ಬೆಂಗಳೂರು: ನಗರದ ಜನನಿಬಿಡ ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಈ ತಪ್ಪನ್ನು ಖಂಡಿತ ಮಾಡಬೇಡಿ. ನಿಮ್ಮ ಕಾರು ನಿಲ್ಲಿಸಿ ಬಾಗಿಲು ತೆರೆಯುವಾಗ ಅಕ್ಕಪಕ್ಕ ನೋಡಿಕೊಳ್ಳಿ. ನಿಮ್ಮ ಒಂದು ಕ್ಷಣದ ನಿರ್ಲಕ್ಷ್ಯ ಅನ್ಯರ ಜೀವಕ್ಕೆ ಎರವಾಗಬಹುದು ಎನ್ನುತ್ತಿದೆ ಈ ಶಾಕಿಂಗ್ ವಿಡಿಯೋ.
ಬೆಂಗಳೂರಿನಲ್ಲಿ ನಡೆದ ಘಟನೆಯಿದು. ರಸ್ತೆಯಲ್ಲಿ ಕಾರು ನಿಲ್ಲಿಸಿದ ಚಾಲಕ ಇತರ ವಾಹನಗಳು ಬರುತ್ತಿವೆಯಾ ಎಂದು ಗಮನಿಸದೆ ದಿಡೀರನೆ ಬಾಗಿಲು ತೆರೆಯುತ್ತಾನೆ. ಪಕ್ಕದಿಂದ ಬಂದ ಬೈಕ್ ಬಾಗಿಲಿಗೆ ತಾಗಿ ಬಿದ್ದುಹೋಗುತ್ತದೆ. ಎದುರಿನಿಂದ ಬಂದ ಟ್ರಕ್ಕಿನ ದೈತ್ಯ ಗಾಲಿಗಳಿಗೆ ಬೈಕ್ ಸವಾರರು ಸಿಕ್ಕಿ ನಜ್ಜುಗುಜ್ಜಾಗುತ್ತಾರೆ. ಕಾರು ಚಾಲಕನ ಒಂದು ಕ್ಷಣದ ನಿರ್ಲಕ್ಷ್ಯದಿಂದ ಎರಡು ಜೀವಗಳು ಅಪಾಯಕ್ಕೆ ಸಿಲುಕುತ್ತವೆ.
ಈ ಘಟನೆಯ ಸಿಸಿ ಕ್ಯಾಮೆರಾ ಫೂಟೇಜ್ ಅನ್ನು ಟ್ವಿಟರ್ನಲ್ಲಿ ಪೂರ್ವ ವಿಭಾಗದ ಡೆಪ್ಯುಟಿ ಪೊಲೀಸ್ ಕಮಿಷನರ್ ಕಲಾ ಕೃಷ್ಣಸ್ವಾಮಿ ಹಂಚಿಕೊಂಡಿದ್ದಾರೆ. ʼʼಟ್ರಾಫಿಕ್ನಲ್ಲಿ ದಯವಿಟ್ಟು ಹೀಗೆ ಮಾಡಬೇಡಿʼʼ ಎಂದು ಕಾರು ಮತ್ತಿತರ ವಾಹನ ಚಾಲಕರನ್ನು ವಿನಂತಿ ಮಾಡಿಕೊಂಡಿದ್ದಾರೆ.