ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಈಗಲೇ ಅಖಾಡ ಸಿದ್ಧವಾಗುತ್ತಿದೆ. ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆಯುತ್ತಿದೆ ಎನ್ನಲಾಗಿದ್ದು, ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಸಿಂಗಾಪುರ ಭೇಟಿ (Singapore tour) ಇದರ ಒಂದು ಭಾಗವೇ ಎಂದು ಹೇಳಲಾಗುತ್ತಿದ್ದು, ಅಲ್ಲಿ ರಾಜ್ಯ ರಾಜಕಾರಣದ ಸೀಕ್ರೆಟ್ ಮೀಟಿಂಗ್ (Political Secret Meeting) ನಡೆಯುತ್ತಿದೆಯೇ ಎಂಬ ಅನುಮಾನ ಮೂಡಿದೆ. ಅಲ್ಲದೆ, ಸರ್ಕಾರ ಉರುಳಿಸಲು ಸಿಂಗಾಪುರದಲ್ಲಿ ಪ್ಲ್ಯಾನ್ ನಡೆಯುತ್ತಿದೆ ಎಂಬ ಆರೋಪಗಳಿಗೆ ಪುಷ್ಟೀಕರಣ ನೀಡುವಂತೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DCM DK Shivakumar) ಹೇಳಿಕೆ ನೀಡಿರುವುದು ಸಂಚಲನ ಸೃಷ್ಟಿಸಿದೆ.
ಈ ಬಗ್ಗೆ ಸದಾಶಿವನಗರ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ನಮ್ಮ ಸರ್ಕಾರದ ವಿರುದ್ಧ ಕೆಲವರು ಪಿತೂರಿ ನಡೆಸುತ್ತಿರುವ ಬಗ್ಗೆ ನಮಗೂ ಮಾಹಿತಿ ಇದೆ. ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Dinesh Gundu Rao : ಮೋದಿಯವರ 56 ಇಂಚಿನ ಎದೆಗೆ ಮಣಿಪುರ ಹಿಂಸೆ ನಿಲ್ಲಿಸುವ ತಾಕತ್ತಿಲ್ಲವೇ?; ಕಾಂಗ್ರೆಸ್ ಪ್ರಶ್ನೆ
ಸರ್ಕಾರ ಉರುಳಿಸಲು ಕೆಲವರು ಸಿಂಗಾಪುರದಲ್ಲಿ ಪಿತೂರಿ ಯೋಜಿಸಿದ್ದಾರಂತಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಆ ಬಗ್ಗೆ ನನಗೂ ನಮ್ಮದೇ ಆದ ಮೂಲಗಳಿಂದ ಮಾಹಿತಿ ಇದೆ. ಅವರು ಬೆಂಗಳೂರಲ್ಲಿ ಮಾಡದೇ ಅಲ್ಲಿಗೆ ಹೋಗಿ ಚರ್ಚೆ ಮಾಡುವುದು ಅವರ ತಂತ್ರ. ಯಾರು ಏನು ಮಾಡುತ್ತಿದ್ದಾರೆ ಎಂಬುದು ಗೊತ್ತಿದೆ ಎಂದು ಹೇಳಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರವನ್ನು ಉರುಳಿಸಲು ಪ್ಲ್ಯಾನ್ ನಡೆಯುತ್ತಿದೆ ಎಂಬರ್ಥದಲ್ಲಿ ಅವರು ಆರೋಪಿಸಿದ್ದಾರೆ.
ಫಿನ್‌ಲ್ಯಾಂಡ್‌ನಲ್ಲಿ ಮತ್ತೊಂದು ರಹಸ್ಯ ಮಾತುಕತೆ
ಇನ್ನು ಎಚ್.ಡಿ. ಕುಮಾರಸ್ವಾಮಿ ಅವರ ಸಿಂಗಾಪುರ ಭೇಟಿ ಹಿಂದೆ ಹಲವು ರಾಜಕೀಯ ಲೆಕ್ಕಾಚಾರಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ. ಪ್ರವಾಸದ ನೆಪದಲ್ಲಿ ರಾಜ್ಯ ರಾಜಕೀಯದ ಬಗ್ಗೆ ಜೆಡಿಎಸ್ ನಾಯಕರು ಹಾಗೂ ಬಿಜೆಪಿ ನಾಯಕರ ನಡುವೆ ರಹಸ್ಯ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ.
