Site icon Vistara News

Road Accident : ತುಮಕೂರಲ್ಲಿ ಅಪಘಾತಕ್ಕೆ ವಿಕಲಚೇತನ ಬಲಿ; ಶಿರಸಿಯಲ್ಲಿ ಖಾಸಗಿ-ಸಾರಿಗೆ ಬಸ್‌ ಡಿಕ್ಕಿ

Sirsi accident

ತುಮಕೂರು/ಶಿರಸಿ: ತುಮಕೂರು ನಗರದಲ್ಲಿ ಭೀಕರ ರಸ್ತೆ ಅಪಘಾತಕ್ಕೆ (Road Accident) ವಿಕಲಚೇತನರೊಬ್ಬರು ಮೃತಪಟ್ಟಿದ್ದರೆ, ಶಿರಸಿ-ಹುಬ್ಬಳ್ಳಿ ಹೆದ್ದಾರಿ (Sirsi and Hubballi Highway) ರಸ್ತೆಯ ಇಸಳೂರಿನ ಬಳಿ ಖಾಸಗಿ-ಸಾರಿಗೆ ಸಂಸ್ಥೆ ಬಸ್‌ಗಳ ನಡುವೆ ಮುಖಾಮುಖಿ ಡಿಕ್ಕಿ (Sirsi accident) ಸಂಭವಿಸಿ ಹತ್ತಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.

ತುಮಕೂರು ನಗರದಲ್ಲಿ ಚಂದ್ರಶೇಖರ್ (65) ಎಂಬುವವರು ತಮ್ಮ ತ್ರಿಚಕ್ರ ವಾಹನದಲ್ಲಿ ಹೋಗುತ್ತಿದ್ದರು. ಈ ವೇಳೆ ವೇಗವಾಗಿ ಬಂದ ನೀರಿನ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಅಪಘಾತದಿಂದ ತೀವ್ರವಾಗಿ ಗಾಯಗೊಂಡ ಚಂದ್ರಶೇಖರ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಗರದ ಭದ್ರಮ್ಮ ವೃತ್ತದ ಬಳಿ ಘಟನೆ ನಡೆದಿದೆ.

ಸ್ಥಳಕ್ಕೆ ತುಮಕೂರು ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ. ಅಲ್ಲದೆ, ಚಂದ್ರಶೇಖರ್‌ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದು, ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಪೊಲೀಸ್‌ ಇಲಾಖೆ ಹೆಸರು ಬಳಸಿಯೇ ವ್ಯಾಪಾರಿಯ ಕಿಡ್ನ್ಯಾಪ್‌; ಮುಂದಾಗಿದ್ದು ರೋಚಕ!

ಖಾಸಗಿ-ಸಾರಿಗೆ ಸಂಸ್ಥೆ ಬಸ್‌ಗಳ ಮುಖಾಮುಖಿ ಡಿಕ್ಕಿ

ಶಿರಸಿ: ಶಿರಸಿ-ಹುಬ್ಬಳ್ಳಿ ಹೆದ್ದಾರಿ ರಸ್ತೆಯ ಇಸಳೂರಿನ ಬಳಿ ಖಾಸಗಿ-ಸಾರಿಗೆ ಸಂಸ್ಥೆ ಬಸ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಹತ್ತಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿವೆ.

ಕೆಎಸ್ಆರ್‌ಟಿಸಿ ಬಸ್ ಶಿರಸಿಯಿಂದ ಅಕ್ಕಿಆಲೂರಿಗೆ ತೆರಳುತ್ತಿತ್ತು. ಈ ವೇಳೆ ಎದುರಿನಿಂದ ಖಾಸಗಿ ಬಸ್‌ ನಡುವೆ ಡಿಕ್ಕಿ ಸಂಭವಿಸಿದೆ. ಇದರಿಂದ ಬಸ್‌ನೊಳಗೆ ಇದ್ದ ಪ್ರಯಾಣಿಕರಿಗೆ ಗಾಯಗಳಾಗಿವೆ. ಅಲ್ಲದೆ, ಚಾಲಕ ಬಸ್‌ನಲ್ಲಿ ಸಿಲುಕಿದ್ದು, ಚಾಲಕನನ್ನು ಹೊರ ತೆಗೆಯಲು ಸ್ಥಳೀಯರು ಹರಸಾಹಸಪಟ್ಟಿದ್ದಾರೆ.

