Site icon Vistara News

DK Shivakumar : ಒಮ್ಮೆ ಪಲ್ಲಕ್ಕಿಯಲ್ಲಿ ಹೋಗಿ ನೋಡು ಅಂತ ಪತ್ನಿಗೆ ಹೇಳಿದ್ದಾರಂತೆ ಡಿಕೆ ಶಿವಕುಮಾರ್!

DK Shivakumar and wife

ಬೆಂಗಳೂರು: ʻʻಇಂದು ಬೆಳಗ್ಗೆ ಈ ಕಾರ್ಯಕ್ರಮಕ್ಕೆ ಬರುವ ಮುನ್ನ ನನ್ನ ಪತ್ನಿಗೂ ಈ ಬಸ್ ವಿಚಾರ ತಿಳಿಸಿ ಮೈಸೂರಿಗೆ ಹೋಗುವಾಗ ಈ ಬಸ್‌ನಲ್ಲಿ ಪ್ರಯಾಣ ಮಾಡಿ ನೋಡು ಎಂದು ಹೇಳಿ ಬಂದಿದ್ದೇನೆʼʼ- ಹೀಗೆಂದರು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar).

ಶನಿವಾರ ವಿಧಾನ ಸೌಧದ ಮುಂಭಾಗದಲ್ಲಿ 100 ಸಾರಿಗೆ ಬಸ್‌ ಮತ್ತು 40 ನಾನ್‌ ಎಸಿ ಸ್ಲೀಪರ್‌ ಪಲ್ಲಕ್ಕಿ ಬಸ್‌ಗಳಿಗೆ (Non AC Sleeper Pallakki Bus) ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ಹಿಂದೆ ಪಲ್ಲಕ್ಕಿಯನ್ನು ರಾಜ ಮಹಾರಾಜರನ್ನು ಹೊರಲು ಬಳಸಲಾಗುತ್ತಿತ್ತು, ಈಗ ನಮ್ಮ ಮಹಿಳೆಯರು ಹಾಗೂ ಪ್ರಯಾಣಿಕರನ್ನು ಈ ಪಲ್ಲಕ್ಕಿ ಹೊರಲಿದೆ. ಈ ಬಸ್ ಗೆ ಪಲ್ಲಕ್ಕಿ ಎಂದು ಅತ್ಯುತ್ತಮ ಹೆಸರಿಟ್ಟವರಿಗೆ ಪ್ರಮಾಣಪತ್ರ ನೀಡಿ ಗೌರವಿಸಬೇಕು ಎಂದು ಹೇಳಿದ ಡಿ.ಕೆ. ಶಿವಕುಮಾರ್‌ ಅವರು, ಈ ಬಸ್‌ನಲ್ಲಿ ಪ್ರಯಾಣಿಸುವಂತೆ ಪತ್ನಿಗೂ ಸಲಹೆ ನೀಡಿದ್ದಾಗಿ ತಿಳಿಸಿದರು. ಡಿ.ಕೆ. ಶಿವಕುಮಾರ್‌ ಅವರು ಈ ಹಿಂದೆ ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣ ಮಾಡುವಂತೆಯೂ ಪತ್ನಿಗೆ ಸಲಹೆ ನೀಡಿದ್ದರು.

ಪಲ್ಲಕ್ಕಿ ಬಸ್‌ನೊಳಗೆ ಡಿ.ಕೆ. ಶಿವಕುಮಾರ್‌

ಬೇರೆ ರಾಜ್ಯದ ಮುಖ್ಯಮಂತ್ರಿಗಳೂ ಮಾತಾಡ್ತಾರೆ!

ನಮ್ಮ ಶಕ್ತಿ ಯೋಜನೆಯ ಬಗ್ಗೆ ಈಗ ಬೇರೆ ರಾಜ್ಯದ ಮುಖ್ಯಮಂತ್ರಿಗಳು ಮಾತನಾಡುತ್ತಿದ್ದಾರೆ. ಕೆಲವರಂತೂ, “ನಿಮ್ಮಿಂದ ನಾವು ಇಕ್ಕಟ್ಟಿಗೆ ಸಿಲುಕಿದ್ದೇವೆ” ಎಂದು ಹೇಳುತ್ತಾರೆ ಎಂದು ಡಿ.ಕೆ.ಶಿವಕುಮಾರ್‌ ನೆನಪಿಸಿಕೊಂಡರು.

ʻʻಹೆಣ್ಣು ಕುಟುಂಬದ ಕಣ್ಣು, ಬೆಲೆ ಏರಿಕೆ ಸಮಸ್ಯೆಗೆ ಪರಿಹಾರ ನೀಡಿ ಮಹಿಳೆಯರಿಗೆ ಆರ್ಥಿಕವಾಗಿ ಶಕ್ತಿ ತುಂಬುವ ಪ್ರಯತ್ನ ನಮ್ಮ ಸರ್ಕಾರ ಮಾಡುತ್ತಿದ್ದೇವೆ. ನಮ್ಮ ಗ್ಯಾರಂಟಿ ಯೋಜನೆಗಳ ಪೈಕಿ ಮೊದಲು ಜಾರಿಗೆ ಬಂದಿದ್ದು ಶಕ್ತಿ ಯೋಜನೆ. ಈ ಯೋಜನೆಯಲ್ಲಿ ಈವರೆಗೂ ಸುಮಾರು 70.73 ಕೋಟಿ ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ ಮಾಡಿದ್ದಾರೆʼʼ ಎಂದು ಹೇಳಿದರು.

