ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಜಾರಿ ನಿರ್ದೇಶನಾಲಯ (ED) ಸಮನ್ಸ್ ನೀಡಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ ಹೊರಹಾಕಿದ್ದಾರೆ. ಇದು ಹರಾಸ್‌ಮೆಂಟ್ ಡೈರೆಕ್ಟರೇಟ್ (ಸುಲಿಗೆ ನಿರ್ದೇಶನಾಲಯ) ಎಂದು ಹೇಳಿದ್ದಾರೆ.
ಬಹುಕಾಲದಿಂದ ಕಾಂಗ್ರೆಸ್ ಪಕ್ಷದ ಬೆನ್ನು ಬಿದ್ದಿರುವ ನ್ಯಾಷನಲ್ ಹೆರಾಲ್ಡ್ ಹಗರಣ (National Herald case) ಈಗ ಪಕ್ಷದ ಪ್ರಮುಖ ನಾಯಕರನ್ನು ಬಲವಾಗಿ ಬಿಗಿಯುವಂತೆ ಕಾಣುತ್ತಿದೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಮಾಲೀಕತ್ವವನ್ನು ಹೊಂದಿರುವ, ಕಾಂಗ್ರೆಸ್ ಪಕ್ಷದ ಪೋಷಕತ್ವದಲ್ಲಿ ಮುನ್ನಡೆಯುತ್ತಿರುವ ಯಂಗ್ ಇಂಡಿಯಾ ಸಂಸ್ಥೆಯಲ್ಲಿ ನಡೆದಿರುವ ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿ ತನಿಖೆಗಾಗಿ ದಾಖಲಿಸಿಕೊಂಡಿರುವ ಪ್ರಕರಣದ ಸಂಬಂಧ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಅನುಷ್ಠಾನ ನಿರ್ದೇಶನಾಲಯ ಸಮನ್ಸ್ ನೀಡಿತ್ತು.
ಇದನ್ನೂ ಓದಿ | National Herald case: ಸೋನಿಯಾ, ರಾಹುಲ್‌ಗೆ ಇ.ಡಿ ಸಮನ್ಸ್, ಪ್ರತೀಕಾರದ ಕ್ರಮ ಎಂದ ಕಾಂಗ್ರೆಸ್
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಜೂನ್ 8ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದ್ದರೆ, ರಾಹುಲ್ ಗಾಂಧಿ ಅವರು ಜೂನ್ 2ರಂದೇ ಹಾಜರಾಗಬೇಕಾಗಿದೆ. ʻʻಬಿಜೆಪಿಯ ಯಾರೊಬ್ಬರೂ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಅನುಭವ ಹೊಂದಿಲ್ಲ. ಈಗ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಮುಂದಿಟ್ಟುಕೊಂಡು ಆಗಾಗ ಟಾರ್ಗೆಟ್ ಮಾಡುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರಿಗೆ ಅಪಮಾನ ಮಾಡುತ್ತಿದೆ,ʼʼ ಎಂದು ಕಾಂಗ್ರೆಸ್ ನಾಯಕ ರಣದೀಪ್‌ಸಿಂಗ್ ಸುರ್ಜೇವಾಲಾ ಆರೋಪಿಸಿದ್ದರು.
ಇದೀಗ ಡಿ.ಕೆ. ಶಿವಕುಮಾರ್ ಸಹ ತಮ್ಮ ಪರಮೋಚ್ಚ ನಾಯಕರ ಬೆಂಬಲಕ್ಕೆ ನಿಂತಿದ್ದಾರೆ. “ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರಿಗೆ ಸಮನ್ಸ್ ನೀಡಿರುವುದು ಬಿಜೆಪಿ ಸರ್ಕಾರದ ಧ್ವೇಷ ರಾಜಕಾರಣ. ದೇಶದ ಪ್ರಧಾನಿಯಾಗಿ ದೇಶದ ಜನರು ಆಯ್ಕೆ ಮಾಡಿದ್ದ ವ್ಯಕ್ತಿಯನ್ನು ನಡೆಸಿಕೊಳ್ಳುವ ರೀತಿ ಇದೆ? ಇದು ಅವರಿಬ್ಬರ ಬಗ್ಗೆ ಮಾತ್ರವಲ್ಲ, ಈ ದೇಶದ ಜನರ ವಿರುದ್ಧ ನಡೆಸಿರುವ ಧ್ವೇಷ.
ಜಾರಿ ನಿರ್ದೇಶನಾಲಯವು(ED) ಕೇಂದ್ರ ಸರ್ಕಾರದ ಅಧೀನದಲ್ಲಿ HD- ಹರಾಸ್‌ಮೆಂಟ್ ಡೈರೆಕ್ಟರೇಟ್(ಸುಲಿಗೆ ನಿರ್ದೇಶನಾಲಯ) ಆಗಿದೆ. ತನ್ನ ದುರ್ಬಲ ಸಿದ್ಧಾಂತದ ಮೂಲಕ ಆರ್ಥಿಕತೆಯಲ್ಲಿ ಸೋತ ನಂತರ ಇದೀಗ ಸೋನಿಯಾ ಗಾಂಧಿಯವರಂತಹ ಹಿರಿಯರನ್ನು ಸುಲಿಗೆ ಮಾಡುವುದು ಮಾತ್ರ ಬಿಜೆಪಿ ಬಳಿ ಉಳಿದಿರುವ ಆಯ್ಕೆ. ಕಾಂಗ್ರೆಸ್ ಪಕ್ಷವನ್ನು ನಾಶಗೊಳಿಸುವ ಕನಸನ್ನು ಕಾಣುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.