Site icon Vistara News

Sindhuri Vs Roopa : ಸಿಂಧೂರಿ- ರೂಪಾ ಜಗಳದಲ್ಲಿ ಡಿ.ಕೆ. ರವಿ ಪತ್ನಿ ಕುಸುಮಾ ಎಂಟ್ರಿ: ಕರ್ಮ ಫಲ ಸಿಕ್ಕೇ ಸಿಗುತ್ತದೆ ಅಂತ ಹೇಳಿದ್ಯಾರಿಗೆ?

Rohini sindhuri D Roopa Kusuma hanumantharayappa

#image_title

ಬೆಂಗಳೂರು: ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್‌ ಅಧಿಕಾರಿ ಡಿ. ರೂಪಾ ನಡುವಿನ ಬಹಿರಂಗ ಜಟಾಪಟಿಗೆ ಈಗ, ಆತ್ಮಹತ್ಯೆ ಮಾಡಿಕೊಂಡ ಐಎಎಸ್‌ ಅಧಿಕಾರಿ ಡಿ.ಕೆ. ರವಿ ಅವರ ಪತ್ನಿ ಕುಸುಮಾ ಹನುಮಂತರಾಯಪ್ಪ ಎಂಟ್ರಿ ಕೊಟ್ಟಿದ್ದಾರೆ.

ರೂಪಾ ಅವರು ಬೆಳಗ್ಗೆ ಸಿಂಧೂರಿ ಅವರ ವಿರುದ್ಧ ೧೯ ಗಂಭೀರ ಆರೋಪಗಳನ್ನು ಮಾಡಿದ್ದರು. ಅದರಲ್ಲಿ ಡಿ.ಕೆ. ರವಿ ಸಾವಿನ ವಿಚಾರವೂ ಸೇರಿತ್ತು. ಡಿ.ಕೆ. ರವಿ ಮತ್ತು ರೋಹಿಣಿ ಸಿಂಧೂರಿ ನಡುವೆ ಪ್ರೇಮ ಸಲ್ಲಾಪ ನಡೆಯುತ್ತಿತ್ತು ಎನ್ನುವುದೂ ಸೇರಿದಂತೆ ಹಲವು ವಿಚಾರಗಳನ್ನು ಆಕೆ ಹೇಳಿದ್ದರು.

ಡಿ.ಕೆ. ರವಿ ಜತೆಗಿನ ಚಾಟ್ಸ್‌ನಲ್ಲಿ ಎಲ್ಲವೂ ಇದೆ

ಐಎಎಸ್‌ ಅಧಿಕಾರಿಯಾಗಿದ್ದ ಡಿ.ಕೆ. ರವಿ ಸಂಭಾವಿತ ವ್ಯಕ್ತಿ. ಸಿಬಿಐ ವರದಿಯಲ್ಲಿ ಅವರಿಬ್ಬರ ಚಾಟ್ಸ್ (ಮಾತುಕತೆ) ಬಗ್ಗೆ ಉಲ್ಲೇಖ ಇದ್ದು, ರವಿ ಅವರು ಎಂದಾದರೂ ಲಿಮಿಟ್‌ ಕ್ರಾಸ್ ಮಾಡಿದ ತಕ್ಷಣವೇ ಅವರನ್ನು ಬ್ಲಾಕ್ ಮಾಡಬಹುದಿತ್ತು. ಪರ್ಮನೆಂಟ್ ಆಗಿ ಬ್ಲಾಕ್ ಮಾಡಲಿಲ್ಲ ಈಕೆ. ಬ್ಲಾಕ್ ಮಾಡದೆ ಇದ್ದದ್ದು ಉತ್ತೇಜನ ಕೊಡುವ ಹಾಗೆ ಎಂಬಂತೆಯೇ ಕಾಣುತ್ತದೆ ಎಂಬುದು ಅನೇಕರ ಅಭಿಪ್ರಾಯ – ಇದು ರೂಪಾ ಬರೆದಿರುವ ಅಂಶ.

