ಬೆಂಗಳೂರು: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (Former CM HD Kumaraswamy) ಅವರು ಎಲ್ಲವನ್ನೂ ಬಿಚ್ಚಿಡಲಿ. ಬಿಚ್ಚಿ ಬಿಚ್ಚಿ ಬಿಚ್ಚಿ ಬಿಚ್ಚಿಡಲಿ. ಎಲ್ಲರಿಗೂ ಬಿಚ್ಚಿಡಲು ಅವಕಾಶ ಇದೆ. ಮೂರು ಪಕ್ಷದವರಿಗೂ ಅವಕಾಶ ಇದೆ. ನನ್ನ ಬಳಿಯೂ ದಾಖಲೆ ಇದೆ. ಅದನ್ನು ಬಿಚ್ಚಿಡಲು ಶುಭ ಮುಹೂರ್ತ, ಶುಭ ಗಳಿಗೆ ಬೇಕು. ನಾನೂ ಬಿಚ್ಚಿಡುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಎಚ್ಚರಿಕೆ ನೀಡಿದರು. ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಎಲ್ಲ ದಾಖಲೆಗಳನ್ನು ಬಿಚ್ಚಿಡುತ್ತೇನೆ ಎಂಬ ಎಚ್‌ಡಿಕೆ ಹೇಳಿಕೆಗೆ ಈ ಪ್ರತಿಕ್ರಿಯೆ ನೀಡಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ಎಚ್.ಡಿ. ಕುಮಾರಸ್ವಾಮಿ ಅವರು ಎಲ್ಲವನ್ನೂ ಬಿಚ್ಚಿಡಲಿ. ಅಣ್ಣಾ ಅಂತ ಅವರನ್ನು ಈಗ ಕರೆಯಲು ಸಾಧ್ಯವಿಲ್ಲ. ಬಿಚ್ಚಿಡಲು ಕೇವಲ ಅವರಿಗೆ ಮಾತ್ರ ಅಲ್ಲ. ಎಲ್ಲ ಪಕ್ಷದವರಿಗೂ ಅವಕಾಶ ಇದೆ. ನಾನು ಯಾಕೆ ಅವರನ್ನು ವೈಯಕ್ತಿಕವಾಗಿ ದ್ವೇಷ ಮಾಡಲಿ? ರಾಜಕೀಯವಾಗಿ ಯುದ್ಧ ಮಾಡಿದ್ದಾಯಿತು, ಗೆದ್ದಾಯಿತು. ನನಗೆ ಸಿಗಲಿಲ್ಲ, ನನಗೆ ಸಿಗಲಿಲ್ಲ ಅಂತ ಕೈ ಕೈ ಉಜ್ಜಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: Independence Day 2023 : ವಿಶ್ವ ಗುರು ಆಗುವತ್ತ ಹೆಜ್ಜೆ ಇಡುತ್ತಿದೆ ಅಜೇಯ ಭಾರತ: ಚಕ್ರವರ್ತಿ ಸೂಲಿಬೆಲೆ
ಆರೇಳು ತಿಂಗಳು ಈ ಸರ್ಕಾರ ಮುಂದೆ ನಮ್ಮದೇ ಸರ್ಕಾರ ಎಂದು ಹೇಳಿಕೆ ನೀಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಮೆಂಟಲ್ ಎಂದ ಡಿ.ಕೆ. ಶಿವಕುಮಾರ್ ಹೇಳಿದರು. ಕೆಲವರಿಗೆ ಮೆಂಟಲ್ ಸಮಸ್ಯೆ ಇರುತ್ತದೆ. ಕನಸು ಕಾಣಲಿ, ಆಸೆ ಪಡಲಿ. ಅದನ್ನು ಬೇಡ ಅನ್ನೋಕೆ ಆಗುತ್ತಾ? ಅವರು ಏನು ಬೇಕಿದ್ದರೂ ಮಾಡುತ್ತಾ ಇರಲಿ. ಮೊದಲಿಂದಲೂ ಅವರಿಗೆ ಈ ಅಭ್ಯಾಸ ಇದೆ. ನಮಗೆ ಗ್ಯಾರಂಟಿ ಜಾರಿ ಮಾಡುವ ಕೆಲಸ ಇದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಬಿಜೆಪಿಯಿಂದ ಶಾಸಕರು ವಾಪಸ್ ಬರುವ ಚರ್ಚೆ ಆಗಿಲ್ಲ
