ಬೆಂಗಳೂರು: ಬೆಂಗಳೂರಿನ ಗಾಂಧಿನಗರದ ಅಂಗನವಾಡಿಗಳಿಗೆ (Anganwadi in Gandhinagar) ಈಗ ಹೈಟೆಕ್ ಟಚ್ ಸಿಗುತ್ತಿದೆ. ಬಡ ಮಕ್ಕಳ ನಲಿ ಕಲಿ ತಾಣವಾಗಿರುವ ಇಲ್ಲಿನ ಅಂಗನವಾಡಿಗಳೀಗ ಯಾವ ಖಾಸಗಿ ನರ್ಸರಿಗಳಿಗೆ ಕಮ್ಮಿ ಇಲ್ಲದಂತೆ ಕಂಗೊಳಿಸಲು ಸಜ್ಜಾಗುತ್ತಿವೆ. ಚಿಣ್ಣರ ಅಂಗನವಾಡಿಗಳಿಗೆ ಒಂದು ಚೆಂದದ ರೂಪ ನೀಡಲು ಮುಂದಾಗಲಾಗಿದೆ. ಈ ಭಾಗದ 85 ಅಂಗನವಾಡಿಗಳಿಗೆ ಹೊಸ ರೂಪ ದೊರೆಯಲಿದ್ದು, ಪ್ರತಿಯೊಂದಕ್ಕೂ ತಲಾ 2 ಲಕ್ಷ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಹಾಗಂತ ಇದು ಯಾವುದೇ ಸರ್ಕಾರಿ ಯೋಜನೆ ಅಲ್ಲ. ರಾಜ್ಯದ ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಫೌಂಡೇಶನ್ (R Gundu Rao Foundation) ಈ ಕೆಲಸವನ್ನು ಮಾಡುತ್ತಿದೆ. ಈ ಹೈಟೆಕ್ ಪ್ಲ್ಯಾನ್ ಹಿಂದೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಅವರ ಪುತ್ರಿ ಅನನ್ಯ ರಾವ್ (Ananya Rao) ಇದ್ದಾರೆ.
ಗಾಂಧಿನಗರದ 85 ಅಂಗನವಾಡಿಗಳನ್ನು ಆರ್. ಗುಂಡೂರಾವ್ ಫೌಂಡೇಶನ್ ವತಿಯಿಂದ ಗುರುತಿಸಲಾಗಿದ್ದು, ಪ್ರತಿಯೊಂದು ಅಂಗನವಾಡಿಗಳನ್ನು ಸುವ್ಯವಸ್ಥೆಗೆ ತರಲು ನಿರ್ಧರಿಸಲಾಗಿದೆ. ದುಸ್ಥಿತಿಯಲ್ಲಿರುವ ಅಂಗನವಾಡಿಗಳನ್ನು ಆದ್ಯತೆಯ ಮೇರೆಗೆ ಮೊದಲು ಪುನಶ್ಚೇತನಗೊಳಿಸಲು ಯೋಜಿಸಲಾಗಿದೆ. ಅದಕ್ಕಾಗಿ ಪ್ರತಿ ಅಂಗನವಾಡಿಗೆ ತಗುಲುವ 2 ಲಕ್ಷ ರೂಪಾಯಿ ವರೆಗಿನ ವೆಚ್ಚವನ್ನು ಆರ್. ಗುಂಡೂರಾವ್ ಫೌಂಡೇಶನ್ ವತಿಯಿಂದಲೇ ಭರಿಸಲು ಅನನ್ಯ ರಾವ್ ಮುಂದಾಗಿದ್ದಾರೆ. ಇವುಗಳಿಗೆ ಕಾಯಕಲ್ಪ ನೀಡಲು ಯೋಜನೆ ರೂಪಿಸಿದ್ದಾರೆ.
ಇದನ್ನೂ ಓದಿ: Chandrayaan- 3 : ಚಂದ್ರಯಾನ ಕುತೂಹಲಿಗಳು ತಿಳಿಯಲೇಬೇಕಾದ ಸಂಗತಿಗಳಿವು; ವಿಜ್ಞಾನಿ ಗುರುಪ್ರಸಾದ್ Exclusive Details
ಪ್ರಸ್ತುತ ಆರ್. ಗುಂಡೂರಾವ್ ಫೌಂಡೇಶನ್ ಹೊಣೆ ಹೊತ್ತಿರುವ ಅನನ್ಯ ರಾವ್, ಅಂಗನವಾಡಿಗಳಿಗೆ ಆಸರೆಯಾಗಬೇಕು ಎಂಬ ಆಲೋಚನೆಯನ್ನು ತಂದೆ ದಿನೇಶ್ ಗುಂಡೂರಾವ್ ಬಳಿ ವ್ಯಕ್ತಪಡಿಸಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಅವರು, ಒಂದು ಅಂಗನವಾಡಿಯನ್ನು ಮಾದರಿಯಾಗಿ ಸಿದ್ಧಪಡಿಸಿದರು. ಅದನ್ನು ಆರ್. ಗುಂಡೂರಾವ್ ಅವರ 30ನೇ ಪುಣ್ಯಸ್ಮರಣೆಯ ಅಂಗವಾಗಿ ದಿನೇಶ್ ಗುಂಡೂರಾವ್ ಅವರಿಂದ ಲೋಕಾರ್ಪಣೆಗೊಳಿಸಿ, ತಮ್ಮ ಮುಂದಿನ ಹಾದಿಯನ್ನು ತೆರೆದಿಟ್ಟಿದ್ದಾರೆ.