ಇದರ ಜತೆಗೆ ರೋಹಿಣಿ ಸಿಂಧೂರಿ ಅವರನ್ನು ಕೆಣಕಿ ಮತ್ತೊಂದು ಅಭಿಪ್ರಾಯವನ್ನು ಮಂಡಿಸಿದ್ದರು ರೂಪಾ.

ʻʻನನ್ನ ಪ್ರಶ್ನೆ ಇಷ್ಟೇ…ರೋಹಿಣಿ ಸಿಂಧೂರಿ ಯಾಕೆ ರವಿಯನ್ನು ಬ್ಲಾಕ್ ಮಾಡಲಿಲ್ಲ. ಅವರಿಬ್ಬರ ಪ್ರೇಮ ಸಲ್ಲಾಪ ಸಿಬಿಐ ಕೊಟ್ಟ ಫೈನಲ್ ರಿಪೋರ್ಟ್ ನಲ್ಲಿ ಎಲ್ಲರ ಕೈ ಸೇರಿದೆ. ಒಬ್ಬ ಪುರುಷ ಎಲ್ಲೆ ಮೀರಿ ನಡೆದಾಗ ಈಕೆ ಜವಾಬ್ದಾರಿಯುತ ಹೆಣ್ಣು ಮಗಳಾಗಿ ಯಾಕೆ ಬ್ಲಾಕ್ ಮಾಡಲಿಲ್ಲ? ಅಂದರೆ ಉತ್ತೇಜನ ಕೊಟ್ಟಂತೆ ಅಲ್ಲವೇ? ಅದೇ ರೀತಿ ಐಎಎಸ್ ಧಿಕಾರಿಗಳಿಗೆ ಕಳಿಸಿದ ಆ ರೀತಿಯ ಚಿತ್ರಗಳು ಉತ್ತೇಜನ ಕೊಡುವುದು ಎಂದು ಅರ್ಥ ಆಗುವುದಿಲ್ಲವೇ? ಈ ರೀತಿಯ ಚಿತ್ರಗಳನ್ನು ಯಾವ ಯಾವ ಅಧಿಕಾರಿಗೆ, ಯಾಕೆ ಕಳಿಸಿದರು, ಹಾಗೂ ಸೇವಾ ನಿಯಮ ಉಲ್ಲಂಘನೆ ಮಾಡಿರುವ ಬಗ್ಗೆ ಸ್ಪಷ್ಟೀಕರಣ ನೀಡಲಿʼʼ ಎಂದು ಕೇಳಿದ್ದಾರೆ.

ಈ ಎಲ್ಲಾ ನಾಟಕಗಳನ್ನು ದೂರದಿಂದಲೇ ನೋಡುತ್ತಿದ್ದ ಡಿ.ಕೆ. ರವಿ ಪತ್ನಿ ಕುಸುಮಾ ಹನುಮಂತ ರಾಯಪ್ಪ ಅವರು ಯಾವ ವಿಚಾರವನ್ನೂ ಉಲ್ಲೇಖ ಮಾಡದೆ ಒಂದು ಕಮೆಂಟ್‌ನ್ನು ಟ್ವೀಟ್‌ ಮೂಲಕ ದಾಖಲಿಸಿದ್ದಾರೆ. ರಾಜರಾಜೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಲಿರುವ ಅವರು ಶಿವರಾತ್ರಿ ಸಂದರ್ಭದ ದೇವಸ್ಥಾನಗಳಿಗೆ ಭೇಟಿ ನೀಡುತ್ತಲೇ ಈ ವಿಚಾರದಲ್ಲೂ ಪ್ರತಿಕ್ರಿಯೆ ನೀಡಿದ್ದಾರೆ.

