ವಿಜಯಪುರ: ಇತ್ತೀಚೆಗೆ ಸಿಜೇರಿಯನ್ ಬಳಿಕ ಸೋಂಕು ಕಾಣಿಸಿಕೊಂಡಿದ್ದ ಜಿಲ್ಲಾಸ್ಪತ್ರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತ ಡಿ.ರಂದೀಪ್ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ರೋಗಿಗಳಿಗೆ ಅನುಕೂಲವಾಗುವಂತೆ ಆಸ್ಪತ್ರೆಯ ಪ್ರವೇಶದ್ವಾರದೊಳಗಡೆ ವೈದ್ಯರ ಹೆಸರು, ವಿವಿಧ ವಿಭಾಗಗಳ ಸಂಕ್ಷಿಪ್ತ ವಿವರದ ಮಾಹಿತಿಯನ್ನು ಅಳವಡಿಸಲು ಆಸ್ಪತ್ರೆಗೆ ಪ್ರವೇಶಿಸುತ್ತಿದ್ದಂತೆಯೇ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಎಲ್.ಎಸ್. ಲಕ್ಕಣ್ಣನವರ್ ಅವರಿಗೆ ಸೂಚಿಸಿದರು.
ಸಕ್ರಿಯ ಹೆರಿಗೆ ಕೋಣೆ ಪ್ರವೇಶಿಸಿದ ಆಯುಕ್ತರು, ಸಿಜೇರಿಯನ್ ಬಳಿಕ ಹೊಲಿಗೆಯಿಂದಾದ ಸೋಂಕು ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ತ್ರೀರೋಗ ತಜ್ಞ ವೈದ್ಯರು, ಇನ್ನಿತರ ವೈದ್ಯರು ಮತ್ತು ಶುಶ್ರೂಕಿಯರಿಂದ ಮಾಹಿತಿಯನ್ನು ಪಡೆದರು. ಸೋಂಕು ಉಲ್ಬಣಿಸಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯರೊಂದಿಗೆ ಖುದ್ದಾಗಿ ಮಾತನಾಡಿ ಆರೋಗ್ಯ ಸ್ಥಿತಿಗತಿ ಕುರಿತಂತೆ ವಿಚಾರಿಸಿದರು.
ಇದನ್ನೂ ಓದಿ | ಪತಿ ಜತೆ ಜಗಳವಾಡಿ 65 ಕಿಮೀ ನಡೆದ ತುಂಬು ಗರ್ಭಿಣಿ; ಊರು ತಲುಪುವ ಮುನ್ನವೇ ಹೆರಿಗೆ
ರೋಗಿಗಳ ಸಂಬಂಧಿಕರೊಂದಿಗೆ ಮಾತನಾಡಿದರು. ಹೆರಿಗೆಗಾಗಿ ಆಸ್ಪತ್ರೆಗೆ ಬಂದಿದ್ದ ಮಹಿಳೆಯೊಬ್ಬರೊಂದಿಗೆ ಮಾತನಾಡಿ, ಆಸ್ಪತ್ರೆಯಲ್ಲಿನ ಸೌಕರ್ಯಗಳ ಬಗ್ಗೆಯೂ ವಿಚಾರಿಸಿದರು. ನವಜಾತ ಶಿಶುಗಳ ವಿಶೇಷ ಚಿಕಿತ್ಸಾ ಘಟಕಕ್ಕೂ ಭೇಟಿ ನೀಡಿ, ವೈದ್ಯರ ಬೇಡಿಕೆಯಂತೆ ವೆಂಟಿಲೇಟರ್ ಪೂರೈಕೆಗೆ ಕ್ರಮ ವಹಿಸುವುದಾಗಿ ತಿಳಿಸಿದರು.
ಆಸ್ಪತ್ರೆಯ ಮಹಿಳಾ ವಾರ್ಡ್‌ನ ಸ್ನಾನ ಮತ್ತು ಶೌಚ ಗೃಹಕ್ಕೆ ಭೇಟಿ ನೀಡಿದಾಗ, ಬಿಸಿ ನೀರು ಪೂರೈಸುವಂತೆ ರೋಗಿಯ ಸಂಬಂಧಿಗಳು ಆಯುಕ್ತರಿಗೆ ಮನವಿ ಮಾಡಿದರು. ಸಂಜೆಯಿಂದಲೇ ಬಿಸಿ ನೀರು ಪೂರೈಕೆಗೆ ವ್ಯವಸ್ಥೆ ಮಾಡುವಂತೆ ಆಯುಕ್ತರು ನಿರ್ದೇಶನ ನೀಡಿದರು. ಅಂಬುಲೆನ್ಸ್ ಅಗತ್ಯವಿದೆ, ಲಿಫ್ಟ್ ಸರಿ ಮಾಡಬೇಕು, 50 ಹಾಸಿಗೆಗೆ ಹೆಚ್ಚುವರಿಯಾಗಿ ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ಬೇಕಿದೆ ಎಂದು ಆಸ್ಪತ್ರೆ ಸಿಬ್ಬಂದಿ ಕೇಳಿಕೊಂಡಾಗ, ಈ ಬಗ್ಗೆ ವಿವರವಾದ ಪ್ರಸ್ತಾವನೆ ಸಿದ್ದಪಡಿಸಿ ಸಲ್ಲಿಸಲು ಆಯುಕ್ತರು ಸೂಚನೆ ನೀಡಿದರು.
ಬಳಿಕ ಶಸ್ತ್ರ ಚಿಕಿತ್ಸಾ ಘಟಕಕ್ಕೂ ಭೇಟಿ ನೀಡಿ, ಸೋಂಕು ಏಕೆ ಕಾಣಿಸಿತು? ಅವಘಡಕ್ಕೆ ಏನು ಕಾರಣ? ಎಂದು ಒಟಿ ಇನ್‌ಚಾರ್ಜ್ ಅವರನ್ನು ಪ್ರಶ್ನಿಸಿ ಮಾಹಿತಿ ಪಡೆದುಕೊಂಡರು. ಒಂದೇ ಶಸ್ತ್ರ ಚಿಕಿತ್ಸಾ ಘಟಕವಿರುವುದು, ಶಸ್ತ್ರ ಚಿಕಿತ್ಸೆಗೆ ಬರುವವರ ಸಂಖ್ಯೆ ಹೆಚ್ಚುತ್ತಿರುವ ಕಾರಣದಿಂದಲೂ ಅವಘಡ ಉಂಟಾಯಿತು. ಕಡಿಮೆ ಪ್ರಮಾಣದಲ್ಲಿ ವೈದ್ಯರು ಮತ್ತು ಸಿಬ್ಬಂದಿ ಇದ್ದಾರೆ. ಈ ಕೊರತೆಯನ್ನು ಹೋಗಲಾಡಿಸಬೇಕು ಎಂದು ವೈದ್ಯರು ಮತ್ತು ಸಿಬ್ಬಂದಿ ಆಯುಕ್ತರಲ್ಲಿ ಮನವಿ ಮಾಡಿದರು.
ಇದನ್ನೂ ಓದಿ: ಮದ್ದೂರು ಆಸ್ಪತ್ರೆಯ ಅಧಿಕಾರಿಗಳಿಗೆ ಹೈಕೋರ್ಟ್ ನ್ಯಾಯಮೂರ್ತಿ ಕ್ಲಾಸ್