ಬೆಂಗಳೂರು: ಮಂಡ್ಯ ಜಿಲ್ಲೆಯ ಬೆಂಬಲ ಬೆಲೆ ಖರೀದಿ ಕೇಂದ್ರಗಳಲ್ಲಿ ಸಾಫ್ಟ್‌ವೇರ್ ಸಮಸ್ಯೆಯಿಂದ ರಾಗಿ ಮತ್ತು ಭತ್ತ ಖರೀದಿಗೆ ತೊಂದರೆಯಾಗಿದೆ. ಹೀಗಾಗಿ ಶೀಘ್ರವಾಗಿ ಖರೀದಿ ಕೇಂದ್ರಗಳ ಸಾಫ್ಟ್‌ವೇರ್ ದುರಸ್ತಿ ಮಾಡಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ (Dinesh Gooligowda) ಮನವಿ ಸಲ್ಲಿಸಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಕಳೆದ ನವೆಂಬರ್ ತಿಂಗಳಿನಲ್ಲಿಯೇ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ಆರಂಭ ಮಾಡಿದ್ದರೂ ಇದುವರೆಗೂ ಒಂದು ಕ್ವಿಂಟಾಲ್ ಭತ್ತ ಹಾಗೂ ರಾಗಿಯನ್ನೂ ಖರೀದಿ ಮಾಡಿಲ್ಲ. ಈ ಬಗ್ಗೆ ಕಾರಣ ಕೇಳಿದರೆ ಅಧಿಕಾರಿಗಳು, ಸಾಫ್ಟ್‌ವೇರ್ ಕೆಟ್ಟುಹೋಗಿರುವ ಕಾರಣ ಕೊಡುತ್ತಾರೆ. ಹೀಗಾಗಿ ಕೂಡಲೇ ಸಾಫ್ಟ್‌ವೇರ್ ಅನ್ನು ದುರಸ್ತಿಪಡಿಸಿ 2022-23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮಂಡ್ಯ ಜಿಲ್ಲೆಯಲ್ಲಿ ಬೆಳೆಯಲಾಗಿರುವ ಭತ್ತ ಹಾಗೂ ರಾಗಿಯನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಲ್ಲಿ ಖರೀದಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಕೋರಿದ್ದಾರೆ.
ಭತ್ತ ಮಾರಾಟಕ್ಕೆ 15,859 ರೈತರ ನೋಂದಣಿ
ಮಂಡ್ಯ ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 61,459 ಹೆಕ್ಟೇರ್ ಭೂಮಿಯಲ್ಲಿ ಸುಮಾರು 50 ಲಕ್ಷ ಕ್ವಿಂಟಾಲ್ ಭತ್ತ ಬೆಳೆಯಲಾಗಿದೆ. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ (ಎಂಎಸ್‌ಪಿ) ಈ ಭತ್ತವನ್ನು ಖರೀದಿ ಮಾಡುವಂತೆ ನವೆಂಬರ್ ತಿಂಗಳಲ್ಲಿ ಮನವಿ ಮಾಡಿದ್ದೆವು. ಅದರಂತೆ ಸರ್ಕಾರ ಬೆಂಬಲ ಬೆಲೆ ನಿಗದಿ ಮಾಡಿ, ಯೋಜನೆಯಡಿ ಭತ್ತ ಮಾರಾಟ ಮಾಡಲು ಇಚ್ಛಿಸಿದ ರೈತರ ಹೆಸರು ನೋಂದಾಯಿಸಲು ಸೂಚಿಸಿತ್ತು. ಅದರಂತೆ ಮಂಡ್ಯ ಜಿಲ್ಲೆಯಲ್ಲಿ 15,859 ರೈತರು 4.68 ಲಕ್ಷಕ್ಕೂ ಅಧಿಕ ಕ್ವಿಂಟಾಲ್ ಭತ್ತವನ್ನು ನೀಡುವುದಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಆದರೆ, ಸಾಫ್ಟ್‌ವೇರ್ ಸಿದ್ಧವಾಗಿಲ್ಲ ಎಂಬ ಕಾರಣ ನೀಡಿ ಇದುವರೆಗೂ ಖರೀದಿ ಪ್ರಕ್ರಿಯೆಯನ್ನು ಸರ್ಕಾರ ಪ್ರಾರಂಭಿಸಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ | IT Raid : ಕೆಪಿಸಿಸಿ ಕಿಸಾನ್ ಸೆಲ್ ರಾಜ್ಯ ಸಂಚಾಲಕನ ಮನೆ ಮೇಲೆ ಐಟಿ ದಾಳಿ; ಚಿಕ್ಕಮಗಳೂರು ಕಾಂಗ್ರೆಸ್ ಕಿಡಿ
ರಾಗಿ ಮಾರಾಟಕ್ಕೆ 30,215 ರೈತರ ನೋಂದಣಿ
ಅದೇ ರೀತಿ 50 ಸಾವಿರ ಹೆಕ್ಟೇರ್ ವಿಸ್ತೀರ್ಣದಲ್ಲಿ 10 ಲಕ್ಷ ಕ್ವಿಂಟಾಲ್ ರಾಗಿ ಬೆಳೆಯಲಾಗಿದೆ. 30,215 ರೈತರು 4.೨೦ ಲಕ್ಷಕ್ಕೂ ಅಧಿಕ ಕ್ವಿಂಟಾಲ್ ರಾಗಿಯನ್ನು ಬೆಂಬಲ ಯೋಜನೆಯಡಿ ಮಾರಾಟ ಮಾಡಲು ಈಗಾಗಲೇ ಹೆಸರು ನೋಂದಾಯಿಸಿದ್ದಾರೆ. ಆದರೆ, ಈಗ ವಿಳಂಬ ಮಾಡುತ್ತಿರುವುದು ನಿಜಕ್ಕೂ ತೀವ್ರ ಸಮಸ್ಯೆಯಾಗಿದೆ ಎಂದು ದಿನೇಶ್ ಗೂಳಿಗೌಡ ಹೇಳಿದ್ದಾರೆ.
ಜನವರಿ 1ರಂದು ಮಂಡ್ಯ ಜಿಲ್ಲೆಯ ಬೆಂಬಲ ಬೆಲೆ ಖರೀದಿ ಕೇಂದ್ರಗಳಲ್ಲಿ ನೋಂದಣಿ ವಿವರ
ಈಗಾಗಲೇ ಕೃಷಿ ಉತ್ಪನ್ನಗಳ ಬೆಲೆ ಕುಸಿತ, ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಬೆಲೆ ಏರಿಕೆ, ಕೃಷಿ ಕಾರ್ಮಿಕರ ಕೊರತೆಯಿಂದ ಉತ್ಪಾದನಾ ವೆಚ್ಚ ಹೆಚ್ಚಳವಾಗಿದೆ. ರೈತರು ಆತ್ಮಹತ್ಯೆ ಹಾದಿ ಹಿಡಿಯುವ ಪರಿಸ್ಥಿತಿ ಇದೆ. ಇದರ ನಡುವೆ ಸರ್ಕಾರವೂ ಸೂಕ್ತ ಸಮಯದಲ್ಲಿ ನೆರವಿಗೆ ಬರದಿದ್ದರೆ ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ. ಭತ್ತ ಖರೀದಿ ಕೇಂದ್ರ ತೆರೆಯಲು ವಿಳಂಬವಾದಲ್ಲಿ ರೈತರು ಮಧ್ಯವರ್ತಿಗಳ ಹಾವಳಿಗೆ ತುತ್ತಾಗಿ. ಕಡಿಮೆ ಬೆಲೆಗೆ ಭತ್ತ ರಾಗಿ ಮಾರಾಟ ಮಾಡುವ ಪರಿಸ್ಥಿತಿ ಉಂಟಾಗಲಿದೆ. ಹೀಗಾಗಿ ತಾವು ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದು ವಿನಂತಿಸಿದ್ದಾರೆ.
ಇದನ್ನೂ ಓದಿ | ನಾ ನಾಯಕಿ | ರಾಜ್ಯದ ಮಹಿಳೆಯರಿಗೆ ಕಾಂಗ್ರೆಸ್‌ನಿಂದ ಬಂಪರ್ ಘೋಷಣೆ; ಪ್ರತಿ ತಿಂಗಳು ₹2,000 ರೂ.