ವಿಧಾನಸಭೆ: ಹಾಸನ ಜಿಲ್ಲೆಯ ಬೇಲೂರು ವಿಧಾನಸಭಾ ಕ್ಷೇತ್ರಕ್ಕೆ ಇಂಜಿನಿಯರಿಂಗ್ ಕಾಲೇಜು ಮಂಜೂರು ಮಾಡುವ ಕುರಿತು ಮಾತನಾಡುವಾಗ ಜೆಡಿಎಸ್ ಶಾಸಕ ಕೆ.ಎಸ್. ಲಿಂಗೇಶ್ ಅವರು, ತಾವು ಹೊಯ್ಸಳರು, ಇಡೀ ದಕ್ಷಿಣ ಭಾರತಕ್ಕೇ ನಾಯಕತ್ವ ನೀಡಿದವರು ಎಂದು ಅಬ್ಬರಿಸಿದರು.
ತಮ್ಮ ಕ್ಷೇತ್ರಕ್ಕೊಂದು ಇಂಝಿನಿಯರಿಂಗ್ ಕಾಲೇಜು ನೀಡಬೇಕು ಎಂದು ಪ್ರಶ್ನೋತ್ತರ ವೇಳೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಡಿ.ಎನ್. ಅಶ್ವತ್ಥನಾರಾಯಣ ಅವರಲ್ಲಿ ಲಿಂಗೇಶ್ ಬೇಡಿಕೆ ಇಟ್ಟರು.
ಇದಕ್ಕೆ ಮಾತನಾಡಿದ ಅಶ್ವತ್ಥನಾರಾಯಣ, ಈಗಾಗಲೆ ರಾಜ್ಯದಲ್ಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿರುವ ಸೀಟುಗಳೇ ಭರ್ತಿ ಆಗುತ್ತಿಲ್ಲ. ಹೊಸ ಕಾಲೇಜು ನೀಡಲು ಆಗುವುದಿಲ್ಲ. ಈಗಾಗಲೆ ಇರುವ ಕಾಲೇಜುಗಳ ಗುಣಮಟ್ಟ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ಇದರಿಂದ ಸಿಟ್ಟಾದ ಲಿಂಗೇಶ್, ನಾವು ಹೊಯ್ಸಳರು. ಒಂದು ಕಾಲದಲ್ಲಿ ಇಡೀ ದಕ್ಷಿಣ ಭಾರತವನ್ನೇ ತೆಕ್ಕೆಯಲ್ಲಿ ಇಟ್ಟುಕೊಂಡಿದ್ದವರು. ಇಡೀ ದಕ್ಷಿಣ ಭಾರತಕ್ಕೆ ನಾಯಕತ್ವ ನೀಡಿದವರು. ನಾವೇನು ಬೇಕಾಬಿಟ್ಟಿ ಇದ್ದೇವ? ಇಂದು ಪ್ರತಿಯೊಂದಕ್ಕೂ ಭಿಕ್ಷೆ ಬೇಡುವ ಸ್ಥಿತಿಯಿದೆ. ಏನು ಕೇಳಿದರೂ ಇಲ್ಲ ಎನ್ನುತ್ತಾರೆ. ತಾಲೂಕುಗಳಿಗೂ ಇಂಜಿಯರಿಂಗ್ ಕಾಲೇಜು ನೀಡಿದ್ದಾರೆ, ಬುಧವಾರವಷ್ಟೆ ಎಂಟು ಹೊಸ ವಿವಿ ಮಂಜೂರು ಮಾಡಿದ್ದಾರೆ. ಇದನ್ನು ಏಕೆ ನೀಡುವುದಿಲ್ಲ? ಎಂದರು?
