ಮಂಡ್ಯ: ಜಿಲ್ಲೆಯ ಮೈಶುಗರ್ ಸಕ್ಕರೆ ಕಾರ್ಖಾನೆಯಲ್ಲಿ (Mysugar Factory) ಈ ಹಂಗಾಮಿನ ಕಬ್ಬು ನುರಿಸುವಿಕೆ ಪ್ರಾರಂಭಿಸಲು ರಾಜ್ಯ ಸರ್ಕಾರದಿಂದ 50 ಕೋಟಿ ರೂ. ಬಿಡುಗಡೆಗೆ ಹಣಕಾಸು ಇಲಾಖೆಯಿಂದ ಅನುಮೋದನೆ ದೊರಕಿದೆ. ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಕೃಷಿ ಸಚಿವ ಚಲುವರಾಯಸ್ವಾಮಿ ಅವರಿಗೆ ಜಿಲ್ಲೆಯ ಜನರ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಮಂಡ್ಯ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.
2023-24 ನೇ ಸಾಲಿನಲ್ಲಿ ಕಬ್ಬು ನುರಿಸಲು ಸರ್ಕಾರದಿಂದ ತುರ್ತಾಗಿ ಧನ ಸಹಾಯ ನೀಡಬೇಕೆಂದು ತಾವು ಹಾಗೂ ಶಾಸಕ ರವಿ ಗಣಗ ಅವರು ಮಾಡಿದ್ದ ಮನವಿಗೆ ಸ್ಪಂದಿಸಿ ಸಿಎಂ ತಕ್ಷಣವೇ ಹಣ ಬಿಡುಗಡೆಗೆ ವ್ಯವಸ್ಥೆ ಮಾಡಿದ್ದಾರೆ. ಕಬ್ಬು ಕಟಾವು ಪ್ರಾರಂಭವಾಗುವ ಮೊದಲು ಸಿಬ್ಬಂದಿಗೆ ನೀಡಲು ಹಣದ ಅವಶ್ಯಕತೆ ಇದೆ. ಯಂತ್ರಗಳ ದುರಸ್ತಿ ಅಗತ್ಯವೂ ಇವೆ. ಅದಕ್ಕಾಗಿ ತಕ್ಷಣ ಹಣ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಲಾಗಿತ್ತು. ಹೀಗಾಗಿ ಕಾರ್ಖಾನೆ ಪ್ರಾರಂಭೋತ್ಸವ ಹಾಗೂ ಸಿಬ್ಬಂದಿಗೆ ನೀಡಲು 15 ಕೋಟಿ ರೂ. ಹಾಗೂ ಕಾರ್ಖಾನೆಯ ದುಡಿಯುವ ಬಂಡವಾಳ (ವರ್ಕಿಂಗ್ ಕ್ಯಾಪಿಟಲ್) ಗಾಗಿ 35 ಕೋಟಿ ರೂ. ನೀಡಲು ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ. ಇದರಿಂದ ಕಬ್ಬು ನುರಿಸುವಿಕೆ ಪ್ರಾರಂಭಿಸಲು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Congress Guarantee: ಯುವನಿಧಿ ಜಾರಿ: IAS, KAS, ಇತರೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧವಾಗುವವರಿಗೆ ಸುವರ್ಣಾವಕಾಶ?
ಮನವಿಯಲ್ಲೇನಿತ್ತು?
ರೈತರ ಹಿತದೃಷ್ಟಿಯಿಂದ ಮೈಶುಗರ್ ಕಾರ್ಖಾನೆ ಮರು ಆರಂಭಕ್ಕೆ ಅಗತ್ಯವಿರುವ ಹಣವನ್ನು ಬಿಡುಗಡೆ ಮಾಡಲು ಕೋಡಿ ಎಂಎಲ್‌ಸಿ ದಿನೇಶ್ ಗೂಳಿಗೌಡ ಹಾಗೂ ಮಂಡ್ಯ ಶಾಸಕರಾದ ರವಿ ಗಣಿಗ ಅವರು ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದ್ದರು.
ಮನವಿ ಪತ್ರದಲ್ಲಿ ಮಂಡ್ಯ ಜಿಲ್ಲೆಯ ಮೈಸೂರು ಸಕ್ಕರೆ ಕಾರ್ಖಾನೆ (ಮೈ ಶುಗರ್ ) ರೋಗಗ್ರಸ್ತವಾಗಿದ್ದು, ಕೆಲವು ವರ್ಷಗಳಿಂದ ಕಬ್ಬು ನುರಿಸುವಿಕೆ ಸ್ಥಗಿತವಾಗಿತ್ತು. ಕಳೆದ ವರ್ಷವಷ್ಟೇ ಕಬ್ಬು ನುರಿಸುವಿಕೆಯನ್ನು ಪುನಃ ಪ್ರಾರಂಭಿಸಲಾಗಿದೆ. ಅಲ್ಲದೆ, ಕಳೆದ ವರ್ಷ ಸರ್ಕಾರವು ಬಜೆಟ್‌ನಲ್ಲಿ ಕಾರ್ಖಾನೆಯ ಪುನಶ್ಚೇತನಕ್ಕೆ ₹ 50 ಕೋಟಿ ರೂಪಾಯಿ ಹಣ ನೀಡುವುದಾಗಿ ಘೋಷಿಸಿತ್ತು. ಆದರೆ, ಇದುವರೆಗೆ ₹32 ಕೋಟಿ ರೂಪಾಯಿಯನ್ನು ಮಾತ್ರವೇ ಬಿಡುಗಡೆಯಾಗಿದೆ. ಇದರಿಂದ ರೈತರಿಗೆ ತೀವ್ರ ಅನಾನುಕೂಲವಾಗುತ್ತಿದೆ ಎಂದು ತಿಳಿಸಲಾಗಿತ್ತು.
