ಬೆಂಗಳೂರು: ಕೇಂದ್ರ ಸರ್ಕಾರದ ಬಳಿ ನೀತಿಯೇ ಇಲ್ಲದಿರುವಾಗ, ನೀತಿ ಆಯೋಗದ ಸಭೆಗೆ ಹೋಗಿ ಏನು ಪ್ರಯೋಜನ? ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಕರ್ನಾಟಕಕ್ಕೆ ನ್ಯಾಯ ಸಿಕ್ಕಿಲ್ಲ. ಇಲ್ಲಿ ನೀತಿಯೇ ಇಲ್ಲ. ರಾಜ್ಯಕ್ಕೆ ಯಾವುದೇ ಯೋಜನೆ ಸಿಕ್ಕಿಲ್ಲ. ರಾಜ್ಯಕ್ಕೆ ಬಜೆಟ್‌ನಲ್ಲಿ ಸರಿಯಾದ ಪ್ರಾತಿನಿಧ್ಯ ಸಿಕ್ಕಿಲ್ಲದ ಕಾರಣ, ಪಕ್ಷದ ನಾಯಕರು ಸಭೆಯನ್ನು ಬಹಿಷ್ಕರಿಸಿ ಪ್ರತಿಭಟನೆ ಮಾಡಲು ತೀರ್ಮಾನಿಸಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಕೇಂದ್ರದ ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸಲು ರಾಜ್ಯ ಸರ್ಕಾರ ನಿರ್ಧರಿಸಿರುವ ಬಗ್ಗೆ ವಿಧಾನಸೌಧದ ಆವರಣದಲ್ಲಿ ಅವರು ಪ್ರತಿಕ್ರಿಯಿಸಿದ್ದಾರೆ.
ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ಬಿಜೆಪಿಯಿಂದ ತೀವ್ರ ವಿರೋಧ ವ್ಯಕ್ತವಾಗಿರುವ ಬಗ್ಗೆ ಕೇಳಿದಾಗ, ಈ ವಿಚಾರದಲ್ಲಿ ಅವರು ರಾಜಕೀಯ ಮಾಡುತ್ತಿದ್ದಾರೆ. ನಾನು ಯಾವುದನ್ನೂ ಆತುರದಲ್ಲಿ ಮಾಡುವುದಿಲ್ಲ. ನಾನು ವಿಧೇಯಕ ಮಂಡನೆ ಮಾಡಿದ್ದೇನೆ. ಅವರು ಅದನ್ನು ಸಂಪೂರ್ಣವಾಗಿ ಪರಾಮರ್ಶಿಸಿ ಚರ್ಚೆ ಮಾಡಲಿ. ಬೆಂಗಳೂರು ಅನಿಯಂತ್ರಿತವಾಗಿ ಬೆಳೆಯುತ್ತಿದ್ದು, 1.40 ಕೋಟಿ ಜನಸಂಖ್ಯೆ ಇದೆ. ಉತ್ತಮ ಆಡಳಿತದ ಅಗತ್ಯವಿದೆ. ಇಲ್ಲಿ 7 ಸಿಎಂಸಿಗಳಿವೆ. ಮೂಲಸೌಕರ್ಯ ಹಾಗೂ ಆರ್ಥಿಕ ವ್ಯವಸ್ಥೆ ನೋಡಿಕೊಂಡು ತೀರ್ಮಾನ ಮಾಡಬೇಕು. ಈ ಬಗ್ಗೆ ವಿರೋಧ ಪಕ್ಷಗಳು ಚರ್ಚೆ ಮಾಡಲಿ. ಅದಕ್ಕೆ ನಮ್ಮ ಯಾವುದೇ ಅಭ್ಯಂತರವಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ | Assembly Session 2024: ಕಾಲುವೆಗಳ ಕೊನೇ ಭಾಗದ ರೈತರಿಗೆ ನೀರು ಖಾತರಿ; ನೀರಾವರಿ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ
ನಮ್ಮ ಶಾಲೆಯಲ್ಲಿ ಮಗನಿಗೆ ಸೀಟು ಕೇಳಲು ದರ್ಶನ್ ಪತ್ನಿ ಬಂದಿದ್ರು: ಡಿಸಿಎಂ ಡಿಕೆಶಿ
ಬೆಂಗಳೂರು: ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಅವರು ನಮ್ಮ ಶಾಲೆಯಲ್ಲಿ ಮಗನಿಗೆ ಸೀಟು ಸಂಬಂಧ ನನ್ನನ್ನು ಭೇಟಿ ಮಾಡಿದ್ದರು. ದರ್ಶನ್, ವಿಜಯಲಕ್ಷ್ಮೀ ಪುತ್ರ ಈ ಮೊದಲು ನಮ್ಮ ಶಾಲೆಯಲ್ಲಿ ಓದುತ್ತಿದ್ದರು. ಕಾರಣಾಂತರಗಳಿಂದ ನಮ್ಮ ಶಾಲೆ ತೊರೆದು ಬೇರೆ ಶಾಲೆ ಸೇರಿದ್ದರು. ಈಗ ಮತ್ತೆ ಮರಳಿ ನಮ್ಮ ಶಾಲೆಗೆ ಸೇರಿಸಿಕೊಳ್ಳುವಂತೆ ಮನವಿ ಮಾಡಲು ಬಂದಿದ್ದರು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ತಿಳಿಸಿದರು.
ಸದಾಶಿವನಗರದ ನಿವಾಸಕ್ಕೆ ವಿಜಯಲಕ್ಷ್ಮಿ ಅವರು ಬಂದ ಕಾರಣ ಕುರಿತು ಪ್ರತಿಕ್ರಿಯಿಸಿದ ಅವರು, ನಮ್ಮ ಶಾಲೆಯ ಪ್ರಾಂಶುಪಾಲರು ಪ್ರವೇಶ ಅವಕಾಶ ನಿರಾಕರಿಸಿದ್ದರಿಂದ ನನ್ನ ಬಳಿ ಸೀಟು ಕೇಳಲು ವಿಜಯಲಕ್ಷ್ಮೀ ಬಂದಿದ್ದರು. ಶಾಲೆಯ ದಾಖಲಾತಿಗೆ ಒಂದಷ್ಟು ನಿಯಮಾವಳಿಗಳಿವೆ. ನಾನು ಶಾಲೆಗೆ ಅಷ್ಟಾಗಿ ಭೇಟಿ ನೀಡುತ್ತಿಲ್ಲ. ಶಾಲೆಯ ಆಡಳಿತ ಜವಾಬ್ದಾರಿಯನ್ನು ಸಂಪೂರ್ಣವಾಗಿ ಮಕ್ಕಳಿಗೆ ವಹಿಸಿದ್ದೇನೆ. ವಿಜಯಲಕ್ಷ್ಮಿ ಅವರು ಮಗನ ಭವಿಷ್ಯದ ದೃಷ್ಟಿಯಿಂದ ಬಂದಿದ್ದರು. ಜತೆಗೆ ನಮ್ಮ ಶಾಲೆಯ ಪಕ್ಕದಲ್ಲೇ ಅವರ ನಿವಾಸವಿದೆ. ನಾನು ಆ ಮಗುವಿಗೆ ಒಳ್ಳೆಯದಾಗಲಿ ಎಂದು ಪ್ರಾಂಶುಪಾರನ್ನು ಭೇಟಿ ಮಾಡಲು ಹೇಳಿದ್ದೇನೆ ಎಂದರು.
ವಿಜಯಲಕ್ಷ್ಮಿ ಅವರು ನೆರವು ಕೇಳಿದರೆ ಸಹಾಯ ಮಾಡುವಿರಾ ಎಂದಾಗ, ನಾವು ಸಾರ್ವಜನಿಕ ಜೀವನದಲ್ಲಿದ್ದೇವೆ. ನನ್ನ ಭೇಟಿ ಮಾಡಲು ಬಂದವರನ್ನು ಬೇಡ ಎಂದು ಹೇಗೆ ನಿರಾಕರಣೆ ಮಾಡಲಿ? ಅಲ್ಲದೇ ನಮ್ಮ ಶಾಲೆಯ ಪಕ್ಕದಲ್ಲೇ ಅವರ ಮನೆಯಿದೆ. ನಮ್ಮ ಲೋಕಸಭಾ ಕ್ಷೇತ್ರದಲ್ಲೇ ಅವರ ಮನೆಯಿದೆ. ನನ್ನನ್ನು ಭೇಟಿ ಮಾಡಲು ನೂರಾರು ಜನ ಬಂದಿದ್ದಾರೆ. ನೀವು (ಮಾಧ್ಯಮದವರು) ಕೂಡ ಬಂದಿದ್ದೀರಿ. ನಿಮ್ಮ ಭೇಟಿಗೆ ನಿರಾಕರಿಸಿದರೆ ಡಿ.ಕೆ. ಶಿವಕುಮಾರ್ ದುರಹಂಕಾರಿ, ಭೇಟಿ ಮಾಡದೆ ತೆರಳಿದರು ಎನ್ನುತ್ತೀರಿ. ಸಾರ್ವಜನಿಕ ಜೀವನದಲ್ಲಿ ಇದ್ದಾಗ ಸಹಾಯ ಕೇಳಿಕೊಂಡು ನನ್ನನ್ನು ಭೇಟಿ ಮಾಡಲು ಬಂದರೆ ಅವರನ್ನು ಭೇಟಿ ಮಾಡಬೇಕಾಗುತ್ತದೆ. ಅದು ನನ್ನ ಕರ್ತವ್ಯ ಕೂಡ ಎಂದು ಹೇಳಿದರು.
ಇದನ್ನೂ ಓದಿ | Actor Darshan: ತಿರುಪತಿ ತಿಮ್ಮಪ್ಪನ `ದರ್ಶನ’ ಸಿಗಬಹುದು ಆದರೆ ʻಡಿ ಬಾಸ್ʼ ಭೇಟಿಗೆ ಅವಕಾಶ ಸಿಗುತ್ತಿಲ್ಲ ಎಂದ ನಟ!
ಆ ಹೆಣ್ಣುಮಗಳಿಗೆ ತನ್ನ ಮಗನ ಶಿಕ್ಷಣದ ಬಗ್ಗೆ ಕಾಳಜಿಯಿದೆ. ಎಲ್ಲಾ ಮಕ್ಕಳು ಒಂದೇ ಅಲ್ಲವೇ? ಅವರಿಗೆ ಮಗನ ಶಿಕ್ಷಣದ ಬಗ್ಗೆ ಇರುವ ಕಾಳಜಿ ನೋಡಿ ಬಹಳ ಸಂತೋಷವಾಯಿತು. ಬೇರೆ ಶಾಲೆಗೆ ಸೇರಿಸಿದರೆ ಮಾನಸಿಕವಾಗಿ ತೊಂದರೆಯಾಗಬಹುದು. ನಮ್ಮ ಶಾಲೆಗೆ ಸೇರಿಸಿದರೆ ಹತ್ತಿರದಲ್ಲೇ ಇರುವುದರಿಂದ ಹೋಗಿ ಬರಲು ಅನುಕೂಲ ಆಗುತ್ತದೆ. ಈ ಹಿಂದೆ ಪೋಷಕರ ಸಭೆಗೆ ಅವರನ್ನು ಕರೆಸಲಾಗಿತ್ತು. ಆ ವೇಳೆ ದರ್ಶನ್ ಕೂಡ ಬಂದಿದ್ದರು ಎಂದರು.