Site icon Vistara News

ದಿನೇಶ್ ಗುಂಡೂರಾವ್ ಫೋನ್ ಇನ್; 108 ಆಂಬ್ಯುಲೆನ್ಸ್‌ಗೆ ಕಾಯಕಲ್ಪ, ಸರ್ಕಾರಿ ಆಸ್ಪತ್ರೆಗಳಿಗೆ ಸರ್ಜರಿ

Dinesh Gundu Rao

#image_title

ಬೆಂಗಳೂರು: ನಿಖರ, ಜನಪರ ಘೋಷವಾಕ್ಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ವಿಸ್ತಾರ ನ್ಯೂಸ್‌, ಸರ್ಕಾರವನ್ನು ಜನರ ಜತೆ ಬೆಸೆಯುವ ಮೂಲಕ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ʼಹಲೋ ಸಚಿವರೇ’ ಎಂಬ ವಿನೂತನ ಕಾರ್ಯಕ್ರಮ ಆರಂಭಿಸಿದೆ. ಇದರ ಭಾಗವಾಗಿ ಮೊದಲ ಕಾರ್ಯಕ್ರಮದಲ್ಲಿ ಮಂಗಳವಾರ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ಭಾಗವಹಿಸಿ, ವೀಕ್ಷಕರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು.

ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು, ಆರೋಗ್ಯ ಇಲಾಖೆಯ ಎಲ್ಲಾ ಯೋಜನೆಗಳು ಜನರಿಗೆ ಸಿಗಬೇಕು. ಇದರಲ್ಲಿ ಕೆಲ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಾವು ಹಿಂದೆ ಇದ್ದೇವೆ. ರಾಜ್ಯದಲ್ಲಿ ಆರೋಗ್ಯ ವ್ಯವಸ್ಥೆ ಸ್ವಲ್ಪ ದುರ್ಬಲವಾಗಿದೆ. 108 ಆ್ಯಂಬುಲೆನ್ಸ್‌ಗಳ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಹೀಗಾಗಿ ಸುಲಭವಾಗಿ ಆ್ಯಂಬುಲೆನ್ಸ್‌ ಸೇವೆ ಜನರಿಗೆ ಸಿಗಲು 3 ತಿಂಗಳೊಳಗೆ ಕಾಯಕಲ್ಪ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

ಆರೋಗ್ಯ ಇಲಾಖೆಯ ಮೇಲೆ ಹೆಚ್ಚು ಕಾಳಜಿ ಇದೆ. ಸಿಎಂ ಸಿದ್ದರಾಮಯ್ಯನವರಿಗೂ ಹೆಚ್ಚಿನ ಕಾಳಜಿ ಇದೆ. ಸಾರ್ವಜನಿಕರ ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುವುದಕ್ಕೆ ಆದ್ಯತೆ ನೀಡುತ್ತೇವೆ. ಗ್ರಾಮೀಣ ಭಾಗದಲ್ಲಿ ಆರೋಗ್ಯ ವ್ಯವಸ್ಥೆ ಸದೃಢಗೊಳಿಸಬೇಕು, ತಾಲೂಕು, ಜಿಲ್ಲಾ ಮಟ್ಟದಲ್ಲೂ ಸದೃಢಗೊಳಿಸಬೇಕಾಗಿದೆ ಎಂದು ತಿಳಿಸಿದರು.

ಡಯಾಲಿಸಿಸ್ ಕೇಂದ್ರಗಳಲ್ಲಿ ಕಾರಣಾಂತರಗಳಿಂದ ಹತೋಟಿ ತಪ್ಪಿದೆ. ಇವು ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಪ್ರಾರಂಭವಾಗಿದ್ದವು. ಅಲ್ಲಿನ ಸಮಸ್ಯೆಗಳ ಬಗ್ಗೆ ಗಮನಕೊಡುತ್ತೇವೆ ಎಂದ ಸಚಿವರು, ಕಾಯಿಲೆಗಳನ್ನು ತಡೆಯಲು ಮುಂಜಾಗ್ರತೆ ಕ್ರಮ ಅಗತ್ಯ. ಜನರನ್ನು ಆಸ್ಪತ್ರೆಗೆ ಕರೆದರೆ ಬರುವುದಿಲ್ಲ, ಹೀಗಾಗಿ ಜನರ ಬಳಿಯೇ ನಾವೇ ಹೋಗಿ ಹೆಲ್ತ್‌ ಟೆಸ್ಟ್ ಮಾಡಬೇಕಾಗಿದೆ ಎಂದು ತಿಳಿಸಿದರು.

