ಮಂಗಳೂರು: ಅದು ಹಿಂದುತ್ವ ಎಂದರೆ ಬಿಜೆಪಿ, ಬಿಜೆಪಿ ಎಂದರೆ ಹಿಂದುತ್ವ ಎನಿಸಿಕೊಂಡಿದ್ದ ಊರು. ಆದರೆ ಈ ಬಾರಿಯ ವಿಧಾಸಭಾ ಚುನಾವಣೆಯಲ್ಲಿ (Karnataka Election) ಇಲ್ಲಿ ಬಿಜೆಪಿ ಹಾಗೂ ಹಿಂದುತ್ವ ಎರಡೂ ವಿರುದ್ಧ ದಿಕ್ಕಿನಲ್ಲಿ ಸಾಗಿವೆ. ಈ ಆಂತರಿಕ ಭಿನ್ನಮತ ಶಮನಕ್ಕೆ ತೇಪೆ ಹಚ್ಚಲು ಹಿಂದುತ್ವದ ಫೈರ್ ಬ್ರ್ಯಾಂಡ್ ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ಪ್ರಯತ್ನಿಸಿದ್ದಾರೆ. ಆದರೆ ಯತ್ನಾಳ್ ಸಮ್ಮುಖದಲ್ಲೇ ನಡೆದ ಹೈ ಡ್ರಾಮಾ ಅಲ್ಲಿ ಸಣ್ಣದೊಂದು ಕಿಡಿ ಹೊತ್ತಿಸಿದೆ.
ನಾವೆಲ್ಲಾ ಒಂದೇ ಎಂದವರು ಇಂದು ಬೇರೆ ಬೇರೆ!
ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ಯಾವ ರೀತಿಯ ಆಕ್ರೋಶ ಇದೆ ಎಂಬುವುದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮಹಾವೀರ ಆಸ್ಪತ್ರೆಯಲ್ಲಿ ಬಿಜೆಪಿ ಮುಖಂಡನನ್ನೇ ಹಿಂದು ಕಾರ್ಯಕರ್ತರು ಶುಕ್ರವಾರ ಹೊರ ತಳ್ಳಿ ಆಕ್ರೋಶ ವ್ಯಕ್ತಪಡಿಸಿದ ಘಟನೆಯಿಂದ ತಿಳಿಯುತ್ತದೆ. ಬಿಜೆಪಿಯಿಂದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಹಿಂದು ಕಾರ್ಯಕರ್ತ ಅರುಣ್ ಪುತ್ತಿಲ ಬಂಡಾಯವಾಗಿ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದ ಹಿಂದುಪರ ಸಂಘಟನೆಗಳ ಕಾರ್ಯಕರ್ತರು, ಸದ್ಯ ಬಿಜೆಪಿ ವಿರುದ್ಧ ಆಕ್ರೋಶದಲ್ಲಿದ್ದಾರೆ.
ಈ ನಡುವೆ ನಳಿನ್ ಕುಮಾರ್ ಕಟೀಲ್ ಹಾಗೂ ಮಾಜಿ ಸಿಎಂ ಸದಾನಂದಗೌಡ ಅವರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿದ ಆರೋಪದಲ್ಲಿ ಪುತ್ತಿಲ ಬಣದಲ್ಲಿ ಗುರುತಿಸಿಕೊಂಡ ಯುವಕರನ್ನು ಪೊಲೀಸರು ಠಾಣೆಗೆ ಕರೆದೊಯ್ದು ಥಳಿಸಿದ್ದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಪುತ್ತೂರಿನಲ್ಲಿ ನಡೆಯುತ್ತಿರುವ ಕೇಸರಿ ವಾರ್ ಕಂಟ್ರೋಲ್ ಮಾಡಲು ಹಿಂದುತ್ವದ ಫೈರ್ ಫೈರ್ ಬ್ರ್ಯಾಂಡ್ ಬಸನಗೌಡ ಯತ್ನಾಳ್ ಎಂಟ್ರಿ ಕೊಟ್ಟಿದ್ದರು. ಆದರೆ ಅವರ ಎದುರಲ್ಲೇ ಬಿಜೆಪಿ ಮುಖಂಡನನ್ನು ಹಿಂದು ಕಾರ್ಯಕರ್ತರು ಆಸ್ಪತ್ರೆಯಿಂದ ಹೊರ ತಳ್ಳಿರುವುದು ಪುತ್ತೂರಿನಲ್ಲಿ ಕೇಸರಿ ಪಡೆಗಳ ನಡುವೇ ತಿಕ್ಕಾಟವನ್ನು ಇನ್ನಷ್ಟು ಹೆಚ್ಚಿಸಿದೆ.