ಸಿಂಗಾಪುರದಲ್ಲಿ ನಡೆದ ಮಾತುಕತೆಯ ಮುಂದುವರಿದ ಭಾಗವಾಗಿ ಫಿನ್‌ಲ್ಯಾಂಡ್‌ನಲ್ಲಿ ಮತ್ತೊಂದು ರಹಸ್ಯ ಮಾತುಕತೆ ಮುಂದುವರಿದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಆಪ್ತ ವಲಯದಲ್ಲಿ ಗುಸು ಗುಸು ಪ್ರಾರಂಭವಾಗಿದೆ.
ಮೈತ್ರಿಯೋ ಅಥವಾ ವಿಲೀನವೋ
ಪ್ರಸ್ತುತ ಬಿಜೆಪಿ ಜತೆ ಜೆಡಿಎಸ್ ಮೈತ್ರಿಯೋ ಅಥವಾ ವಿಲೀನವೋ ಎಂಬ ಚರ್ಚೆ ನಡೆಯುತ್ತಿದೆ. ಅಲ್ಲದೆ, ಕಾಂಗ್ರೆಸ್ ಸರ್ಕಾರದ ವಿರುದ್ಧ ಹೊರದೇಶದಲ್ಲಿ ಭಾರಿ ರಣತಂತ್ರ ಹೆಣೆಯಲಾಗುತ್ತಿದೆ ಎನ್ನಲಾಗಿದೆ. ಇದರ ಜತೆಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕೈಪಡೆಯನ್ನು ಹೇಗೆ ಕಟ್ಟಿ ಹಾಕಬೇಕೆಂಬ ಬಗ್ಗೆಯೂ ಚರ್ಚೆಗಳು ನಡೆದಿವೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Lok Sabha Election 2024 : ಬೆಂಗಳೂರು ದಕ್ಷಿಣದಲ್ಲಿ ‘ತೇಜಸ್ವಿ’ನಿ ಕಂಪನ!
ಈ ಮಾತುಕತೆಯಲ್ಲಿ ಕೆಲವು ಮಹತ್ವದ ಅಂಶಗಳು ಚರ್ಚೆಗೆ ಬಂದಿದೆ. ಇದರಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಕೇಂದ್ರ ಸಚಿವ ಸ್ಥಾನ ನೀಡುವುದು, ಬಿಜೆಪಿ ಜತೆಗೆ ಸೇರಿಕೊಂಡು ವಿಪಕ್ಷ ನಾಯಕ ಆಗುವುದು. ಸಿ.ಪಿ. ಯೋಗೇಶ್ವರ ಅವರನ್ನು ಡಿ.ಕೆ. ಸುರೇಶ್ ವಿರುದ್ಧ ಕಣಕ್ಕಿಳಿಸುವುದು. ಆ ಮೂಲಕ ಲೋಕಸಭಾ ಸಭೆಯಲ್ಲಿ ಡಿ.ಕೆ. ಬ್ರದರ್ಸ್‌ಗೆ ಟಕ್ಕರ್ ಕೊಡುವುದು. ಚನ್ನಪಟ್ಟಣದಿಂದ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಿ ರಾಜಕೀಯ ಭವಿಷ್ಯವನ್ನು ರೂಪಿಸುವ ಬಗ್ಗೆ ಮಾತುಕತೆಯಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದೆ. ಈ ಮಾತುಕತೆ ಸಂದರ್ಭದಲ್ಲಿ ಕೇಂದ್ರ ಬಿಜೆಪಿ ನಾಯಕರು, ಸಿ.ಪಿ. ಯೋಗೇಶ್ವರ್, ಎಚ್.ಡಿ. ಕುಮಾರಸ್ವಾಮಿ ಭಾಗಿಯಾಗಿದ್ದರು ಎನ್ನಲಾಗಿದೆ.