ಚಾಮರಾಜನಗರ: ರಾಜ್ಯದಲ್ಲಿ 2023ರ ವಿಧಾನಸಭೆ ಚುನಾವಣೆ ಸಮೀಸುತ್ತಿದ್ದಂತೆ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಬಿಜೆಪಿ ಪಕ್ಷದೊಳಗೆ ಭಿನ್ನಮತ ಸ್ಫೋಟಗೊಂಡಿದೆ. ಹಾಲಿ ಜಿಲ್ಲಾ ಸಮಿತಿ ವಿಸರ್ಜಿಸಿ ಹೊಸ ತಂಡ ಕಟ್ಟಬೇಕೆಂಬ ಆಗ್ರಹ ಕೇಳಿಬಂದಿದೆ.
ಇದೇ ವಿಚಾರವಾಗಿ ಬುಧವಾರ ರಾತ್ರಿ ಒಂದು ಬಣದ ಕಾರ್ಯಕರ್ತರು ಮೌನ ಪ್ರತಿಭಟನೆ ಮೂಲಕ ಹೈಕಮಾಂಡ್‌ಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪಿ.ಎನ್. ದಯಾನಿಧಿ ಅವರನ್ನು ಪಕ್ಷದಿಂದ ಉಚ್ಚಾಟಿಸಿರುವುದೇ ಭಿನ್ನಮತಕ್ಕೆ ಕಾರಣವಾಗಿದೆ.
ಇತ್ತೀಚೆಗೆ ನಡೆದ ಚಾಮುಲ್ (ಚಾಮರಾಜನಗರ ಹಾಲು ಒಕ್ಕೂಟ) ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ದಯಾನಿಧಿ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದರಂತೆ. ಈ ವಿಚಾರವಾಗಿ ಅವರಿಗೆ ಉಚ್ಚಾಟನೆ ಶಿಕ್ಷೆ ನೀಡಲಾಗಿದೆ. ಮತ್ತೊಂದು ಕಡೆ ಜಿಲ್ಲಾ ಬಿಜೆಪಿಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಬೆಂಬಲಿಗರು ಮತ್ತು ಸಚಿವ ವಿ. ಸೋಮಣ್ಣ ಬೆಂಬಲಿಗರು ಎಂಬ ಎರಡು ಗುಂಪು ಹುಟ್ಟಿಕೊಂಡಿವೆ. ಯಡಿಯೂರಪ್ಪ ಬೆಂಬಲಿಗರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂಬ ಆರೋಪವು ಪಕ್ಷದಲ್ಲಿ ಕೇಳಿಬಂದಿದೆ.
ಇದನ್ನೂ ಓದಿ | ವಿಧಾನಸಭೆ ಎಲೆಕ್ಷನ್‌ಗೂ ಮುನ್ನ ಬಿಬಿಎಂಪಿ ಚುನಾವಣೆಗೆ ಶಾಸಕರೇ ಅಡ್ಡಗಾಲು
ಭಿನ್ನಮತೀಯ ಚಟುವಟಿಕೆ ಇಲ್ಲ
ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ, ನಮ್ಮಲ್ಲಿ ಯಾವುದೇ ಭಿನ್ನಮತೀಯ ಚಟುವಟಿಕೆ ನಡೆಯುತ್ತಿಲ್ಲ. ಪಕ್ಷ ವಿರೋಧಿ ಚಟುವಟಿಕೆ ಮಾಡುವವರ ವಿರುದ್ಧ ಜಿಲ್ಲಾಧ್ಯಕ್ಷರು ಕ್ರಮ ಕೈಗೊಂಡಿದ್ದಾರೆ. ಏನೇ ಅಸಮಾಧಾನ ಇದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚಿಸಬೇಕಿತ್ತು ಎಂದು ಜಿಲ್ಲಾಧ್ಯಕ್ಷ ಸುಂದರ್ ಅವರ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ತಮ್ಮದೇ ಆದ ವರ್ಚಸ್ಸು ಹೊಂದಿರುವ ದಯಾನಿಧಿ ಅವರನ್ನು ಉಚ್ಛಾಟನೆ ಮಾಡಿರುವುದು ಚುನಾವಣೆ ಸಂದರ್ಭದಲ್ಲಿ ಪಕ್ಷದ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು ಎಂಬ ಲೆಕ್ಕಾಚಾರಗಳು ಸಹ ಪ್ರಾರಂಭವಾಗಿದೆ.
ಇದನ್ನೂ ಓದಿ | ಪ್ರಧಾನಿ ಕಚೇರಿಯ ಅಧಿಕಾರಿ ಹೆಸರಿನಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿಗೆ ಕರೆ ಮಾಡಿದ! ಮುಂದೆ ಆಗಿದ್ದೇನು?