Site icon Vistara News

Road accident : ಭಯಾನಕ ಅಪಘಾತ; MBBS ವಿದ್ಯಾರ್ಥಿ ಸಹಿತ ಇಬ್ಬರು ಸಾವು

Road accident MBBS Student death

ಧಾರವಾಡ/ಮಾಗಡಿ: ಧಾರವಾಡ ಮತ್ತು ಮಾಗಡಿಗಳಲ್ಲಿ ಸಂಭವಿಸಿದ ಅವಳಿ ಅಪಘಾತಗಳಲ್ಲಿ (Road Accident) ಎಂಬಿಬಿಎಸ್‌ ವಿದ್ಯಾರ್ಥಿ (Medical Student) ಸೇರಿದಂತೆ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಧಾರವಾಡದಲ್ಲಿ ಕಾರು ಪಲ್ಟಿಯಾದರೆ, ಮಾಗಡಿಯಲ್ಲಿ ಬೈಕ್‌ಗಳು ಡಿಕ್ಕಿ ಹೊಡೆದುಕೊಂಡಿವೆ.

Road Accident : ಧಾರವಾಡ: ಕಾರು ಪಲ್ಟಿಯಾಗಿ ವೈದ್ಯ ವಿದ್ಯಾರ್ಥಿ ಸ್ಥಳದಲ್ಲೇ ಸಾವು

ಧಾರವಾಡ ಹೊರವಲಯದ ಮುಮ್ಮಿಗಟ್ಟಿ ಗ್ರಾಮದ ಬಳಿ ಕಾರೊಂದು ಪಲ್ಟಿಯಾಗಿ ವೈದ್ಯಕೀಯ ವಿದ್ಯಾರ್ಥಿ ಪ್ರಾಣ ಕಳೆದುಕೊಂಡಿದ್ದಾರೆ. ದೀಪಕ್ (30) ಮೃತ ವೈದ್ಯಕೀಯ ವಿದ್ಯಾರ್ಥಿ.

ಮುಮ್ಮಿಗಟ್ಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದುರಸ್ತಿ ಹಿನ್ನೆಲೆಯಲ್ಲಿ ತಿರುವು ಕೊಡಲಾಗಿತ್ತು. ಆದರೆ, ತಿರುವು ನೀಡಿದ್ದು ಗೊತ್ತಾಗದೆ ಕಾರು ಹಿಂದಿನ ರಸ್ತೆಯಲ್ಲೇ ಚಲಿಸಿ ಪಲ್ಟಿಯಾಗಿದೆ. ಅಡ್ಡಾದಿಡ್ಡಿ ಚಲಿಸಿದ ಕಾರನ್ನು ಸರಿ ದಾರಿಗೆ ತರಲು ಪ್ರಯತ್ನಿಸುವ ವೇಳೆ ರಸ್ತೆಯ ಅಂಚಿಗೆ ಸಿಲುಕಿ ಪಲ್ಟಿಯಾಗಿದೆ. ಈ ವೇಳೆ ಗಂಭೀರ ಗಾಯಗೊಂಡಿದ್ದ ಎಂಬಿಬಿಎಸ್ ವಿದ್ಯಾರ್ಥಿ ದೀಪಕ್ (30) ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಧಾರವಾಡ ಎಸ್ ಡಿ ಎಂ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡುತಿದ್ದ ದೀಪಕ್‌ ಮೂಲತಃ ಯಾದಗಿರಿ‌ ಜಿಲ್ಲೆಯ‌ವರು. ಕಾರಿನಲ್ಲಿದ್ದ ಮತ್ತೋರ್ವ ವಿದ್ಯಾರ್ಥಿ ವಿನಯ ಎಂಬವರಿಗೆ‌ ಸಹ ಗಂಭೀರ ಗಾಯಗಳಾಗಿವೆ. ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಧಾರವಾಡದ‌ ಗರಗ ಪೊಲೀಸ್ ಠಾಣಾ‌ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: love and Crime : ನೋಡಿ ಸ್ವಾಮಿ.. ನೀನೇ ಬೇಕು ಎಂದು ಟೆಕ್ಕಿ ಮಹಿಳೆ ಬೆನ್ನುಹತ್ತಿದ್ದಾನೆ ಈ ಆಸಾಮಿ!