ಮಹಿಳೆಯರ ಓಡಾಟದ ಖರ್ಚಿನ ಮೊತ್ತವನ್ನು ಸಾರಿಗೆ ಸಂಸ್ಥೆಗಳಿಗೆ ಸರ್ಕಾರ ನೀಡಬೇಕಾಗಿದೆ. ಸರ್ಕಾರದ ಮೇಲೆ ಹೊರೆ ಇದೆ. ಕಳೆದ ಏಳೆಂಟು ವರ್ಷಗಳಿಂದ ರಾಜ್ಯದ ಬಸ್ ದರದಲ್ಲಿ ಏರಿಕೆ ಮಾಡಿಲ್ಲ. ಸಾರಿಗೆ ಸಂಸ್ಥೆಗಳನ್ನು ವೃತ್ತಿಪರತೆಯಲ್ಲಿ ಮುನ್ನಡೆಸಲು ಬದ್ಧತೆ ಇಲ್ಲದ ಕಾರಣ ಸಂಸ್ಥೆ ಸೊರಗುವಂತಾಗಿದೆ. ಸರ್ಕಾರಿ ಸಂಸ್ಥೆಯಾಗಿ ಲಾಭ ಮಾಡುವುದರ ಜತೆಗೆ, ಜನರಿಗೂ ಅನುಕೂಲ ಮಾಡಿಕೊಡಬೇಕು. ಈ ಸಂಸ್ಥೆಯ ಕಾರ್ಮಿಕರ ಹಿತವನ್ನು ನಾವು ಕಾಯಬೇಕು. ಹೀಗಾಗಿ ಸಂಸ್ಥೆ ಲಾಭ ಕಾಣುವುದು ಮುಖ್ಯ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

DK Shivakumar in Pallakki bus inauguration

ಕಾರ್ಮಿಕರ ಹಿತ ಕಾಯಲು ಅಪಘಾತದಲ್ಲಿ ಮೃತಪಟ್ಟ ಸಾರಿಗೆ ಸಿಬ್ಬಂದಿ ಕುಟುಂಬಕ್ಕೆ 1 ಕೋಟಿ ರೂ.ವರೆಗೂ ವಿಮಾ ಪರಿಹಾರ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಇತರೆ ರಾಜ್ಯದ ಇತರೆ ಸಾರಿಗೆ ಸಂಸ್ಥೆಗಳಿಗೂ ಇದನ್ನು ವಿಸ್ತರಿಸಿ, ಎಲ್ಲ ಸಂಸ್ಥೆಗಳನ್ನು ಸಮಾನವಾಗಿ ನೋಡುವ ಕೆಲಸ ಮಾಡುತ್ತೇವೆ ಎಂದರು.

ಇದನ್ನೂ ಓದಿ: JOB News : ಸಾರಿಗೆ ಇಲಾಖೆಯಲ್ಲಿ ಶೀಘ್ರ 13 ಸಾವಿರ ನೌಕರರ ನೇಮಕಾತಿ; ರಾಮಲಿಂಗಾ ರೆಡ್ಡಿ

ನಾನು ದೆಹಲಿ ಸೇರಿದಂತೆ ಬೇರೆ ರಾಜ್ಯಗಳ ಸಾರಿಗೆ ಸಂಸ್ಥೆಗಳನ್ನು ಭೇಟಿ ಮಾಡಿದಾಗ ಅವರು ಕರ್ನಾಟಕ ಸಾರಿಗೆ ಸಂಸ್ಥೆಗಳ ಬಸ್ ಗಳ ಫೋಟೋಗಳನ್ನೇ ಅವರು ಬಳಸುತ್ತಾರೆ. ನಮ್ಮ ಸಾರಿಗೆ ಸಂಸ್ಥೆಗಳು ದೇಶದಲ್ಲೇ ಅತ್ಯುತ್ತಮ ಸೇವೆ ನೀಡುತ್ತಿರುವ ಸಾರಿಗೆ ಸಂಸ್ಥೆಗಳಾಗಿವೆ. ಹೀಗಾಗಿ ಕೆಎಸ್ ಆರ್ ಟಿಸಿ ಹಾಗೂ ಬಿಎಂಟಿಸಿ ಅಧಿಕಾರಿಗಳು ಹಾಗೂ ಕಾರ್ಮಿಕರಿಗೆ ಅಭಿನಂದನೆಗಳು ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

Exit mobile version