Site icon Vistara News

Dinesh Gundu Rao : ಮೋದಿಯವರ 56 ಇಂಚಿನ ಎದೆಗೆ ಮಣಿಪುರ ಹಿಂಸೆ ನಿಲ್ಲಿಸುವ ತಾಕತ್ತಿಲ್ಲವೇ?; ಕಾಂಗ್ರೆಸ್‌ ಪ್ರಶ್ನೆ

Manipur violence Dinesh Gundu rao Modi

ಬೆಂಗಳೂರು: ಮಣಿಪುರದಲ್ಲಿ ಕಳೆದ ಎರಡುವರೆ ತಿಂಗಳಿನಿಂದ ನಡೆಯುತ್ತಿರುವ ಹಿಂಸಾಚಾರವನ್ನು (Manipur Violence) ತಡೆಯುವ ತಾಕತ್ತು 56 ಇಂಚಿನ ಎದೆಯನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಇಲ್ಲವೇ ಎಂದು ರಾಜ್ಯ ಕಾಂಗ್ರೆಸ್‌ ನಾಯಕ ಹಾಗೂ ಸಚಿವ ದಿನೇಶ್‌ ಗುಂಡೂ ರಾವ್‌ (Dinesh Gundu Rao) ಪ್ರಶ್ನಿಸಿದ್ದಾರೆ. ಜತೆಗೆ ರಾಷ್ಟ್ರಪತಿ ಆಳ್ವಿಕೆ (President rule) ಮೂಲಕ ಪರಿಸ್ಥಿತಿಯನ್ನು ನಿಯಂತ್ರಿಸಲಿ ಎಂದು ಸಲಹೆ ನೀಡಿದ್ದಾರೆ.

ಮಣಿಪುರ ಹಿಂಸಾಚಾರವನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಸರಣಿ ಟ್ವೀಟ್‌ಗಳ ಮೂಲಕ ಕೆಣಕಿರುವ ದಿನೇಶ್‌ ಗುಂಡೂರಾವ್‌ ಅವರು, ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಿದ ದಿನ ಮೋದಿ ಅವರು ರಾಜ್ಯದಲ್ಲಿ ರೋಡ್‌ ಶೋ (Modi Road Show in Bangalore) ಮಾಡುತ್ತಿದ್ದರು ಎನ್ನುವುದನ್ನು ಹಿಂದಿನ ಟ್ವೀಟ್‌ನಲ್ಲಿ ಹೇಳಿದ್ದರು.

ಒಂದು ವೇಳೆ ಈ ರೀತಿಯ ಹಿಂಸಾಚಾರ ಬಿಜೆಪಿ ಆಡಳಿತ ಇರುವ ರಾಜ್ಯವಲ್ಲದೆ ಬೇರೆ ಕಡೆ ಆಗಿದ್ದರೆ ಪ್ರಧಾನಿ ಮೋದಿ ಅವರು ಹೇಗೆ ಪ್ರತಿಕ್ರಿಯಿಸುತ್ತಿದ್ದರು ಎಂಬುದನ್ನೂ ಅವರು ಪ್ರಶ್ನೆ ಮಾಡಿದ್ದಾರೆ.

ಟ್ವೀಟ್‌ನಲ್ಲಿ ದಿನೇಶ್‌ ಗುಂಡೂ ರಾವ್‌ ಹೇಳಿದ್ದೇನು?