ಚಿಣ್ಣರ ಅಂಗಳ ಅಂಗನವಾಡಿಗಳು ಚೆಂದವಾಗಿರಬೇಕು. ಅಂಗನವಾಡಿಗಳು ಉತ್ತಮಗೊಂಡಷ್ಟೂ, ಮಕ್ಕಳಲ್ಲಿ ಆರಂಭದಲ್ಲಿಯೇ ಕಲಿಕಾ ಮನೋಭಾವವನ್ನು ಬೆಳೆಸಬಹುದು ಎಂಬ ಅಭಿಪ್ರಾಯವನ್ನು ಅನನ್ಯ ಅವರು ದಿನೇಶ್ ಗುಂಡೂರಾವ್ ಅವರ ಬಳಿ ವ್ಯಕ್ತಪಡಿಸಿದ್ದರು.
ಅಲ್ಲದೆ, ಈ ಕಾರ್ಯಕ್ಕೆ ರಾಜ್ಯದ ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಕೂಡ ಪ್ರೇರಣೆಯಾಗಿದ್ದಾರೆ. ಸಾಮಾನ್ಯ ಶಿಕ್ಷಕ ಕುಟುಂಬದಲ್ಲಿ ಜನಿಸಿದ್ದ ಆರ್. ಗುಂಡೂರಾವ್ ಶಿಕ್ಷಣದ ವಿಚಾರಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದರು. ಅವರ ಸ್ಮರಣೆಯಲ್ಲಿ ಅಂಗನವಾಡಿಗಳಿಂದಲೇ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಅವರ ಹೆಸರಿನ ಫೌಂಡೇಷನ್‌ನಿಂದ ನೆರವೇರಿಸಬೇಕು ಎಂಬ ಅನನ್ಯ ಅವರ ಆಶಯಕ್ಕೆ ಸಚಿವ ದಿನೇಶ್ ಗುಂಡೂರಾವ್ ಬೆನ್ನುತಟ್ಟಿ ಬೆಂಬಲಿಸಿದ್ದಾರೆ.
ಸಿಗುತ್ತಿದೆ ಹೈಟೆಕ್ ಟಚ್
ಅಂಗನವಾಡಿಗಳ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳುವುದರ ಜತೆಗೆ, ಗೋಡೆಗಳಿಗೆ ಪೇಂಟಿಂಗ್, ಚೆಂದದ ಚಿತ್ತಾರಗಳನ್ನು ಬಿಡಿಸಲು ಸಲಹೆ ನೀಡಿದ್ದಾರೆ. ಪ್ರತಿ ಅಂಗನವಾಡಿಗಳಿಗೂ ಅಗತ್ಯ ಪರಿಕರಗಳು, ಆಟೋಪಕರಣಗಳನ್ನು ಫೌಂಡೇಶನ್ ವತಿಯಿಂದ ನೀಡಲು ದಿನೇಶ್ ಗುಂಡೂರಾವ್ ಸೂಚಿಸಿದ್ದಾರೆ.
ಇದನ್ನೂ ಓದಿ: India Post GDS Recruitment : 30,041 ಗ್ರಾಮೀಣ ಅಂಚೆ ಸೇವಕ ಹುದ್ದೆಗೆ ಅರ್ಜಿ ಸಲ್ಲಿಸಲು ಇಂದು ಕೊನೇ ದಿನ
ಅಂಗನವಾಡಿ ಶಿಕ್ಷಕರಿಗೂ ತರಬೇತಿ ನೀಡಲು ಚಿಂತನೆ
ವಿಶೇಷವಾಗಿ ಸೃಜನಾತ್ಮಕ ಗುಣಮಟ್ಟದ ಶಿಕ್ಷಣ ಅಗತ್ಯ. ಅಂಗನವಾಡಿಗಳಿಗೆ 15ರಿಂದ 20 ಮಕ್ಕಳು ಬಂದರೂ ಸಾಕು. ಹೆಚ್ಚಿನವರು ಬಡ ಕುಟುಂಬಗಳಿಂದ ಬಂದವರಾಗಿದ್ದು, ಗುಣಮಟ್ಟದ ಶಿಕ್ಷಣದಿಂದ ಹಿಂದುಳಿಯಬಾರದು. ವಿಭಿನ್ನ ತಂತ್ರಗಳ ಮೂಲಕ ಹೆಸರಾಂತ ಶಿಕ್ಷಣ ಸಂಸ್ಥೆಗಳಲ್ಲಿ ಸಿಗುವ ಶಿಕ್ಷಣ ಬಡ ಮಕ್ಕಳಿಗೂ ಸಿಗಬೇಕು. ಈ ನಿಟ್ಟಿನಲ್ಲಿ ಅಗತ್ಯ ಪಾಠೋಪಕರಣಗಳನ್ನು ನೀಡುವುದರ ಜತೆಗೆ, ಶಿಕ್ಷಕರಿಗೂ ತರಬೇತಿ ನೀಡುವಂತೆ ದಿನೇಶ್ ಗುಂಡೂರಾವ್ ಅವರು ಫೌಂಡೇಷನ್‌ಗೆ ಸಲಹೆ ನೀಡಿದ್ದಾರೆ. ನುರಿತ ತಜ್ಞರನ್ನ ಕರೆಸಿ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ಕಾರ್ಯಕ್ರಮಗಳನ್ನೂ ಆರ್. ಗುಂಡೂರಾವ್ ಫೌಂಡೇಶನ್ ವತಿಯಿಂದ ಹಮ್ಮಿಕೊಳ್ಳಲು ಸೂಚಿಸಿದ್ದಾರೆ.