ಬೆಂಗಳೂರು: ಡಿ.ಕೆ. ಶಿವಕುಮಾರ್ (DK Shivakumar) ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಿಬಿಐ ತನಿಖೆಯನ್ನು (CBI Case) ರದ್ದು ಮಾಡುವ ರಾಜ್ಯ ಸಚಿವ ಸಂಪುಟದ ನಿರ್ಧಾರವನ್ನು ವಿರೋಧಿಸಿ ಶನಿವಾರ (ನ. 25) ಬೆಳಗ್ಗೆ 10 ಗಂಟೆಗೆ ಬಿಜೆಪಿ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ಅಲ್ಲದೆ, ಈ ಪ್ರಕರಣವನ್ನು ಇಲ್ಲಿಗೇ ಬಿಡುವ ಪ್ರಶ್ನೆಯೇ ಇಲ್ಲ. ಹಾಗಾಗಿ ಡಿಸೆಂಬರ್‌ನಲ್ಲಿ ನಡೆಯಲಿರುವ ವಿಧಾನ ಮಂಡಲ ಅಧಿವೇಶನದಲ್ಲಿಯೂ ಈ ವಿಷಯ ಸಂಬಂಧ ಹೋರಾಟ ನಡೆಸುವ ತೀರ್ಮಾನಕ್ಕೆ ಬಿಜೆಪಿ ಬಂದಿದೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra), ವಿರೋಧ ಪಕ್ಷದ ನಾಯಕ ಆರ್. ಅಶೋಕ್ (R Ashok) ನೇತೃತ್ವದಲ್ಲಿ ಫ್ರೀಡಂ ಪಾರ್ಕ್‌ನಲ್ಲಿ (Freedom Park) ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: DK Shivakumar : ಡಿಕೆಶಿ ಸಿಬಿಐ ಪ್ರಕರಣ ವಾಪಸ್; ಬಿಜೆಪಿ ತಪ್ಪನ್ನು ಸರಿ ಮಾಡಿದ್ದೇವೆ ಎಂದ ಪ್ರಿಯಾಂಕ್ ಖರ್ಗೆ
ಸಂಸದರು, ಮಾಜಿ ಸಚಿವರು, ಶಾಸಕರು ಮತ್ತು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದು, ಸರ್ಕಾರದ ಕಾನೂನುಬಾಹಿರ ಹಾಗೂ ತಪ್ಪು ನಿರ್ಧಾರವನ್ನು ಖಂಡಿಸಲಿದೆ ಎಂದು ಬಿಜೆಪಿ ಪ್ರಕಟಣೆಯಲ್ಲಿ ತಿಳಿಸಿದೆ.
ಅಧಿವೇಶನದಲ್ಲೂ ಹೋರಾಟಕ್ಕೆ ನಿರ್ಧಾರ
ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಅಕ್ರಮ ಸಂಪಾದನೆಗೆ ಸಂಬಂಧಪಟ್ಟಂತೆ 2019ರಲ್ಲಿ ಅಂದಿನ ಸಿಎಂ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರು ಸಿಬಿಐಗೆ ವಹಿಸಿದ್ದ ಕೇಸ್ ಅನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿರುವ ನಿರ್ಧಾರವನ್ನು ಅಧಿವೇಶನದಲ್ಲೂ ಪ್ರಶ್ನೆ ಮಾಡಲು ಬಿಜೆಪಿ ಮುಂದಾಗಿದೆ. ಅಧಿವೇಶನದಲ್ಲಿಯೂ ಈ ಬಗ್ಗೆ ಪ್ರಶ್ನೆ ಮಾಡಲಿದ್ದು, ಸರ್ಕಾರದ ಕಾನೂನುಬಾಹಿರ ಕ್ರಮವನ್ನು ಪ್ರಶ್ನೆ ಮಾಡುವುದಾಗಿ ಬಿಜೆಪಿ ಹೇಳಿದೆ.