ಬಿಜೆಪಿಯಿಂದ ಶಾಸಕರು ವಾಪಸ್ ಬರುವ ವಿಚಾರದ ಬಗ್ಗೆ ನನ್ನ ಜತೆ ಯಾರೂ ಚರ್ಚೆ ಮಾಡಿಲ್ಲ. ರಾಜಕೀಯ ನಿರ್ಧಾರ ತೆಗೆದುಕೊಳ್ಳುವುದು ಅವರಿಗೆ ಬಿಟ್ಟಿದ್ದು. ನಾನು ಯಾರ ಜತೆ ಈ ಬಗ್ಗೆ ಮಾತನಾಡಿಲ್ಲ. ಮೂರು ಪಕ್ಷಗಳ ಶಾಸಕರನ್ನು ಒಂದಾಗಿ ತೆಗೆದುಕೊಂಡು ಹೋಗುವುದು ನನ್ನ ಕೆಲಸ. ಕಾರ್ಯಕರ್ತರಿಗೆ ಸೂಚನೆ ನೀಡಿದ್ದೇನೆ. ಬೂತ್ ಮಟ್ಟದಲ್ಲಿ ವೋಟ್ ಶೇರ್ ಹೆಚ್ಚಿಸಿಕೊಳ್ಳುವಂತೆ ಹೇಳಿದ್ದೇನೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಎಚ್‌ಡಿಕೆ ಹೇಳಿದ್ದೇನು?
ಇನ್ನು ಎರಡು ದಿನ ಕಾಯಿರಿ, ಬಿಬಿಎಂಪಿಯಲ್ಲಿ (BBMP) ಏನು ನಡೆಯುತ್ತಿದೆ ಎಂಬುದನ್ನು ನಿಮ್ಮ ಮುಂದೆ ಇಡುತ್ತೇನೆ. ನಾನು ಪೆನ್‌ಡ್ರೈವ್ ಬಿಡುಗಡೆ ಮಾಡಿದರೆ ನಕಲಿ ಅಂತಾರೆ. ಸಿಒಡಿಯನ್ನು ಜತೆಯಲ್ಲಿಯೇ ಇಟ್ಟುಕೊಂಡಿದ್ದಾರೆ. ದಾಖಲೆ ಬಿಡುಗಡೆ ಮಾಡಿದರೆ ಸಿಒಡಿ ತನಿಖೆ (COD investigation) ಅಂತಾರೆ. ಅಧಿಕಾರಿಗಳು ಇವರು ಹೇಳಿದ ಹಾಗೆ ವರದಿ ಕೊಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಹೇಳಿದ್ದರು.
1983ರಲ್ಲಿ ವೀರಪ್ಪ ಮೊಯ್ಲಿ ಟೇಪ್ (Veerappa Moily tape) ಅಂತಾನೇ ನಡೆಯಿತು. ಅದು ಏನಾದ್ರೂ ತಾರ್ಕಿಕ ಅಂತ್ಯ ಕಂಡಿತಾ? ಫೇಕ್ ಟೇಪ್ ಅಂದರು. ಸಿಎಂ ಸಿದ್ದರಾಮಯ್ಯ (CM Siddaramaiah) ಅವರೇ ರಾಜ್ಯಪಾಲರಿಗೆ ನಾನು ಲೆಟರ್ ಬರೆದೆನಾ? ರಾಜ್ಯಪಾಲರು ಮುಖ್ಯ ಕಾರ್ಯದರ್ಶಿಗೆ (Chief Secretary of Karnataka) ಸಹ ಪತ್ರ ಬರೆದಿದ್ದಾರೆ. ಸಿಎಸ್‌ಗೂ ಪತ್ರ ಬರೆದಿದ್ದಾರೆ. ನಾನು ರಾಜ್ಯಪಾಲರ ಮೇಲೆ ಪ್ರಭಾವ ಬೆಳೆಸುವ ಮಟ್ಟಿಗೆ ಇದ್ದೇನಾ? ಇದರ ಬಗ್ಗೆ ಪೊಲೀಸ್ ಅಧಿಕಾರಿಗಳು ತನಿಖೆ ಮಾಡುತ್ತಾರೆ. ಅಧಿಕಾರ ಮತ್ತು ದುಡ್ಡು ಇರುವವರ ನಡುವೆ ಸತ್ಯ ಹೊರ ಬರುತ್ತಾ? ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದರು.
