ಬೆಳಗಾವಿ: ಕಳೆದ ಎರಡು ವರ್ಷಗಳಿಂದ ಮಹಾನಾಯಕ ಸಿಡಿ ಇಟ್ಟುಕೊಂಡು ಕುಳಿತಿದ್ದಾನೆ. ಅದು ನಿಜವೇ ಆಗಿದ್ದರೆ ಆಗಲೇ ಬಿಡುಗಡೆ ಮಾಡಬೇಕಿತ್ತು. ಈಗ ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election 2023) ಸಂದರ್ಭದಲ್ಲಿ ಏಕೆ? ಲಿಂಗಾಯತ, ಮುಸ್ಲಿಂ, ಎಸ್‌ಸಿ ಸಮುದಾಯದವರನ್ನು ಎತ್ತಿ ಕಟ್ಟಲು ಕುತಂತ್ರ ಮಾಡುತ್ತಾನೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಉದ್ದೇಶವೂ ಅದೇ, ಅವನಿಗೆ ಬೇರೆ ದಾರಿಯೇ ಇಲ್ಲ. ನಾನು ಯುದ್ಧ ಮಾಡಲು ಗಟ್ಟಿ ಇದ್ದೇನೆ. ನಿನಗೆ ಸಾಧ್ಯವಿದ್ದರೆ ಬಾ. ಕನಕಪುರಕ್ಕೆ ಬಾ ಅಂದರೂ ಸರಿಯೇ, ಅಲ್ಲಿಯೇ ಬರುತ್ತೇನೆ ಎಂದು ಡಿಕೆಶಿಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ಸವಾಲು ಹಾಕಿದರು.
ಅಂಕಲಗಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ನನ್ನ ಮಗ ಅಮರನಾಥ ಬಳಿ ಡಿ.ಕೆ. ಶಿವಕುಮಾರ್ ಸ್ಪಷ್ಟವಾಗಿ ಹೇಳಿದ್ದಾನೆ. ನನ್ನ ಸಿಡಿ ಕೇಸ್ ಆದಾಗ ಉದ್ಯೋಗ ಅದೇ ಎಂದಿದ್ದಾನೆ. ಬೇಕಾದರೆ ನನ್ನ ಮಗನ ಕರೆದೊಯ್ದು ಹಾಗೆ ಹೇಳಿಕೆ ನೀಡಿದ್ದು, ನಿಜವೋ, ಸುಳ್ಳೋ ಎಂದು ಲಕ್ಷ್ಮೀದೇವಿ ಮೇಲೆ ಆಣೆ ಮಾಡಿಸಿ ಎಂದು ವಾಗ್ದಾಳಿ ನಡೆಸಿದರು.
ಹೀಗಾದರೆ ನಾನಾದರೂ ಏನು ಮಾಡಲು ಸಾಧ್ಯ? ಯುದ್ಧ ಮಾಡೋಣ ಬಾರಪ್ಪ ಎಂದು ನಾನು ಕೇಳುತ್ತಿದ್ದೇನೆ. ಕನಕಪುರಕ್ಕೆ ಬಾ ಅಂದರೆ ಅಲ್ಲಿಯೇ ಬರುತ್ತೇನೆ. ನೂರು ಸಿಡಿ ಬರಲಿ, ನಾನು ಗಟ್ಟಿ ಇದ್ದೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.
ಇದನ್ನೂ ಓದಿ: Murder Case: ಮಾವನನ್ನೇ ಗುಂಡಿಕ್ಕಿ ಕೊಂದ ಸೊಸೆ; ಕೌಟುಂಬಿಕ ಕಲಹ ಕಾರಣವೇ?
ಸಚಿವರನ್ನು ಹೆದರಿಸುತ್ತಿರುವ ಡಿಕೆಶಿ
ಡಿ.ಕೆ. ಶಿವಕುಮಾರ್ ನಮ್ಮ ಕೆಲವು ಮಂತ್ರಿಗಳಿಗೆ ಹೆದರಿಸುತ್ತಿದ್ದಾನೆ. ನೀನು ಕಾಂಗ್ರೆಸ್‌ಗೆ ಬರುತ್ತೀಯೋ ಅಥವಾ ನಾನು ಸಿಡಿ ಬಿಡುಗಡೆ ಮಾಡಲೋ ಎಂದು ಭಯ ಹುಟ್ಟಿಸುತ್ತಿದ್ದಾನೆ. ನಮ್ಮ ಪಕ್ಷಕ್ಕೆ ಮುಂಬೈಯಿಂದ ಬಂದವರಿಗೆ ಸಿಡಿ ಬಿಡುತ್ತೇನೆ ನೋಡು ಎಂದು ಹೆದರಿಸುತ್ತಿದ್ದಾನೆ ಎಂದು ಡಿಕೆಶಿ ವಿರುದ್ಧ ಏಕವಚನದಲ್ಲಿಯೇ ಹರಿಹಾಯ್ದ ರಮೇಶ್ ಜಾರಕಿಹೊಳಿ, ಪರೋಕ್ಷವಾಗಿ ಸಚಿವ ನಾರಾಯಣಗೌಡರ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ ಎನ್ನಲಾಗಿದೆ.
ಸಿಡಿ ಪಾರ್ಟ್‌ನರ್ ಬೆಳಗಾವಿಯಲ್ಲಿ ಇದ್ದಾರೆ. ಅದಕ್ಕೆ ಹುಷಾರು ಇರಬೇಕು. ಮತ್ತೊಬ್ಬ ಡ್ರೈವರ್ ಈಗ ಇದಕ್ಕೆ ಸೇರಿಕೊಂಡಿದ್ದಾನೆ. ಡ್ರೈವರ್ ಹಾಗೂ ಮಾಲೀಕ ಸೇರಿಕೊಂಡಿದ್ದಾರೆ ಎಂದು ಪರೋಕ್ಷವಾಗಿ ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ವಿರುದ್ಧ ವಾಗ್ದಾಳಿ ನಡೆಸಿದರು.
