ಬೆಂಗಳೂರು: ಮಹಾರಾಷ್ಟ್ರ ಬಿಜೆಪಿ ಸರ್ಕಾರ ಗಡಿಭಾಗದ ಕರ್ನಾಟಕದ 865 ಗ್ರಾಮಗಳಲ್ಲಿ ಆರೋಗ್ಯ ವಿಮಾ ಯೋಜನೆ ಜಾರಿಗೆ ಮುಂದಾಗಿದ್ದು, ಆ ಮೂಲಕ ಕರ್ನಾಟಕ ರಾಜ್ಯಕ್ಕೆ ಅವಮಾನ ಮಾಡಿದೆ. ನಮ್ಮ ಪ್ರಾಣ ಹೋದರೂ ಸರಿ ನಮ್ಮ ನೆಲ, ಜಲ, ಭಾಷೆ ರಕ್ಷಣೆ ಮಾಡಿಕೊಳ್ಳುತ್ತೇವೆ. ನಾವು ಗಡಿ ಭಾಗದ ಒಂದೇ ಒಂದು ಇಂಚು ಭೂಮಿಯನ್ನು ಮಹಾರಾಷ್ಟ್ರಕ್ಕೆ ಬಿಟ್ಟು ಕೊಡುವುದಿಲ್ಲ. ಅವರ ಯೋಜನೆ ನಮ್ಮ ನೆಲದಲ್ಲಿ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಇದು ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ. ನಮ್ಮ ನೆಲದಲ್ಲಿ, ನಮ್ಮ ಜನರ ಆರೋಗ್ಯ ರಕ್ಷಿಸಲು ನಮಗೆ ತಾಕತ್ತು ಇಲ್ಲವೇ? ನಮ್ಮ ನೆಲದಲ್ಲಿ ಯೋಜನೆ ಜಾರಿ ಮಾಡಲು ಮಹಾರಾಷ್ಟ್ರ ಸರ್ಕಾರಕ್ಕೆ ಅನುಮತಿ ಕೊಟ್ಟವರು ಯಾರು? ನಮಗೇಕೆ ಬೇಕು ಅವರ ಭಿಕ್ಷೆ? ನಮ್ಮ ಜನರ ಅರೋಗ್ಯ ರಕ್ಷಣೆ ಮಾಡಲು ರಾಜ್ಯ ಬಿಜೆಪಿ ಸರ್ಕಾರದ ಬಳಿ ಹಣ ಇಲ್ಲವೇ? ಈ ಸರ್ಕಾರವೇನಾದರೂ ದಿವಾಳಿ ಆಗಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಸರ್ಕಾರ ರಾಜಕೀಯ ಕಾರಣಗಳಿಗೆ ಕನ್ನಡಿಗರ ಹಿತಾಸಕ್ತಿ ಬಲಿ ಕೊಡಲು ಮುಂದಾಗಿದೆ. ಕನ್ನಡಿಗರ ಸ್ವಾಭಿಮಾನ, ಮರ್ಯಾದೆ ಹರಾಜು ಹಾಕುತ್ತಿದೆ. ಇದರ ವಿರುದ್ಧ ಕನ್ನಡ ಪರ ಸಂಘಟನೆಗಳು, ಸಾಹಿತಿಗಳು, ಚಿತ್ರರಂಗದವರು, ಕಲಾವಿದರು, ಬುದ್ಧಿಜೀವಿಗಳು ಧ್ವನಿ ಎತ್ತಬೇಕು ಎಂದು ಶಿವಕುಮಾರ್ ಮನವಿ ಮಾಡಿದ್ದಾರೆ.
