ಬೆಂಗಳೂರು: ಮಳೆ ಪರಿಹಾರಧನ ನೀಡುವಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಾರತಮ್ಯ ಮಾಡಿದ್ದಾರೆ ಎಂದು ರಾಜ್ಯದ ವಿವಿಧ ಜಿಲ್ಲೆಗಳ ಜನ ಹಾಗೂ ಜನಪ್ರತಿನಿಧಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ. ಮಳೆಯಿಂದ(Rain News) ತೀವ್ರ ಸಂಕಷ್ಟಕ್ಕೀಡಾದ ಜಿಲ್ಲೆಗಳ ಪೈಕಿ 21 ಜಿಲ್ಲೆಗಳಿಗೆ ಮಾತ್ರ ರಾಜ್ಯ ಸರ್ಕಾರ ಪರಿಹಾರ ಬಿಡುಗಡೆ ಮಾಡಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
ಕೊಡಗು, ರಾಮನಗರ, ವಿಜಯಪುರ ಸೇರಿದಂತೆ ಹಲವು ಜಿಲ್ಲೆಗಳ ಜನರು ತಮಗೆ ಮಳೆ ಪರಿಹಾರ ಹಣದ ಹಂಚಿಕೆಯಲ್ಲಿ ತಾರತಮ್ಯ ಧೋರಣೆ ಅನುಸರಿಸಲಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಕೊಡಗಿನ ನಾಗರಿಕರು, ವಿಜಯಪುರ ಜಿಲ್ಲೆಯ ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ್, ರಾಮನಗರದ ಜಿಲ್ಲೆಯ ಮಾಗಡಿ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಡಗಿನ ಬಗ್ಗೆ ತಾರತಮ್ಯ ದೋರಣೆ
ಮಡಿಕೇರಿ: ಮಳೆಯಿಂದ ಸಂಕಷ್ಟಕ್ಕೀಡಾದ ಜಿಲ್ಲೆಗಳ ಪೈಕಿ ಕೊಡಗು ಜಿಲ್ಲೆಯ ಹೆಸರು ಕಾಣದೆ ಇರುವುದು ಜಿಲ್ಲೆಯ ಜನರ ಕಣ್ಣು ಕೆಂಪಾಗುವಂತೆ ಮಾಡಿದೆ. ಹೀಗಾಗಿ ಕೊಡಗನ್ನು ಕಡೆಗಣಿಸದ ಸಿಎಂ, ಕೊಡಗಿನ ಬಗ್ಗೆ ತಾರತಮ್ಯ ದೋರಣೆ ತೋರುತ್ತಿರುವ ಸಿ.ಎಂ ಎಂದು ಜಿಲ್ಲೆಯ ಜನ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಹಾಗೂ ಶಾಸಕರು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ | Rain News | ಕೊಡಗಿನಲ್ಲಿ ಮಳೆಯ ಅಬ್ಬರ : ಹಲವೆಡೆ ಭೂಕುಸಿತ, ಸರ್ಕಾರದ ವಿರುದ್ಧ ಆಕ್ರೋಶ
ತಾರತಮ್ಯ ಧೋರಣೆಯಾಗಿಲ್ಲ
ಪ್ರಾಕೃತಿಕ ವಿಕೋಪ ಪರಿಹಾರ ನಿಧಿ ಹಂಚಿಕೆಯಲ್ಲಿ ಕೊಡಗು ಜಿಲ್ಲೆಗೆ ತಾರತಮ್ಯ ಆರೋಪದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಪ್ರತಿಕ್ರಿಯೆ ನೀಡಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಈಗಾಗಲೇ 35 ಕೋಟಿ ರೂ. ನಿಧಿ ಇದೆ. ರಾಜ್ಯ ಸರ್ಕಾರ ಈಗ ಬಿಡುಗಡೆ ಮಾಡಿರುವುದು ತಕ್ಷಣದ ಪರಿಹಾರ ಕ್ರಮಗಳಿಗೆ ಮಾತ್ರ. ಹತ್ತು ಕೋಟಿ ರೂ.ಗಳಿಗಿಂತ ಕಡಿಮೆ ನಿಧಿ ಇರುವ ಜಿಲ್ಲೆಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಕೊಡಗು ಜಿಲ್ಲೆಗೆ ಯಾವುದೇ ಭೇದಭಾವ ಮಾಡಿಲ್ಲ. ಈಗ ಬಿಡುಗಡೆಯಾಗಿರುವುದು ಶಾಶ್ವತ ಪರಿಹಾರ ನಿಧಿಯಲ್ಲ, ಸಾರ್ವಜನಿಕರು ಯಾವುದೇ ಗೊಂದಲಕ್ಕೊಳಗಾಗುವುದು ಬೇಡ ಎಂದು ತಿಳಿಸಿದ್ದಾರೆ.
