Site icon Vistara News

Operation Hasta : ಆಪರೇಶನ್‌ ಹಸ್ತಕ್ಕೆ ಒಳಗಾದರೇ ಗುರುಮಠಕಲ್ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು?

JDS MLA Sharanagouda Kandakur

ಯಾದಗಿರಿ: ರಾಜ್ಯ ರಾಜಕೀಯದಲ್ಲಿ (Karnataka Politics) ಆಪರೇಷನ್‌ ಹಸ್ತ (Operation Hasta) ಭಾರಿ ಸದ್ದು ಮಾಡುತ್ತಿದೆ. ಈಗಾಗಲೇ ಬಿಜೆಪಿ ಇಬ್ಬರು ಹಾಲಿ ಶಾಸಕರಿಗೆ ಗಾಳ ಹಾಕಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಅಲ್ಲದೆ, ಈಗಾಗಲೇ ಕೆಲವು ಮಾಜಿ ಎಂಎಲ್‌ಎಗಳನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ. ಇನ್ನೂ ಹಲವರು ಕೈ ಪಕ್ಷ ಸೇರ್ಪಡೆಯ ಪಟ್ಟಿಯಲ್ಲಿದ್ದಾರೆ. ಈ ನಡುವೆ ಜೆಡಿಎಸ್‌ ಶಾಸಕ ಶರಣಗೌಡ ಕಂದಕೂರು (JDS MLA Sharanagouda Kandakur) ಅವರು ಆಪರೇಶನ್‌ ಹಸ್ತಕ್ಕೆ ಒಳಗಾದರೇ ಎಂಬ ಚರ್ಚೆ ಹುಟ್ಟಿಕೊಂಡಿದೆ. ಶಾಸಕರ ಜನಸಂಪರ್ಕ ಕಚೇರಿಯನ್ನು ಕಾಂಗ್ರೆಸ್‌ ಸಚಿವ ಶರಣಬಸಪ್ಪಗೌಡ ದರ್ಶನಾಪುರ (Congress Minister Sharanabasappa Gowda Darshanapura) ಉದ್ಘಾಟನೆ ಮಾಡಿರುವುದೇ ಇದಕ್ಕೆ ಕಾರಣವಾಗಿದೆ.

ಗುರುಮಠಕಲ್ ಜೆಡಿಎಸ್ ಶಾಸಕರಾಗಿರುವ ಶರಣಗೌಡ ಕಂದಕೂರು ಅವರು ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಈಚೆಗೆ ಚರ್ಚೆಗೆ ಬಂದಿದ್ದ ಬಿಜೆಪಿ – ಜೆಡಿಎಸ್‌ ಮೈತ್ರಿ (BJP JDS alliance) ಬಗ್ಗೆ ಬಹಿರಂಗವಾಗಿಯೇ ವಿರೋಧ ಮಾಡಿದ್ದರು. ಯಾವುದೇ ಕಾರಣಕ್ಕೂ ಈ ಮೈತ್ರಿಗೆ ತಮ್ಮ ಒಪ್ಪಿಗೆ ಇಲ್ಲ ಎಂದು ಹೇಳಿಬಿಟ್ಟಿದ್ದರು. ಈ ನಡುವೆ ಸೆಪ್ಟೆಂಬರ್‌ 10ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಿದ್ದ ಜೆಡಿಎಸ್‌ ಸಮಾವೇಶಕ್ಕೂ (JDS convention) ಅವರು ಗೈರು ಹಾಜರಾಗಿದ್ದರು. ಈಗ ಯಾದಗಿರಿ ನಗರದಲ್ಲಿರುವ ನೂತನ ಶಾಸಕರ ಜನಸಂಪರ್ಕ ಕಚೇರಿಯನ್ನು ಉದ್ಘಾಟನೆ ಮಾಡಿದ್ದು, ಇದಕ್ಕೆ ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರನ್ನು ಕರೆಸಿ ಅವರ ಕೈಯಿಂದ ಉದ್ಘಾಟನೆ ಮಾಡಿಸಿರುವುದು ಆಪರೇಶನ್‌ ಹಸ್ತದ ಚರ್ಚೆಯನ್ನು ಹುಟ್ಟುಹಾಕಿದೆ.

ಇದನ್ನೂ ಓದಿ: Wild Animal : ಗುಂಡ್ಲುಪೇಟೆಯಲ್ಲಿ ಕಾಣಿಸಿದ ಚಿರತೆ ಮರಿಗಳು; ಸತ್ತರೆ ಜೀವ ಕೊಡುತ್ತೀರಾ ಎಂದ ರೈತರು!

ಕಾಂಗ್ರೆಸ್ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಸರೆಡ್ಡಿ ಪಾಟೀಲ ಅನಪುರ ಸೇರಿ ಹಲವು ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು. ಈ ಬೆಳವಣಿಗೆಯು ಸ್ಥಳೀಯ ರಾಜಕಾರಣದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಚುನಾವಣೆ ನಂತರ ಎಲ್ಲರೂ ಒಂದೇ: ಸಚಿವ ಶರಣಬಸಪ್ಪಗೌಡ ದರ್ಶನಾಪುರ

