Site icon Vistara News

HD Kumaraswamy : ಬಿಜೆಪಿ ದೆಹಲಿ ನಾಯಕರನ್ನೇ ಡಿ.ಕೆ. ಶಿವಕುಮಾರ್‌ ಖರೀದಿ ಮಾಡ್ತಾರೆ: ಎಚ್.ಡಿ. ಕುಮಾರಸ್ವಾಮಿ

DCM DK Shivakumar Vs Former CM HD Kumaraswamy

ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (Deputy Chief Minister DK Shivakumar) ಅವರು ಬಿಜೆಪಿಯ ದೆಹಲಿಯ ನಾಯಕರನ್ನೇ ಖರೀದಿ ಮಾಡಿದ್ದರೂ ಅಚ್ಚರಿ ಇಲ್ಲ. ಯಾರನ್ನು ಬೇಕಾದರೂ ಅವರು ಖರೀದಿ ಮಾಡಬಹುದು. ಆದರೆ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ (Former Prime Minister HD DeveGowda) ಕುಟುಂಬವನ್ನು ಬಿಟ್ಟು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಹೇಳಿದರು.

ತಮ್ಮ ವಿರುದ್ಧ ದಾಖಲೆ ಬಿಡುಗಡೆ ಮಾಡಿದರೆ ಭಯ ಇಲ್ಲ ಎಂದು ಡಿ.ಕೆ. ಶಿವಕುಮಾರ್ ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಎಚ್.ಡಿ. ಕುಮಾರಸ್ವಾಮಿ, ಅವರು ಯಾರಿಗೂ ಹೆದರಲ್ಲ. ಅವರು ಯಾರನ್ನು ಬೇಕಾದರೂ ಖರೀದಿ ಮಾಡುತ್ತಾರೆ. ಅವರಿಗೆ ಆ ಶಕ್ತಿ ಇದೆ ಎಂದು ಮಾರ್ಮಿಕವಾಗಿ ಹೇಳಿದರು.

ಬಿಚ್ಚೋದು, ಬಿಚ್ಚೋದು ಎಂದು ಅವರು ಪದೇ ಪದೆ ಹೇಳುತ್ತಿದ್ದಾರೆ. ಹೊರಗೆ ಬರಬೇಕಾದದ್ದು ಬಂದೇ ಬರುತ್ತದೆ. ಈವರೆಗೂ ಮಾಡಿಕೊಂಡಿದ್ದು ಸಾಕು. ಇನ್ನಾದರೂ ಲೂಟಿ ಹೊಡೆಯೊದು ನಿಲ್ಲಿಸಿ. ಅಣ್ಣ ಎಂದು ನನಗೆ ಹೇಳುತ್ತೀರಲ್ಲವೇ? ಅಣ್ಣನಾಗಿ ಹೇಳುತ್ತೇನೆ ಕೇಳಿ, ಇನ್ನಾದರೂ ಈ ಲೂಟಿ ನಿಲ್ಲಿಸಿ. ಈ ಕಿವಿಮಾತು ಕೇಳಿದರೆ ನಿಮ್ಮನ್ನು ತಮ್ಮ ಎಂದು ಒಪ್ಪಿಕೊಳ್ಳುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಕಿವಿಮಾತು ಹೇಳಿದರು.

ಇದನ್ನೂ ಓದಿ: HD Kumaraswamy : ಒಮ್ಮೆ ಚಂದ್ರಯಾನ ಮುಗೀಲಿ; ಆಮೇಲೆ ನೈಸ್‌ನ ಎಲ್ಲ ದಾಖಲೆ ಬಿಚ್ಚಿಡ್ತೀನಿ: ಎಚ್.ಡಿ. ಕುಮಾರಸ್ವಾಮಿ

