Site icon Vistara News

DK Shivakumar: ಕುಮಾರಸ್ವಾಮಿ ನನಗೆ ಮರ್ಯಾದೆ ಕೊಟ್ಟರೆ, ನಾನೂ ಕೊಡುತ್ತೇನೆ: ಡಿ.ಕೆ. ಶಿವಕುಮಾರ್

DK Shivakumar attack on HD Kumaraswamy

ಬೆಂಗಳೂರು: ನಾನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರಿಗೆ ವೈಯಕ್ತಿಕವಾಗಿ ಗೌರವ ನೀಡುತ್ತೇನೆ. ಈಗಲೂ ನೀಡುತ್ತಿದ್ದೇನೆ, ಮುಂದೆಯೂ ನೀಡುತ್ತೇನೆ. ಅವರು ನನಗೆ ಗೌರವ ಕೊಟ್ಟರೆ, ನಾನು ಅದೇ ಗೌರವವನ್ನು ಅವರಿಗೆ ಕೊಡುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ಹೇಳಿದರು. ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪರಸ್ಪರರ ನಡುವೆ ನಡೆಯುತ್ತಿರುವ ವಾಕ್ಸಮರದ ಬಗ್ಗೆ ಡಿಕೆಶಿ ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್‌, ನಾನು ಕುಮಾರಸ್ವಾಮಿ ಅವರಿಗೆ ಗೌರವ ನೀಡುತ್ತಿದ್ದರೂ ಅವರು ಪದೇ ಪದೆ ನನ್ನ ಬಗ್ಗೆ ವೈಯಕ್ತಿಕ ವಿಚಾರವಾಗಿ ಬಂಡೆ ಒಡೆದ, ವಿಷ ಹಾಕಿದ, ಹೆಣ್ಣು ಮಕ್ಕಳ ಕೈಯಿಂದ ಜಮೀನು ಬರೆಸಿಕೊಂಡಿದ್ದೇನೆ ಎಂದು ಆಧಾರರಹಿತವಾಗಿ ಟೀಕೆ ಮಾಡುತ್ತಿದ್ದಾರೆ. ನಾನು ಒಂದು ಕಾಲದಲ್ಲಿ ಬಂಡೆ ಒಡೆದಿದ್ದರೆ, ನನ್ನ ಜಮೀನಿನ ಬಂಡೆಯನ್ನು ಕಾನೂನುಬದ್ಧವಾಗಿ ಒಡೆದಿದ್ದೇನೆ. ನಾವು ಹಿರಿಯರಿಗೆ ಗೌರವ ನೀಡುವುದೇ ಅವರಿಂದಲೂ ಅದನ್ನು ಸ್ವೀಕರಿಸಲು. ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ. ಚುನಾವಣೆ ನಂತರ ಅವರ ಪಕ್ಷ ಯಾವ ಸ್ಥಿತಿಗೆ ತಲುಪಲಿದೆ ಕಾದು ನೋಡಿ. ನಮ್ಮಂತಹವರನ್ನು, ಅಂದರೆ ಸಮುದಾಯವನ್ನು ಕಳೆದುಕೊಳ್ಳುವುದು ಸರಿಯಲ್ಲ. ಸಮುದಾಯಕ್ಕಾಗಿ ನಾನು ಅವರಿಗೆ ಗೌರವ ಕೊಟ್ಟು ಅವರು ಏನೇ ಅಂದರೂ ಸಹಿಸಿಕೊಂಡಿದ್ದೇನೆ. ಅವರು ಸವಾಲು ಸ್ವೀಕರಿಸಿದ್ದರೆ ಚುನಾವಣೆ ನಂತರ ಅಧಿವೇಶನದಲ್ಲಿ ಮಾತನಾಡೋಣ ಎಂದು ತಿಳಿಸಿದರು.

