Site icon Vistara News

DK Shivakumar: ಆಸ್ತಿ ತೆರಿಗೆ ವಿನಾಯಿತಿ, ದಂಡ ಕಡಿಮೆ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ: ಡಿ.ಕೆ. ಶಿವಕುಮಾರ್

DK Shivakumar

ಬೆಂಗಳೂರು: ಬೆಂಗಳೂರಲ್ಲಿ ಆಸ್ತಿ ತೆರಿಗೆ (Property Tax) ಪಾವತಿ ಕುರಿತ ನೋಟಿಸ್, ದುಬಾರಿ ದಂಡದ ವಿಚಾರವಾಗಿ ಅನೇಕ ದೂರುಗಳು ವ್ಯಕ್ತವಾಗುತ್ತಿದೆ. 30×40 ಅಳತೆಯ ನಿವೇಶನ, ಶೆಡ್ ಹೊಂದಿರುವವರಿಗೆ ಆಸ್ತಿ ತೆರಿಗೆ ವಿನಾಯಿತಿ (Tax Exemption) ಹಾಗೂ ದಂಡ ಕಡಿಮೆ ಮಾಡುವ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ನಡೆಯುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು.

ಗಾಂಧಿನಗರದ ಶಿರೂರ್ ಉದ್ಯಾನವನದಲ್ಲಿ ಮಂಗಳವಾರ ನಡೆದ “ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಡಿ.ಕೆ. ಶಿವಕುಮಾರ್, ಆಸ್ತಿ ತೆರಿಗೆ ವಿಚಾರದಲ್ಲಿ ಸಮಸ್ಯೆ ಆಗಿದೆ ಎಂಬ ಅನೇಕ ದೂರುಗಳು ಬಂದಿವೆ. ಕಾಲಮಿತಿಯೊಳಗೆ ತೆರಿಗೆ ಪಾವತಿಸಿ ಎಂದು ನೋಟಿಸ್ ಬಂದಿರುವುದರ ಬಗ್ಗೆ ಗಾಬರಿಯಾಗಬೇಡಿ. ದಂಡವನ್ನು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಮಾಡುತ್ತೇವೆ. ಈ ಕಾರ್ಯಕ್ರಮ ನಡೆದ ಎಲ್ಲ ಕ್ಷೇತ್ರಗಳಲ್ಲೂ ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಈ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ: CM Siddaramaiah: ದಲಿತ ದೌರ್ಜನ್ಯ ಪ್ರಕರಣಗಳ ಶಿಕ್ಷೆ ಪ್ರಮಾಣದಲ್ಲಿ ರಾಜ್ಯದ ಸಾಧನೆ ತೃಪ್ತಿಕರವಾಗಿಲ್ಲ: ಸಿದ್ದರಾಮಯ್ಯ

ಉಚಿತವಾಗಿ ದಾಖಲೆ ಕೊಡುತ್ತೇವೆ

2020ರಲ್ಲಿ ಜಾರಿಗೆ ಬಂದ ಆಸ್ತಿ ತೆರಿಗೆ ಕುರಿತ ಕಾಯ್ದೆಯಿಂದಾಗಿ ಜನರಿಗೆ ದುಬಾರಿ ದಂಡ ವಿಧಿಸಲಾಗುತ್ತಿದೆ. ಈಗ ಆ ಕಾನೂನಿಗೆ ತಿದ್ದುಪಡಿ ತರಬೇಕಿದೆ. ಕೆಲ ದಿನಗಳಲ್ಲಿ ಈ ತಿದ್ದುಪಡಿ ಬಗ್ಗೆ ಮಾಹಿತಿ ನೀಡಲಾಗುವುದು. ನಮ್ಮ ಸರ್ಕಾರವೇ ಸಮೀಕ್ಷೆ ಮಾಡಿಸಿ, ನಿಮ್ಮ ಮನೆ ಬಾಗಿಲಿಗೇ ನಿಮ್ಮ ಸ್ವತ್ತಿನ ದಾಖಲೆಗಳನ್ನು ಉಚಿತವಾಗಿ ತಂದು ಕೊಡಲಾಗುವುದು ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಒತ್ತಡ ತರದಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ

ಆಸ್ತಿ ತೆರಿಗೆ ಪಾವತಿ ಬಗ್ಗೆ ಜನರ ಮೇಲೆ ಒತ್ತಡ ಹೇರಬೇಡಿ ಎಂದು ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಯಾರು ಎಷ್ಟು ತೆರಿಗೆ ಕಟ್ಟುತ್ತಿದ್ದಾರೋ, ಅವರಿಂದ ಅಷ್ಟು ಕಟ್ಟಿಸಿಕೊಳ್ಳಿ. ಯಾರಾದರೂ ಹೆಚ್ಚುವರಿ ತೆರಿಗೆ ಪಾವತಿ ಮಾಡಿದ್ದರೆ ಮುಂದಿನ ವರ್ಷ ಅದನ್ನು ಸರಿದೂಗಿಸಲು ಸೂಚಿಸಿದ್ದೇನೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಎಲ್ಲರೂ ಆಸ್ತಿ ತೆರಿಗೆ ವ್ಯಾಪ್ತಿಯಲ್ಲಿ ಬರಬೇಕು

ಎಲ್ಲರೂ ಆಸ್ತಿ ತೆರಿಗೆ ವ್ಯಾಪ್ತಿಯಲ್ಲಿ ಬರಬೇಕು. ಜನರಿಗೂ ಅನುಕೂಲ ಆಗಬೇಕು, ಪಾಲಿಕೆಗೂ ಆದಾಯ ಬರಬೇಕು. ನಿಮ್ಮ ತೆರಿಗೆ ಹಣವಿಲ್ಲದೆ ಬೆಂಗಳೂರು ಅಭಿವೃದ್ಧಿ ಅಸಾಧ್ಯ. ನಾವು ಇಷ್ಟು ದಿನ ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ಧತಿ ಅಳವಡಿಸಿಕೊಂಡು ಬಂದಿದ್ದೇವೆ. ಆದರೆ ಈ ವ್ಯವಸ್ಥೆಯಲ್ಲಿ ಜನ ತಮ್ಮ ಆಸ್ತಿಗೆ ತಕ್ಕಂತೆ ತೆರಿಗೆ ಪಾವತಿ ಮಾಡುತ್ತಿಲ್ಲ. ಮೂರು ಅಂತಸ್ತಿನ ಮನೆ ಇದ್ದರೆ ಒಂದು ಅಂತಸ್ತು ಎಂದು ತೋರಿಸಿ ಕಡಿಮೆ ತೆರಿಗೆ ಕಟ್ಟುತ್ತಿದ್ದಾರೆ. ನಮ್ಮ ಸಚಿವ ರಾಮಲಿಂಗಾರೆಡ್ಡಿ ಅವರು ಈ ಬಗ್ಗೆ ಪತ್ರ ಬರೆದಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

ಅಧಿಕಾರಿಗಳು ನಿಮಗೆ ಸಹಕಾರ ನೀಡದ ಕಾರಣ ನೀವು ನಮ್ಮ ಬಳಿ ಬರುತ್ತೀರಿ. ನಿಮ್ಮ ವೈಯಕ್ತಿಕ ಸಮಸ್ಯೆ, ಏರಿಯಾ ಸಮಸ್ಯೆ ಹೊತ್ತು ತಂದಿದ್ದೀರಿ. ಎಲ್ಲರ ಸಮಸ್ಯೆಯನ್ನು ಆಲಿಸುತ್ತೇವೆ. ನಿಮ್ಮ ಅಹವಾಲುಗಳನ್ನು ನೋಂದಣಿ ಮಾಡಿಕೊಳ್ಳಿ. ನಿಮ್ಮ ಹೆಸರು, ಸಮಸ್ಯೆ ಹಾಗೂ ದೂರವಾಣಿ ಸಂಖ್ಯೆ ನಮೂದಿಸಿ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ನಿಮ್ಮನ್ನು ಪಾಲಿಕೆ ಅಧಿಕಾರಿಗಳು ಸಂರ್ಪಕಿಸುತ್ತಾರೆ

ನಿಮ್ಮ ಅಹವಾಲು ಬಗೆಹರಿಸಲು ಪ್ರತ್ಯೇಕ ತಂಡ ರಚಿಸುತ್ತೇವೆ. ನೀವು ಕೊಟ್ಟಿರುವ ಅರ್ಜಿಗಳನ್ನು ವಿಂಗಡಿಸಿ, ಅವುಗಳನ್ನು ಕಾನೂನು ವ್ಯಾಪ್ತಿಯಲ್ಲಿ ಬಗೆಹರಿಸುತ್ತೇವೆ. ನಿಮ್ಮ ದೂರವಾಣಿ ಸಂಖ್ಯೆಗೆ ಪಾಲಿಕೆ ಅಧಿಕಾರಿಗಳು ಸಂಪರ್ಕಿಸುತ್ತಾರೆ. ಸಂಚಾರ ದಟ್ಟಣೆ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. 2 ಸಾವಿರ ಕೋಟಿ ರೂ. ಮೌಲ್ಯದ ವೈಟ್ ಟ್ಯಾಪಿಂಗ್ ರಸ್ತೆಗಳ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಬೆಂಗಳೂರಿನಲ್ಲಿ ನಿತ್ಯ 55 ಲಕ್ಷ ವಾಹನ ಸಂಚಾರ ಮಾಡುತ್ತಿವೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

ತಳ್ಳುವ ಗಾಡಿಯಲ್ಲಿ ಮಾತ್ರ ಬೀದಿ ವ್ಯಾಪಾರಕ್ಕೆ ಅವಕಾಶ

ಶಾಸಕ ಅಶ್ವತ್ಥನಾರಾಯಣ ಅವರು ಆಸ್ತಿ ತೆರಿಗೆ ಮತ್ತು ಪಾದಚಾರಿ ಮಾರ್ಗ ವಿಚಾರವಾಗಿ ಗಮನ ಸೆಳೆದಿದ್ದಾರೆ. ಈ ವಿಚಾರವಾಗಿ ಹೈಕೋರ್ಟ್ ಆದೇಶ ಕೂಡ ಬಂದಿದೆ. ಆ ಆದೇಶ ಪಾಲನೆ ಆಗದಿದ್ದರೆ ಪಾಲಿಕೆ ಆಯುಕ್ತರು ಜೈಲಿಗೆ ಹೋಗಬೇಕಾಗುತ್ತದೆ. ಬೀದಿಬದಿ ವ್ಯಾಪಾರಿಗಳು ವ್ಯಾಪಾರ ಮಾಡಬಾರದು ಎಂದು ಹೇಳುವುದಿಲ್ಲ. ನೀವು ನೋಂದಣಿ ಮಾಡಿಸಿಕೊಂಡು, ತಳ್ಳುವ ಗಾಡಿಯಲ್ಲಿ ವ್ಯಾಪಾರ ಮಾಡಬೇಕು. ಪಾದಚಾರಿ ಮಾರ್ಗದಲ್ಲಿ ಅಂಗಡಿ ಹಾಕಿಕೊಂಡರೆ ಜನ ಸಾಮಾನ್ಯರು ಎಲ್ಲಿ ಓಡಾಡಬೇಕು? ಎಂದು ಡಿ.ಕೆ. ಶಿವಕುಮಾರ್ ಪ್ರಶ್ನೆ ಮಾಡಿದರು.