ಜಾರಕಿಹೊಳಿ ಯುದ್ಧ ಮಾಡುವವನು, ಷಡ್ಯಂತ್ರ ಮಾಡುವ ಮಂದಿ ಅಲ್ಲ. ನಾನು ಯಾರ ವೈಯಕ್ತಿಕ ಜೀವನವನ್ನೂ ಟಚ್ ಮಾಡಲ್ಲ. ನನ್ನ ಕಡೆ ಎವಿಡೆನ್ಸ್ ಇದೆ, ಆದ್ರೆ ನಾನು ಬಿಡುಗಡೆ ಮಾಡಲ್ಲ. ಅವನ ಪತ್ನಿಯೂ ನನ್ನ ತಂಗಿ, ಅವರ ಹಾಗೇ ಮನೆ ಮುರಿಯೋದು ಬೇಡ. ನನಗೊಬ್ಬನಿಗೆ ನೋವು ಆಗಿದೆ. ನಾನು ಅದರಿಂದ ಹೊರಗೆ ಬಂದಿದ್ದೇನೆ. ಬೇರೆ ಯಾರಿಗೂ ಈ ರೀತಿ ಆಗಬಾರದು ಎಂಬುದು ನನ್ನ ಉದ್ದೇಶ. ಅಪ್ಪಿತಪ್ಪಿ ಏನಾದರೂ ಇಂತಹ ಮನುಷ್ಯನ ಕೈಗೆ ರಾಜ್ಯ ಸಿಕ್ಕರೆ ಪರಿಸ್ಥಿತಿ ಏನಾಗುತ್ತದೆ? ಟೋಲ್‌ಗಳು ಇದ್ದ ಹಾಗೇ ಮತ್ತೊಂದು ಡಿಕೆಶಿ ಟೋಲ್ ಬರುತ್ತದೆ. ಆದರೆ, ಅದು ಆಗುವುದಿಲ್ಲ ಎಂಬುದು ಬೇರೆಯ ವಿಷಯ ಎಂದು ರಮೇಶ್ ಹೇಳಿದರು.
ಕಾಂಗ್ರೆಸ್‌ನಲ್ಲಿ ಕೆಟ್ಟ ಪರಿಸ್ಥಿತಿ ಇದೆ
ಕಾಂಗ್ರೆಸ್ ಪಕ್ಷದಲ್ಲಿ ಬಹಳ ಕೆಟ್ಟ ಪರಿಸ್ಥಿತಿ ಇದೆ. ನಾನು ಅಲ್ಲಿ ನೋಡಿ ಬಂದಿದ್ದೇನೆ. ಪಾಪ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯಂತಹ ಒಳ್ಳೆಯವರಿದ್ದಾರೆ. ಆದರೆ ಪಾಪ ಅವರದ್ದು ಅಲ್ಲಿ ಏನೂ ನಡೆಯಲ್ಲ. ಎಲ್ಲರನ್ನೂ ಹೆದರಿಸಿ ಇಟ್ಟುಕೊಂಡಿದ್ದಾನೆ ಎಂಬುದು ಅವರೆಲ್ಲರೂ ಮೀಟಿಂಗ್‌ನಲ್ಲಿ ಕುಳಿತುಕೊಳ್ಳುವುದನ್ನು ನೋಡಿದರೆ ತಿಳಿಯುತ್ತದೆ. ಬಹುಶಃ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೂ ಏನ್ ಮಾಡಿದ್ದಾನೋ? ಎಂದು ಹೇಳಿದರು.
ಬಿಜೆಪಿಯು ಜನರಿಂದ ಮಾನ್ಯತೆ ಪಡೆದ ಪಕ್ಷ. ಇಂದಿರಾ ಗಾಂಧಿ ಕಾಲದಲ್ಲಿ ಕಾಂಗ್ರೆಸ್ ಪಕ್ಷ ಇತ್ತು. ಈಗ ಅದೆಲ್ಲ ಹೋಗಿದೆ. ಬ್ಲ್ಯಾಕ್‌ಮೇಲರ್ ಕೈಯಲ್ಲಿ ಸಿಕ್ಕು ಕಾಂಗ್ರೆಸ್ ಮುಗಿದಿದೆ. 2023ಕ್ಕೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕು. 2024ಕ್ಕೆ ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಬೇಕು. ಬಿಜೆಪಿ ಒಳ್ಳೆಯ ಪಕ್ಷವಾಗಿದ್ದು, ಮುಸಲ್ಮಾನ, ಎಸ್‌ಸಿ ವಿರೋಧಿ ಅಲ್ಲ. ಕಾಂಗ್ರೆಸ್‌ನ ಸುಳ್ಳು ಪ್ರಚಾರಕ್ಕೆ ಬಲಿಯಾಗಬಾರದು. ಮುಂದಿನ ಐದು ವರ್ಷ ಬಳಿಕ ನಾನು ರಿಟೈರ್ ಆಗುತ್ತೇನೆ. ಇದೊಂದು ಸಲ ನನಗೆ ಆಶೀರ್ವಾದ ಮಾಡಬೇಕು ಎಂದು ರಮೇಶ್ ಜಾರಕಿಹೊಳಿ ಮನವಿ ಮಾಡಿದರು.