ಬೆಂಗಳೂರು: ಚಕ್ರವರ್ತಿ ಸೂಲಿಬೆಲೆ ನೀಡಿದ ಹೇಳಿಕೆಗೆ ನಾನ್ಯಾಕೆ ಪ್ರತಿಕ್ರಿಯೆ ನೀಡಬೇಕು? ಯಾರವರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.
ಗ್ಲೋಬಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗಿನ ಸಂವಾದದ ನಂತರ ಸುದ್ದಿಗಾರರ ಜತೆ ಅವರು ಮಾತನಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರ್ ಘರ್ ತಿರಂಗಾ ಕುರಿತು ಚಕ್ರವರ್ತಿ ಸೂಲಿಬೆಲೆ ಅವರ ಹೇಳಿಕೆ ಕುರಿತು ಪ್ರಶ್ನೆ ಕೇಳಲಾಯಿತು. ಈ ಸಂದರ್ಭದಲ್ಲಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ಅವರು ಏನಾಗಿದ್ದಾರೆ? ಯಾರು ಅವರು? ಯಾರಾದರೂ ಬಿಜೆಪಿ ಅಧ್ಯಕ್ಷರು, ಸಿಎಂ ಮಾತನಾಡಿದರೆ ಪ್ರತಿಕ್ರಿಯಿಸುತ್ತೇನೆ. ಯಾರೋ ಟ್ವೀಟ್ ಮಾಡೋರು, ಭಾಷಣ ಮಾಡೋರಿಗೆ ನಾನು ರಿಯಾಕ್ಟ್ ಮಾಡಲ್ಲ ಎಂದು ತಿಳಿಸಿದ್ದಾರೆ.
ಫ್ರೀಡಂ ಮಾರ್ಚ್ ಕುರಿತು ಪ್ರತಿಕ್ರಿಯಿಸಿದ ಶಿವಕುಮಾರ್, ಫ್ರೀಡಂ ಮಾರ್ಚ್‌ಗಾಗಿ ರಾಷ್ಟ್ರೀಯ ನಾಯಕರಿಗೆ ಆಹ್ವಾನ ಕೊಟ್ಟಿದ್ದೇವೆ. ರಾಹುಲ್ ಗಾಂಧಿ ಅವರಿಗೆ ಆರೋಗ್ಯ ಸರಿ ಇಲ್ಲ, ಯಾರು ಬರುತ್ತಾರೆ ಎನ್ನುವುದರ ಕುರಿತು ಹೈಕಮಾಂಡ್‌ನಿಂದ ಮಾಹಿತಿ ಬರುತ್ತದೆ ಎಂದಿದ್ದಾರೆ.
ಕಾಂಗ್ರೆಸ್‌ನಿಂದ ಕಾರ್ಯಕ್ರಮ ಆಯೋಜನೆ ಮಾಡಿದ್ದನ್ನು ನೋಡಿ ಬಿಜೆಪಿಯವರು ಶುರು ಮಾಡಿದ್ದಾರೆ. ಮಾಡಲಿ ಬಿಡಿ. ದೇಶಕ್ಕೆ ಗೌರವ ಕೊಡುವುದನ್ನು ತಪ್ಪು ಎಂದು ಹೇಳುವುದಕ್ಕಾಗುತ್ತದೆಯೇ? ಆರೋಗ್ಯಕರ ಸ್ಪರ್ಧೆ ಇರಲಿ ಬಿಡಿ. ನಾವು ಅದನ್ನು ಟೀಕಿಸುವುದಿಲ್ಲ. ದೇಶದ ಸ್ವಾತಂತ್ರ್ಯ ವಿಚಾರದಲ್ಲಿ ನಮಗೆ ಹಕ್ಕು ಜಾಸ್ತಿ ಇದೆ. ಅವರು ಕೂಡ ರಾಷ್ಟ್ರ ಭಕ್ತರಾಗಬೇಕು ಎಂದು ಪ್ರಯತ್ನ ಮಾಡುತ್ತಿದ್ದಾರೆ, ಮಾಡಲಿ ಎಂದು ಹೇಳಿದ್ದಾರೆ.
ಇದನ್ನೂ ಓದಿ | ಪುನೀತ್ ರಾಜಕುಮಾರ್ ಕುರಿತು ವಿವಾದಾತ್ಮಕ ಹೇಳಿಕೆ: ಕ್ಷಮೆ ಕೋರಿದ ಚಕ್ರವರ್ತಿ ಸೂಲಿಬೆಲೆ