ಕಾರ್ಖಾನೆಯ ವ್ಯಾಪ್ತಿಯಲ್ಲಿ ಈ ಹಂಗಾಮಿನಲ್ಲಿ 10,002 ಹೆಕ್ಟೇರ್ ಪ್ರದೇಶದಲ್ಲಿ ರೈತರು ಕಬ್ಬು ಬೆಳೆದಿದ್ದು, ಸುಮಾರು 5,00,100 ಮೆಟ್ರಿಕ್ ಟನ್ ಕಬ್ಬು ಪೂರೈಕೆ ಮಾಡುವ ಕುರಿತು ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. 5,745 ರೈತರು ಕಾರ್ಖಾನೆಗೆ ಕಬ್ಬು ನುರಿಸಲು ನೀಡುವುದಾಗಿ ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ. ರೈತರ ಹಿತ ದೃಷ್ಟಿಯಿಂದ ಹಾಗೂ ಕಾರ್ಖಾನೆಯ ಭವಿಷ್ಯದ ದೃಷ್ಟಿಯಿಂದ ಸಕಾಲದಲ್ಲಿ ಕಬ್ಬು ನುರಿಸಲು ಪ್ರಾರಂಭಿಸಬೇಕಿದೆ ಎಂದು ಮಾಹಿತಿ ನೀಡಿದ್ದರು.
ಕಬ್ಬು ನುರಿಸುವಿಕೆಯ ಸಿದ್ಧತೆಯು ಜೂನ್ ನಿಂದ ಆರಂಭವಾಗಬೇಕಿದೆ. ಆದರೆ, ಕಾರ್ಖಾನೆಯಲ್ಲಿ ತುರ್ತು ನಿರ್ವಹಣಾ ಕೆಲಸ, ಕಟಾವು ಗ್ಯಾಂಗ್‌ಗಳಿಗೆ ಹಣ ಪಾವತಿ, ಸಿಬ್ಬಂದಿ ವೇತನ ಎಲ್ಲ ಸೇರಿ 18.54 ಕೋಟಿ ರೂಪಾಯಿಯ ಅಗತ್ಯವಿದೆ ಎಂದು ಮನವಿ ಮಾಡಲಾಗಿತ್ತು.
ಇದನ್ನೂ ಓದಿ | Congress Guarantee: ಎಲ್ಲರಿಗೂ 200 ಯೂನಿಟ್ ವಿದ್ಯುತ್ ಉಚಿತ ಇಲ್ಲ: ಸಿದ್ದರಾಮಯ್ಯ ಸಾವಿರಾರು ಕೋಟಿ ರೂ. ಉಳಿಸಿದ್ದು ಹೇಗೆ?
ಮಾಡಬೇಕಾದ ಕಾರ್ಯಗಳ ವಿವರ
ಹಂಗಾಮು ಪೂರ್ವ ನಿರ್ವಹಣೆ ಕೆಲಸ ಪೂರ್ಣ ಮಾಡಲು ₹ 5 ಕೋಟಿ, ಫ್ಯಾಕ್ಟರಿ ಕಾರ್ಮಿಕರಿಗೆ ಏಪ್ರಿಲ್, ಮೇ ಹಾಗೂ ಜೂನ್ ತಿಂಗಳ ವೇತನ ಪಾವತಿಗೆ ₹ 1.50 ಕೋಟಿ, ಸ್ಥಳೀಯ ಹಾಗೂ ಹೊರಗಿನ ಕಬ್ಬು ಕಟಾವು ಗ್ಯಾಂಗ್‌ಗಳಿದ್ದು, ಮುಂಗಡ ಹಣ ಪಾವತಿಗೆ ₹ 5.80 ಕೋಟಿ, ಕಾರ್ಖಾನೆಗೆ ಕೋಣನಹಳ್ಳಿ ನೀರಿನ ಲೈನ್ ನಿರ್ಮಾಣಕ್ಕೆ ₹ 98 ಲಕ್ಷ, ಘಟಕದ ಒಳಗೆ ವಿವಿಧ ಸಿವಿಲ್ ಕಾಮಗಾರಿಗಳಿಗೆ ₹ 98 ಲಕ್ಷ, ಇಆರ್‌ಪಿ ಪ್ರಾಜೆಕ್ಟ್‌ಗೆ ₹ 98 ಲಕ್ಷ, ನೀರು ಮತ್ತು ಸ್ಟೇಕ್ ಆನ್‌ಲೈನ್ ಮಾನಿಟರಿಂಗ್ ವ್ಯವಸ್ಥೆ ಅಳವಡಿಕೆಗೆ ₹ 30 ಲಕ್ಷ, ಜ್ಯೂಸ್ ಸಪ್ಲೀಟರ್ ಮತ್ತು ಗೇರ್ ಬಾಕ್ಸ್ ಅಳವಡಿಕೆಗೆ ₹ 1 ಕೋಟಿ, ಜಿಐ ಶೀಟ್ ಹಾಗೂ ಕಟಾವು ಕಾರ್ಮಿಕರ ಸಾಮಗ್ರಿಗೆ ₹ 2 ಕೋಟಿ ಅಗತ್ಯವಾಗಿದೆ ಎಂದು ಮನವಿಯಲ್ಲಿ ಮಾಹಿತಿ ನೀಡಲಾಗಿತ್ತು.