ನೈಸ್‌ ಅಕ್ರಮ ದಾಖಲೆ ಬಿಡುಗಡೆ ಬಗ್ಗೆ ಸಂಶಯ ಬೇಡ

ನೈಸ್ ಅಕ್ರಮಗಳ ದಾಖಲೆಯನ್ನು (Record of irregularities in NICE project) ಶೀಘ್ರವೇ ಬಿಡುಗಡೆ ಮಾಡುತ್ತೇನೆ. ಇದರಲ್ಲಿ ಸಂಶಯ ಇಲ್ಲ. ಈ ಯೋಜನೆ ಹೆಸರಲ್ಲಿ ಏನೇನು ಆಗಿದೆ? ಎಷ್ಟೆಲ್ಲ ಅಕ್ರಮ ನಡೆದಿದೆ? ಯಾರೆಲ್ಲ ಫಲಾನುಭವಿಗಳು ಇದ್ದಾರೆ? ಎಲ್ಲವನ್ನೂ ಜನರ ಮುಂದೆ ಇಡುತ್ತೇನೆ. ಕೆಲವರ ಹಣೆಬರಹ ಆಚೆಗೆ ಬರುತ್ತದೆ ಎಂದು ಅವರು ಪ್ರಶ್ನೆಯೊಂದಕ್ಕೆ ಎಚ್.ಡಿ. ಕುಮಾರಸ್ವಾಮಿ ಉತ್ತರ ನೀಡಿದರು.

ದಾಖಲೆ ಬಿಡುಗಡೆ ಸಮಸ್ಯೆ ಇದೆ. ಬುಧವಾರ ಚಂದ್ರಯಾನ 3 (Chandrayana 3) ರೋವರ್ ಚಂದ್ರನ ಮೇಲೆ ಇಳಿಯಲಿದೆ. ಎಲ್ಲರಂತೆ ನನಗೂ ಕುತೂಹಲ ಇದೆ. ಪ್ರತಿಯೊಬ್ಬರ ಗಮನವೂ ಆ ಕಡೆಯೇ ಇರುತ್ತದೆ. ಹೀಗಾಗಿ ಕೆಲ ದಿನದಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಕೆಲವರು ನೈಸ್ ಯೋಜನೆ ದೇವೇಗೌಡರ ಪಾಪದ ಕೂಸು ಎಂದು ಹೇಳಿದ್ದಾರೆ. ಅವರಿಗೆ ಗೊತ್ತಿರಲಿ, ಯೋಜನೆಯ ಮೂಲ ಒಪ್ಪಂದದಲ್ಲಿ ಏನಿದೆ? ಅದನ್ನು ಅವರು ಓದಿಕೊಳ್ಳಬೇಕು. ಅದನ್ನು ಪೂರ್ಣವಾಗಿ ತಿಳಿದು ಮಾತನಾಡಿದರೆ ಚೆನ್ನಾಗಿರುತ್ತದೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ದೇವೇಗೌಡರು ಒಪ್ಪಂದ ಮಾಡಿಕೊಂಡಿದ್ದು ರಸ್ತೆ ಮಾಡಲಿ ಎಂದು, ಬೆಂಗಳೂರು ಮತ್ತು ಮೈಸೂರು ನಡುವೆ ಓಡಾಡುವ ಜನರಿಗೆ ಒಳ್ಳೆಯದಾಗಲಿ ಎಂದು. ಈ ಮಹಾನುಭಾವರು ಮಾಡಿದ್ದೇನು? ಮೂಲ ಒಪ್ಪಂದವನ್ನು ಹೇಗೆಲ್ಲ ತಿರುಚಿದರು? ಇವರ ಮಹಾನ್ ಸಾಧನೆಗಳನ್ನೆಲ್ಲ ಬಿಡುಗಡೆ ಮಾಡುತ್ತೇನೆ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

ಟಿ.ಬಿ. ಜಯಚಂದ್ರಗೆ ಅಭಿನಂದನೆ

ನಾನು ಟಿ.ಬಿ.ಜಯಚಂದ್ರ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರು ಯೋಜನೆ ಅಕ್ರಮದ ಬಗ್ಗೆ ಮಾತಾಡಿದ್ದಾರೆ. ಈ ಅಕ್ರಮದ ಬಗ್ಗೆ ವರದಿ ಕೊಟ್ಟ ಸದನ ಸಮಿತಿಯ ನೇತೃತ್ವ ವಹಿಸಿದವರು ಕೂಡ ಅವರೇ. ಅದಕ್ಕಾಗಿಯೇ ನಾನು ಮುಖ್ಯಮಂತ್ರಿಗಳನ್ನು ಒತ್ತಾಯ ಮಾಡುತ್ತೇನೆ. ನೀವು ರೈತರ ಪರವಾಗಿ ಇದ್ದರೆ, ತಕ್ಷಣ ನೈಸ್ ಹೆಚ್ಚುವರಿ ಜಮೀನು ವಾಪಸ್ ಪಡೆದು ಮೂಲ ರೈತರಿಗೆ ನೀಡಿ ಎಂದು ಎಚ್.ಡಿ. ಕುಮಾರಸ್ವಾಮಿ ಒತ್ತಾಯಿಸಿದರು.

