ಬೆಂಗಳೂರು: ಕನ್ನಡ ಸಿನಿಮಾ (Actor Darshan) ನಿರ್ಮಾಪಕ ಸೌಂದರ್ಯ ಜಗದೀಶ್ (Soundarya Jagadish) ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ನಟ ದರ್ಶನ್ (Actor Darshan) ಅವರ ಗೆಳತಿ ಪವಿತ್ರಾ ಗೌಡ (Pavithra Gowda) ಅವರ ಖಾತೆಗೆ ಸೌಂದರ್ಯ ಜಗದೀಶ್ ಅವರ ಬ್ಯಾಂಕ್ ಖಾತೆಯಿಂದ ಸುಮಾರು 2 ಕೋಟಿ ರೂ. ವರ್ಗಾವಣೆ ಮಾಡಲಾದ ಬೆನ್ನಲ್ಲೇ, ಜೆಟ್ ಲ್ಯಾಗ್ ಪಬ್‌ಅನ್ನೂ ದರ್ಶನ್ ಹೆಸರಿಗೆ ಬರೆದು ಕೊಡಲಾಗಿದೆ ಎಂದು ತಿಳಿದುಬಂದಿದೆ. ಇಂತಹ ಆರೋಪಗಳಿಗೆ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ ಅವರು ವಿಸ್ತಾರ ನ್ಯೂಸ್‌ಗೆ ಸ್ಪಷ್ಟನೆ ನೀಡಿದ್ದು, “ಜೆಟ್ ಲ್ಯಾಗ್ ಪಬ್ ನನ್ನ ಹೆಸರಿನಲ್ಲಿಯೇ ಇದೆ” ಎಂದು ಸ್ಪಷ್ಟನೆ ನೀಡಿದ್ದಾರೆ.
“ಜೆಟ್‌ಲ್ಯಾಗ್ ಪಬ್ ನನ್ನ ಹೆಸರಿನಲ್ಲಿಯೇ ಇದೆ. ನನ್ನ ಪತಿ ಸೌಂದರ್ಯ ಜಗದೀಶ್ ಅವರು ಪಬ್‌ಅನ್ನು ನೋಡಿಕೊಳ್ಳುತ್ತಿದ್ದರು. ಅವರು ತೀರಿಕೊಂಡ ಬಳಿಕ ನಾನೇ ಜೆಟ್‌ಲ್ಯಾಗ್ ಪಬ್‌ಅನ್ನು ನೋಡಿಕೊಳ್ಳುತ್ತಿದ್ದೇನೆ. ಪಬ್‌ಅನ್ನು ದರ್ಶನ್ ಅವರ ಹೆಸರಿಗೆ ಬರೆದುಕೊಟ್ಟಿಲ್ಲ. ಅದು ನನ್ನ ಹೆಸರಿನಲ್ಲಿಯೇ ಇದೆ” ಎಂದು ವಿಸ್ತಾರ ನ್ಯೂಸ್‌ಗೆ ಶಶಿರೇಖಾ ಅವರು ಮಹತ್ವದ ಸ್ಪಷ್ಟನೆ ನೀಡಿದ್ದಾರೆ.
ಸಾಲ ಮಾಡಿಕೊಂಡಿದ್ದ ಸೌಂದರ್ಯ ಜಗದೀಶ್ ಅವರು ಮರುಪಾವತಿ ಮಾಡಲಾಗದೆ, ಬೆಂಗಳೂರಿನಲ್ಲಿರುವ ಜೆಟ್ ಲ್ಯಾಗ್ ಪಬ್‌ಅನ್ನು ದರ್ಶನ್ ಅವರ ಹೆಸರಿಗೆ ಬರೆದುಕೊಟ್ಟಿದ್ದಾರೆ. ಸೌಂದರ್ಯ ಜಗದೀಶ್ ಅವರ ಪತ್ನಿ ಶಶಿರೇಖಾ ಅವರೇ ಬರೆದುಕೊಟ್ಟಿದ್ದಾರೆ. ನಿರ್ಮಾಪಕ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಅಂದರೆ, 2017ರಲ್ಲಿಯೇ ಒಪ್ಪಂದದಂತೆ ಪಬ್‌ಅನ್ನು ನಟನ ಹೆಸರಿಗೆ ಬರೆದುಕೊಡಲಾಗಿದೆ ಎಂದು ಹೇಳಲಾಗುತ್ತಿದೆ. ಕನ್ನಡ ಚಿತ್ರರಂಗದ ಜತೆ ನಂಟು ಹೊಂದಿದ್ದ ಸಂದರ್ಯ ಜಗದೀಶ್ ಅವರು ನಟ ಉಪೇಂದ್ರ ಅವರ ಬಳಿಯೂ 7 ಕೋಟಿ ರೂ. ಸಾಲ ಮಾಡಿದ್ದರು. ಅವರಿಗೆ ಸಾಲ ಮರುಪಾವತಿ ಮಾಡಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು. ಈಗ ಅದನ್ನು ಶಶಿರೇಖಾ ಅವರು ಅಲ್ಲಗಳೆದಿದ್ದಾರೆ.