ಹಾಗಿದ್ದರೆ ಕುಸುಮಾ ಹನುಮಂತರಾಯಪ್ಪ ಹೇಳಿದ್ದೇನು?

ತನ್ನ ಟ್ವಿಟ್ಟರ್ ಖಾತೆಯಲ್ಲಿ ʻKarma will get back to you, sooner or later it surely willʼ ಎಂದು ಟ್ವೀಟ್ ಮಾಡಿದ್ದಾರೆ ಕುಸುಮಾ. ʻʻತಾನು ಮಾಡಿದ ಪಾಪವು ತನಗೇ ವಾಪಸ್‌ ಬರುತ್ತದೆ, ತಕ್ಷಣಕ್ಕೆ ಆಗಬಹುದು ಅಥವಾ ತಡವಾಗಬಹುದು.. ಆದರೆ ಖಂಡಿತಾ ಬಂದೇ ಬರುತ್ತದೆʼʼ ಎಂದು ಟ್ವೀಟ್ ಮಾಡಿದ್ದಾರೆ. ಜತೆಗೆ ಇನ್ನೊಂದು ಹೇಳಿಕೆಯಲ್ಲಿ ಡಿ. ರೂಪಾ ಅವರ ಹೇಳಿಕೆಗೆ ಸಹಮತವಿದೆ ಎಂದಿದ್ದಾರೆ.

ಡಿ.ಕೆ. ರವಿ ಆತ್ಮಹತ್ಯೆ ಸಂದರ್ಭದಲ್ಲಿ ಕುಸುಮಾ ಸೇರಿದಂತೆ ಹಲವು ರೋಹಿಣಿ ಸಿಂಧೂರಿ ಕಡೆಗೆ ಬೊಟ್ಟು ಮಾಡಿದ್ದರು. ಆದರೆ, ಹೆಚ್ಚಿನ ಮಂದಿ ಕುಸುಮಾ ಅವರೇ ಈ ಪ್ರಕರಣದಲ್ಲಿ ಅಪರಾಧಿ ಎಂಬಂತೆಯೂ ಬಿಂಬಿಸಿದ್ದರು. ಹೀಗಾಗಿ ಕುಸುಮಾ ಅವರು ಈಗ ರೋಹಿಣಿ ಸಿಂಧೂರಿಗೆ ಟಾಂಗ್ ಕೊಡುವ ಮಾದರಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಕುಸುಮಾ ಹೇಳಿಕೆಗೆ ಖುಷಿಯಾದ ಡಿ. ರೂಪಾ

ಈ ನಡುವೆ, ಕುಸುಮಾ ಹನುಮಂತರಾಯಪ್ಪ ಅವರ ಎಂಟ್ರಿಯಿಂದ ಐಪಿಎಸ್‌ ಅಧಿಕಾರಿ ಡಿ. ರೂಪಾ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಕುಸುಮಾ ಅವರೇ ನಿಮ್ಮ ನೋವು ನಮ್ಮ ಅರ್ಥ ಮಾಡಿಕೊಂಡಿದ್ದೇನೆ ಎಂದು ಹೇಳುವ ಮೂಲಕ ಡಿ. ರೂಪಾ ಅವರು ಕುಸುಮಾ ಅವರ ಬೆಂಬಲವನ್ನು ಸಮರ್ಥಿಸಿಕೊಂಡಿದ್ದಾರೆ.

ಕುಸುಮಾ, ಒಬ್ಬ ಹೆಣ್ಣಾಗಿ ನಿಮ್ಮ ನೋವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಈ ನೋವು ನಿಮ್ಮೊಬ್ಬರೇ ಅದಲ್ಲ, ಇನ್ನೂ ಹಲವು ಮಹಿಳೆಯರದೂ (ಅದರಲ್ಲಿ ಕೆಲವರು ಐಎಎಸ್‌) ಆಗಿದೆ. ಆದರೂ ಅವರೆಲ್ಲ ಅಸಹಾಯಕರಾಗಿದ್ದಾರೆ. ಆದರೆ ಅಂತಿಮವಾಗಿ ಯಾರಾದರೂ ಒಬ್ಬರು ಈ ಅನೈತಿಕ ವ್ಯಕ್ತಿಗಳ (ಆಕೆ ಒಬ್ಬ ಹೆಣ್ಣೇ ಆಗಿದ್ದರೂ) ವಿರುದ್ಧ ಎದ್ದು ನಿಲ್ಲಲೇಬೇಕು. ನಾನು ಈ ವಿಷಯದಲ್ಲಿ ನಿಮ್ಮ ಜತೆಗಿದ್ದೇನೆ. ಇಂಥ ಕೃತ್ಯಗಳನ್ನು ನಡೆಸದಂತೆ ದೇವರು ಆಕೆಗೆ ಸಹಾನುಭೂತಿ ಮತ್ತು ಸದ್ಬುದ್ಧಿಯನ್ನು ಕೊಡಲಿ- ಹೀಗೆಂದು ಡಿ. ರೂಪಾ ಬರೆದುಕೊಂಡಿದ್ದಾರೆ.

ಡಿ. ರೂಪಾ ಅಭಿಪ್ರಾಯವೇ ನನ್ನದು ಎಂದ ಕುಸುಮಾ
ಈ ನಡುವೆ, ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯಿಸಿದ ಕುಸುಮಾ ಹನುಮಂತರಾಯಪ್ಪ ಅವರು, ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ನಡುವೆ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ನಾನು ರಿಯಾಕ್ಟ್ ‌ಮಾಡಲ್ಲ. ಬೆಳಿಗ್ಗೆಯಿಂದ ನಾನು ನೋಡ್ತಾ ಇದ್ದೇನೆ. ದೇವರ ಮೇಲೆ ನಂಬಿಕೆ ಇಟ್ಟುಕೊಂಡಿದ್ದೇನೆ. ಕರ್ಮ ಎನ್ನುವುದು ಯಾರನ್ನು ಬಿಡಲ್ಲ ಎಂದಿದ್ದಾರೆ.

ಅದರ ಜತೆಗೇ ʻʻನನಗೆ ಆದ ನೋವು, ಕುಟುಂಬಕ್ಕೆ ಆಗಿರುವ ನೋವು ಬೇರೆ ಯಾರಿಗೂ ಆಗಬಾರದು, ಸಿಬಿಐ ರಿಪೋರ್ಟ್ ಬಗ್ಗೆ ವಿಸ್ತಾರವಾಗಿ ಚರ್ಚೆ ಮಾಡಲಿಲ್ಲ. ತೀರಿಕೊಂಡಾಗ ಆದ ಚರ್ಚೆ, ರಿಪೋರ್ಟ್ ಬಗ್ಗೆ ಆಗಲಿಲ್ಲ. ರೂಪ ಮೇಡಂ ಬಗ್ಗೆ ನನಗೆ ಗೌರವ ಇದೆ. ಅವರ ಅಭಿಪ್ರಾಯವೇ ನಂದು, ನನಗೆ ಆದ ನೋವು ಯಾವ ಮಹಿಳೆಯರಿಗೂ ಆಗಬಾರದುʼʼ ಎಂದಿದ್ದಾರೆ.