ಅವರ ನುಡಿಮುತ್ತು ಮರೆಮಾಚಲು ನನ್ನ ಮೇಲೆ ಆರೋಪ

ಎನ್‌ಒಸಿ ನೀಡಲು ಅಪಾರ್ಟ್ಮೆಂಟ್ ನಿವಾಸಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂಬ ಎಚ್‌ಡಿಕೆ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, ನಾವು ನೀರಿನ ಕಷ್ಟಕಾಲದಲ್ಲೂ ಬೆಂಗಳೂರಿನ ಎಲ್ಲ ಜನರಿಗೂ ಕುಡಿಯಲು ನೀರು ಪೂರೈಸುತ್ತಿದ್ದೇವೆ. ಕುಮಾರಸ್ವಾಮಿ ಅವರು ತಮ್ಮ ನುಡಿಮುತ್ತುಗಳನ್ನು ಮರೆಮಾಚಿಕೊಂಡು ಜನರ ಗಮನ ಬೇರೆಡೆ ಸೆಳೆಯಲು ಈ ರೀತಿ ಆರೋಪ ಮಾಡುತ್ತಿದ್ದಾರೆ. ಬಿಜೆಪಿ ನಾಯಕರು ಮಾಧ್ಯಮಗಳಲ್ಲಿ ಬೇರೆ ಬೇರೆ ಆಯಾಮಗಳಲ್ಲಿ ಮಾತನಾಡುತ್ತಿದ್ದಾರೆ. ಕುಮಾರಸ್ವಾಮಿ ಅವರಿಗೆ ಆ ರೀತಿ ಮಾತನಾಡಿ ಎಂದು ಹೇಳಿದವರು ಯಾರು? ನಾನು ಆ ವಿಚಾರ ಬಿಡುತ್ತೇನೆ. ಆದರೆ, ಅವರ ಮಾತುಗಳಿಂದ ಮಹಿಳೆಯರಿಗೆ ಆಗಿರುವ ಅಪಮಾನವನ್ನು ಅವರ ಮನಸ್ಸಿನಿಂದ ತೆಗೆಯಲು ಆಗುವುದಿಲ್ಲ. ಇದು ರಾಜ್ಯದ ವಿಚಾರವಾಗಿದ್ದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೂ ಇದಕ್ಕೂ ಸಂಬಂಧವಿಲ್ಲ. ಇದು ಮಹಿಳೆಯರು ಹಾಗೂ ಅವರ ಸ್ವಾಭಿಮಾನದ ವಿಚಾರ. ಇವರ ವಿಚಾರ ಬಿಡಿ. ನಮ್ಮ ಗುರಿ ಬಿಜೆಪಿ. ಕುಮಾರಸ್ವಾಮಿ ಅವರು ಹೇಳಿಕೆ ಕೊಟ್ಟರು ಸರಿ, ಬಿಜೆಪಿಯವರು ಯಾಕೆ ಆ ವಿಚಾರವಾಗಿ ಪ್ರತಿಕ್ರಿಯೆ ನೀಡುತ್ತಿಲ್ಲ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ‌ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಈ ಬಗ್ಗೆ ಬಾಯಿ ಬಿಡುತ್ತಿಲ್ಲವೇಕೆ?” ಎಂದು ಹೇಳಿದರು.

ಇದನ್ನೂ ಓದಿ: Lok Sabha Election 2024: ಎಚ್‌.ಡಿ. ದೇವೇಗೌಡರ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಕಿರಿಕ್‌; ಚುನಾವಣಾ ಆಯೋಗಕ್ಕೆ ದೂರು

ಡಿಕೆಶಿ ಒಕ್ಕಲಿಗ ನಾಯಕನಲ್ಲ ಎಂಬ ಆರ್. ಅಶೋಕ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, ನಾನು ನಾಯಕನೇ ಅಲ್ಲ. ಅವರು ನಾಯಕರು, ದೊಡ್ಡ ನಾಯಕರು. ನಾನು ಸಾಮಾನ್ಯ ಕಾರ್ಯಕರ್ತ ಎಂದು ಹೇಳಿದರು.

ಮಂಡ್ಯ, ಕೋಲಾರದಲ್ಲಿ ರಾಹುಲ್ ಗಾಂಧಿ ಪ್ರಚಾರ

ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರ ರಾಜ್ಯ ಭೇಟಿ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, ರಾಹುಲ್ ಗಾಂಧಿ ಅವರು ನಾಳೆ (ಬುಧವಾರ – ಏಪ್ರಿಲ್‌ 17) ಮಂಡ್ಯ ಹಾಗೂ ಕೋಲಾರಕ್ಕೆ ಭೇಟಿ ನೀಡುತ್ತಿದ್ದಾರೆ. ಮಧ್ಯಾಹ್ನ 12.30ಕ್ಕೆ ರಾಜ್ಯಕ್ಕೆ ಆಗಮಿಸುತ್ತಿದ್ದು, ಮಧ್ಯಾಹ್ನ ಮಂಡ್ಯಕ್ಕೆ ತೆರಳಿ, ನಂತರ ಕೋಲಾರಕ್ಕೆ ಹೋಗಿ ಅಲ್ಲಿಂದ ದೆಹಲಿಗೆ ಹೋಗುತ್ತಾರೆ. ಪ್ರಿಯಾಂಕಾ ಗಾಂಧಿ ಅವರು ಕೆಲವು ದಿನಾಂಕ ಕೊಟ್ಟಿದ್ದು, ಅವರಿಗೆ ಬೇರೆ ರಾಜ್ಯಗಳಲ್ಲಿ ಪ್ರಚಾರದ ಒತ್ತಡವಿದೆ. ಅವರ ಕೊಟ್ಟಿರುವ ದಿನಾಂಕಗಳ ಸಮಯವನ್ನು ಹೊಂದಾಣಿಕೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

Exit mobile version