ವಾರ್ಡ್‌ನಿಂದ ಬಿಜೆಪಿ ಮುಖಂಡನನ್ನು ಹೊರತಳ್ಳಿದ ಹಿಂದು ಕಾರ್ಯಕರ್ತರು
ಪುತ್ತೂರಿನ ಮಹಾವೀರ ಆಸ್ಪತ್ರೆಯ ವಾರ್ಡ್‌ನಲ್ಲಿ ಗಾಯಾಳು ಹಿಂದು ಕಾರ್ಯಕರ್ತರನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭೇಟಿ ಮಾಡಲು ಹೋದಾಗ ಬಿಜೆಪಿ ಮುಖಂಡ ಅಜಿತ್ ರೈ ಕೂಡ ತೆರಳಿದ್ದರು. ಈ ವೇಳೆ ಬಿಜೆಪಿ ಮುಖಂಡ ಅಜಿತ್ ರೈನನ್ನು ಹಿಂದು ಕಾರ್ಯಕರ್ತರು ವಾರ್ಡ್‌ನಿಂದ ಹೊರತಳ್ಳಿದ್ದಾರೆ. ಹಿಂದು ಜಾಗರಣ ವೇದಿಕೆಯಲ್ಲಿ ಗುರುತಿಸಿಕೊಂಡಿರುವ ಅಜಿತ್ ರೈ, ತಮ್ಮೊಂದಿಗೆ ಇದ್ದು ಪ್ರತಿಯೊಂದು ಮಾಹಿತಿಯನ್ನು ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್‌ಗ ಕಟೀಲ್‌ಗೆ ತಲುಪಿಸುತ್ತಿದ್ದಾರೆ ಎಂದು ಆರೋಪಿಸಿ ಹಿಂದು ಕಾರ್ಯಕರ್ತರು ಹೊರತಳ್ಳಿದ್ದಾರೆ.
ಇದನ್ನೂ ಓದಿ | Karnataka CM: ಒಂದೇ ಸಭೆಯಲ್ಲಿ 10,000 ಕೋಟಿ ರೂ. ಉಳಿಸಿದ ಸಿದ್ದರಾಮಯ್ಯ!: ಗ್ಯಾರಂಟಿ ಜಾರಿ ಹೀಗಿರಲಿದೆಯೇ?
ಬಿಜೆಪಿ ಮುಖಂಡ ಅಜಿತ್ ರೈ ಆಕ್ರೋಶ
ಆಸ್ಪತ್ರೆಯ ವಾರ್ಡ್‌ನೊಳಗೆ ಹೋಗಲು ಬಿಡದ ಹಿಂದು ಕಾರ್ಯಕರ್ತರ ವಿರುದ್ಧ ಆಕ್ರೋಶ ಹೊರಹಾಕಿದ್ದ ಅಜಿತ್ ರೈ, ಬರುವ ರಥೋತ್ಸವದ ಮೊದಲು ನಿನಗೆ ಗೊತ್ತಾಗಬಹುದು. ನೀನಾ ನಾನಾ ನೋಡುವ ಆಯ್ತಾ…, ಸುಧೀರಣ್ಣಾ ನಾನು ನ್ಯಾಯ ತಪ್ಪಿ ಮಾತನಾಡುವವ ಅಲ್ಲ, ನಿಮಗೆ ಗೊತ್ತಲ್ವಾ, ನಾನು ಮೊದಲೂ ಗೌರವ ಕೊಟ್ಟಿದ್ದವ. ಈಗಲೂ ಹಿರಿಯರಿಗೆ ಗೌರವ ಕೊಡುತ್ತೇನೆ. ಇದುವರೆಗೂ ಯಾರೂ ನನ್ನ ಮೈ ಮುಟ್ಟಲು ಬಿಟ್ಟಿಲ್ಲ, ನೋಡುವ ಒಂದು ವರ್ಷದಲ್ಲಿ ಪುತ್ತೂರಲ್ಲಿ ಯಾರು ಎಂದು ನೋಡುವಾ ಎಂದು ಕಿಡಿಕಾರಿದ್ದರು.
