ಬೆಂಗಳೂರು: ವಿಧಾನಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ವಕ್ಫ್ ಆಸ್ತಿ (Waqf Property) ಕಬಳಿಕೆ, ಅದರ ಕುರಿತ ವರದಿ ಕುರಿತು ತೀವ್ರ ಚರ್ಚೆ, ಆರೋಪ-ಪ್ರತ್ಯಾರೋಪ, ಗಲಾಟೆ ನಡೆಯಿತು. ಅದರಲ್ಲೂ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಂತೂ ಆರೋಪಗಳ ಸುರಿಮಳೆಗೈದರು. ಇದರಿಂದ ಸದನದಲ್ಲಿ ಗಲಾಟೆ ಮತ್ತಷ್ಟು ಹೆಚ್ಚಾಯಿತು.
ವಕ್ಫ್ ಆಸ್ತಿ ಅಕ್ರಮದ ಕುರಿತು ಮಾತನಾಡಿದ ಯತ್ನಾಳ್, “ದೇಶದ್ರೋಹಿ ಕೆಲಸ ಮಾಡುತ್ತಿರುವ ಕೆಲವು ಮುಖಂಡರು ವಕ್ಫ್ ಆಸ್ತಿಯನ್ನು ಎಂಜಾಯ್ ಮಾಡುತ್ತಿದ್ದಾರೆ. ಸಾಮಾನ್ಯ ಮುಸ್ಲಿಮರಿಗೆ ಇದರಿಂದ ಲಾಭ ಆಗುತ್ತಿಲ್ಲ. ಹಾಗಾಗಿ, ವಕ್ಫ್ ಆಸ್ತಿಯನ್ನು ಕಂದಾಯ ಭೂಮಿ ಎಂದು ಘೋಷಿಸಬೇಕು. ಇದರ ಹಿಂದೆ ದೊಡ್ಡ ಹಗರಣ ನಡೆದಿದೆ. ರಾಜ್ಯದಲ್ಲಿ ಆರೇಳು ಕಳ್ಳರಿದ್ದಾರೆ. ಅಕ್ರಮದ ಕುರಿತು ಸಿಬಿಐ ತನಿಖೆಗೆ ವಹಿಸಬೇಕು ಎಂಬುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡುತ್ತೇನೆ” ಎಂದರು.
ವಕ್ಫ್ ಆಸ್ತಿ ಭ್ರಷ್ಟಾಚಾರದ್ದೂ ಚರ್ಚೆಯಾಗಲಿ: ಬೊಮ್ಮಾಯಿ
“ಶೇ.೪೦ರಷ್ಟು ಕಮಿಷನ್ ಆರೋಪದ ಕುರಿತು ಚರ್ಚಿಸಲು ನಾವು ಸಿದ್ಧರಿದ್ದೇವೆ. ಇದರಲ್ಲಿ ಯಾರ ಹೆಸರು ಬರುತ್ತದೆ ಎಂಬುದನ್ನು ಕಾದು ನೋಡಿ. ಆದರೆ, ವಕ್ಫ್ ಆಸ್ತಿಯನ್ನು ಕಬಳಿಸಲಾಗಿದೆ. ಅದನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಇದಕ್ಕಿಂತ ಭ್ರಷ್ಟಾಚಾರ ಇನ್ನೇನಿದೆ? ಇದರ ಬಗ್ಗೆಯೂ ಚರ್ಚೆಯಾಗಲಿ” ಎಂದು ೪೦ ಪರ್ಸೆಂಟ್ ಕಮಿಷನ್ ಆರೋಪಕ್ಕೆ ಪ್ರತ್ಯಸ್ತ್ರ ಪ್ರಯೋಗಿಸಿದರು.
ಕಾಂಗ್ರೆಸ್ ಮೌನವೇಕೆ ಎಂದ ರಘುಪತಿ ಭಟ್
ಉಡುಪಿ ಶಾಸಕ ರಘುಪತಿ ಭಟ್ ಅವರೂ ವಕ್ಫ್ ಆಸ್ತಿ ಅವ್ಯವಹಾರದ ಕುರಿತು ಪ್ರಸ್ತಾಪಿಸಿದರು. “ವಕ್ಫ್ ಬೋರ್ಡ್ ಅವ್ಯವಹಾರದ ಕುರಿತು ಅನ್ವರ್ ಮಾಣಿಪ್ಪಾಡಿ ಕೊಟ್ಟ ವರದಿ ಏನಾಯಿತು? ಹಗರಣಗಳ ಮಾತನಾಡುವ ಕಾಂಗ್ರೆಸ್ ಇದರ ಬಗ್ಗೆ ಮೌನ ವಹಿಸಿರುವುದೇಕೆ” ಎಂದು ಪ್ರಶ್ನಿಸಿದರು. ಹಾಗೆಯೇ, ಮಾಣಿಪಟ್ಟಿ ವರದಿ ಆಧರಿಸಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಉಡುಪಿ ಹಾಗೂ ದಕ್ಷಿಣ ಕನ್ನಡ ಶಾಸಕರು ಒತ್ತಾಯಿಸಿದರು.
