ಬೆಂಗಳೂರು: ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದ 24 ನೂತನ ಸಚಿವರಲ್ಲಿ ದಿನೇಶ್ ಗುಂಡೂರಾವ್ ವಿಶಿಷ್ಟವಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ರಾಜಭವನದ ಗಾಜಿನಮನೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮಾಣವಚನ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಡಾ. ಎಚ್.ಸಿ. ಮಹದೇವಪ್ಪ ಅವರು ಸತ್ಯ ನಿಷ್ಠೆಯ ಹೆಸರಿನಲ್ಲಿ, ಕೆ. ಎನ್. ರಾಜಣ್ಣ ಅವರು ಬುದ್ಧ ಬಸವ ಅಂಬೇಡ್ಕರ್ ಹಾಗೂ ಮಹರ್ಷಿ ವಾಲ್ಮೀಕಿ ಅವರ ಹೆಸರಿನಲ್ಲಿ, ಶಿವಾನಂದ ಪಾಟೀಲ್ ಅವರು ಅಣ್ಣ ಬಸವಣ್ಣ ಅವರ ಹೆಸರಿನಲ್ಲಿ, ಎಸ್. ಎಸ್. ಮಲ್ಲಿಕಾರ್ಜುನ ಅವರು ಕಲ್ಲೇಶ್ವರ ದೇವರ ಹೆಸರಿನಲ್ಲಿ, ಲಕ್ಷ್ಮೀ ಹೆಬ್ಬಾಳ್ಕರ್ ಅವರು ಜಗಜ್ಯೋತಿ ಬಸವೇಶ್ವರ ಛತ್ರಪತಿ ಶಿವಾಜಿ, ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಜನತೆ ಮತ್ತು ತಮ್ಮ ತಾಯಿ ಗಿರಿಜಾ ಬಾಯಿ ಅವರ ಹೆಸರಿನಲ್ಲಿ, ರಹೀಂ ಖಾನ್ ಅವರು ಅಲ್ಲಾಹ್ ಹೆಸರಿನಲ್ಲಿ, ಬಿ. ನಾಗೇಂದ್ರ ಅವರು ಮಹರ್ಷಿ ವಾಲ್ಮೀಕಿ ಅವರ ಹೆಸರಿನಲ್ಲಿ ಹಾಗೂ ಉಳಿದ ಎಲ್ಲರೂ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಆದರೆ ಬೆಂಗಳೂರಿನ ಗಾಂಧಿನಗರದ ಶಾಸಕ ದಿನೇಶ್ ಗುಂಡೂರಾವ್ ಮಾತ್ರ ಯಾವ ದೇವರ ಹೆಸರನ್ನಾಗಲಿ, ವ್ಯಕ್ತಿಗಳ ಹೆಸರನ್ನಾಗಲಿ ಹೇಳಲಿಲ್ಲ. ರಾಜಭವನದಿಂದ ನೀಡಿದ್ದ ಪ್ರಮಾಣವಚನ ಪ್ರತಿಯಲ್ಲಿದ್ದಂತೆ, ಶ್ರದ್ಧಾಪೂರ್ವಕವಾಗಿ ಎಂದು ಯಥಾವತ್ತಾಗಿ ಪ್ರಮಾಣವಚನ ಸ್ವೀಕರಿಸಿದರು.
ಮೊದಲ ಬಾರಿ ಸಚಿವರು
ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ಕೆ ವೆಂಕಟೇಶ್, ಮಧುಗಿರಿ ವಿಧಾನಸಭಾ ಕ್ಷೇತ್ರದ ಕೆ.ಎನ್. ರಾಜಣ್ಣ, ಭಟ್ಕಳ ವಿಧಾನಸಭಾ ಕ್ಷೇತ್ರದ ಮಾಂಕಾಳ ವೈದ್ಯ, ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಲಕ್ಷೀ ಹೆಬ್ಬಾಳ್ಕರ್, ರಾಯಚೂರು ಜಿಲ್ಲೆಯ ಕಾಂಗ್ರೆಸ್ ಮುಖಂಡ ಎನ್. ಎಸ್. ಬೋಸರಾಜು, ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಬೈರತಿ ಸುರೇಶ್, ಸೊರಬ ವಿಧಾನಸಭಾ ಕ್ಷೇತ್ರದ ಮಧು ಬಂಗಾರಪ್ಪ ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಎಂ. ಸಿ. ಸುಧಾಕರ್ ಹಾಗೂ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಿ. ನಾಗೇಂದ್ರ ಅವರು ಮೊದಲ ಬಾರಿಗೆ ಸಚಿವರಾಗಿದ್ದಾರೆ. ಉಳಿದವರು ಈ ಹಿಂದೆ ಸಚಿವರಾಗಿ ಸೇವೆ ಸಲ್ಲಿಸಿರುವ ಅನುಭವವನ್ನು ಹೊಂದಿದ್ದಾರೆ.
ಇಂಗ್ಲಿಷ್‌ನಲ್ಲಿ ಪ್ರಮಾಣವಚನ
ರಹೀಂ ಖಾನ್ ಅವರು ಇಂಗ್ಲಿಷ್ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಉಳಿದೆಲ್ಲ ಸಚಿವರೂ ಕನ್ನಡ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಈ ಹಿಂದೆ ಸಿಎಂ ಹಾಗೂ ಡಿಸಿಎಂ ಜತೆಗೆ ಪ್ರಮಾಣವಚನ ಸ್ವೀಕರಿಸಿದ 8 ಸಚಿವರ ಪೈಕಿ ಬಿ.ಜಡ್. ಜಮೀರ್ ಅಹ್ಮದ್ ಖಾನ್ ಅವರು ಇಂಗ್ಲಿಷ್‌ನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು. ಅದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ನಂತರ ವಿಧಾನಸಭೆಯಲ್ಲಿ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸುವಾಗಲೂ ಇದೇ ರೀತಿ ವಿರೋಧ ಬರಬಹುದು ಎಂಬ ಕಾರಣಕ್ಕೆ ಸ್ಪೀಕರ್ ಕಚೇರಿಗೆ ತೆರಳಿ ಪ್ರಮಾಣವಚನ ಸ್ವೀಕರಿಸಿದ್ದರು.
ಇದನ್ನೂ ಓದಿ: Assembly Session: ಚುಪ್ ಚುಪ್ ಕೇ ಪ್ರತಿಜ್ಞಾ ವಿಧಿ ಸ್ವೀಕರಿಸಿದ ಸಚಿವ ಜಮೀರ್ ಅಹ್ಮದ್ ಖಾನ್!