ಇದನ್ನೂ ಓದಿ: CT Ravi : ಸಿ.ಟಿ. ರವಿ ಶಾರಿಕ್‌ನನ್ನೂ ಮೀರಿಸಿದ ರಾಜಕೀಯ ಉಗ್ರ: ಸಚಿನ್ ಮೀಗಾ
ಕರ್ನಾಟಕಕ್ಕೆ ಬಂದಿದೆ ಆಪತ್ತು
ದೇಶ ಅಪಾಯದ ಸ್ಥಿತಿಯಲ್ಲಿದೆ. ದೇಶದ ಭದ್ರತೆ, ಆರ್ಥಿಕತೆ ಹಾಳಾಗಿದೆ ಎಂದು ಡಿ.ಕೆ. ಶಿವಕುಮಾರ್ ಭಾಷಣ ಮಾಡುತ್ತಾರೆ. ಅವರು ಹೇಳಿದಂತೆ ದೇಶದ ಭದ್ರತೆ ಹಾಳಾಗಿದೆ ಎಂದೇ ಅಂದುಕೊಳ್ಳೋಣ ಬಿಡಿ. ಆದರೆ, ರಾಜ್ಯದ ಭದ್ರತೆ ಏನಾಗಿದೆ? ಅದರ ಬಗ್ಗೆ ಡಿಕೆಶಿ ಮೊದಲು ಮಾತನಾಡಲಿ. ಆ ಗುತ್ತಿಗೆದಾರ ಅಂದು ಅಜ್ಜಯ್ಯನ ಮೇಲೆ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದರು. ಆದರೆ, ಸೋಮವಾರ (ಆಗಸ್ಟ್ 14) ಹೇಳಿಕೆ ಬದಲಿಸಿ, ನಾನು ಮನನೊಂದು ಹಾಗೆ ಹೇಳಿದೆ ಅಂತಾನೆ. ಆ ಗುತ್ತಿಗೆದಾರ ಯಾರನ್ನು ಎಷ್ಟು ಗಂಟೆಗೆ ಎಲ್ಲಿ ಭೇಟಿ ಮಾಡಿದ ಅಂತ ಹೇಳಲಾ? ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದರು. ಹಾಗಾದರೆ ಗುತ್ತಿಗೆದಾರ ಹೇಮಂತ್‌ಗೆ ಬೆದರಿಕೆ ಹಾಕಲಾಗಿದೆಯಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಎಚ್‌ಡಿಕೆ ಅದನ್ನೇ ನಾನು ಹೇಳುತ್ತಾ ಇರೋದು. ಇವರು ರಾಜ್ಯದಲ್ಲಿನ ಜನರ ಭದ್ರತೆ ಏನಾಗಿದೆ ಎಂಬುದನ್ನು ಹೇಳಲಿ. ಮೊದಲು ಆ ಗುತ್ತಿಗೆದಾರ ಯಾಕೆ ಉಲ್ಟಾ ಹೊಡೆಯುತ್ತಿದ್ದಾರೆ ಎಂಬುದು ಮುಖ್ಯ. ಇದೇ ಕರ್ನಾಟಕಕ್ಕೆ ಬಂದಿರುವ ಆಪತ್ತು ಎಂದು ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದರು.