ಬೆಂಗಳೂರು: ಕೋವಿಡ್ ಸಮಯದಲ್ಲಿ ಜನರ ಜೀವ ಉಳಿಸಿದ್ದೇವೆ, ಮತ ನೀಡಿ ಎಂಬ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮಾತಿಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಅವರು ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಯಾವ ಜೀವ ಉಳಿಸಿರೋದು ಅವರು? ಚಾಮರಾಜನಗರದಲ್ಲಿ ಆಕ್ಸಿಜನ್ ಸಿಗದೇ ಜನ ಸತ್ರು. ಆ ಜನರ ಕೊಲೆ ಮಾಡಿದಾರೆ ಬಿಜೆಪಿಯವರು. ಈ ಥರ ಹೇಳೋಕೆ ಸುಧಾಕರ್‌ಗೆ ನಾಚಿಕೆ ಆಗಬೇಕು. ಅವರ ಇಲಾಖೆಯಲ್ಲಿ ಭಾರೀ ಭ್ರಷ್ಟಾಚಾರ ಮಾಡಿದಾರೆ. ಕಳಂಕಿತ ರಾಜ್ಯ ಅಂತ ಅವರ ಕಾಲದಲ್ಲಿ ರಾಜ್ಯಕ್ಕೆ ಕಳಂಕ ಬಂದಿದೆ. ನಾವು ಅಧಿಕಾರಕ್ಕೆ ಬರ್ತೇವೆ ಈ ಕಳಂಕವನ್ನು ತೆಗೆದು ಹಾಕ್ತೇವೆ ಎಂದರು.
ಕಾಂಗ್ರೆಸ್ ಮೂರನೇ ಪಟ್ಟಿ ಯಾವಾಗ ಎಂಬ ಪ್ರಶ್ನೆಗೆ ಉತ್ತರಿಸಿ, ಬಿಜೆಪಿಯವರ ಪಟ್ಟಿ ಮೊದಲು ರಿಲೀಸ್ ಆಗಲಿ. ಅವರನ್ನು ಕೇಳಿ ಯಾವಾಗ ಪಟ್ಟಿ ಪ್ರಕಟ ಅಂತ. ಅವರ ಪಟ್ಟಿ ಬಂದ ಮೇಲೆ ನೋಡೋಣ ಎಂದರು. ಬಿಜೆಪಿ- ಜೆಡಿಎಸ್‌ನರವರು ಕಾಂಗ್ರೆಸ್ ಸೇರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಈಗ ಮಾತಾಡಲ್ಲ, ಗುಟ್ಟು ರಟ್ಟು ಮಾಡಲ್ಲ ಎಂದರು.
ಪ್ರಧಾನಿ ಮೋದಿ ಪ್ರವಾಸದ ಬಗ್ಗೆ ಪ್ರತಿಕ್ರಿಯಿಸಿ, ಮೋದಿ ಸರ್ ಪ್ರಜಾಪ್ರಭುತ್ವ ನಮ್ಮಿಂದನೇ ಬಂತು ಅಂತ ಹೇಳ್ತಾರೆ. ಅರವತ್ತು ವರ್ಷದಲ್ಲಿ ಕಾಂಗ್ರೆಸ್ ಕೊಡುಗೆ ತೆಗೆದುಹಾಕೋದು ಅವರ ಉದ್ದೇಶ. ಹಲವು ಯೋಜನೆಗಳ ಹೆಸರನ್ನೇ ಬದಲಾಯಿಸಿದ್ದಾರೆ. ಕಾಡಿಗೆ ಅವರು ಹುಲಿಯನ್ನಾದರೂ ಬಿಡಲಿ, ಸಿಂಹವಾದರೂ ಬಿಡಲಿ. ಚುನಾವಣೆ ಇದೆ ಅಂತ ಪದೇ ಪದೇ ನೆಪ ಮಾಡ್ಕೊಂಡು ಬರ್ತಿದಾರೆ ಮೋದಿಯವರು, ಬರಲಿ ಎಂದು ಹೇಳಿದರು.
ಕಾಂಗ್ರೆಸ್‌ನವರು ಜೆಡಿಎಸ್ ಸೇರುತ್ತಿದ್ದಾರೆ ಎಂಬ ಎಚ್ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರ ಪಕ್ಷದ ಹಾಲಿ ಶಾಸಕರು ಕಾಂಗ್ರೆಸ್ ಸೇರಿದ್ರು. 20 ಜನ ಕಾಂಗ್ರೆಸ್ ಸೇರಿದ್ದಾರೆ ಎಂದರು.
ಇದನ್ನೂ ಓದಿ: Narendra Modi: ದಿ ಎಲಿಫೆಂಟ್ ವಿಸ್ಪರರ್ಸ್ ಖ್ಯಾತಿಯ ಬೊಮ್ಮ-ಬೆಳ್ಳಿ ದಂಪತಿ ಜತೆ ಮೋದಿ ಮಾತು, ಆನೆ ಸಂರಕ್ಷಣೆಗೆ ಮೆಚ್ಚುಗೆ