ಇಂತಹ ಅನೇಕ ಸನ್ನಿವೇಶಗಳಲ್ಲಿ ಎಲ್ಲರೂ ಧ್ವನಿ ಎತ್ತಿದ್ದರಿಂದಲೇ ಕನ್ನಡಿಗರ ಸ್ವಾಭಿಮಾನ ಉಳಿದುಕೊಂಡು ಬಂದಿದೆ. ಕನ್ನಡ ನೆಲ, ಜಲ, ಭಾಷೆ ರಕ್ಷಣೆ ಆಗಿದೆ. ಈಗಲೂ ಕೂಡ ಅಂತಹುದೆ ಹೋರಾಟಕ್ಕೆ ನಾವು-ನೀವೆಲ್ಲರೂ ಕೈ ಜೋಡಿಸೋಣ. ಕನ್ನಡ ತಾಯಿಯ ಗೌರವ ರಕ್ಷಿಸೋಣ.
ನಮ್ಮ ನೆಲದಲ್ಲಿ ಮಹಾರಾಷ್ಟ್ರ ಸರ್ಕಾರ ಯೋಜನೆ ಜಾರಿಗೆ ಮುಂದಾಗಿದ್ದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಣ್ಣುಮುಚ್ಚಿ ಕುಳಿತಿರುವುದು ಈ ಬಿಜೆಪಿ ಸರ್ಕಾರದ ದೌರ್ಬಲ್ಯಕ್ಕೆ ಸಾಕ್ಷಿ. ಮೊದಲಿಂದಲೂ ಬಿಜೆಪಿ ಸರ್ಕಾರ ಇಂತಹ ಮರ್ಯಾದೆಗೇಡಿ ನಡೆಯನ್ನೇ ಮುಂದುವರಿಸಿಕೊಂಡು ಬಂದಿದೆ. ಕನ್ನಡಿಗರನ್ನು ಅವಮಾನಿಸುತ್ತಿದೆ.
ಬೊಮ್ಮಾಯಿ ಅವರಿಗೆ ಅಧಿಕಾರದಲ್ಲಿ ಮುಂದುವರಿಯಲು ಯೋಗ್ಯತೆಯಾಗಲಿ, ನೈತಿಕ ಹಕ್ಕಾಗಲಿ ಇಲ್ಲವಾಗಿದೆ. ಇದೊಂದು ನಾಲಾಯಕ್ ಸರ್ಕಾರ. ರಾಜ್ಯ ಹಾಗೂ ಕನ್ನಡಿಗರ ಹಿತ ಕಾಯುವಲ್ಲಿ ವಿಫಲವಾಗಿರುವ ಮುಖ್ಯಮಂತ್ರಿಗಳು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಈ ಸರ್ಕಾರ ವಿಸರ್ಜನೆ ಮಾಡಬೇಕು. ಇಷ್ಟೆಲ್ಲಾ ಆಗುತ್ತಿದ್ದರೂ ಕೇಂದ್ರ ಗೃಹ ಸಚಿವರು ಏನು ಮಾಡುತ್ತಿದ್ದಾರೆ? ಬೇರೆ ರಾಜ್ಯದವರು ನಮ್ಮ ರಾಜ್ಯದಲ್ಲಿ ಅವರ ಯೋಜನೆ ಜಾರಿ ಮಾಡಲು ಹೇಗೆ ಸಾಧ್ಯ? ನಮ್ಮ ಹಿಂದಿನ ಸರ್ಕಾರಗಳು ನಮ್ಮ ಜನರನ್ನು ಹಲವು ದಶಕಗಳಿಂದ ಕಾಪಾಡಿಕೊಂಡು ಬಂದಿವೆ. ಮಹಾರಾಷ್ಟ್ರದ ಈ ನಡೆಯನ್ನು ನಾವು ಖಂಡಿಸುತ್ತೇವೆ. ಗುರುವಾರವೇ ಬೆಳಗಾವಿಗೆ ಹೋಗಿ, ಅಲ್ಲಿನ ನಾಯಕರ ಜತೆ ಚರ್ಚೆ ಮಾಡಿ ನಮ್ಮ ನೆಲ ರಕ್ಷಣೆ ಮಾಡಿಕೊಳ್ಳಲು ಹೋರಾಟ ಮಾಡುತ್ತೇವೆ ಎಂದು ಶಿವಕುಮಾರ್ ತಿಳಿಸಿದ್ದಾರೆ.