ನಿರ್ಮಾಪಕ ಸೌಂದರ್ಯ ಜಗದೀಶ್ ಅವರು ಏಪ್ರಿಲ್ 14ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಹಿಂದೆ ಜಗದೀಶ್ ಬ್ಯುಸಿನೆಸ್ ಪಾರ್ಟನರ್ಸ್ ಸುರೇಶ್, ಹೊಂಬಣ್ಣ ಹಾಗೂ ಸುಧೀಂದ್ರ ಎಂಬುವವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಸೌಂದರ್ಯ ಜಗದೀಶ್ ಮೃತಪಟ್ಟ ಒಂದು ತಿಂಗಳ ನಂತರ ಅವರ ರೂಮಿನಲ್ಲಿ ಡೆತ್‌ನೋಟ್ ಪತ್ತೆಯಾಗಿತ್ತು. ಸೌಂದರ್ಯ ಜಗದೀಶ್ ಬರೆದ ಡೆತ್‌ನೋಟ್‌ನಲ್ಲಿ ಸೌಂದರ್ಯ ಕನ್‌ಸ್ಟ್ರಕ್ಷನ್ಸ್‌ನ ಸಹ ಪಾಲುದಾರರಿಂದ ಸುಮಾರು 60 ಕೋಟಿ ರೂ. ನಷ್ಟವಾಗಿದ್ದು, ಮೋಸ ಮಾಡಿದ್ದಾರೆ ಎಂದು ಡೆತ್‌ನೋಟ್‌ನಲ್ಲಿ ಬರೆದಿತ್ತು. ಇದೀಗ ಸೌಂದರ್ಯ ಜಗದೀಶ್, ದರ್ಶನ್, ಪವಿತ್ರಾ ಗೌಡ ನಡುವೆ ಇದೇ ಹಣದ ವ್ಯವಹಾರ ನಡೆದಿತ್ತು ಎನ್ನಲಾಗಿದೆ.
ಪವಿತ್ರಾ ಗೌಡ ಮನೆ ಖರೀದಿಗಾಗಿ ಸೌಂದರ್ಯ ಜಗದೀಶ್ 2 ಕೋಟಿ ರೂ. ಕೊಟ್ಟಿದ್ದರು ಎನ್ನಲಾಗಿದೆ. ಸೌಂದರ್ಯ ಜಗದೀಶ್ ಹಣ ಕೊಟ್ಟ ಮಾರನೇ ದಿನವೇ ಪವಿತ್ರಾ ಗೌಡ ಮನೆ ಖರೀದಿಸಿದ್ದರು. ಈ ದಾಖಲೆ ಇದೀಗ ವಿಸ್ತಾರ ನ್ಯೂಸ್‌ಗೆ ಲಭ್ಯವಾಗಿದೆ. ಈ ಎಲ್ಲ ಹಣದ ವ್ಯವಹಾರದ ದಾಖಲೆ ಪಾಲುದಾರ ಸುರೇಶ್ ಪೊಲೀಸರಿಗೆ ನೀಡಿದ್ದಾರೆ. 2017 ನವೆಂಬರ್ 13ರಂದು ಪವಿತ್ರಾಗೌಡಗೆ 1 ಕೋಟಿ ರೂ. ವರ್ಗಾವಣೆ ಮಾಡಿದ್ದರು ಜಗದೀಶ್. ಹಾಗೇ 2018, ಜನವರಿ 23ರಂದು ಪವಿತ್ರಾಗೌಡಗೆ ಮತ್ತೆ 1 ಕೋಟಿ ರೂ. ವರ್ಗಾವಣೆ ಮಾಡಿದ್ದರು. 2018, ಜನವರಿ 24 ರಂದು ಪವಿತ್ರಾಗೌಡ ಮನೆ ಖರೀದಿಸಿದ್ದರು.
ಇದನ್ನೂ ಓದಿ: Actor Darshan: ʻಸೌಂದರ್ಯ ಜಗದೀಶ್ʼ ಆತ್ಮಹತ್ಯೆಗೆ ಬಿಗ್ ಟ್ವಿಸ್ಟ್; ದರ್ಶನ್, ಪವಿತ್ರಾ ವ್ಯವಹಾರವೇ ಸಾವಿಗೆ ಕಾರಣ?