ನವದೆಹಲಿ: ಸಾಮಾಜಿಕ ಜಾಲತಾಣಗಳು ಅಭಿಪ್ರಾಯ ರೂಪಿಸುವಲ್ಲಿ, ಅನ್ಯಾಯದ ವಿರುದ್ಧ ಧ್ವನಿ ಎತ್ತುವಲ್ಲಿ, ಮಾಹಿತಿಯನ್ನು ಕ್ಷಣಮಾತ್ರದಲ್ಲಿ ಪಸರಿಸುವಲ್ಲಿ ಎಷ್ಟು ಸಹಕಾರಿಯೋ, ನಕಲಿ ಸುದ್ದಿಗಳನ್ನು ಹರಡುವುದರಲ್ಲಿಯೂ ಅಷ್ಟೇ ಪರಿಣಾಮಕಾರಿಯಾಗಿವೆ. ಇದಕ್ಕೆ ನಿದರ್ಶನ ಎಂಬಂತೆ, ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಅನ್ನು ಗೆಲ್ಲಿಸಿದ ರಾಜ್ಯದ ಜನತೆಗೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅಭಿನಂದನೆ ಸಲ್ಲಿಸಿದ್ದಾರೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ಇದು ಎಷ್ಟು ನಿಜ ಎಂಬುದರ ಫ್ಯಾಕ್ಟ್ ಚೆಕ್ (Fact Check) ಇಲ್ಲಿದೆ.
ಹರಿದಾಡುತ್ತಿರುವ ಮಾಹಿತಿಯ ಸಾರಾಂಶ ಏನು?
ಫೇಸ್‌ಬುಕ್, ಟ್ವಿಟರ್ ಸೇರಿ ಹಲವು ಜಾಲತಾಣಗಳಲ್ಲಿ ಶೆಹಬಾಜ್ ಷರೀಫ್ ಮಾಡಿದ್ದಾರೆ ಎನ್ನಲಾದ ಟ್ವೀಟ್ ಹರಿದಾಡುತ್ತಿದೆ. “ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಅನ್ನು ಗೆಲ್ಲಿಸಿದ ಕರ್ನಾಟಕದ ಜತೆಗೆ ಅಭಿನಂದನೆಗಳು” ಎಂಬುದಾಗಿ ಅವರು ಮೇ 13ರಂದು ಟ್ವೀಟ್ ಮಾಡಿದ್ದಾರೆ ಎಂಬುದರ ಫೋಟೊ ಹರಿದಾಡುತ್ತಿದೆ. ಅಲ್ಲದೆ, ಮೇ 7ರಂದು ಕೂಡ “2047ರ ವೇಳೆಗೆ ಭಾರತ ಇಸ್ಲಾಮಿಕ್ ರಾಷ್ಟ್ರವಾಗಬೇಕು. ಅದಕ್ಕಾಗಿ ಎಲ್ಲರೂ ಕಾಂಗ್ರೆಸ್‌ಗೆ ಮತ ನೀಡಿ” ಎಂಬುದಾಗಿಯೂ ಟ್ವೀಟ್ ಮಾಡಿದ್ದಾರೆ ಎಂಬ ಫೋಟೊ ಹರಿದಾಡುತ್ತಿದೆ.
ಪಾಕ್ ಪ್ರಧಾನಿ ಮಾಡಿದ್ದಾರೆ ಎನ್ನಲಾದ ಟ್ವೀಟ್
ಇದನ್ನೂ ಓದಿ: C T Ravi: ಸುಳ್ಳು ಸುದ್ದಿ, ಹಣ ಕೊಟ್ಟು ಮಾಡಿಸಿದ ಸುದ್ದಿಯಿಂದ ಬಿಜೆಪಿಗೆ ಸೋಲು; ಸಿ.ಟಿ.ರವಿ ಅಸಮಾಧಾನ
ವೈರಲ್ ಆದ ಟ್ವೀಟ್‌ಗಳು ನಿಜವೇ?
ನ್ಯೂಸ್‌ಚೆಕ್ಕರ್ ಎಂಬ ಫ್ಯಾಕ್ಟ್‌ಚೆಕ್ ಸಂಸ್ಥೆಯು ಈ ಕುರಿತು ಕೂಲಂಕಷವಾಗಿ ಪರಿಶೀಲನೆ ಮಾಡಿ ನೋಡಿದಾಗ, ಶೆಹಬಾಜ್ ಷರೀಫ್ ಹಾಗೆ ಟ್ವೀಟ್ ಮಾಡಿಲ್ಲ ಎಂಬುದು ದೃಢಪಟ್ಟಿದೆ. ಮೇ 13ರಂದು ಶೆಹಬಾಜ್ ಷರೀಫ್ ಅವರು ಮೂರು ಟ್ವೀಟ್ ಮಾಡಿದ್ದಾರೆ. ಅವುಗಳಲ್ಲಿ ಯಾವುದೇ ಟ್ವೀಟ್ ಕೂಡ ಕರ್ನಾಟಕಕ್ಕೆ ಸಂಬಂಧಿಸಿದ್ದಲ್ಲ ಎಂದು ತಿಳಿಸಿದೆ. ಜನರು ಕೂಡ, ಷರೀಫ್ ಅವರ ಟ್ವಿಟರ್ ಖಾತೆಯನ್ನು ಪರಿಶೀಲಿಸಿದ್ದು, ರಾಜ್ಯಕ್ಕೆ ಸಂಬಂಧಿಸಿದ ಯಾವುದೇ ಟ್ವೀಟ್ ಲಭ್ಯವಾಗಿಲ್ಲ. ಇನ್ನು ಮೇ 7ರಂದು ಕೂಡ ಪಾಕ್ ಪ್ರಧಾನಿ ಕರ್ನಾಟಕ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಟ್ವೀಟ್ ಮಾಡಿಲ್ಲ ಎಂದು ಫ್ಯಾಕ್ಟ್‌ಚೆಕ್‌ನಿಂದ ತಿಳಿದುಬಂದಿದೆ.