  1. ಮಣಿಪುರದಲ್ಲಿ 3 ತಿಂಗಳಿಂದ ಹಿಂಸಾಚಾರ ನಡೆಯುತ್ತಿದೆ. ಸಜೀವ ದಹನ,ಮಹಿಳೆಯರ ನಗ್ನ ಮೆರವಣಿಗೆಯಂತಹ ಭೀಭತ್ಸ್ತ ಕೃತ್ಯಗಳು ಸರಣಿ ರೂಪದಲ್ಲಿ ನಡೆಯುತ್ತಿವೆ.‌ ಕೊಲೆ ಅತ್ಯಾಚಾರಗಳಿಗೆ ಲೆಕ್ಕವೇ ಇಲ್ಲ.‌ ಮಣಿಪುರ ಭಾರತದಲ್ಲಿದಿಯೇ ಅಥವಾ ಅಫ್ಘಾನಿಸ್ತಾನದಲ್ಲಿದೆಯೇ? ಗಲಭೆ ನಿಯಂತ್ರಿಸಲು ಪ್ರಧಾನಿಯವರಿಗೆ ಸಾಧ್ಯವಿಲ್ಲವೇ?
  2. ಮಣಿಪುರ ಹಿಂಸಾಚಾರವನ್ನು ಕಳೆದ 3 ತಿಂಗಳಿಂದ ಜೀವಂತವಾಗಿ ಬಿಟ್ಟಿರುವುದು ಕೇಂದ್ರದ ಅಸಹಾಯಕತೆಗಿಂತ ಹೆಚ್ಚಾಗಿ ಹೇಡಿತನ ತೋರಿಸುತ್ತಿದೆ‌. ಮಣಿಪುರದ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಅಲ್ಲಿನ BJP ಸರ್ಕಾರ ಹಾಗೂ ಕೇಂದ್ರ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ. ಮೋದಿಯವರ 56 ಇಂಚಿನ ಎದೆಯಲ್ಲಿ ಹಿಂಸಾಚಾರ ಸದ್ದಡಗಿಸುವ ಎದೆಗಾರಿಕೆ ಯಾಕಿಲ್ಲ?
  3. ಮಣಿಪುರದಲ್ಲಿ BJPಯಲ್ಲದೇ ಬೇರೆ ಪಕ್ಷದ ಸರ್ಕಾರವಿದ್ದಿದರೆ ಕೇಂದ್ರ ಸುಮ್ಮನಿರುತಿತ್ತೆ? ಮಣಿಪುರ ದೊಂಬಿ ಹಾಗೂ ಕೊಲೆಗಡುಕರ ರಾಜ್ಯವಾಗಲು ಅಲ್ಲಿನ ಸರ್ಕಾರದ ನಿಷ್ಕ್ರಿಯತೆ ಅತಿ ಮುಖ್ಯ ಕಾರಣ. ಕೇಂದ್ರ ಈ ಕೂಡಲೇ ಸಂವಿಧಾನದ 356ನೇ ವಿಧಿಯ ಅನ್ವಯ ಅಲ್ಲಿಯ ಸರ್ಕಾರವನ್ನು ವಜಾ ಮಾಡಲಿ. ರಾಷ್ಟ್ರಪತಿ ಆಳ್ವಿಕೆಯ ಮೂಲಕ ಪರಿಸ್ಥಿತಿ ನಿಯಂತ್ರಿಸಲಿ.
  4. ಮಣಿಪುರದಲ್ಲಿ ಮಹಿಳೆಯರಿಬ್ಬರನ್ನು ನಗ್ನಗೊಳಿಸಿ ಮೆರವಣಿಗೆ ಮಾಡಿರುವ ಕೃತ್ಯಕ್ಕೆ ಸುಪ್ರೀಂ ಕೋರ್ಟ್ ಹಾಕಿರುವ ಛಿಮಾರಿ, ಕೇಂದ್ರದ ನಿಷ್ಕ್ರಿಯತೆಗೆ ಹಿಡಿದ ಕೈಗನ್ನಡಿ. ಈ ಹೇಯ ಕೃತ್ಯ ನಡೆಯಲು ಅಲ್ಲಿನ ರಾಜ್ಯ ಸರ್ಕಾರದ ಎಷ್ಟು ಪಾಲಿದೆಯೋ ಕೇಂದ್ರದ ಪಾಲೂ ಅಷ್ಟೇ ಇದೆ. ಮಣಿಪುರದ ಗಲಭೆಯನ್ನು ಆರಂಭದಲ್ಲೇ ನಿಯಂತ್ರಿಸಿದ್ದರೆ ಈ ಘಟನೆ ನಡೆಯುತಿತ್ತೆ?
  5. ಮಣಿಪುರದಲ್ಲಿ ಮಹಿಳೆಯರನ್ನು ವಿವಸ್ತ್ರಗೊಳಿಸಿದ್ದು ಮೇ 4 ರಂದು. ಆಗ ನಮ್ಮ ಘನವೆತ್ತ ಪ್ರಧಾನಿ ಮೋದಿ ರೋಡ್ ಶೋ ಮಾಡಲು ಕರ್ನಾಟಕದಲ್ಲಿದ್ದರು. ಇದಕ್ಕೂ ಮೊದಲೇ ಮಣಿಪುರದಲ್ಲಿ ಗಲಭೆ ಪ್ರಾರಂಭವಾಗಿತ್ತು. ಮೋದಿಯವರಿಗೆ ಚುನಾವಣಾ ಪ್ರಚಾರದಲ್ಲಿ ಇದ್ದ ಆಸಕ್ತಿ ಮಣಿಪುರದ ಗಲಭೆ ಬಗ್ಗೆ ಇದ್ದಿದ್ದರೆ ಇಂತಹ ಹೇಯ ಕೃತ್ಯ ತಡೆಯಬಹುದಿತ್ತಲ್ಲವೆ.?

ಇದನ್ನೂ ಓದಿ: Vivek Agnihotri: ಗಂಡಸೇ ಆಗಿದ್ದರೆ ʻಮಣಿಪುರ ಫೈಲ್ಸ್ʼ ಸಿನಿಮಾ ಮಾಡಿ; ವಿವೇಕ್​ ಅಗ್ನಿಹೋತ್ರಿಗೆ ಚಾಲೆಂಜ್‌!

Exit mobile version