ಕಾವೇರಿ ಸರ್ವಪಕ್ಷ ಸಭೆ ಹಾಜರಾಗುತ್ತೇನೆ

ಕಾವೇರಿ ವಿಚಾರದ ಬಗ್ಗೆ ಚರ್ಚೆ ನಡೆಸಲು ಕರೆಯಲಾಗುವ ಸರ್ವಪಕ್ಷ ಸಭೆಯಲ್ಲಿ ಭಾಗಿಯಾಗುತ್ತೇನೆ. ಅಲ್ಲಿ ನಮ್ಮ ಪಕ್ಷದ ನಿಲುವನ್ನು ಸ್ಪಷ್ಟವಾಗಿ ಹೇಳಲಾಗುವುದು. ಅಲ್ಲದೆ, ಸರ್ವಪಕ್ಷ ಸಭೆಗೆ ಹೋಗಬೇಕಾದದ್ದು ನನ್ನ ಕರ್ತವ್ಯ. ತಮಿಳುನಾಡಿಗೆ ನೀರು ಬಿಟ್ಟ ಕೂಡಲೇ ಮೊದಲು ದನಿ ಎತ್ತಿದವನೇ ನಾನು. ಸರ್ವಪಕ್ಷ ಸಭೆ ಕರೆಯಬೇಕು ಎಂದು ಒತ್ತಾಯ ಮಾಡಿದವನು ಕೂಡ ನಾನೇ. ಎಂದು ಎಚ್.ಡಿ ಕುಮಾರಸ್ವಾಮಿ ಅವರು ತಿಳಿಸಿದರು.

ಇದನ್ನೂ ಓದಿ: kaveri water : ಕಾವೇರಿ ಕಣಿವೆ ರೈತರು ಹೊಸ ಬೆಳೆ ಬೆಳೀಬೇಡಿ, ಸಮಸ್ಯೆ ಆದ್ರೆ ಕಟ್ಟುನೀರು ಬಂದ್: ಚಲುವರಾಯಸ್ವಾಮಿ

ಆದರೆ, ರಾಜ್ಯದ ಹಿತ ಪರಿಗಣನೆಗೆ ಕ್ರಮ ಕೈಗೊಳ್ಳಬೇಕಾದ ಜಲಸಂಪನ್ಮೂಲ ಸಚಿವರೂ ಆದ ಉಪ ಮುಖ್ಯಮಂತ್ರಿ ಅವರು, ಯಾವುದೋ ಹಳೆಯ ಟ್ವೀಟ್ ಪ್ರಸ್ತಾಪ ಮಾಡಿದ್ದಾರೆ. ಆ ಟ್ವೀಟ್‌ನಲ್ಲಿ ಏನು ಹೇಳಿದ್ದೇನೆ? ಎರಡೂ ರಾಜ್ಯಗಳ ಜನರು ಅಣ್ಣತಮ್ಮಂದಿರ ರೀತಿ ಇರಬೇಕೆಂದು ಹೇಳಿದ್ದೇನೆ. ಕಾನೂನು ವ್ಯಾಪ್ತಿಯಲ್ಲಿ ನೂರಾರು ವರ್ಷ ಹೋರಾಟ ಮಾಡಿ ಆಗಿದೆ. ಈಗ ಕೊಟ್ಟು ತೆಗೆದುಕೊಳ್ಳುವ ಮನಸ್ಸು ಇರಬೇಕು. ತಮಿಳುನಾಡಿನ ರೈತರಿಗೆ ನಾವು ಎಂದೂ ದ್ರೋಹ ಮಾಡಿಲ್ಲ, ನಮ್ಮ ರಾಜ್ಯದ ರೈತರಿಗೆ ಅನ್ಯಾಯ ಮಾಡಬೇಡಿ ಅಂತ ಹೇಳಿದ್ದೇನೆ. ಸ್ಟಾಲಿನ್ ಅವರಿಗೆ ಈ ಮಾತು ಹೇಳಿದ್ದೇನೆ. ಇದರಲ್ಲಿ ಹುಳುಕು ಹುಡುಕುವಂತಹ ಅಂಶ ಏನಿದೆ? ಎಂದು ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

Exit mobile version