ಅನಧಿಕೃತ ಫ್ಲೆಕ್ಸ್ ವಿರುದ್ಧ ಪ್ರಕರಣ

ನಾವು ಅನಧಿಕೃತ ಜಾಹೀರಾತು ಫ್ಲೆಕ್ಸ್‌ಗಳನ್ನು ನಿಷೇಧ ಮಾಡಿದ್ದೇವೆ. ನನ್ನ ಮನೆ ಬಳಿ ಸೇರಿದಂತೆ ಅನೇಕ ಕಡೆಗಳಲ್ಲಿ ಹಬ್ಬ, ಹೊಸ ವರ್ಷದ ಶುಭಾಶಯಗಳ ಫ್ಲೆಕ್ಸ್‌ಗಳನ್ನು ಹಾಕಲಾಗಿದೆ. ಇವರ ವಿರುದ್ಧ ಪ್ರಕರಣ ದಾಖಲಿಸುವಂತೆ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಯಾವುದೇ ಪಕ್ಷದವರಾಗಿರಲಿ, ನನ್ನ ಫೋಟೋ ಹಾಕಿರಲಿ ಅಥವಾ ಬೇರೆಯವರ ಫೋಟೋ ಹಾಕಿರಲಿ, ಎಲ್ಲ ಅನಧಿಕೃತ ಫ್ಲೆಕ್ಸ್ ತೆರವು ಮಾಡಬೇಕು ಎಂದು ಸೂಚಿಸಿದ್ದೇನೆ. ಮುಂದೆ ಇದನ್ನು ನಿಯಂತ್ರಿಸಲು ಹೊಸ ಜಾಹೀರಾತು ನೀತಿ ತರಲಾಗುವುದು ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಕಸ ವಿಲೇವಾರಿ ಸಮಸ್ಯೆ ಬಗೆಹರಿಸಲು ನಾವು ಬದ್ಧರಾಗಿದ್ದೇವೆ. ಇದರ ಹಿಂದೆ ಮಾಫಿಯಾ ಇದೆ. ಇದನ್ನು ನಾವು ಹತೋಟಿಗೆ ತರಬೇಕಿದೆ. ನೀವು ನಿಮ್ಮ ಮನೆ ಕಸವನ್ನು ಚರಂಡಿಯಲ್ಲಿ ಹಾಕಿದರೆ ಆಗುವುದಿಲ್ಲ. ನಮ್ಮ ನಗರದಲ್ಲಿ ಕಸ ವಿಲೇವಾರಿ ಹಾಗು ಸಂಚಾರ ದಟ್ಟಣೆ ನಿಯಂತ್ರಣ ಮಾಡಿದರೆ ಎಲ್ಲವೂ ಹತೋಟಿಗೆ ಬರುತ್ತದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಬಡವರಿಗೆ ವಸತಿ ನೀಡುತ್ತೇವೆ

ಹಿಂದಿನ ಸರ್ಕಾರ ಬಡವರಿಗೆ 1 ಲಕ್ಷ ಮನೆ ಕಟ್ಟಿಕೊಡುವುದಾಗಿ ಹೇಳಿದ್ದು, ಯಾರಿಗೂ ಮನೆ ಸಿಕ್ಕಿಲ್ಲ. ಈ ವಿಚಾರವಾಗಿ ಅನೇಕರು ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗಿದ್ದು, ವಸತಿ ಹಂಚಿಕೆ ಮಾಡಲಾಗುವುದು ಎಂದು ವಸತಿ ಸಚಿವರು ಸ್ಪಷ್ಟನೆ ನೀಡಿದ್ದಾರೆ. ಕೆಲವರು ಹಣ ಕಟ್ಟಿದ್ದು, ಮತ್ತೆ ಕೆಲವರು ಹಣ ಕಟ್ಟದೆ ವಿನಾಯಿತಿ ಕೇಳುತ್ತಿದ್ದಾರೆ. ಬಡವರಿಗೆ ವಸತಿ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ. ಈ ಕಾರ್ಯಕ್ರಮದಲ್ಲಿ ವಸತಿ ಬಗ್ಗೆ ಬಂದಿರುವ ಅರ್ಜಿಗಳನ್ನು ಲೆಕ್ಕ ಹಾಕಿ ಅರ್ಹರ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಗೃಹಲಕ್ಷ್ಮಿ, ಪಿಂಚಣಿ, ಖಾತೆ ವಿಚಾರವಾಗಿ ಅನೇಕರು ಮನವಿ ಸಲ್ಲಿಸುತ್ತಿದ್ದು, ಇಂತಹ ಅರ್ಜಿಗಳ ಬಗ್ಗೆ ಸ್ಥಳದಲ್ಲೇ ಅಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಲು ಸೂಚನೆ ನೀಡಲಾಗುತ್ತಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

ಇದನ್ನೂ ಓದಿ: Karnataka Weather: ಕರಾವಳಿ, ಮಲೆನಾಡಲ್ಲಿ ಭಾರಿ ಚಳಿ; ಉತ್ತರ ಒಳನಾಡಲ್ಲೂ ತಾಪಮಾನ ಇಳಿಕೆ

ಪ್ರಧಾನಿ ನರೇಂದ್ರ ಮೋದಿ ಅವರ ರಾಜ್ಯ ಪ್ರವಾಸದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, ಅವರ ಪಕ್ಷ, ಅವರ ಕರ್ತವ್ಯ. ಅವರು ಏನಾದರೂ ಮಾಡಿಕೊಳ್ಳಲಿ. ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕೆ ಮಾಡುತ್ತಿದ್ದವರು, ಈಗ ಅವರೇ ಗ್ಯಾರಂಟಿ ಪ್ರಚಾರ ಪಡೆಯುತ್ತಿದ್ದಾರೆ ಎಂದು ಹೇಳಿದರು.

Exit mobile version