ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ಕಳೆದ ವರ್ಷ ಶಾಸಕ ಜಮೀರ್ ಅಹ್ಮದ್ ಅವರ ಮನೆಯ ಮೇಲೆ ಜಾರಿ ನಿರ್ದೇಶನಾಲಯ(ಇಡಿ) ದಾಳಿ ಮಾಡಿತ್ತು. ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲು ಇದೀಗ ಭ್ರಷ್ಟಾಚಾರ ನಿಗ್ರಹ ದಳ ಶಾಕ್ ನೀಡಿದೆ. ಈ ಹಿಂದೆ ಐಎಂಎ ಅವ್ಯವಹಾರ ಜಮೀರ್‌ಗೆ ಮುಳುವಾಗಿತ್ತು. ಇದೀಗ ಕೆಜಿಎಫ್ ಬಾಬು ಜತೆಗಿನ ವ್ಯವಹಾರವೇ ಎಸಿಬಿ ರೇಡ್‌ಗೆ ಕಾರಣ ಎನ್ನಲಾಗಿದೆ.
ಇತ್ತೀಚೆಗೆ ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿ ಕೆಜಿಎಫ್ ಬಾಬು ಮನೆಯ ಮೇಲೆ ಇ.ಡಿ.ದಾಳಿಯಾಗಿತ್ತು. ಶಾಸಕ ಜಮೀರ್ ಅಹ್ಮದ್‌ಗೆ ಮನೆ ಖರೀದಿಸಲು ಗುಜರಿ ಬಾಬು 3.5 ಕೋಟಿ ರೂಪಾಯಿ ಸಾಲ ನೀಡಿದ್ದರು. ಗುಜರಿ ಉದ್ಯಮದಿಂದ ರಿಯಲ್ ಎಸ್ಟೇಟ್ ಉದ್ಯಮಿಯಾಗಿ ಬೆಳೆದ ಕೆಜಿಎಫ್ ಬಾಬು ಕಳೆದ ಬಾರಿಯ ವಿಧಾನ ಪರಿಷತ್ ಚುನಾವಣೆಗೆ ನಿಂತು ಸದ್ದು ಮಾಡಿದ್ದರು. ಹೀಗಾಗಿ ಇವರ ಮೇಲೆ ಕಣ್ಣಿಟ್ಟಿದ್ದ ಇ.ಡಿ ಮೇ 28ರಂದು ಕೆಜಿಎಫ್ ಬಾಬು ಮನೆ ಮೇಲೆ ದಾಳಿ ಮಾಡಿ ವಿಚಾರಣೆ ನಡೆಸಿತ್ತು. ಹೀಗಾಗಿ ಗುಜರಿ ಬಾಬು ನಡುವಿನ ವ್ಯವಹಾರದ ಹಿನ್ನೆಲೆಯಲ್ಲಿ ಜಮೀರ್ ಅಹ್ಮದ್ ಮನೆ ಮೇಲೆ ಎಸಿಬಿ ದಾಳಿಯಾಗಿದೆ ಎನ್ನಲಾಗಿದೆ.
ಇದನ್ನೂ ಓದಿ | Zameer acb raid| ಶಾಸಕ ಜಮೀರ್ ಗೆಸ್ಟ್ ಹೌಸ್‌ನಲ್ಲಿ ಕೆಲ ದಾಖಲೆಗಳನ್ನು ಪತ್ತೆಹಚ್ಚಿದ ಎಸಿಬಿ
ಇನ್ನು ಕಳೆದ ವರ್ಷ ಭಾರಿ ಸುದ್ದಿಯಾಗಿದ್ದ ಐಎಂಎ ಅವ್ಯವಹಾರ ಪ್ರಕರಣದಲ್ಲಿ ಪ್ರಧಾನ ವಂಚಕ ಮನ್ಸೂರ್, ಶಾಸಕ ಜಮೀರ್ ಅಹ್ಮದ್ ಖಾನ್ ಮತ್ತು ರೋಷನ್ ಬೇಗ್ ಅವರ ಹೆಸರುಗಳನ್ನು ಪ್ರಸ್ತಾಪಿಸಿದ್ದ. ಹಾಗಾಗಿ ಇವರಿಬ್ಬರ ಮನೆಗಳು ಮೇಲೆ ಇಡಿ ದಾಳಿ ನಡೆಸಿತ್ತು. 2021ರ ಆಗಸ್ಟ್ ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ವಸಂತನಗರದ ಜಮೀರ್ ಹಳೇ ನಿವಾಸ, ಬಂಬೂ ಬಜಾರ್ ನಿವಾಸ, ಯುಬಿ ಸಿಟಿಯಲ್ಲಿರುವ ಫ್ಲ್ಯಾಟ್, ಕಲಾಸಿಪಾಳ್ಯದ ನ್ಯಾಷನಲ್ ಟ್ರಾವೆಲ್ಸ್ ಕಚೇರಿ, ಸದಾಶಿವನಗರದ ಜಮೀರ್ ಆಪ್ತನ ನಿವಾಸ ಹಾಗೂ ಜಮೀರ್ ಪಿ.ಎ ಮನೆ ಸೇರಿ 6 ಕಡೆ ದಾಳಿ ನಡೆದಿತ್ತು. ಜಮೀರ್ ಅಹ್ಮದ್ ನಿವಾಸ, ಕಚೇರಿ, ಫ್ಲ್ಯಾಟ್‌ನಲ್ಲಿ ಇ.ಡಿ. ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದರು.
ಶಾಸಕ ಜಮೀರ್ ಅಹ್ಮದ್ ಮಗಳ ಮದುವೆಗೆ ಹಣ, ಚಿನ್ನ ನೀಡಿದ್ದರ ಬಗ್ಗೆ ಮನ್ಸೂರ್ ಇಡಿ ಅಧಿಕಾರಿಗಳ ಎದುರು ಬಾಯ್ಬಿಟ್ಟಿದ್ದರು ಎಂಬ ಮಾಹಿತಿ ತಿಳಿದುಬಂದಿತ್ತು. ಇದರ ಬೆನ್ನಲ್ಲೇ ಜಮೀರ್ ಅಹ್ಮದ್ ಖಾನ್ ಕೂಡ ತಮ್ಮ ಮಗಳ ಮದುವೆಯನ್ನು ಅತ್ಯಂತ ವಿಜೃಂಭಣೆಯಿಂದ ಮಾಡಿದ್ದರು. ಹೀಗಾಗಿ ಶಾಸಕ ಜಮೀರ್ ಮನೆ ಮೇಲೆ ಈಗ ಇ.ಡಿ ದಾಳಿ ನಡೆದಿತ್ತು.
ಮನ್ಸೂರ್ ಖಾನ್‌ಗೆ ನಿವೇಶನ ಮಾರಾಟ ಮಾಡಿದ್ದ ಜಮೀರ್
ಜಮೀರ್ ರಿಚ್ಮಂಡ್ ಟೌನ್‌ನಲ್ಲಿರುವ 14.924 ಚದರ ಅಡಿ ನಿವೇಶನವನ್ನು ಐಎಂಎ ಮಾಲೀಕ ಮನ್ಸೂರ್ ಖಾನ್‌ಗೆ
ಮಾರಾಟ ಮಾಡಿದ್ದರು. ಶಾಸಕ ಜಮೀರ್ 9.38 ಕೋಟಿಗೆ ನಿವೇಶನ ಮಾರಾಟ ಮಾಡಿದ್ದರು. ಇದೇ ವಿಚಾರಕ್ಕೆ ಐಎಂಎ ಪ್ರಕರಣದಲ್ಲಿ ಜಮೀರ್ ಹೆಸರು ಕೇಳಿ ಬಂದಿತ್ತು. ಮನ್ಸೂರ್ ಖಾನ್ ಹೆಚ್ಚಿನ ಹಣ ಪಡೆದ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ವಿಚಾರಣೆಗೆ ಹಾಜರಾಗುವಂತೆ ಇಡಿ ಅಧಿಕಾರಿಗಳು ಸಮನ್ಸ್ ಕೂಡ ಕೊಟ್ಟಿದ್ದರು. 2019ರ ಜುಲೈ 5ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜಮೀರ್ ಅವರನ್ನು ವಿಚಾರಣೆಗೆ ಕರೆದಿದ್ದರು.
ಉಳಿದ 80 ಕೋಟಿ ಹಣವನ್ನು ಹಣ ಪಡೆದಿದ್ದಾರೆ ಎಂಬ ಆರೋಪ ಜಮೀರ್ ಮೇಲಿತ್ತು. 2014ರಲ್ಲಿ ಆಸ್ತಿಯ ವಿಚಾರವಾಗಿ ವ್ಯಾಜ್ಯ ಕೋರ್ಟ್‌ನಲ್ಲಿತ್ತು. ವ್ಯಾಜ್ಯ ಇದ್ದರೂ ಕೂಡ ಜಮೀರ್ ಅಹ್ಮದ್ ಮಾರಾಟ ಮಾಡಿದ್ದರು. ಶಾಸಕ ಜಮೀರ್ 2018ರಲ್ಲಿ ಚುನಾವಣಾ ಪ್ರಮಾಣ ಪತ್ರದಲ್ಲಿ ಕೂಡ ತಪ್ಪು ಮಾಹಿತಿ ನೀಡಿದ್ದರು. ಚೆಲುವರಾಯ ಸ್ವಾಮಿ ಬಳಿ 40 ಲಕ್ಷ ರೂ ಹಣ ಸಾಲ ಪಡೆದಿದ್ದಾಗ ತಪ್ಪು ಮಾಹಿತಿ ನೀಡಿದ್ದರು. ಈ ಎಲ್ಲ ವಿಚಾರವಾಗಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು ಎನ್ನಲಾಗಿತ್ತು. ಹೀಗಾಗಿಯೇ ಅಕ್ರಮ ಆಸ್ತಿ ಗಳಿಕೆ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲು ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಇದನ್ನೂ ಓದಿ | ACB raid| ಮೊದಲ ಬಾರಿಗೆ ಹಾಲಿ ಶಾಸಕ ಜಮೀರ್ ಮನೆಗೆ ಎಸಿಬಿ ಭರ್ಜರಿ ದಾಳಿ, ಬೆಂಬಲಿಗರ ಪ್ರತಿಭಟನೆ