ವರದಿ ಮಂಡನೆ ಕುರಿತು ತೀರ್ಮಾನ: ಜೊಲ್ಲೆ
ವಕ್ಫ್ ಆಸ್ತಿ ಕುರಿತು ಚರ್ಚೆ ನಡೆಯುವ ವೇಳೆ ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಉತ್ತರಿಸಿದರು. “ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ವಕ್ಫ್ ವರದಿ ತಿರಸ್ಕರಿಸುವ ಬಗ್ಗೆ ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿತ್ತು. ಎರಡೂ ಸದನಗಳಲ್ಲಿ ವರದಿ ಮಂಡಿಸಬೇಕು ಎಂದು ಕೋರ್ಟ್ ನಿರ್ದೇಶಿಸಿತ್ತು. ಯಡಿಯೂರಪ್ಪ ಅವರ ಸರ್ಕಾರದ ಅವಧಿಯಲ್ಲಿ ಸದನದಲ್ಲಿ ಮಂಡಿಸಲಾಗಿತ್ತು. ಮತ್ತೆ ವರದಿಯನ್ನು ಸದನದಲ್ಲಿ ಮಂಡಿಸುವ ಬಗ್ಗೆ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚರ್ಚಿಸಿದ್ದಾರೆ. ಮತ್ತೆ ಮಂಡಿಸುವ ಬಗ್ಗೆ ಬೊಮ್ಮಾಯಿ ಅವರು ತೀರ್ಮಾನ ಪ್ರಕಟಿಸುತ್ತಾರೆ” ಎಂದರು.
ಮುಸ್ಲಿಮರು ಗುಲಾಮರ ರೀತಿ ಮತ ಹಾಕ್ಬೇಕಾ?
“ಬೆಂಗಳೂರಿನಲ್ಲಿಯೇ ೧.೫ ಲಕ್ಷ ಕೋಟಿ ರೂ.ಗಿಂತಲೂ ಹೆಚ್ಚಿನ ಆಸ್ತಿಯನ್ನು ದೋಚಿದ್ದಾರೆ. ವಿಡ್ಸರ್ ಮ್ಯಾನರ್ ಹೋಟೆಲ್‌ನಿಂದ ಹಿಡಿದು ವಕ್ಫ್ ಬೋರ್ಡ್ ಆಸ್ತಿ ಕಬಳಿಸಿದ್ದಾರೆ. ಮುಸ್ಲಿಮರು ಗುಲಾಮರ ರೀತಿ ಮತ ಹಾಕಬೇಕಾ? ಕಾಂಗ್ರೆಸ್‌ನವರು ಏಕೆ ಮುಸ್ಲಿಮರ ಪರ ಇಲ್ಲ” ಎಂದು ಪ್ರಶ್ನಿಸಿದರು.
ಯು.ಟಿ.ಖಾದರ್ ತಿರುಗೇಟು
ಬಿಜೆಪಿ ಶಾಸಕರು ವಕ್ಫ್ ಆಸ್ತಿ ಕುರಿತು ಪ್ರಸ್ತಾಪಿಸಿದ್ದಕ್ಕೆ ಯು.ಟಿ.ಖಾದರ್ ತಿರುಗೇಟು ನೀಡಿದರು. “ಮುಸ್ಲಿಂ ಸಮುದಾಯದ ಪರ ಧ್ವನಿ ಎತ್ತಿದ್ದಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ಆದರೆ, ಮಂಗಳೂರು ಸ್ಮಾರ್ಟ್ ಸಿಟಿ, ಕರಾವಳಿ ಮೀನುಗಾರರ ಬಗ್ಗೆ ಆ ಭಾಗದ ಶಾಸಕರು ಮಾತನಾಡಲಿಲ್ಲ. ಹಾಗೆಯೇ, ಹಿಂದೂ ಸಹೋದರರ ಬಗ್ಗೆ ಮಾತನಾಡಲಿಲ್ಲ” ಎಂದರು. ಇದಾದ ಕೂಡಲೇ ಸದನದಲ್ಲಿ ಗಲಾಟೆ ಆರಂಭವಾಯಿತು. ಬಳಿಕ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು.
ಇದನ್ನೋ ಓದಿ | BJP ಸರ್ಕಾರದ 40% ಜತೆಗೆ ಸಿದ್ದರಾಮಯ್ಯ ಸರ್ಕಾರದ 100% ಅವಧಿಯ ಚರ್ಚೆ: ಗುರುವಾರ ಜಂಗೀಕುಸ್ತಿ ನಿರೀಕ್ಷೆ