ಜೆಡಿಎಸ್ ಶಾಸಕರ ಜನ ಸಂಪರ್ಕ ಕಚೇರಿ ಉದ್ಘಾಟಿಸಿರುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಶರಣಬಸಪ್ಪಗೌಡ ದರ್ಶನಾಪುರ, ‌ಇದು ಸರ್ಕಾರದ ಕಚೇರಿಯಾಗಿದೆ. ಯಾವುದೇ ಪಕ್ಷಕ್ಕೆ ಸೀಮಿತವಲ್ಲ. ಈ ಕಾರ್ಯಾಲಯ ಗುರುಮಠಕಲ್ ಕ್ಷೇತ್ರದ ಜನರ ಕಚೇರಿಯಾಗಿದೆ. ಇದು ಒಂದು ಪಕ್ಷದ ಕಚೇರಿ ಅಲ್ಲ. ಚುನಾವಣೆ ಆಗುವವರೆಗೆ ಪಕ್ಷ ಇರುತ್ತದೆ. ಚುನಾವಣೆ ನಂತರ ನಾವೆಲ್ಲ ಶಾಸಕರು ಒಂದಾಗಿ ಕೆಲಸ ಮಾಡುತ್ತೇವೆ. ಜಿಲ್ಲೆಯ ಜನರ ಹಿತದೃಷ್ಟಿಯಿಂದ ನಾಲ್ಕು ಜನ ಶಾಸಕರು ಸೇರಿ ಅಭಿವೃದ್ಧಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಬಿಜೆಪಿ- ಜೆಡಿಎಸ್‌ನ ಮುಖಂಡರು, ಶಾಸಕರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ನಮಗೆ ಯಾವುದೇ ಟಾಸ್ಕ್ ಕೊಟ್ಟಿಲ್ಲ. ಆ ತಂಟೆಗೆ ಹೋಗಲ್ಲ. ಕಲ್ಯಾಣ ಕರ್ನಾಟಕ ಭಾಗದ ಯಾರನ್ನೂ ಸೆಳೆಯುವ ಬಗ್ಗೆ ನಮಗೆ ಏನೂ ಹೇಳಿಲ್ಲ. ನಾವು ಯಾವ ಪಕ್ಷದಲ್ಲಿದ್ದರೂ ಎಲ್ಲರೂ ಸೇರಿ ಅಭಿವೃದ್ಧಿ ಮಾಡುತೇವೆ ಎಂದು ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.

ಕಾಂಗ್ರೆಸ್‌ನಿಂದ ಆಹ್ವಾನ ಬಂದಾಗ ತಿಳಿಸುವೆ: ಶರಣಗೌಡ ಕಂದಕೂರು

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಪಕ್ಷದಲ್ಲಿ ಅಭಿಪ್ರಾಯದಲ್ಲಿ ಭಿನ್ನಾಭಿಪ್ರಾಯ ಕಂಡುಬಂದಾಗ ಸಹಜವಾಗಿ ನಾನು ನನ್ನ ಅಭಿಪ್ರಾಯವನ್ನು ತಿಳಿಸಿದ್ದೇನೆ. ಪಕ್ಷ ಬಿಡುವುದು, ಇನ್ನೊಂದು ಕಡೆ ಸೇರ್ಪಡೆಯಾಗುವುದು ಸದ್ಯಕ್ಕೆ ಅಪ್ರಸ್ತುತವಾಗಿದೆ. ಕಾಂಗ್ರೆಸ್‌ನವರು ಯಾರೂ ಸಂಪರ್ಕ ಮಾಡಿಲ್ಲ. ನನ್ನ ಬಳಿ ಯಾರೂ ಮಾತನಾಡಿಲ್ಲ. ಕಾಂಗ್ರೆಸ್ ಸೇರುವ ಬಗ್ಗೆ ಆಹ್ವಾನ ಬಂದಾಗ ತಿಳಿಸುತ್ತೇನೆ. ನನಗಂತೂ ಯಾವ ಮಂತ್ರಿ, ಮುಖಂಡರು ಸಹ ಬಾ ಎಂದು ಕರೆದು ಮಾತನಾಡಿಲ್ಲ ಎಂದು ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: Cauvery water dispute : ಮತ್ತೆ ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್‌ ನೀರು ಬಿಡಲು CWMA ಆದೇಶ!

ಕಾಂಗ್ರೆಸ್ ಸರ್ಕಾರ ಶಾಶ್ವತವಾಗಿ ಅಧಿಕಾರದಲ್ಲಿರುತ್ತದೆಯೇ? 5 ವರ್ಷ ಅಧಿಕಾರದಲ್ಲಿ ಇರುತ್ತಾರೆ. ಕಳೆದ ಸಲ ಅತಂತ್ರ ಸ್ಥಿತಿ ಇತ್ತು. ಹೀಗಾಗಿ ಆಪರೇಷನ್‌ ಕಮಲ ನಡೆಯಿತು. ಈಗ ಕಾಂಗ್ರೆಸ್ ಸ್ಪಷ್ಟ ಬಹುಮತವನ್ನು ಹೊಂದಿದೆ. 135 ಶಾಸಕರ ಬೆಂಬಲ ಈ ಸರ್ಕಾರಕ್ಕೆ ಇದೆ. ಹಾಗಾಗಿ ಆಪರೇಷನ್‌ ಹಸ್ತವನ್ನು ಏಕೆ ಮಾಡುತ್ತಾರೆ ಎಂದು ಶಾಸಕ ಶರಣಗೌಡ ಕಂದಕೂರು ಪ್ರಶ್ನೆ ಮಾಡಿದ್ದಾರೆ.

Exit mobile version