ಹುಬ್ಬಳ್ಳಿ: ರಾಜ್ಯ ಸರ್ಕಾರ ಕೋವಿಡ್ ನೆಪ ಮಾಡಿಕೊಂಡು ಅವಧಿಪೂರ್ವ ಚುನಾವಣೆ ನಡೆಸುವ ಹುನ್ನಾರ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ. ಅದರೆ, ಇಂಥ ಯಾವುದೇ ಹುನ್ನಾರವಾಗಲೀ ಪ್ರಸ್ತಾವನೆ ಆಗಲಿ ಸರ್ಕಾರ ಅಥವಾ ಪಕ್ಷದ ಮುಂದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ʻʻʻಕೋವಿಡ್ ನೆಪ ಮಾಡಿಕೊಂಡು ಅವಧಿ ಪೂರ್ವದಲ್ಲಿಯೇ ಚುನಾವಣೆ ನಡೆಸುವ ಹುನ್ನಾರ ನಡೆಯುತ್ತಿದೆ. ಆದರೆ, ಯಾವಾಗ ಚುನಾವಣೆ ನಡೆಸಿದರೂ ಕಾಂಗ್ರೆಸ್ ಸಿದ್ಧವಿದೆʼʼ ಎಂದು ಶಿವಕುಮಾರ್ ಹೇಳಿದದರು.
ʻʻಕೋವಿಡ್ ನೆಪದಲ್ಲಿ ಇಲೆಕ್ಷನ್ ಪ್ರೀಪೋನ್ ಮಾಡೋಕೆ ನೋಡ್ತಿದಾರೆ. ಬುಧವಾರ ಪೊಲೀಸ್ ಮಹಾನಿರ್ದೇಶಕರ ಜೊತೆ ಎಲ್ಲ ಮಾತಾಡಿ ಚುನಾವಣೆಗೆ ಸಿದ್ಧತೆ ಮಾಡೋಕೆ ಹೇಳಿದ್ದಾರೆ. ಇವತ್ತು ಸಂಪುಟ ಸಭೆಯಲ್ಲೂ ಈ ಬಗ್ಗೆ ಚರ್ಚೆ ನಡೆಯಲಿದೆ ಎನ್ನುವ ಮಾಹಿತಿ ನನಗಿದೆʼʼ ಎಂದು ಡಿ.ಕೆ. ಶಿವಕುಮಾರ್ ಹೇಳಿದರು. ಮಾತ್ರವಲ್ಲ ಈ ಬಗ್ಗೆ ಪ್ರಧಾನಿ ಕಚೇರಿಯಿಂದಲೇ ಫೋನ್ ಬಂದಿದೆ ಎನ್ನುವುದು ಅನಧಿಕೃತ ಮಾಹಿತಿ ಎಂದರು.
ʻʻಕೋವಿಡ್ ನೆಪ ಇಟ್ಕೊಂಡು ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಗೆ ಜನ ಹೋಗಬಾರದು ಅಂತ ಪಿತೂರಿ ಮಾಡ್ತಿದಾರೆ. ಮೇಕೆದಾಟು ವಿಚಾರದಲ್ಲಿ ನನ್ನನ್ನು ತಡೆದರು. ನನ್ನ ಮೇಲೆ ಹಾಗೂ ಸಿದ್ದರಾಮಯ್ಯ ಅವರ ಮೇಲೆ 4 – 5 ಕೇಸ್ ಹಾಕಿದ್ದಾರೆʼʼ ಎಂದು ನೆನಪಿಸಿಕೊಂಡರು.
ʻʻಸಂಸತ್ ಸದಸ್ಯರೇ ಭ್ರಷ್ಟಾಚಾರದ ಬಗ್ಗೆ ಮಾತಾಡ್ತಿದಾರೆ. ಪ್ರತಾಪ್ ಸಿಂಹ, ಶ್ರೀನಿವಾಸ ಪ್ರಸಾದ್ ಕೋಟ್ಯಂತರ ರೂ. ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಹೇಳಿದ್ದಾರೆ. ಆದರೆ, ಇದರ ಬಗ್ಗೆ ಯಾವ ತನಿಖೆಯೂ ಆಗುತ್ತಿಲ್ಲʼʼ ಎಂಬ ಆರೋಪವನ್ನು ಪುನರುಚ್ಚರಿಸಿದರು.
ಸಹಕಾರಿ ಕ್ಷೇತ್ರದಲ್ಲಿ ಭ್ರಷ್ಟಾಚಾರ
ʻʻಈಗ ಇರುವ ಸಹಕಾರಿ ಸಚಿವರು ಡಮ್ಮಿ. ಅವರು ಒಂದೂ ಸೊಸೈಟಿಗೆ ದುಡ್ಡು ಕೊಟ್ಟಿಲ್ಲ, ಎಪಿಎಂಸಿಗಳಿಗೆ ಹಣ ಕೊಟ್ಟಿಲ್ಲ. ಡಿಸಿಸಿ ಬ್ಯಾಂಕ್ ದುಡ್ಡನ್ನೆಲ್ಲ ಸಕ್ಕರೆ ಕಾರ್ಖಾನೆಗೆ ಕೊಟ್ಟಿದ್ದಾರೆ. ಬೊಮ್ಮಾಯಿ ಅವರು ಎಲ್ಲ ಸೇರಿ ಸೌಹಾರ್ದ ಬ್ಯಾಂಕ್ ರಕ್ಷಣೆಗೆ ನಿಂತಿದ್ದಾರೆ. ಕಾನೂನು ಮೀರಿ ದುಡ್ಡು ಕೊಡ್ತಿದಾರೆʼʼ ಎಂದು ಆರೋಪಿಸಿದ ಡಿ.ಕೆ.ಶಿವಕುಮಾರ್. ಈ ವಿಷಯದಲ್ಲಿ ಇದುವರೆಗೂ ಕ್ರಿಮಿನಲ್ ಕೇಸ್ ಹಾಕಿಲ್ಲ. ನಾನು ಹೇಳೋದು ತಪ್ಪಿದ್ರೆ ನನ್ನ ಮೇಲೆ ಮಾನಹಾನಿ ಮೂಕದ್ದಮೆ ಹಾಕಲಿ ಎಂದು ಸವಾಲು ಹಾಕಿದರು. ಎಲ್ಲವೂ ಪರ್ಸಂಟೇಜ್ ಲೆಕ್ಕಾಚಾರಲ್ಲಿ ನಡೆಯುತ್ತಿದೆ. ಬಿಜೆಪಿ ಭ್ರಷ್ಟಾಚಾರದ ಗಂಗೋತ್ರಿ ಪಾರ್ಟಿ ಎಂದ ಡಿಕೆಶಿ ಲೇವಡಿ ಮಾಡಿದರು.
ಈ ನಡುವೆ, ಸುವರ್ಣ ಸೌಧದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಅವಧಿಪೂರ್ವ ಚುನಾವಣೆ ನಡೆಸುವ ಯಾವ ಪ್ಲ್ಯಾನ್ ಚರ್ಚೆಯಲ್ಲಿ ಇಲ್ಲ ಎಂದರು.
ಇದನ್ನೂ ಓದಿ | Panchamasali reservation | ಸಿಎಂ ಬೊಮ್ಮಾಯಿ ಅವರು ಇವತ್ತೇನಾದ್ರೂ ಆಟ ಆಡಿದ್ರೆ ಪರಿಣಾಮ ಗಂಭೀರ: ಯತ್ನಾಳ್ ಎಚ್ಚರಿಕೆ