ಗಾಯಾಳುಗಳನ್ನು ಶಿರಸಿ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಎರಡು ಬೈಕ್‌ ಡಿಕ್ಕಿ; ತಂದೆ, ಮಗಳ ಸಾವು

ಕೂಡ್ಲಿಗಿ: ಎರಡು ಬೈಕುಗಳು (Bikes) ಪರಸ್ಪರ ಡಿಕ್ಕಿಯಾಗಿ ತಂದೆ, ಮಗಳು ಮೃತಪಟ್ಟ ಘಟನೆಯು ತಾಲೂಕಿನ ಗುಡೇಕೋಟೆ ಕೆರೆ ಏರಿ ಮೇಲೆ ಶನಿವಾರ ಸಂಜೆ ಜರುಗಿದೆ. ಮೃತರನ್ನು ತಾಲೂಕಿನ ಯರ‍್ರೋಬಯ್ಯನಹಟ್ಟಿಯ ಗೋವಿಂದ (30) ಹಾಗೂ ಇವರ ಮಗಳು ಖುಷಿ (3) ಎಂದು ಗುರುತಿಸಲಾಗಿದೆ.

ಗೋವಿಂದ ತನ್ನ ಪತ್ನಿ ಹಾಗೂ ಮಗಳೊಂದಿಗೆ ಗುಡೇಕೋಟೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂಜೆ ತನ್ನ ಊರು ಯರ‍್ರೋಬಯ್ಯನಹಟ್ಟಿ ಗ್ರಾಮಕ್ಕೆ ಹೊರಟಿದ್ದರು. ಈ ವೇಳೆ ಕೆರೆ ಏರಿ ಮೇಲೆ ಗೋವಿಂದ ಅವರ ಬೈಕ್‌ ಹಾಗೂ ಎದುರಿನಿಂದ ಬಂದ ಬಳ್ಳಾರಿ ಸಮೀಪದ ಸಿಂದುವಾಳ ಗ್ರಾಮದ ರಾಘವೇಂದ್ರ ಅವರ ಬೈಕ್‌ಗಳ ಮಧ್ಯೆ ಡಿಕ್ಕಿಯಾಗಿವೆ.

ಇದರಿಂದ ಗೋವಿಂದ, ಆತನ ಪತ್ನಿ, ಮಗಳು ಮತ್ತು ಮತ್ತೊಂದು ಬೈಕಿನಲ್ಲಿದ್ದ ರಾಘವೇಂದ್ರ ತೀವ್ರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಗಾಯಾಳುಗಳನ್ನು ಗುಡೇಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಗಿತ್ತು. ಆದರೆ, ಅಷ್ಟರಲ್ಲಿ ಖುಷಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ಖಚಿತಪಡಿಸಿದರು.

ಇದನ್ನೂ ಓದಿ: Viral Video: ಯುವತಿಯನ್ನು ಚುಡಾಯಿಸಿದ್ದಕ್ಕೆ ಬೆಂಗಳೂರು ಪಬ್‌ನಲ್ಲಿ ಗಲಾಟೆ; ಅರೆನಗ್ನ ಸ್ಥಿತಿಯಲ್ಲಿ ಜಗಳ!

ಉಳಿದ ಮೂವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್‌ಗೆ ಕಳುಹಿಸಲಾಗಿತ್ತು. ಆದರೆ, ತೀವ್ರವಾಗಿ ಗಾಯಗೊಂಡಿದ್ದ ಗೋವಿಂದ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ. ಮೃತ ಗೋಂವಿದ ಅವರ ಪತ್ನಿ ಮಲ್ಲಮ್ಮ ಹಾಗೂ ಸಿಂದುವಾಳ ಗ್ರಾಮದ ರಾಘವೇಂದ್ರ ಅವರು ವಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Exit mobile version