ಡಿ.ಕೆ ರವಿ ಮಾನಸಿಕ ಅಸ್ವಸ್ಥರಾಗಿರಲಿಲ್ಲ

ಇಬ್ಬರು ಅಧಿಕಾರಿಗಳ ನಡುವಿನ ವಾರ್‌ನಲ್ಲಿ ನನ್ನ ಪತಿಯ ವಿಚಾರ ಬರುತ್ತಿದೆ. ಆದ್ದರಿಂದ ನನ್ನ ಮನಸ್ಸಿಗೆ ಬಂದ ಅಂದಿನ ಘಟನಾವಳಿಗಳ ಬಗ್ಗೆ ಟ್ವೀಟ್ ಮಾಡಿದ್ದೇನೆ. ನಾನು ದೇವರ ಮೇಲೆ ನಂಬಿಕೆ ಇಟ್ಟುಕೊಂಡು ಇರುವಂತವಳು. ಕಷ್ಟ ಅನುಭವಿಸಿ, ಜೀವನ‌ ಕಟ್ಟಕೊಳ್ಳಬೇಕು ಎಂದು ಸಮಾಜ ಸೇವೆ ಮಾಡುತ್ತಿದ್ದೆ. ಅವರು ವಿಷಯ ತೆಗೆದಿದ್ದಕ್ಕೆ ನಾನು ಟ್ವೀಟ್ ಮಾಡಿದ್ದೇನೆ ಎಂದು ಕುಸುಮಾ ಹೇಳಿದ್ದಾರೆ.

ಮನುಷ್ಯ ಎಂದಾಕ್ಷಣ ದುಃಖದ ಸಮಯ ನೆನಪು ಇದ್ದೆ ಇರುತ್ತದೆ. ಆ ನೆನಪು ಮರುಕಳಿಸಿತು ಎಂದ ಅವರು, ಡಿ.ಕೆ. ರವಿ ಅವರು‌ ಮಾನಸಿಕ ಅಸ್ವಸ್ಥರಾಗಿರಲಿಲ್ಲ. ಅವರು ಆ ರೀತಿ ಹೇಳುತ್ತಿದ್ದಾರೆ ಎಂದರೆ ರವಿ ಅವರಿಗೆ ತೋರುವ ಅಗೌರವ, ಅಪಮಾನ. ನಾನು ಸಾಮಾನ್ಯ ಮಹಿಳೆ, ಅವರು ಉನ್ನತ ಮಟ್ಟದ ಅಧಿಕಾರಿಗಳು. ರವಿ ಜೀವನ ತೆರದ ಪುಸ್ತಕವಾಗಿದೆ. ಅವರು ಹೆಸರು ಬಳಸಿ, ಬಳಸಬೇಡಿ ಎಂದು ಹೇಳಲು ಆಗಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : Sindhuri Vs Roopa : ರವಿ ಜತೆಗಿನ ಪ್ರೇಮ ಸಲ್ಲಾಪ ಸಿಬಿಐ ವರದಿಯಲ್ಲಿದೆ: ಸಿಂಧೂರಿಯನ್ನು ಮತ್ತೆ ಕೆಣಕಿದ ರೂಪಾ

ಯಾರ ಪರವಾಗಿ ನ್ಯಾಯ ಇದೆ ಎಂದು ಹೇಳಲು ಆಗಲ್ಲ. ನನಗೆ ಹಾಗೂ ನನ್ನ ಕುಟುಂಬಕ್ಕೆ ಆದ ನೋವು ಮರುಕಳಿಸಬಾರದು. ಡಿ.ರೂಪ ಅವರು ಅನೇಕ ವಿಚಾರಗಳು ಪ್ರಸ್ತಾಪ ಮಾಡಿದ್ದಾರೆ. ಸತ್ಯದ ಪರವಾಗಿ ಹೋರಾಟ ಮಾಡುವವರಿಗೆ ಬೆಂಬಲ ಇರುತ್ತದೆ. ಸತ್ಯವನ್ನು ಹೆಚ್ಚು ದಿನ ಮುಚ್ಚಿಡಲು ಆಗಲ್ಲ, ಹೊರಗಡೆ ಬರಲು ಸಮಯ ಆಗಬಹುದು. ಒಂದಲ್ಲ ಒಂದು ದಿನ ಹೊರಗೆ ಬರುತ್ತದೆ ಎಂದು ರೋಹಿಣಿ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದಾರೆ.

Exit mobile version