ಸರ್ಕಾರದ ನಿರ್ಲಕ್ಷ್ಯವಿಲ್ಲ
ಕೊಡಗಿನ ವಿಷಯದಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತಳೆದಿಲ್ಲ. ಈಗಾಗಲೇ ಮಡಿಕೇರಿ ತಾಲೂಕಿನ ಹಲವು ಗ್ರಾಮ ಪಂಚಾಯಿತಿಗಳಿಗೆ ತೆರಳಿ ಮಳೆಹಾನಿ ಪರಿಶೀಲನೆ ನಡೆಸಲಾಗಿದೆ. ಮನೆ ಹಾನಿಯಾದವರಿಗೆ ಪರಿಹಾರ ನೀಡುವ ಕೆಲಸವಾಗಿದೆ. ಮನೆ ಸಂಪೂರ್ಣ ಹಾನಿಯಾದರೆ 5 ಲಕ್ಷ ರೂ., ಭಾಗಶಃ ಹಾನಿಯಾದರೆ 3 ಲಕ್ಷ ರೂಪಾಯಿ ನೀಡಲಾಗುತ್ತದೆ. ಪರಿಹಾರದ ವಿಷಯದ ತಾರತಮ್ಯದ ಮಾತುಗಳ ಬಗ್ಗೆ ಜನ ತಲೆಕೆಡಿಸಿಕೊಳ್ಳಬಾರದು ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.
ಕೊಡಗಿಗೆ ಅನ್ಯಾಯವಾಗಿಲ್ಲ
ಮಳೆ ಪರಿಹಾರದ ಬಗ್ಗೆ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ ಬೋಪಯ್ಯ ಪ್ರತಿಕ್ರಿಯಿಸಿ, ಮುಖ್ಯಮಂತ್ರಿ ಬಿಡುಗಡೆ ಮಾಡಿರುವುದು ಬೆಳೆ ಅಥವಾ ರಸ್ತೆ ದುರಸ್ತಿಯಂತಹ ಪರಿಹಾರದ ಹಣವಲ್ಲ. ಅವರು ತುರ್ತು ಪರಿಹಾರದ ಕಾಮಗಾರಿ, ಇತರ ಪ್ರವಾಹ ಪೀಡಿತ ಜಿಲ್ಲೆಗಳಿಗೆ ಹಣ ಬಿಡುಗಡೆ ಮಾಡಲಾಗಿದೆ. ಕೊಡಗು ಜಿಲ್ಲಾಧಿಕಾರಿ ಬಳಿ ಒಟ್ಟು 71 ಕೋಟಿ.ರೂ ತುರ್ತು ಪರಿಹಾರದ ಹಣವಿದೆ, ಅದರಲ್ಲಿ ಈಗಾಗಲೇ ಆಗಬೇಕಿರುವ ತುರ್ತು ಪರಿಹಾರಕ್ಕಾಗಿ ಮೀಸಲಿಟ್ಟ ಹಣ ಹೊರತುಪಡಿಸಿ ಇನ್ನೂ 35 ಕೋಟಿ ಬಾಕಿ ಇದೆ. ಆದ್ದರಿಂದ ಈಗ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಕೊಡಗನ್ನು ಸೇರಿಸಲಾಗಿಲ್ಲ. ಅನುದಾನ ಬಿಡುಗಡೆಯಾಗಿಲ್ಲವೆಂದು ಜಿಲ್ಲೆಯ ಜನ ನಿರಾಶರಾಗುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಲಜ್ಜೆಗೆಟ್ಟ ಸರ್ಕಾರದಿಂದ ತಾರತಮ್ಯ: ಶಾಸಕ ಎಂ.ಬಿ.ಪಾಟೀಲ್
ವಿಜಯಪುರ: ಮಳೆ ಪರಿಹಾರದ ಬಗ್ಗೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ್ ಟ್ವಿಟರ್‌ನಲ್ಲಿ “”ರಾಜ್ಯ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ 200 ಕೋಟಿ ರೂಪಾಯಿ ಅನುದಾನವನ್ನು ಡುಗಡೆ ಮಾಡಲಾಗಿದೆ. ಆದರೆ ತುರ್ತು ಪರಿಹಾರ ನೀಡುವಲ್ಲಿ ವಿಜಯಪುರಕ್ಕೆ ರಾಜ್ಯ ಸರ್ಕಾರ ತಾರತಮ್ಯ ಧೋರಣೆ ತಳೆದಿದೆ. ರಾಜ್ಯದ ವಿವಿಧ ಜಿಲ್ಲೆಗಳಿಗೆ ಅನುದಾನ ಹಂಚಿಕೆಯಾಗಿದೆ. ಆದರೆ ವಿಜಯಪುರ ಜಿಲ್ಲೆಯನ್ನು ಕೈಬಿಡಲಾಗಿದೆ. ಜಿಲ್ಲೆಯಲ್ಲಿ ನೆರೆ ಹಾವಳಿ ಮತ್ತು ಮುಂಗಾರು ಮಳೆಯಿಂದ ಜೀವ, ಜಾನುವಾರು, ಬೆಳೆ, ಮನೆ ಮತ್ತು ಸಾರ್ವಜನಿಕ ಮೂಲಸೌಲಭ್ಯ ಹಾನಿಯಾಗಿದೆʼʼ ಎಂದು ಪ್ರತಿಕ್ರಿಯಿಸಿದ್ದಾರೆ.
