ್ ಜಿಹಾದ್ ಪರ ನಿಂತ ರಾಜ್ಯ ಸರ್ಕಾರ; ನೇಹಾಳ ಮತಾಂತರ ಯತ್ನ ನಡೆಸಿದ್ದ ಫಯಾಜ್‌: ಪ್ರಲ್ಹಾದ್ ಜೋಶಿ

Pralhad Joshi slams state govt for supporting love jihad

ಹುಬ್ಬಳ್ಳಿ: ರಾಜ್ಯ ಸರ್ಕಾರವೇ ಲವ್ ಜಿಹಾದ್ (Love Jihad) ಪರ ನಿಂತಿದೆ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ (Vote Bank Politics) ಕಾಂಗ್ರೆಸ್ ಯಾವುದೇ ಹಂತಕ್ಕೆ ಬೇಕಾದರೂ ಇಳಿಯುತ್ತದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಕಿಡಿಕಾರಿದರು.

ಹುಬ್ಬಳ್ಳಿಯಲ್ಲಿ ಭಾನುವಾರ ಬೆಳಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಲ್ಹಾದ್‌ ಜೋಶಿ, ಸರ್ಕಾರ ಮತ್ತು ಸಮಾಜ ಎಚ್ಚೆತ್ತುಕೊಳ್ಳಬೇಕು, ಈ ವಿಷಯದಲ್ಲಿ ಬಹಳ ಜಾಗ್ರತೆಯಿಂದ ಇರಬೇಕು ಎಂದು ಸಲಹೆ ಮಾಡಿದರು.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅವರೆಲ್ಲರೂ ತುಷ್ಟೀಕರಣ ನೀತಿ ಅನುಸರಿಸುತ್ತಿದ್ದಾರೆ. ಇದರಿಂದಾಗಿಯೇ ಹೀಗೆಲ್ಲ ಮಾಡಲಾಗುತ್ತಿದೆ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ಪ್ರಲ್ಹಾದ್‌ ಜೋಶಿ ಆರೋಪಿಸಿದರು.

ನೇಹಾಳನ್ನು ಮತಾಂತರ ಮಾಡಲು ಯತ್ನ

ನೇಹಾಳನ್ನು ಮತಾಂತರ ಮಾಡುವ ಪ್ರಯತ್ನವೂ ನಡೆದಿತ್ತು. ಆದರೆ, ಅದಕ್ಕೆ ಆಕೆ ಒಪ್ಪಿರಲಿಲ್ಲ ಎಂಬುದನ್ನು ಆಕೆ ತಂದೆಯೇ ಹೇಳಿದ್ದಾರೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ಹೇಳಿದರು.

ಆರೋಪಿ ಫಯಾಜ್ ನೇಹಾಳನ್ನು ಮತಾಂತರ ಮಾಡಿ ಮದುವೆ ಮಾಡಿಕೊಳ್ಳಲು ನೋಡಿದ್ದಾನೆ. ಇದಕ್ಕೆ ನೇಹಾ ತೀವ್ರ ವಿರೋಧ ವ್ಯಕ್ತಪಡಿಸಿದ್ದಾಳೆ. ಒಪ್ಪದಿದ್ದಾಗ ಅಂತಿಮವಾಗಿ ಹತ್ಯೆ ಕೃತ್ಯ ಎಸಗಿದ್ದಾನೆ ಎಂದು ನೇಹಾಳ ತಂದೆ ನಿರಂಜನ್ ಹಿರೇಮಠ ಅವರೇ ಹೇಳಿದ್ದಾರೆ. ಈ ಮಾತುಗಳನ್ನು ನನ್ನ ಎದುರು ಮಾತ್ರವಲ್ಲ, ಮಾಧ್ಯಮಗಳ ಮುಂದೆಯೇ ಹೇಳಿದ್ದಾರೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದರು.

ಜನಸಾಮಾನ್ಯರ ಗತಿ ಏನು?

ಕಾಂಗ್ರೆಸ್ ಕಾರ್ಪೋರೇಟರ್ ಆದ ನನ್ನ ಮಗಳ ಘಟನೆಯಲ್ಲೇ ಹೀಗೆ ವರ್ತಿಸುತ್ತಿದ್ದೀರಿ. ಇನ್ನು ಜನ ಸಾಮಾನ್ಯರ ಗತಿ ಏನು? ಎಂಬುದಾಗಿ ನೇಹಾ ತಂದೆ ನಿರಂಜನ್ ಅವರೇ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅವರನ್ನು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಅಂಥ ದುಸ್ಥಿತಿಗೆ ತಂದಿದೆ ಎಂದು ಜೋಶಿ ಹರಿಹಾಯ್ದರು.

ಈ ಕಾಂಗ್ರೆಸ್‌ನವರಿಗೆ ಕರುಣೆಯೇ ಇಲ್ಲ

ನೇಹಾಳನ್ನು ಹಾಡಹಗಲೇ ಒಂಭತ್ತು – ಹತ್ತು ಬಾರಿ ಚೂರಿ ಇರಿದು ಹತ್ಯೆಗೈದ ದೃಶ್ಯ ನೋಡಿದರೂ ಈ ಕಾಂಗ್ರೆಸಿಗರಿಗೆ ಕರುಣೆಯೇ ಇಲ್ಲ. ನೇಹಾಳ ಕುಟುಂಬಕ್ಕೆ ನ್ಯಾಯ ಕೊಡಬೇಕು ಎಂಬ ಕಿಂಚಿತ್ತೂ ಜವಾಬ್ದಾರಿ ಇಲ್ಲ ಎಂದು ಸರ್ಕಾರದ ವಿರುದ್ಧ ಜೋಶಿ ಕಿಡಿಕಾರಿದರು.

ತುಷ್ಟೀಕರಣ ಮಿತಿಮೀರಿದೆ

ಡಿಜೆ ಹಳ್ಳಿ-ಕೆಜಿ ಹಳ್ಳಿ, ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ, ಪಾಕಿಸ್ತಾನ್ ಜಿಂದಾಬಾದ್ ಘೋಷಣೆ, ಉಡುಪಿಯ ಟಾಯ್ಲೆಟ್ ಒಳಗೆ ಕ್ಯಾಮರಾ ಇಟ್ಟ ಪ್ರಕರಣ ಹೀಗೆ ಎಲ್ಲ ಘಟನೆಗಳಲ್ಲೂ ಕಾಂಗ್ರೆಸಿಗರ ತುಷ್ಟೀಕರಣ ನೀತಿ ಮಿತಿಮೀರಿದೆ. ಇದರಿಂದಾಗಿ ಜನರ ಆಕ್ರೋಶ ಮುಗಿಲು ಮುಟ್ಟಿದೆ ಎಂದು ಪ್ರಲ್ಹಾದ ಜೋಶಿ ಎಚ್ಚರಿಸಿದರು.

ಇದನ್ನೂ ಓದಿ: Lok Sabha Election 2024: ಸಿದ್ದರಾಮಯ್ಯರಿಂದ ಬದುಕಿನ ಗ್ಯಾರಂಟಿಯೇ ಇಲ್ಲವಾಗಿದೆ: ಬಿ.ಎಸ್.‌ ಯಡಿಯೂರಪ್ಪ ವಾಗ್ದಾಳಿ

ರಾಜ್ಯದಲ್ಲಿ 28 ಕ್ಷೇತ್ರ ಗೆಲ್ಲುತ್ತೇವೆ: ಪ್ರಲ್ಹಾದ್‌ ಜೋಶಿ

ರಾಜ್ಯದಲ್ಲಿ 28 ಕ್ಷೇತ್ರಗಳನ್ನೂ ಬಿಜೆಪಿ ಗೆಲ್ಲಲಿದೆ. ಚುನಾವಣೆ ಪ್ರಚಾರದ ವೇಳೆ ಬಿಜೆಪಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಮ್ಮ ಪರಿವಾರ ಮೋದಿ ಪರಿವಾರ, ಮನೆ ಮನೆಗೆ ಬಿಜೆಪಿ ಘೋಷವಾಕ್ಯ ಮತ್ತು ಅಭಿವೃದ್ಧಿ ವಿಷಯ ಮುಂದಿಟ್ಟುಕೊಂಡು ನಮ್ಮ ಕಾರ್ಯಕರ್ತರು ಪ್ರಚಾರಕ್ಕೆ ಇಳಿದಿದ್ದಾರೆ ಎಂದು ಪ್ರಲ್ಹಾದ ಜೋಶಿ ಹೇಳಿದರು.

ನಡ್ಡಾ ಮತಯಾಚನೆ

ಹುಬ್ಬಳ್ಳಿಯಲ್ಲಿ ಇಂದು ಸಂಜೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತಯಾಚನೆ ನಡೆಸಲಿದ್ದಾರೆ. ಮಧ್ಯಾಹ್ನವೇ ನಗರಕ್ಕೆ ಧಾವಿಸಲಿದ್ದು, ಮುಖಂಡರ-ಪ್ರಮುಖ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ ಎಂದು ಸಚಿವ ಜೋಶಿ ತಿಳಿಸಿದರು.

Exit mobile version