Road Accident : ರಾಮನಗರ ಬಳಿ ಬೈಕ್‌ಗಳ ಮುಖಾಮುಖಿ ಡಿಕ್ಕಿ: ಯುವಕ ಸಾವು

ಬೈಕ್‌ಗಳು ಮುಖಾಮುಖಿ ಡಿಕ್ಕಿಯಾಗಿ ಓರ್ವ ಯುವಕ ಸಾವು, ಮತ್ತಿಬ್ಬರಿಗೆ ಗಂಭೀರ ಗಾಯವಾದ ಘಟನೆ ಮಾಗಡಿ ತಾಲೂಕಿನ ವಡ್ಡರಪಾಳ್ಯ ಬಳಿ ನಡೆದಿದೆ. ಪ್ರದೀಪ್ (18) ಯುವಕ ಸ್ಥಳದಲ್ಲೇ ಸಾವು ಕಂಡ ಯುವಕನಾಗಿದ್ದಾನೆ. ಮತ್ತಿಬ್ಬರು ಗಾಯಾಳುಗಳನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬಸ್ ಓವರ್ ಟೇಕ್ ಮಾಡಲು ಹೋದಾಗ ಬೈಕ್‌ಗಳೆರಡು ಡಿಕ್ಕಿ ಹೊಡೆದುಕೊಂಡು ಈ ಅಪಘಾತ ಸಂಭವಿಸಿದೆ. ಶುಕ್ರವಾರ ಸಂಜೆ ನಡೆದಿರುವ ತಡವಾಗಿ ಬೆಳಕಿಗೆ ಬಂದಿದೆ. ಮಾಗಡಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ರಿಕೆಟ್‌ ಆಡುತ್ತಿದ್ದ ವೇಳೆ ದಿಢೀರ್‌ ಕುಸಿದು ಬಿದ್ದು ಯುವಕ ಸಾವು

ಬೆಂಗಳೂರು: ಕ್ರಿಕೆಟ್‌ ಆಡುತ್ತಿದ್ದ ಯುವಕನೊಬ್ಬ ದಿಢೀರ ಕುಸಿದು ಬಿದ್ದು ಪ್ರಾಣ ಕಳೆದುಕೊಂಡ ದಾರುಣ ಘಟನೆ ಬೆಂಗಳೂರಿನಲ್ಲಿ ಶುಕ್ರವಾರ ನಡೆದಿದೆ. ಜ್ಞಾನಭಾರತಿ ಠಾಣಾ ವ್ಯಾಪ್ತಿಯ ಮೈದಾನದಲ್ಲಿ ದುರಂತ ನಡೆದಿದ್ದು, ಹೃದಯಾಘಾತದಿಂದ ಮೃತಪಟ್ಟ ಯುವಕನನ್ನು ರಾಬಿನ್‌ (22) ಎಂದು ಗುರುತಿಸಲಾಗಿದೆ.

ಖಾಸಗಿ ಬ್ಯಾಂಕಿನಲ್ಲಿ ಕೆಲಸ ಮಾಡಿಕೊಂಡಿದ್ದ ರಾಬಿನ್ ಶುಕ್ರವಾರ ಗಣರಾಜ್ಯೋತ್ಸವದ ನಿಮಿತ್ತ ರಜೆ ಇದ್ದಿದ್ದರಿಂದ ಕ್ರಿಕೆಟ್‌ ಆಡಲು ಹೋಗಿದ್ದರು. ಈ ವೇಳೆ ದಿಢೀರ್‌ ಕುಸಿದುಬಿದ್ದರು. ಆಸ್ಪತ್ರೆಗೆ ಕರೆದೊಯ್ದಾಗ ಹೃದಯಾಘಾತದಿಂದ ಸಾವು ಸಂಭವಿಸಿದ್ದು ಬೆಳಕಿಗೆ ಬಂತು. ಶುಕ್ರವಾರ ಸಂಜೆ ಮೂರು ಗಂಟೆ ಹೊತ್ತಿಗೆ ಘಟನೆ ನಡೆದಿದೆ.

Exit mobile version