ಸಚಿವ ಸಂಪುಟದ ನಿರ್ಧಾರ ಕಾನೂನುಬಾಹಿರ: ವಿಜಯೇಂದ್ರ
ಡಿ.ಕೆ. ಶಿವಕುಮಾರ್ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ರಾಜ್ಯ ಸಚಿವ ಸಂಪುಟ ಕೈಗೊಂಡ ನಿರ್ಧಾರವು ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಿ.ವೈ. ವಿಜಯೇಂದ್ರ, ಆದಾಯ ತೆರಿಗೆ ಇಲಾಖೆ (ಐಟಿ) ದಾಳಿ ಆದಾಗ ಬೆಂಗಳೂರು ಮತ್ತು ದೇಶದ ವಿವಿಧೆಡೆ ಲಭಿಸಿದ ಹಣದ ವಿಷಯ ಎಲ್ಲರಿಗೂ ತಿಳಿದಿದೆ. ತದನಂತರ ಜಾರಿ ನಿರ್ದೇಶನಾಲಯವು (ಇಡಿ) ಕೂಡ ಹಲವು ವರ್ಷಗಳಿಂದ ತನಿಖೆ ನಡೆಸುತ್ತಿದೆ. ಕ್ಯಾಬಿನೆಟ್ ತೀರ್ಮಾನವು ಸಂಪೂರ್ಣವಾಗಿ ತಪ್ಪು ನಿರ್ಧಾರ ಮತ್ತು ಕಾನೂನುಬಾಹಿರವಾಗಿದೆ. ಕಾಂಗ್ರೆಸ್ ಪಕ್ಷದ ಈ ನಿರ್ಧಾರ ದುರದೃಷ್ಟಕರ ಮತ್ತು ಬಿಜೆಪಿ ಈ ನಿರ್ಧಾರವನ್ನು ಖಂಡಿಸುತ್ತದೆ. ಇದು ಕಾನೂನಿನ ವಿರುದ್ಧ ತೆಗೆದುಕೊಂಡ ನಿರ್ಧಾರ ಎಂದು ಟೀಕಿಸಿದರು.
ಡಿ.ಕೆ.ಶಿವಕುಮಾರ್ ಅವರು ಏಕಾಗಿ ತನಿಖೆಗೆ ಭಯಪಡುತ್ತಾರೆ? ಅವರಿಗೆ ಕಾನೂನಿನ ಮೇಲೆ ವಿಶ್ವಾಸ ಇಲ್ಲವೇ? ತಾವು ಹಲವು ವರ್ಷಗಳಿಂದ ನಿರಂತರವಾಗಿ ಕಾನೂನು ಹೋರಾಟವನ್ನು ಮಾಡುತ್ತಾ ಬರುತ್ತಿದ್ದೀರಿ. ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಜವಾಬ್ದಾರಿಯ ಸ್ಥಾನದಲ್ಲಿರುವ ಡಿ.ಕೆ. ಶಿವಕುಮಾರ್ ಅವರು ಪ್ರಾಮಾಣಿಕವಾಗಿ ಇದ್ದರೆ ಕ್ಯಾಬಿನೆಟ್ ಕೈಗೊಳ್ಳುವ ಈ ತೀರ್ಮಾನವನ್ನು ವಿರೋಧಿಸಬೇಕಿತ್ತು ಎಂದು ಬಿ.ವೈ. ವಿಜಯೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂ ಓದಿ: DK Shivakumar : ಡಿಕೆಶಿ ಅಕ್ರಮ ಆಸ್ತಿಗೂ ನಮಗೂ ಸಂಬಂಧ ಇಲ್ಲ; ಕೇಸ್ ಪ್ರೊಸೀಜರ್ ಸರಿ ಇಲ್ಲದ್ದಕ್ಕೆ ವಾಪಸ್: ಪರಮೇಶ್ವರ್
ತಪ್ಪು ಮಾಡಿದ್ದನ್ನು ಒಪ್ಪಿಕೊಳ್ಳುತ್ತಿದ್ದಾರೆ
ಪ್ರಕರಣವನ್ನು ವಾಪಸ್ ಪಡೆಯುವ ಮೂಲಕ ಅವರು ತಪ್ಪು ಮಾಡಿದ್ದನ್ನು ಒಪ್ಪಿಕೊಳ್ಳುತ್ತಿದ್ದಾರೆ. ಅವರು ಕಾನೂನು ಪ್ರಕ್ರಿಯೆಯ ಮೇಲಿನ ವಿಶ್ವಾಸ ಕಳೆದುಕೊಂಡಂತಿದೆ. ರಾಜ್ಯ ಸರ್ಕಾರವು ಮಾಡಿದ ಕ್ಯಾಬಿನೆಟ್ ತೀರ್ಮಾನವನ್ನು ಬಿಜೆಪಿ ಬಲವಾಗಿ ಖಂಡಿಸುತ್ತೇವೆ. ಇದರ ವಿರುದ್ಧ ಪಕ್ಷದ ಮುಂದಿನ ಕ್ರಮ ಯಾವ ರೀತಿ ಇರಬೇಕು ಎಂಬ ಬಗ್ಗೆ ಹಿರಿಯರ ಜತೆ ಕುಳಿತು ಚರ್ಚಿಸಿ ಕೈಗೊಳ್ಳುತ್ತೇವೆ ಎಂದು ಹೇಳಿದರು.