ಇದನ್ನೂ ಓದಿ | ವಿಸ್ತಾರ Interview | ಅಪ್ರಸ್ತುತ ವ್ಯಕ್ತಿಗಳು ನೂರು ಫ್ರೀಡಂ ಮಾರ್ಚ್ ಮಾಡಿದರೂ ವೇಸ್ಟ್: ಡಾ. ಸಿ.ಎನ್. ಅಶ್ವತ್ಥನಾರಾಯಣ
ಅಶ್ವತ್ಥನಾರಾಯಣ ಅವರು ಹಿಂದೆ ಹೇಳಿದ್ದನ್ನೇ ಪುನರುಚ್ಛರಿಸಿದರು. ಈ ಸಮಯದಲ್ಲಿ ಬೇರೆ ಸದಸ್ಯರು ಮಾತನಾಡಲು ಮುಂದಾದರು. ಇದು ಬೇಲೂರು ತಾಲೂಕಿನ ವಿಚಾರ. ನಿಮಗೆ ಮಾತನಾಡಲು ನೋಡುವುದಕ್ಕೆ ನೀವೇನೂ ಚಾಲುಕ್ಯರ ನಾಡಿನಿಂದ ಬಂದವರೂ ಅಲ್ಲ ಎಂದಾಗ ಸದನದಲ್ಲಿದ್ದವರು ನಕ್ಕರು. ಲಿಂಗೇಶ್ ಅವರ ರೀತಿ ವಿಜಯನಗರ ಸಾಮ್ರಾಜ್ಯದ ಕಡೆಯವರೂ ಕೇಳುತ್ತಿದ್ದಾರೆ ಎಂದು ಹೇಳಿದ ಸ್ಪೀಕರ್, ಕೊನೆ ಪಕ್ಷ ಅವರ ಹಿನ್ನೆಲೆಯನ್ನು ನೋಡಿಯಾದರೂ ನೀವು ಕಾಲೇಜು ಮಂಜೂರು ಬಗ್ಗೆ ಯೋಚಿಸಬೇಕು ಎಂದು ಸಚಿವರಿಗೆ ತಿಳಿಸಿದರು.
ಗಂಭೀರವಾಗಿಯೇ ಉತ್ತರಿಸಿದ ಅಶ್ವತ್ಥನಾರಾಯಣ, ನಮಗೂ ಗಂಗರ ಇತಿಹಾಸ ಇದೆ. ಇಲ್ಲಿ ಯಾರಿಗೂ ಹಿನ್ನೆಲೆಗೆ ಏನೂ ಕೊರತೆ ಇಲ್ಲ. ಶಿಕ್ಷಣದ ಬಜೆಟ್ ಬಂದಾಗ ಯಾರೂ ಮಾತನ್ನೇ ಆಡುವುದಿಲ್ಲ. ಬರೀ ಬೇರೆ ವಿಚಾರಗಳನ್ನೇ ಚರ್ಚೆ ನಡೆಸುತ್ತಾರೆ ಎಂದು ಎಲ್ಲರ ವಿರುದ್ಧ ಹರಿಹಾಯ್ದರು. ಈ ಸಮಯದಲ್ಲಿ ಕೆಲಸ ಸದಸ್ಯರು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಮುಂದಾದರು.
ಇಂಜಿನಿಯರಿಂಗ್ ಕಾಲೇಜು ಆಮೇಲೆ ನೋಡೋಣ, ಈಗ ಇರುವ ಸರ್ಕಾರಿ ಕಾಲೇಜಿಗೆ ಸುಣ್ಣ ಬಣ್ಣ ಬಳಿಯಲಾದರೂ ಒಂದು ಐವತ್ತು ಲಕ್ಷ ರೂ. ನೀಡಿ ಎಂದು ಲಿಂಗೇಶ್ ಮನವಿ ಮಾಡಿದರು.
ಇದನ್ನೂ ಓದಿ | ಎಲೆಕ್ಷನ್ ಹವಾ | ಬೇಲೂರು | ಐತಿಹಾಸಿಕ ಕ್ಷೇತ್ರದಲ್ಲಿ ವೀರಶೈವ ಲಿಂಗಾಯತ ಅಭ್ಯರ್ಥಿಗೇ ಮಣೆ