ಇನ್ನು ಆಸ್ಪತ್ರೆ ಒಳಗಡೆ ಅರುಣ್ ಪುತ್ತಿಲ, ಇತ್ತೀಚೆಗೆ ನಡೆದ ಘಟನೆಗಳ ಬಗ್ಗೆ ಯತ್ನಾಳ್ ಅವರಿಗೆ ಎಳೆ ಎಳೆಯಾಗಿ ಬಿಡಿಸಿ ಹೇಳಿದ್ದಾರೆ. ಬಿಜೆಪಿ ನಾಯಕರು ಅದೆಂತಾ ಕೃತ್ಯ ಮಾಡಿದ್ದಾರೆ ನೋಡಿ ಎಂದು ವಿವರಿಸಿದ್ದಾರೆ. ಹಿಂದುತ್ವಕ್ಕೆ ಬಿಜೆಪಿ ನೀಡಿದ ಬೆಲೆ ಇದು ಅಂತ ನೋವು ತೋಡಿಕೊಂಡು ಬಿಜೆಪಿ ನಾಯಕರ ವಿರುದ್ಧವೇ ಅಸಮಾಧಾನ ತೋಡಿಕೊಂಡಿದ್ದಾರೆ.
ಪುತ್ತಿಲರನ್ನು ಸಮಾಧಾನಪಡಿಸಲು ಆಗಮಿಸಿದ್ದ ಯತ್ನಾಳ್, ಇದು ನಮ್ಮೊಳಗೇ ನಡೆದಿರುವ ಸಣ್ಣ ಮನಸ್ತಾಪ, ಇದನ್ನು ಸರಿ ಮಾಡಲಾಗುವುದು ಎಂದು ಹೇಳಿದ್ದಾರೆ. ಆಸ್ಪತ್ರೆಯಿಂದ ತೆರಳಿದ ಯತ್ನಾಳ್, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ, ಸ್ಥಳೀಯ ಬಿಜೆಪಿ ಮುಖಂಡರ ಜತೆ ಸಭೆ ನಡೆಸಿದರು. ಈ ಹಿಂದೆ ನನಗೂ ಇಂತಹುದೇ ಅನುಭವ ಆಗಿದ್ದಾಗಿ ಹೇಳಿರುವ ಯತ್ನಾಳ್, ರಾಜಕೀಯದಲ್ಲಿ ಹೊಂದಿಕೊಂಡು ಹೋಗಬೇಕು ಎಂದು ಕಿವಿ ಮಾತು ಹೇಳಿದ್ದು, ತಪ್ಪಾಗಿರೋದನ್ನು ಸರಿ ಮಾಡಿಕೊಂಡು ಹೋಗಿ, ಮುಂದೆ ಚುನಾವಣೆ ಇದೆ ಎಂಬ ಎಚ್ಚರಿಕೆಯನ್ನು ಬಿಜೆಪಿ ಕಾರ್ಯಕರ್ತರಿಗೆ ನೀಡಿದ್ದಾರೆ.
ಇದನ್ನೂ ಓದಿ | Pramod Muthalik: ಡೀಲ್ ಮಾಸ್ಟರ್ ಎಂದಿದ್ದ ಸುನಿಲ್ ಕುಮಾರ್ ವಿರುದ್ಧ ಮುತಾಲಿಕ್‌ರಿಂದ ಮಾನನಷ್ಟ ಮೊಕದ್ದಮೆ
ಯತ್ನಾಳ್ ಏನೋ ಪುತ್ತೂರಿನ ಸಮಸ್ಯೆ ಬಗೆಹರಿಸೋ ಪ್ರಯತ್ನ ಮಾಡಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ನಡೆದ ಹೈಡ್ರಾಮಾ ಎರಡೂ ಕಡೆಯಲ್ಲಿ ಕಿಡಿ ಹತ್ತಿಸಿದೆ. ಇದು ಎಲ್ಲಿಂದ ಹೋಗಿ ನಿಲ್ಲುತ್ತದೆ ಎಂಬುವುದನ್ನು ಕಾದು ನೋಡಬೇಕಿದೆ.