“”ವಿಜಯಪುರ ಜಿಲ್ಲೆಗೆ ಅಭಿವೃದ್ಧಿ ಕಾರ್ಯಗಳ ಅನುದಾನ ಬಿಡುಗಡೆ ಮಾಡುವಲ್ಲಿ ಸರ್ಕಾರ ಸದಾ ತಾರತಮ್ಯ ಮಾಡುತ್ತಿದೆ. ನೆರೆ ಹಾವಳಿಯಂತಹ ಗಂಭೀರ ವಿಷಯದಲ್ಲಿಯೂ ಲಜ್ಜೆಗೆಟ್ಟ ಸರ್ಕಾರ ತಾರತಮ್ಯ ಮಾಡಿದೆ. ಮುಖ್ಯಮಂತ್ರಿಗಳಿಗೆ, ಈ ಭಾಗದ ಮಂತ್ರಿಗಳಿಗೆ ಕಿಂಚಿತ್ತಾದರೂ ಮಾನ ಮರ್ಯಾದೆ ಇದ್ದರೆ ತಕ್ಷಣ ಡಿಸಿಯಿಂದ ಮಾಹಿತಿ ಪಡೆದು, ವಿಜಯಪುರ ಜಿಲ್ಲೆಗೂ ತುರ್ತು ಪರಿಹಾರ ಬಿಡುಗಡೆ ಮಾಡಿ, ಗೌರವ ಉಳಿಸಿಕೊಳ್ಳಬೇಕು. ಇಲ್ಲದಿದ್ದರೆ ಸಂತ್ರಸ್ತರೊಂದಿಗೆ ನಾನೇ ಬೀದಿಗಿಳಿಯಬೇಕಾಗುತ್ತದೆʼʼ ಎಂದು ಎಂ.ಬಿ.ಪಾಟೀಲ್ ಕಟು ಎಚ್ಚರಿಕೆ ನೀಡಿದ್ದಾರೆ.
ರಾಮನಗರಕ್ಕೆ ಅನುದಾನ ಹಂಚಿಕೆಯಾಗಿಲ್ಲ : ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ
ರಾಮನಗರ: ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ 200 ಕೋಟಿ ರೂ. ಪರಿಹಾರ ಹಣದಲ್ಲಿ ರಾಮನಗರಕ್ಕೆ ಅನುದಾನ ಹಂಚಿಕೆಯಾಗಿಲ್ಲ. ಸತತ ಒಂದು ವಾರದಿಂದ ಸುರಿದ ಮಳೆಗೆ ರಾಮನಗರ ಜಿಲ್ಲೆಯಲ್ಲಿ ಅಪಾರ ಹಾನಿಯಾಗಿದೆ. ಈ ಬಗ್ಗೆ ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥನಾರಾಯಣ್ ಸರ್ಕಾರದ ಗಮನ ಸೆಳೆಯಬೇಕು ಎಂದು ಮಾಗಡಿ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಒತ್ತಾಯಿಸಿದ್ದಾರೆ.
ಕಳೆದ ಒಂದು ವಾರದಿಂದಲೂ ಬಿಟ್ಟುಬಿಡದೆ ಸುರಿದ ಮಳೆಗೆ ಎಲ್ಲಾ ಕೆರೆ, ಕಟ್ಟೆ, ಡ್ಯಾಂ ಭರ್ತಿಯಾಗಿದ್ದು, ಅಪಾರ ಪ್ರಮಾಣದಲ್ಲಿ ರಸ್ತೆಗಳು ಹಾಗೂ ಬೆಳೆ ನಾಶವಾಗಿದೆ. ರಣ ಮಳೆಗೆ ಇಬ್ಬರು ಮಕ್ಕಳು ಸಹ ಬಲಿಯಾಗಿದ್ದು, ಕಂಗಾಲಾಗಿರುವ ರೈತರಿಗೆ, ಮೃತ ಕುಟುಂಬಗಳಿಗೆ ಕೂಡಲೇ ಪರಿಹಾರ ನೀಡುವಂತೆ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಇದನ್ನೂ ಓದಿ | Heavy Rain | ಮಳೆಯ ರಭಸಕ್ಕೆ ಸರ್ಕಾರಿ ಶಾಲೆಯ ಚಾವಣಿ ಕುಸಿತ, ಪಂಚಾಯಿತಿ ಕಟ್ಟದ ನೆಲಸಮ