ಬೆಂಗಳೂರು: ʻʻನೋಡಿ, ನಾನು ಯಾವ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ. ಯಾಕೆಂದರೆ ನಾನು ಸತ್ಯವನ್ನೇ ಹೇಳಿದ್ದೇನೆʼʼ- ಹೀಗೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಸ್ಪಷ್ಟವಾಗಿ ಹೇಳಿದ್ದಾರೆ.
ಮಂಗಳೂರು ಬಾಂಬ್ ಸ್ಫೋಟದ ಆರೋಪಿ ಮೊಹಮ್ಮದ್ ಶಾರಿಕ್‌ನನ್ನು ಘಟನೆ ನಡೆದ ತಕ್ಷಣವೇ ಉಗ್ರ ಎಂದು ಘೋಷಿಸಿದ್ದನ್ನು ಡಿ.ಕೆ. ಶಿವಕುಮಾರ್ ಪ್ರಶ್ನೆ ಮಾಡಿದ್ದರು. ಇದಕ್ಕೆ ಬಿಜೆಪಿ ಕಡೆಯಿಂದ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆಯೇ ಡಿ.ಕೆ.ಶಿವಕುಮಾರ್ ಅವರು ತಮ್ಮ ಹೇಳಿಕೆಯನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ.
ʻʻಉಗ್ರಗಾಮಿ ಚಟುವಟಿಕೆಯಿಂದ ನಾವು ನಮ್ಮ ನಾಯಕರನ್ನೇ ಕಳೆದುಕೊಂಡಿದ್ದೇವೆ. ಬಾಂಬ್ ಸ್ಫೋಟದ ಕಾರಣಕ್ಕಾಗಿ ಮುಖ್ಯಮಂತ್ರಿಗಳು ಹುದ್ದೆಯನ್ನೇ ಕಳೆದುಕೊಂಡಿದ್ದಾರೆʼʼ ಎಂದು ಹೇಳುವ ಮೂಲಕ ಉಗ್ರವಾದದ ವಿಚಾರ ತಮಗೂ ಗೊತ್ತಿದೆ ಎಂದಿದ್ದಾರೆ.
ʻʻಬೆಂಗಳೂರಿನಲ್ಲಿ ಬಯಲಾದ ವೋಟರ್ ಐಡಿ ಹಗರಣದ ದಿಕ್ಕು ತಪ್ಪಿಸುವುದಕ್ಕಾಗಿ ಇಂಥ ಹೇಳಿಕೆಗಳನ್ನು ನೀಡಲಾಯಿತು. ಅಧಿಕಾರಿಗಳನ್ನು ಬಳಸಿಕೊಂಡು ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆʼʼ ಎಂದು ಮತ್ತೆ ಹೇಳಿದರು ಡಿ.ಕೆ.ಶಿವಕುಮಾರ್.
ಡಿ.ಕೆ.ಶಿವಕುಮಾರ್ ಹೇಳಿದ್ದೇನು?
-ಯಾವುದೇ ತನಿಖೆ ಮಾಡದೆ ಮಂಗಳೂರು ಕುಕ್ಕರ್ ಬ್ಲಾಸ್ಟ್ ಆರೋಪಿಯನ್ನು ಹೇಗೆ ಭಯೋತ್ಪಾದಕ ಎಂದು ಪೊಲೀಸರು ಘೋಷಿಸಿದರು?
-ಮಂಗಳೂರಿನಲ್ಲಿ ನಡೆದಿದ್ದು ಮುಂಬೈನಲ್ಲಿ ನಡೆದಂಥ ಟೆರರಿಸ್ಟ್ ದಾಳಿಯೇ? ಕಾಶ್ಮೀರದ ಪುಲ್ವಾಮಾ ದಾಳಿಯಂಥ ಘಟನೆಯಾ ಅದು? ಪೊಲೀಸ್ ಅಧಿಕಾರಿಗಳು ಅಷ್ಟು ಬೇಗ ಟ್ವೀಟ್ ಮಾಡಿ ಮಾಹಿತಿ ನೀಡಿದ್ದರ ಹಿನ್ನೆಲೆ ಏನು?
-ವೋಟರ್ ಐಡಿ ಪ್ರಕರಣವನ್ನು ಮುಚ್ಚಿ ಹಾಕಲು ಬಿಜೆಪಿ ಸರ್ಕಾರ ಕುಕ್ಕರ್ ಬಾಂಬ್ ಘಟನೆಯನ್ನು ದೊಡ್ಡದಾಗಿ ಬಿಂಬಿಸಿತು.
ಇದನ್ನೂ ಓದಿ | DK Shivakumar | ಕುಕ್ಕರ್ ಬ್ಲಾಸ್ಟ್ ಆರೋಪಿಯನ್ನು ಭಯೋತ್ಪಾದಕ ಅಂದಿದ್ದೇಕೆ? ಡಿಕೆಶಿ ಪ್ರಶ್ನೆಗೆ ಬಿಜೆಪಿ ಸಿಡಿಮಿಡಿ