ಇಳವಾಲ ಆಸ್ಪತ್ರೆ ಸಮಸ್ಯೆಗೆ ಪರಿಹಾರ

ಇಳವಾಲ ಆಸ್ಪತ್ರೆಯಲ್ಲಿ ಪೋಸ್ಟ್‌ಮಾರ್ಟಂಗೆ ಅವಕಾಶವಿದೆ. ಆದರೆ, ಆಸ್ಪತ್ರೆಯಲ್ಲಿ ಪೋಸ್ಟ್‌ಮಾರ್ಟಂ ಮಾಡುತ್ತಿಲ್ಲವೆಂದು ವೀಕ್ಷರೊಬ್ಬರು ಕರೆ ಮಾಡಿ ದೂರು ನೀಡಿದರು. ಇದನ್ನು ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ಆರೋಗ್ಯ ಸಚಿವರು ತಿಳಿಸಿದರು.

ಉ.ಕ. ಜಿಲ್ಲೆಯಲ್ಲಿ ಮಲ್ಪಿ ಸ್ಪೆಷಾಲಿಟಿ ಆಸ್ಪತ್ರೆ?

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಪಿ ಸ್ಪೆಷಾಲಿಟಿ ಆಸ್ಪತ್ರೆ ವಿಚಾರಕ್ಕೆ ಸಚಿವರು ಪ್ರತಿಕ್ರಿಯಿಸಿ, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಗುವುದು. ರಾಜ್ಯದಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತದೆ. ಉತ್ತರ ಕರ್ನಾಟಕಕ್ಕೆ ಹೆಚ್ಚು ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ವೈದ್ಯರು ಜನೌಷಧವನ್ನೇ ಬರೆದುಕೊಡಬೇಕು

ನಮ್ಮ ಕ್ಲಿನಿಕ್‌ಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಇದ್ದಾರೆ. ಎಲ್ಲಾ ಸಮಯಕ್ಕೆ ಸಿಗುವಂತೆ ನೋಡಿಕೊಳ್ಳಬೇಕಾಗಿದೆ. ನಮ್ಮ ಕ್ಲಿನಿಕ್ ಯಶಸ್ವಿ ಮಾಡಲು ಎಲ್ಲಾ ಪ್ರಯತ್ನ ಮಾಡುತ್ತೇವೆ. ಸರ್ಕಾರ ನೀಡುವ ಜನೌಷಧವನ್ನೇ ವೈದ್ಯರು ಬರೆದುಕೊಡಬೇಕು. ತಪ್ಪಿದರೆ ನಿರ್ದಾಕ್ಷಿಣ್ಯ ಕ್ರಮ ಕ್ರಮಕೈಗೊಳ್ಳುವುದಾಗಿ ವೈದ್ಯರಿಗೆ ಆರೋಗ್ಯ ಇಲಾಖೆ ಆಯುಕ್ತ ಡಾ.ರಂದೀಪ್‌ ಎಚ್ಚರಿಕೆ ನೀಡಿದರು.

ಕಾರ್ಯಕ್ರಮದಲ್ಲಿ ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ, ರಾಷ್ಟ್ರೀಯ ಹೆಲ್ತ್ ಮಿಷನ್ ಎಂಡಿ ನವೀನ್ ಭಟ್, ಆರೋಗ್ಯ ಇಲಾಖೆಯ ಆಯುಕ್ತ ಡಾ.ರಂದೀಪ್ ಇದ್ದರು.

ಪ್ರತಿ ಮಂಗಳವಾರ ಇರಲಿದೆ ಕಾರ್ಯಕ್ರಮ

ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲು ಎಲ್ಲ ಇಲಾಖೆಗಳ ಸಚಿವರು, ಶಾಸಕರು ಮತ್ತು ಜನರ ನಡುವೆ ಕೊಂಡಿಯಾಗಿ ವೇದಿಕೆ ಕಲ್ಪಿಸಲು ವಿಸ್ತಾರ ನ್ಯೂಸ್ ʼಹಲೋ ಸಚಿವರೇʼ ಕಾರ್ಯಕ್ರಮ ಆರಂಭಿಸಿದೆ. ಪ್ರತಿ ಮಂಗಳವಾರ 5ರಿಂದ 6ರವೆರೆಗೆ ನಡೆಯುವ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಭಾಗವಹಿಸಿ, ಜನರ ಸಮಸ್ಯೆಗಳನ್ನು ಆಲಿಸಲಿದ್ದಾರೆ.‌

Exit mobile version